ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಷಾರು, ಪ್ರಾಣ ತೆಗೆಯುತ್ತವೆ ಕೊಡಗಿನ ಜಲಪಾತಗಳು!

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ, ಜೂನ್ 21: ಕೊಡಗಿನಲ್ಲಿ ಮಳೆ ನಿಧಾನವಾಗಿ ಸುರಿಯತೊಡಗಿದೆ. ಇದರಿಂದಾಗಿ ಬೇಸಿಗೆಯ ಬಿಸಿಲಿಗೆ ಸಿಲುಕಿ ಅದೃಶ್ಯವಾದ ಜಲಧಾರೆಗಳಲ್ಲಿ ಜೀವ ಕಳೆ ಬರತೊಡಗಿದೆ. ಮಳೆ ಬಿರುಸುಗೊಳ್ಳುತ್ತಿದ್ದಂತೆಯೇ ಧುಮ್ಮಿಕ್ಕಿ ಹರಿಯುವ ಜಲಧಾರೆಗಳು ತಮ್ಮ ರುದ್ರರಮಣೀಯ ಚೆಲುವಿನಿಂದ ಕಂಗೊಳಿಸತೊಡಗುತ್ತವೆ. ಅಷ್ಟೇ ಅಲ್ಲ ನಿಸರ್ಗ ಪ್ರೇಮಿಗಳನ್ನು ತಮ್ಮತ್ತ ಸೆಳೆಯಲು ಆರಂಭಿಸುತ್ತವೆ.

ಕೊಡಗಿಗೊಂದು ಸುತ್ತುಹೊಡೆದರೆ ಇಲ್ಲಿ ಹಲವಾರು ಜಲಪಾತಗಳನ್ನು ಕಾಣಲು ಸಾಧ್ಯವಿದೆ. ಆದರೆ ಎಲ್ಲ ಜಲಧಾರೆಗಳಿಗೂ ರಸ್ತೆ ಸಂಪರ್ಕ ಇಲ್ಲದ ಕಾರಣ ಮತ್ತು ಪಟ್ಟಣಗಳಿಂದ ದೂರವಾಗಿ ಹಳ್ಳಿಗಳ ಬೆಟ್ಟದ ನಡುವೆ, ಕಾಫಿ ತೋಟಗಳ ಮಧ್ಯೆ ಇರುವುದರಿಂದ ನಡೆದುಕೊಂಡೇ ಹೋಗಬೇಕಾಗುತ್ತದೆ. ಹೀಗಾಗಿ ಕೆಲವೇ ಕೆಲವು ಜಲಪಾತಗಳನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ.

ಇನ್ನು ಇಲ್ಲಿನ ಜಲಪಾತಗಳು ಎಷ್ಟು ಸುಂದರವಾಗಿವೆಯೋ ಅಷ್ಟೇ ಭಯಂಕರವಾಗಿಯೂ ಇವೆ. ಇದು ಬಹಳಷ್ಟು ಪ್ರವಾಸಿಗರಿಗೆ ತಿಳಿದಿಲ್ಲ. ಹೀಗಾಗಿ ದೂರದಿಂದ ಬರುವ ಪ್ರವಾಸಿಗರು ನೀರಿನಲ್ಲಿ ಆಟವಾಡಲು ಹೋಗಿ ಅಥವಾ ಸೆಲ್ಫಿ ತೆಗೆಯುವ ಭರದಲ್ಲಿ ಎಡವಟ್ಟು ಮಾಡಿಕೊಂಡ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಹಾಗೆನೋಡಿದರೆ ಇದುವರೆಗೆ ನಡೆದಿರುವ ಘಟನೆಗಳನ್ನು ಮೆಲುಕು ಹಾಕಿದರೆ ಅತಿಹೆಚ್ಚು ಜೀವಹಾನಿ ಸಂಭವಿಸಿರುವುದು ಮಡಿಕೇರಿ ಬಳಿಯ ಅಬ್ಬಿಫಾಲ್ಸ್ ನಲ್ಲಿ. ಉಳಿದಂತೆ ಚೇಲಾವರ ಮತ್ತು ಮಲ್ಲಳ್ಳಿಯಲ್ಲೂ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

52 ಮಂದಿ ಬಲಿತೆಗೆದುಕೊಂಡ ಅಬ್ಬಿಫಾಲ್ಸ್

52 ಮಂದಿ ಬಲಿತೆಗೆದುಕೊಂಡ ಅಬ್ಬಿಫಾಲ್ಸ್

ಮಡಿಕೇರಿ ಸಮೀಪವಿರುವ ಅಬ್ಬಿಜಲಪಾತ ಸೂಕ್ತವಾದ ರಸ್ತೆ ಹೊಂದಿರುವುದರಿಂದ ಮತ್ತು ಖ್ಯಾತಿ ಪಡೆದಿರುವುದರಿಂದ ಇದನ್ನು ನೋಡಲು ಸಾಕಷ್ಟು ಪ್ರವಾಸಿಗರು ಬರುತ್ತಾರೆ.ಇತ್ತೀಚೆಗೆ ತೂಗುಸೇತುವೆ ನಿರ್ಮಿಸಿ, ಕಾವಲಿಗೆ ವ್ಯವಸ್ಥೆ ಮಾಡಿರುವುದರಿಂದ ಜಲಪಾತದ ಬಳಿಗೆ ತಲೆಕೊಟ್ಟು ಮೀಯಲು ಯಾರನ್ನು ಬಿಡದಿರುವುದರಿಂದ ಅನಾಹುತ ಕಡಿಮೆಯಾಗಿದೆ. ಹಿಂದೆ ಬರುತ್ತಿದ್ದ ಪ್ರವಾಸಿಗರು ಸ್ನಾನ ಮಾಡಲು ತೆರಳಿ ಪ್ರಾಣಕಳೆದುಕೊಳ್ಳುತ್ತಿದ್ದರು. ಹೀಗೆ ಅಬ್ಬಿಜಲಪಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸುಮಾರು 52 ಎಂದು ಹೇಳಲಾಗುತ್ತದೆ.

ಚೇಲಾವರದಲ್ಲಿ 12 ಮಂದಿ ಬಲಿ

ಚೇಲಾವರದಲ್ಲಿ 12 ಮಂದಿ ಬಲಿ

ನಾಪೋಕ್ಲು ಬಳಿಯ ಚೆಯ್ಯಂಡಾಣೆಯ ಚೇಲಾವರದ ಜಲಪಾತದಲ್ಲಿ ಇದುವರೆಗೆ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಚೇಲಾವರ ಜಲಪಾತ ರಮಣೀಯವಾಗಿದೆ. ಆದರೆ ಇದು ಎಷ್ಟು ಭಯಂಕರವಾಗಿದೆ ಎಂಬುದು ಇದರ ಆಳಕ್ಕೆ ಸಿಕ್ಕಿ ಹಾಕಿಕೊಂಡ ಶವವನ್ನು ಹೊರ ತೆಗೆದವರಿಗೆ ಮಾತ್ರ ಗೊತ್ತು. ಬಂಡೆಯ ಕೆಳಗೆ 15 ಅಡಿ ದೂರದವರೆಗೆ ಟೊಳ್ಳಾದ ಸ್ಥಳವಿದೆ. ನೀರಿಗೆ ಬಿದ್ದ ವ್ಯಕ್ತಿಗಳು ಮೇಲಿನಿಂದ ಬೀಳುವ ನೀರಿನ ರಭಸಕ್ಕೆ ಕಲ್ಲು ಬಂಡೆಯ ಸಂದಿಯಲ್ಲಿ ಸಿಲುಕಿಕೊಂಡರೆ ಮುಗೀತು. ಆತ ಈಜು ಗೊತ್ತಿದ್ದರೂ ಈಚೆಗೆ ಬರುವುದು ಮಾತ್ರ ಹೆಣವಾಗಿಯೇ. ಇತ್ತೀಚೆಗೆ ಇಲ್ಲಿ ಕಾವಲಿನ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಮೋಜು ಮಸ್ತಿಗೂ ತಡೆಯೊಡ್ಡಲಾಗಿದೆ.

ಮಲ್ಲಳ್ಳಿ ಫಾಲ್ಸ್ ನಲ್ಲಿ ಸೆಲ್ಫಿ ಅಪಾಯ

ಮಲ್ಲಳ್ಳಿ ಫಾಲ್ಸ್ ನಲ್ಲಿ ಸೆಲ್ಫಿ ಅಪಾಯ

ಸೋಮವಾರಪೇಟೆ ತಾಲೂಕಿಗೆ ಸೇರಿದ ಮಲ್ಲಳ್ಳಿ ಜಲಧಾರೆ ಕಾನನದ ನಡುವೆ ಇದೆ. ಇಲ್ಲಿಗೆ ತೆರಳುವುದೇ ಒಂದು ಸಾಹಸ ಈ ಜಲಪಾತ ಸುಂದರ ಅಷ್ಟೇ ಅಲ್ಲ ರುದ್ರರಮಣೀಯವೂ ಹೌದು. ಎತ್ತರದಿಂದ ಧುಮುಕುವ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ. ಈ ಕಾರಣಕ್ಕಾಗಿಯೇ ಹಲವರು ಇದರ ಬಳಿ ಫೋಟೋ ತೆಗೆಯಿಸಿಕೊಳ್ಳುವ ಸಲುವಾಗಿ ತೆರಳಿ ಕಾಲು ಜಾರಿ ಬಿದ್ದು ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಈ ಜಲಪಾತದ ಕೆಳಭಾಗಕ್ಕೆ ಇಳಿಯುವುದು ಅಸಾಧ್ಯವಾದ ಕಾರಣ ಜಲಧಾರೆ ಧುಮುಕುವ ಕಡಿದಾದ ಜಾಗದಲ್ಲಿ ನಿಂತು ಫೋಟೋ ತೆಗೆಯುವ ಪ್ರಯತ್ನ ಮಾಡುತ್ತಾರೆ. ಈ ಸಂದರ್ಭ ಕಾಲು ಜಾರಿ ಬಿದ್ದು ಸತ್ತವರ ಸಂಖ್ಯೆಯೇ ಹೆಚ್ಚು. ಇತ್ತೀಚೆಗೆ ಸೆಲ್ಫಿ ಗೀಳಿನಿಂದಾಗಿ ಇನ್ನೂ ಹೆಚ್ಚು ಸಾವು ಸಂಭವಿಸುತ್ತಿದೆ.

ಪ್ರವಾಸಿಗರ ಅತಿರೇಕದ ವರ್ತನೆ

ಪ್ರವಾಸಿಗರ ಅತಿರೇಕದ ವರ್ತನೆ

ದೂರದಿಂದ ಬರುವ ಪ್ರವಾಸಿಗರು ಕೇವಲ ಜಲಪಾತಗಳನ್ನಷ್ಟೆ ನೋಡಲು ಬರುತ್ತಿಲ್ಲ. ಬದಲಿಗೆ ಮದ್ಯದ ಬಾಟಲಿಯೊಂದಿಗೆ ಬಂದು ಪಾರ್ಟಿ ಮಾಡಿ ಅತಿರೇಕದಿಂದ ವರ್ತಿಸುತ್ತಾರೆ. ಹೀಗಾಗಿ ಹಲವು ಅವಘಡಗಳು ಸಂಭವಿಸುತ್ತಿವೆ. ಇನ್ನಾದರೂ ಈ ಜಲಪಾತದತ್ತ ಆಗಮಿಸುವ ಪ್ರವಾಸಿಗರು ಎಚ್ಚರವಾಗಿರಿ. ಇಲ್ಲಿ ಏನೇ ದುರಂತ ಸಂಭವಿಸಿದರೂ ತಕ್ಷಣಕ್ಕೆ ನಿಮ್ಮ ಸಹಾಯಕ್ಕೆ ಯಾರೂ ಬರಲಾರರು. ಜಲಪಾತಗಳ ವೀಕ್ಷಣೆಗೆ ಬರುವ ಮುನ್ನ ಸ್ಥಳೀಯ ಪ್ರದೇಶಗಳ ಪರಿಚಯ ಇರುವ ಮಾರ್ಗದರ್ಶಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಉತ್ತಮ. ಜಲಧಾರೆಗಳ ಅಂದಕ್ಕೆ ಮನಸೋತು ನೀರಿಗಿಳಿಯುವುದು, ಈಜುವುದು ಅಪಾಯ. ಸೆಲ್ಫಿ ಗೀಳು ಇರುವವರು ಎಚ್ಚರವಾಗಿರುವುದು ಒಳಿತು.

English summary
Madikeri, the place which is famous for its natural beauty has various beautiful water falls, but those are very dangerous too. Many people die in th water falls in recent years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X