ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಾ ನದಿ ಬತ್ತಿದಾಗ ಕರ್ನಾಟಕ ಬಂದ್ ಯಾಕ ಮಾಡಲಿಲ್ಲಾ?

By ಜಯಲಕ್ಷ್ಮಿ ಪಾಟೀಲ್
|
Google Oneindia Kannada News

ಇಂದು 'ಮೇಕೆದಾಟು ಡ್ಯಾಂ' ಅಥವಾ ಕುಡಿವ ನೀರಿಗಾಗಿ ಕರ್ನಾಟಕ ಬಂದ್. ಸರಿ ಆಗಬೇಕಾಗಿದುದೇ, ಇಲ್ಲವಾದಲ್ಲಿ ಬೆಂಗಳೂರಿನಲ್ಲಿರುವ ನಮಗೆಲ್ಲಾ ಕುಡಿವ ನೀರಿಗೆ ಮುಂದೆ ತೊಂದರೆಯಾಗುತ್ತೆ.

ಆದ್ರೆ, ಬಂದ್ ಅನ್ನುವ ವಿಷಯ ತಿಳಿದಾಗಿನಿಂದ ನಾವು ಬಿಜಾಪುರದ ಮಂದಿ 8-10 ದಿನಕ್ಕೊಮ್ಮೆ ಬರುತ್ತಿದ್ದ (ಬೇಸಿಗೆಯಲ್ಲಂತೂ ಇದು 15 ದಿನಗಳವರೆಗೂ ಜಗ್ಗುತ್ತಿತ್ತು) ಹುಳಗಳನ್ನು ಮತ್ತು ಕಸವನ್ನು ಫ್ರೀಯಾಗಿ ಜೊತೆಗೆ ತರುತ್ತಿದ್ದ ನಳದ ನೀರನ್ನು ಸೋಸಿ ಹಿಡಿದಿಟ್ಟುಕೊಂಡು, ಕುದಿಸಿಕೊಂಡು ಕುಡಿಯುತ್ತಿದುದು, ಉಳಿದ ನೀರಲ್ಲಿ ಪಟಗಾ ಆಡ್ಸಿ ಆದಷ್ಟು ಅದರಲ್ಲಿನ ಮಲೀನ ತೆಗೆದು ಉಳಿದ ಕೆಲಸಕ್ಕೆ ಬಳಸೋದು!

ಹಿಡಿದಿಟ್ಟುಕೊಂಡ ನೀರು ಮೂರು ದಿನಕ್ಕೇ ಖಾಲಿ ಆಗಿ, ನಸುಕಿನಲ್ಲೇ ಬೋರ್‍ವೆಲ್ಲಿಗೆ ನೀರು ತರಲು ಕೊಡ ತೆಗೆದುಕೊಂಡು ಓಡುತ್ತಿದ್ದೆವು (ಅವ್ವ ಎಬ್ಬಿಸಿ ಕಳಿಸೋಳು). ನಾವು ಐವತ್ತು ಹೆಜ್ಜೆಯೂ ದೂರವಿರದ ಬೋರ್‍ವೆಲ್ ತಲುಪುವಷ್ಟರಲ್ಲಿ ಇಷ್ಟುದ್ದ ಕೊಡಗಳ ಕ್ಯೂ! ನಾಲ್ಕಾರು ಸಲ ನೀರು ತರುವಷ್ಟರಲ್ಲಿ ೮ವರೆ ಒಂಬತ್ತಾಗೋದು! (ಕರ್ನಾಟಕ ಬಂದ್ Live updates)

Why Karnataka bundh not called when Krishna river dispute arises

ಎರಡು ದಿನಕ್ಕೊಮ್ಮೆ ವಗ್ಯಾಣ (ಬಟ್ಟೆ ತೊಳೆಯೋದು), ಉಂಡ ಮ್ಯಾಲೆ ಕೈ ತೊಳ್ಕೊಳ್ಳಾಕ ಹೆಚ್ಚು ನೀರು ಬಳಸಿದ್ರ ಅವ್ವನ ಕೈಯಿಂದ ಬೈಸ್ಕೊಬೇಕು ಅನ್ನೂದ್ಕಿಂತ ಮತ್ತ ಬೋರ್ ತನಾ ಹೋಗಿ, ಬಿಸಲಾಗ ನೀರು ಹೊತ್ತು ತರಬೇಕಲ್ಲ ಅನ್ನೂ ಟೆನ್ಶನ್! (ಹತ್ತು ಸಲ ಪಂಪ್ ಮಾಡಿದ್ರೆ ಪುಳಕ್ ಅಂತ ನಾಕು ಹನಿ ನೀರು ಬರೋವು!)

ಬಚ್ಚಲಕ ಕಾಲ್ ತೊಳ್ಯಾಕ್ ಹೋದ್ರ ಎಷ್ಟ್ ಬೇಕೋ ಅಷ್ಟ ನೀರ್ ಹಾಕಿ ಬರೂದು, ಎಲ್ಲ ನೆನಪಾಯ್ತು. ಉಫ್ ಆ ದಿನಗಳು!

ಆಗ ಯಾರೂ ಇಂಥಾ ಕರ್ನಾಟಕ ಬಂದ್ ಮಾಡ್ಲೇ ಇಲ್ಲ, ಯಾಕೆ? ಕಾವೇರಿ ತಾಯಿ ಅತ್ಲಾಗ್ ಹರಿಯಂಗಿಲ್ಲ ಅಂತಾ? ಆಗೆಲ್ಲಾ ಬಿಜಾಪುರ ಜಿಲ್ಲೆ ಅಂದ್ರ ಪಂಜಾಬ್ ಅನ್ನೋರು, ಒಂದಾ ಜಿಲ್ಲಾದಾಗ ಐದ್ ನದಿ ಹರೀತಾವಂತ! ಆದ್ರೂ ಹಂಥಾ ಪರಿಸ್ಥಿತಿ ನಮ್ದು!!

ಈಗ ಆಲಮಟ್ಟಿ ಡ್ಯಾಂ ಆಗಿ ಮೊದ್ಲಿನಷ್ಟು ತ್ರಾಸಿಲ್ಲ ಅನ್ನ್ರಿ. ಎರಡ್ ಮೂರು ದಿನಕ್ಕೊಮ್ಮೆ ನೀರ್ ಬಿಡ್ತಾರ್, ಏನ್ ಮಾಡೂದು ಅಷ್ಟಾ, ಕೊಂಡ ನೀರ್ನ ಅಂತ ನಮ್ಮೂರ್ ಮಂದಿಗೆಲ್ಲಾ ದಿಗಲಾಗಿತ್ತು ಸುರುವಾತಿಗೆ! ಆ ಪರಿ ಬರಗಾಲಕ್ಕ ಅಡ್ಜಸ್ಟ್ ಆಗಿಬಿಟ್ಟಿದ್ವಿ ನಾವೆಲ್ಲಾ!

ಈ ಬಂದ್ ಯಶಸ್ವಿ ಆಗ್ಲಿ. ಯಾರಿಗೂ ನೀರಿನ ಬರಾ ಬರದಿರ್ಲಿ, ಯಾಕಂದ್ರ ಅದರ್ ತ್ರಾಸ್ ಎಂಥಾದ್ದು ಅಂತ ನಮ್ಮನ್ನ ಕೇಳ್ರಿ ಉತ್ತರಕರ್ನಾಟಕದ ಮಂದಿನ್ನ, ನಾವ್ ಹೇಳ್ತೀವಿ. ಅದ್ಕ ನಮಗತೆ ನೀವೂ ಅನುಭವಿಸಬಾರ್ದು ಅಂತನ್ನೊ ಕಾಳಜಿಯಿಂದಾನ ಫುಲ್ ಸಪೋರ್ಟ್ ನಮ್ದು.

ಆದ್ರ ಒಂದ್ ರಿಕ್ವೆಸ್ಟ್, "ಉತ್ತರ ಕರ್ನಾಟಕ" ಕರ್ನಾಟಕದಾಗ ಐತಿ ಅನ್ನೂದನ್ನ ಮರೀಬ್ಯಾಡ್ರಪಾ ದಯಮಾಡಿ. ಕರ್ನಾಟಕದಾಗ ಕಾವೇರಿ ನದಿ ಒಂದ ಅಲ್ಲ ಹರಿಯೋದು. ಹೌದಲ್ಲೊ?

English summary
Why Karnataka bandh not called when Krishna river dispute arose, to support to North Karnataka people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X