ಮಡಿಕೇರಿ ದಸರಾ ಜನೋತ್ಸವದಲ್ಲಿ ಕಣ್ಮನ ಸೆಳೆದ ಮಂಟಪಗಳು

Written by: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಅಕ್ಟೋಬರ್ 13 : ಕಾರ್ಗತ್ತಲೆಯನ್ನು ಹೊಡೆದೋಡಿಸಿ ಕತ್ತಲೆಗೆ ಬೆಳಕಿನ ಚಿತ್ತಾರ ಮೂಡಿಸಿದ ಮಡಿಕೇರಿ ಐತಿಹಾಸಿಕ ದಸರಾ ಜನೋತ್ಸವದ ಶೋಭಾಯಾತ್ರೆ ಜನಸ್ತೋಮವನ್ನು ಅಪಾರವಾಗಿ ಸೆಳೆಯಿತು. ಮಂಟಪಗಳ ವೈಭೋಗ, ಆಡಂಬರ, ಬೆಳಕಿನ ಚೆಲ್ಲಾಟ ಒಂದಕ್ಕೊಂದು ಆಕರ್ಷಣೀಯವಾಗಿದ್ದವು.

ವೈವಿಧ್ಯಮಯ ಪೌರಾಣಿಕ ಥೀಮ್ ಇಟ್ಟುಕೊಂಡು ರೂಪಿಸಲಾಗಿದ್ದ ಸ್ತಬ್ಧಚಿತ್ರಗಳು ಒಂದಕ್ಕೊಂದು ಅದ್ಭುತವಾಗಿದ್ದವು. ದಶಮಂಟಪಗಳ ನಡುವೆ ನಡೆದ ಸ್ಪರ್ಧೆಯಲ್ಲಿ ನಾಲ್ಕು ದೇವಸ್ಥಾನಗಳು ರೂಪಿಸಿದ್ದ ಸ್ತಬ್ಧಚಿತ್ರಗಳು ಮೊದಲ ಮೂರು ಬಹುಮಾನವನ್ನು ಗಳಿಸಿಕೊಂಡಿವೆ. ಮಡಿಕೇರಿ ದಸರಾ ಹಬ್ಬಕ್ಕೆ ಈ ಜನೋತ್ಸವದ ಶೋಭಾಯಾತ್ರೆ ಭಾರೀ ಕಳೆ ತಂದಿತ್ತು. [ಮೈಸೂರು ದಸರಾದ ಜಂಬೂಸವಾರಿ ಸೂಪರ್ರೂ ಕಣ್ರೀ...]

ಪಾಲ್ಗೊಂಡ ದಶಮಂಟಪಗಳ ಪೈಕಿ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಪ್ರಥಮ, ಕಂಚಿ ಕಾಮಾಕ್ಷಿಯಮ್ಮ ದ್ವಿತೀಯ, ಕೋಟೆಮಾರಿಯಮ್ಮ ಮತ್ತು ಪ್ರಥಮ ಬಾರಿಗೆ ಕರವಲೆ ಬಾಡಗ ಭಗವತಿ ದೇವಾಲಯದ ಮಂಟಪ ತೃತೀಯ ಬಹುಮಾನಗಳನ್ನು ಪಡೆದುಕೊಂಡವು. ಉಳಿದವುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಮೊದಲ ಬಹುಮಾನ ಪಡೆದ ಶ್ರೀ ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯ ಗಣೇಶನಿಂದ ಮಹಿಷಾಸುರ ಗರ್ವಭಂಗ ಎಂಬ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಕಥಾಹಂದರ ಇಟ್ಟುಕೊಂಡಿತ್ತು. ಉಳಿದವುಗಳ ವಿವರ ಕೆಳಗಿನಂತಿದೆ. [ದಸರಾ ಮುಗಿದ ಖುಷಿಯಲ್ಲಿ ಗಜಪಡೆ ಮಾವುತರು]

ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯಕ್ಕೆ ಮೊದಲ ಬಹುಮಾನ

ಪ್ರಮುಖ ಪ್ರವಾಸಿ ತಾಣವಾದ ರಾಜಸೀಟು ಬಳಿಯ ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ಗಣೇಶನಿಂದ ಮಹಿಷಾಸುರ ಗರ್ವಭಂಗ ಎಂಬ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಕಥಾಹಂದರವನ್ನು ಹೊಂದುವ ಮೂಲಕ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ, ಬಹುಮಾನಿತ ಮಂಟಪಕ್ಕೆ 24 ಗ್ರಾಂ ಚಿನ್ನ ನೀಡಲಾಯಿತು.

ಕಂಚಿ ಕಾಮಾಕ್ಷಿಯಮ್ಮ ದೇವಾಲಯಕ್ಕೆ ದ್ವಿತೀಯ ಬಹುಮಾನ

ಗಣಪತಿಯಿಂದ ಗಜಾಸುರನ ವಧೆ ಎಂಬ ಕಥಾ ಭಾಗವನ್ನು ಹೊಂದಿದ ಗೌಳಿ ಬೀದಿಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಮಂಟಪ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತ್ತು. ದ್ವಿತೀಯ ಸ್ಥಾನ ಪಡೆದ ಈ ಮಂಟಪಕ್ಕೆ 20 ಗ್ರಾಂ ಚಿನ್ನ ವಿತರಿಸಲಾಯಿತು.

ಕೋಟೆ ಮಾರಿಯಮ್ಮ ದೇವಾಲಯಕ್ಕೆ ಮೂರನೇ ಬಹುಮಾನ

ಮಹಾಗಣಪತಿಯಿಂದ ಶಾಂತಮಹಿಷಿ ಮತ್ತು ತತ್ವಾಸುರ ವಧೆ ಎಂಬ ಕಥೆಯನ್ನು ಹೊಂದಿದ ಪೆನ್ಸನ್ ಲೈನ್ ರಸ್ತೆಯಲ್ಲಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಹಾಗೂ ಇದೇ ಪ್ರಪ್ರಥಮ ಬಾರಿಗೆ ಮೂರನೇ ಬಹುಮಾನಕ್ಕೆ ಬಾಜನಗೊಂಡ ವಿಷ್ಣುವಿನಿಂದ ಮಧುಕೈಟಭಾರ ವಧೆ ಎಂಬ ಕಥೆಯನ್ನು ಹೊಂದಿದ ಕರವಲೆ ಶ್ರೀ ಭಗವತಿ ದೇವಾಲಯವು ತೃತೀಯ ಸ್ಥಾನವನ್ನು ಪಡೆದುಕೊಂಡವು.

ಭಗವತಿ ದೇವಾಲಯಕ್ಕೆ ತೃತೀಯ ಸ್ಥಾನ

ತೃತೀಯ ಸ್ಥಾನ ಪಡೆದ ಈ ಎರಡು ಮಂಟಪಗಳಿಗೆ ತಲಾ 16 ಗ್ರಾಂಗಳಂತೆ ಚಿನ್ನವನ್ನು ವಿತರಿಸಲಾಯಿತು. ಎಲ್ಲ ಮಂಟಪಗಳಿಗೆ ಬೆಳ್ಳಿ ತಟ್ಟೆ ಹಾಗೂ ನಾಲ್ಕು ಕರಗಗಳಿಗೆ ಬೆಳ್ಳಿ ದೀಪಗಳನ್ನು ಬಹುಮಾನವಾಗಿ ನೀಡಲಾಯಿತು.

ಶ್ರೀ ಕೋಟೆ ಮಹಾಗಣಪತಿ ದೇವಾಲಯ

ನಗರದ ಕೋಟೆಯೊಳಗಿರುವ ಶ್ರೀ ಕೋಟೆ ಮಹಾಗಣಪತಿ ದೇವಾಲಯವು ಈ ಬಾರಿ ಮಯೂರೇಶ್ವರನಿಂದ ಸಿಂಧೂ ದೈತ್ಯ ರಾಜನ ಸಂಹಾರ ಎಂಬ ಕಥಾಹಂದರವನ್ನು ಒಳಗೊಂಡ ಮಂಟಪವು ಸುಮಾರು 21 ಕಲಾಕೃತಿಗಳನ್ನು ಹೊಂದಿದ್ದವು, ಅತ್ಯಾಕರ್ಷಕ ಹಾಗೂ ಅಮೋಘವಾಗಿ ಚಲನವಲನಗಳಿಂದ ಮೂಡಿಬಂದಿತ್ತು.

ಪೇಟೆ ಶ್ರೀ ರಾಮ ಮಂದಿರ

ನಗರದ ಕಮರ್ಶಿಯಲ್ ಸ್ಟ್ರೀಟ್ ಎಂದನಿಸಿಕೊಂಡ ಕಾಲೇಜು ರಸ್ತೆಯಲ್ಲಿರುವ ಪೇಟೆ ಶ್ರೀ ರಾಮ ಮಂದಿರವು ದಶಮಂಟಪಗಳ ಹಿರಿಯಣ್ಣನ ಪಾತ್ರ ವಹಿಸಿದ ಖ್ಯಾತಿಗೊಳಪಟ್ಟ ಪೇಟೆ ಶ್ರೀ ರಾಮ ಮಂದಿರ ಈ ಬಾರಿ ಶ್ರೀನಿವಾಸ ಪದ್ಮಾವತಿ ದರ್ಶನ ಎಂಬ ಸುಂದರ ಕಥಾಹಂದರವನ್ನು ಅಳವಡಿಸಿಕೊಂಡಿದ್ದರಿಂದ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಶ್ರೀ ಕೋದಂಡ ರಾಮ ದೇವಾಲಯ

ಮಹದೇವಪೇಟೆಯಿಂದ ಮುತ್ತಪ್ಪ ದೇವಸ್ಥಾನಕ್ಕೆ ಹೋಗುವ ಮಧ್ಯ ಭಾಗದಲ್ಲಿರುವ ಶ್ರೀ ಕೋದಂಡರಾಮ ದೇವಾಲಯ ಪ್ರಸಕ್ತ ವರ್ಷ ಸುಮಾರು 19ರಿಂದ 20 ವಿವಿಧ ಕಲಾಕೃತಿಗಳನ್ನು ಹೊಂದಿರುವ ಮಹಾಕಾಳಿಯಿಂದ ರಕ್ತ ಬೀಜಾಸುರನ ವಧೆ ಎಂಬ ಕಥಾ ಭಾಗವನ್ನೊಳಗೊಂಡಿತ್ತು.

ದೇಚೂರು ಶ್ರೀರಾಮಮಂದಿರ

ದೇಚೂರಿನಲ್ಲಿರುವ ಶ್ರೀ ರಾಮಮಂದಿರದಿಂದ ಹೊರಟ ಮಂಟಪವು ಈ ಭಾರಿ ವರಾಹ ರೂಪ ಆಂಜನೇಯನಿಂದ ವಿರೂಪಾಕ್ಷ ರಾಕ್ಷಸನ ಸಂಹಾರ ಮತ್ತು ಆಂಜನೇಯ ವಿಶ್ವರೂಪ ದರ್ಶನ ಸುಂದರ ಹಾಗೂ ಅರ್ಥಪೂರ್ಣ ಕಥಾಭಾಗವನ್ನು ಹೊಂದಿ ಆಕರ್ಷಕ ಕಲಾಕೃತಿಗಳ ಮೂಲಕ ಸಾಧರಪಡಿಸುವಲ್ಲಿ ಯಶಸ್ವಿಯಾಯಿತು.

ಶ್ರೀ ಚೌಡೇಶ್ವರಿ ದೇವಾಲಯ

ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯ ಈ ಬಾರಿ ಸಂಕಷ್ಟಹರ ಗಣಪತಿ ಪೂಜೆಯೊಂದಿಗೆ ಮಹಾದೇವನಿಂದ ತ್ರಿಪುರಾಸುರನ ಸಂಹಾರ ಎಂಬ ಅತ್ಯದ್ಭುತವಾದ ಸುಂದರ ಕಥಾಭಾಗವನ್ನು ಜನತೆಯ ಮುಂದೆ ಸಾದರಪಡಿಸಿ ಗಮನ ಸೆಳೆಯಿತು.

English summary
Dasara festivities in Madikeri : Tableau competition winners. Kundurumotte Chowti Mariyamma temple, Kanchi Kamakshamma temple, Kote Mariyamma and Karavale Badaga Bhagawati temple have won first 3 prizes.
Please Wait while comments are loading...