ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಹೆಮ್ಮೆಯ ಹಾಕಿ ಉತ್ಸವ ಹಾಕಿನಮ್ಮೆಯ ಇತಿಹಾಸ

By ಲವಕುಮಾರ್ ಬಿಎಂ, ಮಡಿಕೇರಿ
|
Google Oneindia Kannada News

ಕೊಡಗಿನಲ್ಲೀಗ ಕ್ರೀಡಾ ಸಮಯ... ಇಲ್ಲಿನ ಮೈದಾನಗಳಲ್ಲೀಗ ಹಾಕಿ, ಕ್ರಿಕೆಟ್, ಫುಟ್ಭಾಲ್, ವಾಲಿಬಾಲ್ ಆಟಗಳಲ್ಲಿ ನಿರತರಾದವರು ಕಂಡು ಬರುತ್ತಿದ್ದಾರೆ. ಎಲ್ಲಿ ನೋಡಿದರೂ ಒಂದಲ್ಲಾ ಒಂದು ರೀತಿಯ ಪಂದ್ಯಾವಳಿಗಳು ನಡೆಯುತ್ತಲೇ ಇವೆ.

ಗೌಡ ಕಪ್, ಮುಸ್ಲಿಂ ಕಪ್ ಹೀಗೆ ವಿವಿಧ ಜಾತಿ, ಜನಾಂಗಗಳು ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಕ್ರೀಡಾಪಟುಗಳನ್ನು ಉತ್ತೇಜಿಸಿದರೆ, ಕೆಲವು ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ಏರ್ಪಡಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ.

ತಮ್ಮೆಲ್ಲಾ ಕೆಲಸ, ಒತ್ತಡಗಳ ನಡುವೆಯೂ ಹಿಂದಿನ ಕಾಲದಿಂದ ರೂಢಿಸಿಕೊಂಡು ಬಂದಂತಹ ಕೆಲವು ಕ್ರೀಡಾಕೂಟಗಳನ್ನು ಇನ್ನೂ ಕೂಡ ನಡೆಸಿಕೊಂಡು ಹೋಗಲಾಗುತ್ತಿದೆ.

World famous hockey festival in Madikeri

ಇದೆಲ್ಲದರ ನಡುವೆಯೂ ಕಳೆದ 19 ವರ್ಷಗಳಿಂದ ವರ್ಷಕ್ಕೊಂದು ಕುಟುಂಬದ ಸಾರಥ್ಯದಲ್ಲಿ ನಡೆಯುವ ಕೊಡವ ಕುಟುಂಬಗಳ ಹಾಕಿ ಉತ್ಸವ ಕೊಡಗನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. 1997ರಲ್ಲಿ ವೀರಾಜಪೇಟೆ ತಾಲೂಕಿನ ಕುಗ್ರಾಮ ಕರಡದಲ್ಲಿ ಆರಂಭಗೊಂಡ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ ಬಂದಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗುವಷ್ಟರ ಮಟ್ಟಿಗೆ ಬೆಳೆದಿದೆ.

1997ರಲ್ಲಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ ಹಾಕಿನಮ್ಮೆಯನ್ನು ಆರಂಭಿಸಲಾಯಿತು. ಪಾಂಡಂಡ ಕುಟುಂಬವೇ ಸಾರಥ್ಯ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು 60 ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಲಿಯಂಡ ಕುಟುಂಬದ ತಂಡ ಕಪ್ ಒಡೆತನ ಸಾಧಿಸಿತು. ಆರಂಭದ ಪಂದ್ಯಾವಳಿಯಿಂದ ಇಲ್ಲಿಯವರೆಗೆ ಗಮನಿಸಿದರೆ ಮೊದಲು ಕೇವಲ ಪಂದ್ಯಾವಳಿಯಾಗಿದ್ದದ್ದು, ನಂತರದ ವರ್ಷಗಳಲ್ಲಿ ಅದೊಂದು ಉತ್ಸವವಾಗಿ ಮಾರ್ಪಾಡಾಯಿತಲ್ಲದೆ, ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು.

1998ರಲ್ಲಿ ಕಡಂಗದಲ್ಲಿ ನಡೆದ ಕೋಡಿರಕಪ್‌ನಲ್ಲಿ 116 ತಂಡಗಳು ಪಾಲ್ಗೊಂಡು ಕುಲ್ಲೇಟಿರ ತಂಡ ವಿಜಯಿಯಾದರೆ, 1999ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಬಲ್ಲಚಂಡಕಪ್‌ನಲ್ಲಿ 140 ತಂಡಗಳು ಪಾಲ್ಗೊಂಡಿದ್ದು ಕೂತಂಡ ಹಾಗೂ ಕುಲ್ಲೇಟಿರ ತಂಡಗಳು ಕಪ್‌ನ ಒಡೆತನವನ್ನು ಹಂಚಿಕೊಂಡಿದ್ದವು. 2000ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಚೆಪ್ಪುಡಿರಕಪ್‌ನಲ್ಲಿ 170 ತಂಡಗಳು ಭಾಗವಹಿಸಿದ್ದು ಕೂತಂಡ ತಂಡ ಗೆಲುವು ಪಡೆದಿತ್ತು. 2001ರಲ್ಲಿ ಅಮ್ಮತ್ತಿಯಲ್ಲಿ ನಡೆದ ನೆಲ್ಲಮಕ್ಕಡ ಕಪ್‌ನಲ್ಲಿ 220 ತಂಡಗಳು ಭಾಗವಹಿಸಿದ್ದು ಕೂತಂಡ ತಂಡ ವಿಜಯಿಯಾಗಿತ್ತು. 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚಕ್ಕೇರಕಪ್‌ನಲ್ಲಿ 252 ತಂಡಗಳು ಪಾಲ್ಗೊಂಡಿದ್ದು ಅವುಗಳಲ್ಲಿ ಕುಲ್ಲೇಟಿರ ತಂಡ ಒಡೆತನ ಸಾಧಿಸಿತ್ತು. 2003ರಲ್ಲಿ ನಾಪೋಕ್ಲುನಲ್ಲಿ ನಡೆದ ಕಲಿಯಂಡ ಕಪ್‌ನಲ್ಲಿ 280 ತಂಡಗಳು ಭಾಗವಹಿಸಿದ್ದು ನೆಲ್ಲಮಕ್ಕಡ ತಂಡ ಗೆಲುವು ಸಾಧಿಸಿತ್ತು.

2004ರಲ್ಲಿ ಮಾದಾಪುರದಲ್ಲಿ ನಡೆದ ಮಾಳೆಯಂಡ ಕಪ್‌ನಲ್ಲಿ 235 ತಂಡ ಪಾಲ್ಗೊಂಡು ಕೂತಂಡ ತಂಡ ಗೆಲುವು ಪಡೆದಿತ್ತು. 2005ರಲ್ಲಿ ಮಡಿಕೇರಿಯಲ್ಲಿ ನಡೆದ ಬಿದ್ದಂಡ ಕಪ್‌ನಲ್ಲಿ 222 ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ವಿಜಯಿಯಾಗಿತ್ತು. 2006ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಕಳ್ಳಿಚಂಡ ಕಪ್‌ನಲ್ಲಿ 217 ತಂಡಗಳು ಭಾಗವಹಿಸಿ ಪಳಂಗಂಡ ತಂಡ ಒಡೆತನ ಸಾಧಿಸಿತ್ತು. 2007ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಮಂಡೇಟಿರ ಕಪ್‌ನಲ್ಲಿ 186 ತಂಡ ಪಾಲ್ಗೊಂಡು ಮಂಡೇಪಂಡ ತಂಡ ಗೆಲುವು ಪಡೆದಿತ್ತು. 2008ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಅಳಮೇಂಗಡ ಕಪ್‌ನಲ್ಲಿ 216 ತಂಡಗಳು ಪಾಲ್ಗೊಂಡು ಅಂಜಪರವಂಡ ಗೆಲುವು ಪಡೆದಿತ್ತು. 2009ರಲ್ಲಿ ಅಮ್ಮತ್ತಿಯಲ್ಲಿ ನಡೆದ ಮಂಡೇಪಂಡ ಕಪ್‌ನಲ್ಲಿ 231 ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ಒಡೆತನ ಸಾಧಿಸಿತ್ತು. 2010ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮನೆಯಪಂಡ ಕಪ್‌ನಲ್ಲಿ 214 ತಂಡಗಳು ಭಾಗವಹಿಸಿ ಪಳಂಗಂಡ ತಂಡವು ಗೆಲುವು ಪಡೆಯಿತು. 2011ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮಚ್ಚಮಾಡಕಪ್‌ನಲ್ಲಿ 228 ತಂಡ ಭಾಗವಹಿಸಿ ಪಳಂಗಂಡ ತಂಡ ಗೆದ್ದರೆ, 2012ರಲ್ಲಿ ಅಮ್ಮತ್ತಿಯಲ್ಲಿ ನಡೆದ ಐಚೆಟ್ಟಿರ ಕಪ್‌ನಲ್ಲಿ 217 ತಂಡ ಭಾಗವಹಿಸಿ ಪಳಂಗಂಡ ತಂಡವೇ ಹ್ಯಾಟ್ರಿಕ್ ಗೆಲುವು ಪಡೆಯಿತು.

2013ರಲ್ಲಿ ಬಾಳುಗೋಡಿನಲ್ಲಿ ನಡೆದ ಮಾದಂಡ ಕಪ್‌ನಲ್ಲಿ 225 ತಂಡ ಭಾಗವಹಿಸಿ ಅಂಜಪರವಂಡ ತಂಡ ಗೆಲುವಿನ ನಗೆ ಬೀರಿತ್ತು. 2014ರಲ್ಲಿ ವೀರಾಜಪೇಟೆಯಲ್ಲಿ ನಡೆದ ತಾತಂಡಕಪ್‌ನಲ್ಲಿ 240 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪಳಂಗಂಡ ತಂಡವೇ ಮೇಲುಗೈ ಸಾಧಿಸಿತ್ತು. 2015ರಲ್ಲಿ ವೀರಾಜಪೇಟೆಯಲ್ಲಿ ನಡೆದ ಕುಪ್ಪಂಡಕಪ್ ಪಂದ್ಯದಲ್ಲಿಯೂ ಪಳಂಗಂಡ ತಂಡವೇ ಗೆಲುವು ಸಾಧಿಸಿದೆ. ಇದೀಗ ಶಾಂತೆಯಂಡ ಕಪ್ ಮಡಿಕೇರಿಯಲ್ಲಿ ನಡೆಯುತ್ತಿದ್ದು, 299 ತಂಡಗಳು ಭಾಗವಹಿಸುವ ಸಾಧ್ಯತೆಯಿದೆ. ಇದುವರೆಗೆ ನಡೆದ ಪಂದ್ಯಾವಳಿಯಲ್ಲಿ ಈ ಬಾರಿಯೇ ಹೆಚ್ಚಿನ ತಂಡಗಳು ಭಾಗವಹಿಸುತ್ತಿದ್ದು, ಒಮ್ಮೆ ಹ್ಯಾಟ್ರಿಕ್ ಗೆಲುವು ಸಾಧಿಸಿ, ಕಳೆದ ಎರಡು ವರ್ಷಗಳಿಂದ ಗೆಲುವಿನ ನಾಗಾಲೋಟದಲ್ಲಿರುವ ಪಳಂಗಂಡ ತಂಡ ಮತ್ತೊಮ್ಮೆ ಹ್ಯಾಟ್ರಿಕ್ ಗೆಲುವು ಸಾಧಿಸುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಪ್ರಸಕ್ತ ವರ್ಷದ ಹಾಕಿ ಉತ್ಸವ ಮಡಿಕೇರಿಯಲ್ಲಿ ಏಪ್ರಿಲ್ 10ರಿಂದ ಆರಂಭವಾಗಿ ಮೇ.28ರವರೆಗೆ ನಡೆಯಲಿದ್ದು, ಪಂದ್ಯಾವಳಿಯ ಸಾರಥ್ಯವನ್ನು ಶಾಂತೆಯಂಡ ಕುಟುಂಬ ವಹಿಸಿದೆ.

English summary
World famous hockey festival Hakinamme will begin in Madikeri from April 10 till April 28. This is the 19th anniversary of the festival. Find here the history of hockey tournament being conducted different families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X