ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾಂತ್ಯ ವಿಶೇಷ : 2015ರ ಪ್ರಮುಖ ರಾಜಕೀಯ ಬೆಳವಣಿಗೆಗಳು

|
Google Oneindia Kannada News

ಬೆಂಗಳೂರು, ಡಿಸೆಂಬರ್ 24 : ಬಿಬಿಎಂಪಿ ಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆ, ಸಚಿವ ಸಂಪುಟ ವಿಸ್ತರಣೆ, ವಿಧಾನಪರಿಷತ್ ಚುನಾವಣೆ ಹೀಗೆ 2015 ಕರ್ನಾಟಕ ರಾಜಕೀಯದ ಪಾಲಿಗೂ ಮಹತ್ವದ ವರ್ಷ. ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಮಾಡುವ ಮೂಲಕ ನಾಲ್ವರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಂಡರು.

ವರ್ಷಾಂತ್ಯದಲ್ಲಿ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆಯ ನಡೆಯಲಿದ್ದು, 2016ರಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಎದುರಾಗಲಿದೆ. ಬಿಜೆಪಿ ಮುಂದೆ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಸವಾಲು ಇದೆ. [2015ರಲ್ಲಿ ದೇಶದಲ್ಲಿ ಸುದ್ದಿ ಮಾಡಿದ ರಾಜ್ಯದ 8 ವಿದ್ಯಮಾನ]

ಸತೀಶ್ ಜಾರಕಿಹೊಳಿ ಖಾತೆ ಕ್ಯಾತೆ, ಸಂಪುಟ ವಿಸ್ತರಣೆ, ಬಿಬಿಎಂಪಿಯಲ್ಲಿ ಮೈತ್ರಿ ರಾಜಕೀಯ ಮುಂತಾದ ಚಟುವಟಿಕೆಗಳಿಂದಾಗಿ ಈ ವರ್ಷ ಹಲವು ರಾಜಕೀಯ ಬೆಳವಣಿಗಳು ನಡೆದವು. ಬಿಜೆಪಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ನಡೆಸುವ ಮೂಲಕ ದಕ್ಷಿಣ ಭಾರತದತ್ತ ಗಮನಹರಿಸಿತು. [ಡಿ.27ರಂದು ವಿಧಾನಪರಿಷತ್ ಚುನಾವಣೆ]

ಮೂವರು ಶಾಸಕರು ಅಸಹಜ ಸಾವು ಅವರ ಕ್ಷೇತ್ರಗಳಿಗೆ ಅಪಾರ ನಷ್ಟ ಉಂಟುಮಾಡಿತು. ಜೈಲಿನಿಂದ ಬಿಡುಗಡೆಗೊಂಡ ಜನಾರ್ದನ ರೆಡ್ಡಿ ಅವರು ರಾಜಕೀಯದತ್ತ ಮುಖ ಮಾಡಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕು ಎಂಬ ಬೇಡಿಕೆ ಹಾಗೇ ಉಳಿಯಿತು. 2015ರಲ್ಲಿ ಕರ್ನಾಟಕದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಹಿನ್ನೋಟ ಇಲ್ಲಿವೆ..........

ಕೊನೆಗೂ ಸಚಿವ ಸಂಪುಟ ವಿಸ್ತರಣೆ

ಕೊನೆಗೂ ಸಚಿವ ಸಂಪುಟ ವಿಸ್ತರಣೆ

ಶಾಸಕರ ಒತ್ತಾಯ, ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿ ನಾಲ್ವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡರು. ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ, ಹಾಸನ ಜಿಲ್ಲೆ ಅರಕಲಗೂಡು ಶಾಸಕ ಎ.ಮಂಜು, ಧಾರವಾಡ ಶಾಸಕ ವಿನಯ್‌ ಕುಲಕರ್ಣಿ, ಹಾವೇರಿ ಜಿಲ್ಲೆಯ ಹಾನಗಲ್‌ ಶಾಸಕ ಮನೋಹರ ತಹಶೀಲ್ದಾರ್ ಅವರು ಸಿದ್ದರಾಮಯ್ಯ ಸಂಪುಟ ಸೇರಿದರು. ಡಾ.ಜಿ.ಪರಮೇಶ್ವರ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ಪರಮೇಶ್ವರ ಅವರಿಗೆ ಸಚಿವ ಸ್ಥಾನ ನೀಡಿದರು.

ಸತೀಶ್ ಜಾರಕಿಹೊಳಿ ಖಾತೆ ಬದಲಾವಣೆ

ಸತೀಶ್ ಜಾರಕಿಹೊಳಿ ಖಾತೆ ಬದಲಾವಣೆ

ಖಾತೆಗಾಗಿ ಕ್ಯಾತೆ ತೆಗೆದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೊನೆಗೂ ತಮ್ಮ ಖಾತೆ ಬದಲಾವಣೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜನವರಿ 27ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸತೀಶ್ ಜಾರಕಿಹೊಳಿ ಅವರು ಪ್ರಮುಖ ಖಾತೆಯೊಂದನ್ನು ನೀಡುವಂತೆ ಷರತ್ತು ಹಾಕಿದರು. ಅಬಕಾರಿ ಖಾತೆಯನ್ನು ವಾಪಸ್ ಪಡೆದು ಜನರ ಬಳಿ ಹೋಗುವಂತಹ ಖಾತೆ ನೀಡಿ ಎಂದು ಜಾರಕಿಹೊಳಿ ಬೇಡಿಕೆ ಇಟ್ಟರು. ಸಚಿವರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸತೀಶ್‌ ಜಾರಕಿಹೊಳಿ ಅವರ ಖಾತೆಯನ್ನು ಬದಲಾವಣೆ ಮಾಡಿದರು. ಜಾರಕಿಹೊಳಿ ಅವರ ನಿರೀಕ್ಷೆಯಂತೆ ಅವರಿಗೆ ಸಣ್ಣ ಕೈಗಾರಿಕಾ ಖಾತೆ ನೀಡಲಾಯಿತು. ಜಾರಕಿಹೊಳಿ ಅವರ ಬಳಿ ಇದ್ದ ಅಬಕಾರಿ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿ ಇಟ್ಟುಕೊಂಡರು.

ಬಿಬಿಎಂಪಿಯಲ್ಲಿ ಒಂದಾದ ಜೆಡಿಎಸ್-ಕಾಂಗ್ರೆಸ್

ಬಿಬಿಎಂಪಿಯಲ್ಲಿ ಒಂದಾದ ಜೆಡಿಎಸ್-ಕಾಂಗ್ರೆಸ್

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡವು. ಮೇಯರ್ ಸ್ಥಾನವನ್ನು ಇಟ್ಟುಕೊಂಡ ಕಾಂಗ್ರೆಸ್ ಉಪ ಮೇಯರ್ ಪಟ್ಟವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತು. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮೇಯರ್ ಖುರ್ಚಿಯಲ್ಲಿ ಕೂರಲು ಸಾಧ್ಯವಾಗಲಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಈ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೂ, ದೇವೇಗೌಡರು ಒಪ್ಪಿಗೆ ನೀಡಿದ ಬಳಿಕ ಮೈತ್ರಿಗೆ ಒಪ್ಪಿಗೆ ಕೊಟ್ಟರು.

ಗೃಹ ಸಚಿವ ಕೆ.ಜೆ.ಜಾರ್ಜ್ ಖಾತೆ ಬದಲಾವಣೆ

ಗೃಹ ಸಚಿವ ಕೆ.ಜೆ.ಜಾರ್ಜ್ ಖಾತೆ ಬದಲಾವಣೆ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಖಾತೆಯನ್ನು ಬದಲಾವಣೆ ಮಾಡಿದರು. ಸಂಪುಟ ಸೇರಿದ ಡಾ.ಜಿ.ಪರಮೇಶ್ವರ ಅವರಿಗೆ ಗೃಹ ಖಾತೆಯನ್ನು ಹಂಚಿ, 'ಬೆಂಗಳೂರು ನಗರಾಭಿವೃದ್ಧಿ' ಖಾತೆಯನ್ನು ಕೆ.ಜೆ.ಜಾರ್ಜ್ ಅವರಿಗೆ ನೀಡಲಾಯಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರನ್ನು ಬದಲಾವಣೆ ಮಾಡಿ ಎಂದು ಪ್ರತಿಪಕ್ಷಗಳು ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತಿದ್ದವು. ಸಂಪುಟ ವಿಸ್ತರಣೆ ಮಾಡಿದ ಸಿದ್ದರಾಮಯ್ಯ ಅವರು, ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ಶಾಸಕ ಜಾರ್ಜ್‌ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದರು.

ಪರಿಷತ್ ಚುನಾವಣೆಗೆ ಸ್ಪರ್ಧಿಸೋಲ್ಲ ಅಂದ್ರು ರಮ್ಯಾ

ಪರಿಷತ್ ಚುನಾವಣೆಗೆ ಸ್ಪರ್ಧಿಸೋಲ್ಲ ಅಂದ್ರು ರಮ್ಯಾ

ವಿಧಾನಪರಿಷತ್ ಚುನಾವಣೆಗೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಸ್ಪರ್ಧಿಸುತ್ತಾರೆಯೇ? ಎಂಬುದು ಕುತೂಹಲ ಮೂಡಿಸಿದ ಪ್ರಶ್ನೆಯಾಗಿತ್ತು. ಸ್ವತಃ ರಮ್ಯಾ ಅವರೇ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ರಮ್ಯಾ ಅವರಿಗೆ ಟಿಕೆಟ್ ಕೊಡಬಾರದು ಎಂಬ ಒತ್ತಾಯವೂ ಕೇಳಿಬಂದಿತ್ತು. ಅಂತಿಮವಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮತ್ತು ಮಂಡ್ಯದ ಇತರ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಂಡರು. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಮ್ಯಾ ಅವರು ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯ ಗೆಲುವಿಗಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮೂವರು ಶಾಸಕರ ಅಕಾಲಿಕ ಮರಣ

ಮೂವರು ಶಾಸಕರ ಅಕಾಲಿಕ ಮರಣ

2013ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಮೂವರ ಅಕಾಲಿಕ ಮರಣದಿಂದಾಗಿ 2016ರಲ್ಲಿ ಉಪ ಚುನಾವಣೆ ಎದುರಾಗಿದೆ. ಹೆಬ್ಬಾಳದ ಶಾಸಕ ಜಗದೀಶ್ ಕುಮಾರ್ (ಬಿಜೆಪಿ), ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ), ಬೀದರ್ ಕ್ಷೇತ್ರದ ಶಾಸಕ ವೆಂಕಟೇಶ ನಾಯಕ್ (ಕಾಂಗ್ರೆಸ್) ಅವರು ನಿಧನದಿಂದಾಗಿ ಕ್ಷೇತ್ರ ತೆರವಾಗಿದೆ.

ಜೆಡಿಎಸ್ : ಕಚೇರಿ ಹುಡುಕಾಟ, ಭಿನ್ನಮತ

ಜೆಡಿಎಸ್ : ಕಚೇರಿ ಹುಡುಕಾಟ, ಭಿನ್ನಮತ

ಸುಪ್ರೀಂಕೋರ್ಟ್ ಆದೇಶದಂತೆ ಜೆಡಿಎಸ್‌ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಚೇರಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಿತ್ತು. ನಂತರ ಹೊಸ ಕಚೇರಿ ನಿರ್ಮಿಸಲು ಜಾಗಕ್ಕಾಗಿ ಹುಡುಕಾಟ ಆರಂಭವಾಯಿತು. ಬಿಬಿಎಂಪಿ ಚುನಾವಣೆ, ವಿಧಾನಪರಿಷತ್ ಚುನಾವಣೆಗಳ ಮೈತ್ರಿ ವಿಚಾರದಲ್ಲಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತು.

ಕರ್ನಾಟಕಕ್ಕೆ ಬಂತು ಬಿಜೆಪಿ ರಾಷ್ಟ್ರೀಯ ನಾಯಕರ ದಂಡು

ಕರ್ನಾಟಕಕ್ಕೆ ಬಂತು ಬಿಜೆಪಿ ರಾಷ್ಟ್ರೀಯ ನಾಯಕರ ದಂಡು

ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಏಪ್ರಿಲ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಿತು. ಕರ್ನಾಟಕದಲ್ಲಿ 1982, 1993, 1999 ಹಾಗೂ 2008ರ ಬಳಿಕ 2015ರಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಿತು. ಬಿಜೆಪಿ ರಾಷ್ಟ್ರೀಯ ನಾಯಕರ ದಂಡು ಕಾರ್ಯಕಾರಣಿ ಸಭೆಗಾಗಿ ಉದ್ಯಾನಗರಿಗೆ ಬಂದಿತು.

English summary
Karnataka Year end special : What happened in Karnataka politics in 2015. Here is a top political developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X