ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗ್ರಾಹಕ ಹಕ್ಕು ನಿಯಮಗಳು ಗಟ್ಟಿಗೊಳ್ಳಲಿ..

By ಅರುಣ್ ಜಾವಗಲ್
|
Google Oneindia Kannada News

1962 ರ ಮಾರ್ಚ್ 15 ರಂದು ಜಾನ್ ಎಫ್ ಕೆನಡಿಯವರು ಅಮೇರಿಕಾದ ಸೆನೆಟ್ ನಲ್ಲಿ ಗ್ರಾಹಕ ಹಕ್ಕುಗಳನ್ನು ಕಾಪಾಡುವ ಬಗ್ಗೆ ಭಾಷಣ ನೀಡಿದ್ದರು, ಆ ಭಾಷಣದಲ್ಲಿ ಮುಖ್ಯವಾಗಿ ಮಾಹಿತಿಯ ಹಕ್ಕು, ಸುರಕ್ಷತೆಯ ಹಕ್ಕು, ಆಯ್ಕೆಯ ಹಕ್ಕು ಮತ್ತು ದೂರನ್ನ ನೀಡುವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದರು. ಮುಂದಿನ ದಿನಗಳಲ್ಲಿ ಈ ನಾಲ್ಕು ಹಕ್ಕುಗಳನ್ನೇ ಆಧಾರವನ್ನಾಗಿಸಿಕೊಂಡು ಅಮೇರಿಕಾದಲ್ಲಿ (Consumer Bill of Rights) ಕಾನೂನು ರೂಪಿಸಲಾಯಿತು. ಇದರ ನೆನಪಿಗಾಗಿ ಪ್ರತಿ ವರ್ಷ ಪ್ರಪಂಚದಾದ್ಯಂತ ಮಾರ್ಚ್ 15 ರಂದು ಗ್ರಾಹಕ ಹಕ್ಕುಗಳ ದಿನವೆಂದು ಅಚರಿಸಲಾಗುತ್ತದೆ. [ಗ್ರಾಹಕರ ಹಕ್ಕುಗಳ ದಿನದಂದು ಟ್ವಿಟ್ಟರ್ ಚಳುವಳಿ]

ಬಹುಪಾಲು ಎಲ್ಲಾ ದೇಶದಲ್ಲೂ ಮೇಲೆ ತಿಳಿಸಿದ ಹಕ್ಕುಗಳನ್ನು ಆಧಾರವಾಗಿರಿಸಿಕೊಂಡು ಗ್ರಾಹಕ ಹಕ್ಕುಗಳ ಕಾಯಿದೆಯನ್ನು ರೂಪಿಸಲಾಗಿದೆ.

ಭಾರತ ಒಕ್ಕೂಟದಲ್ಲೂ ಗ್ರಾಹಕರ ಹಕ್ಕುಗಳನ್ನು ಕಾಪಾಡಲು ಕಾಯಿದೆಯನ್ನು 1986 ರೂಪಿಸಲಾಗಿದೆ (Consumer Protection Act 1986 ) . ಮೇಲ್ನೋಟಕ್ಕೆ ಈ ಕಾಯಿದೆಯಿಂದ ಗ್ರಾಹಕ ಹಕ್ಕುಗಳು ಕಾಪಾಡಲ್ಪಡುತ್ತವೆ ಎನಿಸಿದರೂ, ನಿಜಾಂಶದಲ್ಲಿ ಭಾರತದಂತಹಾ ವೈವಿದ್ಯತೆಯಿಂದ ಕೂಡಿದ ಒಕ್ಕೂಟದಲ್ಲಿ ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯಲು ವಿಫಲವಾಗಿರುವುದು ಕಾಣುತ್ತದೆ.

ಭಾರತ ಒಕ್ಕೂಟವು ಭಾಷಾ ವೈವಿಧ್ಯತೆಯಿಂದ ಕೂಡಿದ್ದು ಗ್ರಾಹಕ ಹಕ್ಕುಗಳನ್ನು ರೂಪಿಸುವಾಗ ಭಾಷಾ ವೈವಿಧ್ಯತೆಯನ್ನು ಪರಿಗಣನೆಗೆ
ತೆಗೆದುಕೊಂಡಾಗ ಮಾತ್ರ ಕಾಯಿದೆಯು ಪರಿಣಾಮಕಾರಿಯಾಗಿ ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಗ್ರಾಹಕ ಹಕ್ಕುಗಳನ್ನು ರೂಪಿಸುವಾಗ ಬರಿಯ ಹಿಂದಿ/ಇಂಗ್ಲೀಶ್ ಭಾಷಿಕರನ್ನು ಮಾತ್ರ ಗಣನೆಗೆ ತೆಗೆದುಕೊಂಡು ನಿಯಮಗಳನ್ನು ರೂಪಿಸಿರುವುದು ಎದ್ದು ಕಾಣಿಸುತ್ತದೆ. ['ಗ್ರಾಹಕನ ಸ್ಥಿತಿ-ಗತಿ' ಮತ್ತು 'ಗ್ರಾಹಕ ಸಂಸ್ಕೃತಿ']

ಉದಾಹರಣೆಗೆ- ಔಷಧಿಯ ವಿಷಯವಾಗಿ (drugs and cosmetics rules 1945) ಕಾಯಿದೆಯನ್ನು ರೂಪಿಸಲಾಗಿದ್ದು, ಔಷಧಿಯ ಮೇಲೆ ಇಂಗ್ಲೀಶ್ ಮತ್ತು ಹಿಂದಿ ಭಾಷೆಯಲ್ಲಿ ಮಾಹಿತಿ ಇರಬೇಕೆಂದು ತಿಳಿಸಲಾಗಿದೆ. ಇದು ಹಿಂದಿ/ಇಂಗ್ಲೀಶ್ ತಿಳಿಯದ ಕೊಟ್ಯಾಂತರ ಜನರನ್ನು ತಮ್ಮ ಹಕ್ಕುಗಳಿಂದ ವಂಚಿತರಾಗುವಂತೆ ಮಾಡಿದೆ.

ಔಷಧಿಯ ಬಗ್ಗೆ ಸರಿಯಾದ ಮಾಹಿತಿ ತಿಳಿಯದೇ ಸಾವು ನೋವು ಕೂಡ ಸಂಭವಿಸಬಹುದಾಗಿದೆ. ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಡಿಯೊಡ್ರೆಂಟ್ ನ ಬಳಕೆಯ ಬಗ್ಗೆ ತಿಳಿಯದೇ, ಡಿಯೋಡ್ರೆಂಟ್ ನ್ನು ಸರಿಯಾಗಿ ಬಳಕೆ ಮಾಡದಿದ್ದರಿಂದ ಯುವತಿಯೊಬ್ಬಳು ಸಾವನ್ನಪಿದ್ದನ್ನು ಸ್ಮರಿಸಬಹುದು.

World Consumer Rights Day : Let Consumer rights rules be Strong

ಇದೇ ರೀತಿಯಲ್ಲಿ ಮತ್ತೊಂದು ಪ್ರಮುಖ ಕಾಯಿದೆಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ, ಅಂಗಡಿಗಳಲ್ಲಿ ಪ್ಯಾಕೆಟ್ ನಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳಲ್ಲಿ ಗ್ರಾಹಕ ಹಕ್ಕುಗಳನ್ನು ಕಾಪಾಡಲೆಂದು ರೂಪಿಸಿರುವ FSSAI ನ Packaging and Labelling Regulations, 2011 ರಲ್ಲಿ ಆಹಾರ ಪದಾರ್ಥದ ಬಗ್ಗೆ ಎಲ್ಲಾ ಮಾಹಿತಿಯು ಇಂಗ್ಲೀಶ್ ಅಥವಾ ಹಿಂದಿ ಭಾಷೆಯಲ್ಲಿ ಇರಬೇಕು, ಬೇರೆ ಭಾಷೆಯಲ್ಲಿ ಮಾಹಿತಿ ಇದ್ದರೆ ಅಭ್ಯಂತರವಿಲ್ಲ ಎಂದು ಹೇಳುವ ಮೂಲಕ ಕಂಪನಿಗಳು ಇಂಗ್ಲೀಶ್ ಅಥವಾ ಹಿಂದಿಯಲ್ಲಿ ಮಾಹಿತಿ ನೀಡಿದರೆ ಸಾಕು ಎನ್ನುವ ನಿರ್ಧಾರಕ್ಕೆ ಬರುವಂತೆ ಸರಕಾರವೇ ದಾರಿಮಾಡಿಕೊಟ್ಟಿದೆ.

ಕೆಲವು ದಿನಗಳ ಹಿಂದೆ ಆಹಾರ ಉತ್ಪನ್ನಗಳ ಮೇಲೆ 'ಎಕ್ಸ್ ಪೈರಿ ಡೇಟ್' ಇರಬೇಕೇ ಅಥವಾ 'ಬೆಸ್ಟ್ ಬಿಪೋರ್' ಎನ್ನುವ ಬಗ್ಗೆ ನಿಯಮ ರೂಪಿಸಲು ಕೇಂದ್ರ ಆಹಾರ ಮತ್ತು ಪಡಿತರ ಖಾತೆಯು ಮುಂದಾಗಿರುವ ಬಗ‌ೆ ವರದಿಯಾಗಿತ್ತು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು, ಬಹುಪಾಲು ಭಾರತೀಯರಿಗೆ 'ಎಕ್ಸ್ ಪೈರಿ ಡೇಟ್' ಅಥವಾ 'ಬೆಸ್ಟ್ ಬಿಪೋರ್' ಅಂದರೇನು ಎನ್ನುವುದೇ ತಿಳಿಯದ ಅಂಶವಾಗಿದೆ.

ಔಷಧಿ ಮತ್ತು ಆಹಾರ ಪದಾರ್ಥದಂತೆಯೇ ಯಾವುದಾದರೂ ವಸ್ತು ಕೊಂಡಾಗ ವಸ್ತುವಿನ ಜೊತೆಗೆ ನೀಡುವ ಬಳಕೆಯ ಸಹಾಯಕ ಮಾಹಿತಿ, ಸಹಾಯವಾಣಿಗಳು, ಜಾಹೀರಾತುಗಳು ಜನರ ಭಾಷೆಯಲ್ಲಿ ಇರಬೇಕೆನ್ನುವ ಗಟ್ಟಿಯಾದ ನಿಯಮವಿಲ್ಲದಿರುವುದು ಕಂಪನಿಗಳು ಇಂಗ್ಲೀಶ್/ಹಿಂದಿಯಲ್ಲಿ ಮಾಹಿತಿ ನೀಡಿದರೆ ಸಾಕು ಎನ್ನುವ ನಿರ್ಧಾರಕ್ಕೆ ಬರಲು ದಾರಿಮಾಡಿಕೊಟ್ಟಿದೆ.

ಇನ್ನು ಉದ್ಯಮದ ವಿಷಯವಾಗಿ, ಕರ್ನಾಟಕ ರಾಜ್ಯವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಕರ್ನಾಟಕದಲ್ಲಿ ಔಷಧಿ, ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಅನೇಕ ಉದ್ಯಮಗಳಿಗೆ ಪ್ರತಿ ವರ್ಷ ಸಾವಿರಾರು ಕೋಟಿ ಲಾಭ ಮಾಡುವಷ್ಟು ದೊಡ್ಡದಾದ ಮಾರುಕಟ್ಟೆ ಇದೆ. ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಜನರ ಭಾಷೆಯಾದ ಕನ್ನಡದಲ್ಲಿ ಮಾಹಿತಿ ನೀಡುವುದು ಕಂಪನಿಗಳಿಗೆ ಕಷ್ಟವಾದ ಕೆಲಸವೇನಲ್ಲ. ಕಾನೂನು ಗಟ್ಟಿಯಾಗಿ ಇಲ್ಲದಿರುವುದರಿಂದ ಅದರ ಲಾಭ ಪಡೆದು ಅನೇಕ ಕಂಪನಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಕಾಣಿಸುತ್ತಿದೆ.

ತಂತ್ರಜ್ಞಾನ ಮುಂದುವರೆದಿದೆ, ಹಿಂದಿ/ಇಂಗ್ಲೀಶ್ ನಷ್ಟೇ ಸುಲಭವಾಗಿ ಇತರೇ ಭಾರತೀಯ ಭಾಷೆಯನ್ನು ಸುಲಭವಾಗಿ ಬಳಸಬಹುದಾದ ಸಲಕರಣೆಗಳು ಅಭಿವೃದ್ದಿ ಹೊಂದಿವೆ, ಈ ಸಮಯದಲ್ಲಿ ಸರಕಾರವು ಎಚ್ಚೆತ್ತು ಗ್ರಾಹಕ ಹಕ್ಕುಗಳ ಕಾಯಿದೆಯಲ್ಲಿ ಜನರ ಭಾಷೆಯನ್ನು ಗಣನೆಗೆ ತೆಗೆದುಕೊಂಡು, ಕಾಯಿದೆಗಳನ್ನು ಸರಿಯಾದ ರೀತಿಯಲ್ಲಿ ಬದಲಿಸಿ ಭಾರತದ ಒಕ್ಕೂಟದ ಎಲ್ಲಾ ಭಾಷಿಕ ಜನರ ಗ್ರಾಹಕ ಹಕ್ಕುಗಳನ್ನು ಎತ್ತಿಹಿಡಿಯುವಂತೆ ಮಾಡಲಿ. ಹಾಗೆಯೇ ಜನ ಸಾಮಾನ್ಯರೂ ತಮ್ಮ ಭಾಷೆಯಲ್ಲಿ ಸೇವೆ ಪಡೆಯುವುದು ತಮ್ಮ ಹಕ್ಕು ಎನ್ನುವುದನ್ನ ಮನಗಂಡು ಮಾರುಕಟ್ಟೆಯಲ್ಲಿ ತಮ್ಮ ಭಾಷೆಯನ್ನು ಬಳಸಲಿ

English summary
World Consumer Rights Day : Let Consumer rights rules be Strong and available in regional language. Here is an article on the consumer culture in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X