ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಸತಿಗಾಗಿ ಒತ್ತಾಯಿಸಿ ಕೊಡಗಿನ ದಿಡ್ಡಳ್ಳಿಯಲ್ಲಿ ಗಿರಿಜನರ ಪ್ರತಿಭಟನೆ

ಕೊಡಗು ಜಿಲ್ಲೆ ದಿಡ್ಡಳ್ಳಿಯಲ್ಲಿ ವಸತಿ ಆಗ್ರಹಿಸಿ ನಡುಗುವ ಚಳಿಯಲ್ಲೇ ಆದಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ ಹದಿಮೂರು ದಿನ ಕಳೆದಿದ್ದಾರೆ. ಅವರಿಗೊಂದು ಬದಲಿ ವ್ಯವಸ್ಥೆಯಾದರೂ ತಕ್ಷಣಕ್ಕೆ ಸಿಗುತ್ತಾ?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಡಿಸೆಂಬರ್ 19: ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದ ಸುಮಾರು 577 ಆದಿವಾಸಿ ಗಿರಿಜನ ಕುಟುಂಬಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದ್ದರಿಂದ ನಿರಾಶ್ರಿತರಾಗಿರುವವರು ನಡೆಸುತ್ತಿರುವ ಆಹೋರಾತ್ರಿ ಹೋರಾಟ ಭಾನುವಾರ 13ನೇ ದಿನಕ್ಕೆ ಕಾಲಿಟ್ಟಿತು. ಇದೇ ವೇಳೆ ಭಾರೀ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಮಟ್ಟದ ಹಲವು ಸಂಘಟನೆಗಳು ಈ ಪ್ರತಿಭಟನೆಗೆ ಕೈಜೋಡಿಸಿ, ಸರಕಾರದ ವಿರುದ್ಧ ಬೃಹತ್ ಸಂಕಲ್ಪ ದಿನವನ್ನಾಗಿ ಆಚರಿಸಿದವು. ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಪ್ರಮುಖ ಸಿರಿಮನೆ ನಾಗರಾಜ್ ನೇತೃತ್ವದಲ್ಲಿ ಹೋರಾಟ ನಡೆದು, ಹೈಕೋರ್ಟ್ ವಕೀಲ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಪ್ರತಿಭಟನೆಗೆ ಚಾಲನೆ ನೀಡಿದರು.[ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್?]

Adivasi protest

ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ? ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಿದ ಅರಣ್ಯ ಇಲಾಖೆ ಹಾಗೂ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಹಾಡಿ ರಸ್ತೆಯುದ್ದಕ್ಕೂ ಅಳವಡಿಸಲಾಗಿತ್ತು. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸರು ಬೀಡು ಬಿಟ್ಟು, ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಅಧಿಕಾರಿಗಳು ತರಾಟೆಗೆ
ರಾಜ್ಯದ ವಿವಿಧೆಡೆಗಳಿಂದ ಬಂದ ಸಂಘಟನೆಗಳ ಹೋರಾಟಗಾರರು ಸಂಕಲ್ಪ ದಿನ ಹೋರಾಟದಲ್ಲಿ ಪಾಲ್ಗೊಂಡು, ಗಿರಿಜನರಿಗೆ ಬೆಂಬಲ ಸೂಚಿಸಿದರು. ಹೋರಾಟದ ಕಾವು ತೀವ್ರಗೊಳ್ಳುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ನಂಜುಂಡಸ್ವಾಮಿ, ವಿರಾಜಪೇಟೆ ತಹಸೀಲ್ದಾರ್ ಮಹದೇವಪ್ಪ ಮತ್ತು ಐಟಿಡಿಪಿ ಅಧಿಕಾರಿ ಮಾಯಾದೇವಿ ಅವರನ್ನು ಸ್ಥಳದಲ್ಲಿದ್ದ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

ಮಳೆ, ಚಳಿ, ಗಾಳಿ, ಬಿಸಿಲೆನ್ನದೆ ನೀರು, ಅನ್ನವಿಲ್ಲದೆ 13 ದಿನಗಳಿಂದ ದಿಕ್ಕಿಲ್ಲದವರಂತೆ ದಿನ ಕಳೆಯುತ್ತಿರುವ ಗಿರಿಜನರಿಗೆ ಯಾವುದೇ ಮೂಲಸೌಲಭ್ಯಗಳನ್ನು ನೀಡದೆ ಇಷ್ಟು ದಿನಗಳಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.[ಹಿಮವದ್‍ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಂಕಿ: ಹತ್ತಾರು ಎಕರೆ ಭಸ್ಮ]

ಜಾಗ ಗುರುತಿಸಿದ್ದೇವೆ
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಯಾದೇವಿ ಮಾತನಾಡಿ, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು. ಪೈಸಾರಿ ಜಾಗವನ್ನು ಗುರುತಿಸಲಾಗಿದೆ ಎಂದರು. ಅಷ್ಟರಲ್ಲಿ ಮೊದಲೇ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ನೀವು ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಕಿಡಿ ಕಾರಿದರು.

ಜಿಲ್ಲಾ ಉಪವಿಭಾಗಾಧಿಕಾರಿ ನಂಜುಂಡಗೌಡ ವಿಷಯ ಪ್ರಸ್ತಾಪಿಸಿ, ಪೊನ್ನಂಪೇಟೆ ಸಮೀಪದಲ್ಲಿ ಪೈಸಾರಿ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ, ಇಲ್ಲಿ ನಿರಾಶ್ರಿತರಾಗಿರುವ ಎಲ್ಲ 577 ಕುಟುಂಬಗಳಿಗೂ ಅಲ್ಲಿ ಪುನರ್ವಸತಿ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಯವರು ಮಾಹಿತಿಯನ್ನು ನೀಡಲು ಹೇಳಿದ್ದಾರೆ ಎಂದರು.[ಹುಲಿ ಉಪಟಳದಿಂದ ದಕ್ಷಿಣ ಕೊಡಗಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ]

ಆಗಲೂ ಅಸಮಾಧಾನಗೊಂಡ ಪ್ರತಿಭಟನಾಕಾರರು, ನಮ್ಮ ಗುಡಿಸಲು ತೆರವುಗೊಳಿಸಲು ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಲು ನಿಮಗೆ ಅಧಿಕಾರ ಯಾರು ಕೊಟ್ಟರು ಎಂದು ಪ್ರಶ್ನೆ ಮಾಡಿದರು. ಆಗ ಅಧಿಕಾರಿ ವರ್ಗದವರು ಮೌನ ವಹಿಸಿದರು. ಆಕ್ರೋಶಭರಿತ ಪ್ರತಿಭಟನಾಕಾರರು ಅಧಿಕಾರಿಗಳನ್ನು ದಿಗ್ಬಂಧನದಲ್ಲಿರಿಸಲು ಮುಂದಾದಾಗ ಎ.ಕೆ ಸುಬ್ಬಯ್ಯ ಅವರು ಮಧ್ಯಪ್ರವೇಶಿಸಿ, ಅದಕ್ಕೆ ಅವಕಾಶ ನೀಡಲಿಲ್ಲ.

English summary
Adivasi's protest in Diddalli, Kodagu district against state government urged to not vacate them from forest land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X