ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ತಜ್ಞ ಗದಗದ ಭರಮಗೌಡ್ರ ಹೆಸರಲ್ಲಿ ಪ್ರತಿಷ್ಠಾನ

By ಪ್ರೊ. ಶಿವಪ್ರಕಾಶ ಶಿಗ್ಲಿ
|
Google Oneindia Kannada News

ಗದಗ, ಮೇ 06: ಕೃಷಿ ತಜ್ಞ, ಸಹಜ ಸಾಗುವಳಿಯ ಸರದಾರ ಭರಮಗೌಡ್ರ ಹೆಸರಿನ ಪ್ರತಿಷ್ಠಾನ ಉದ್ಘಾಟನೆ ಮೇ 8ರಂದು ನಡೆಯಲಿದೆ. ಯಳವತ್ತಿಯ ಶ್ರೀ ಗುಂಡೇಶ್ವರ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹೊಸರಿತ್ತಿ ಶ್ರೀ ಮು.ನಿ.ಪ್ರ. ಗುದ್ದಲಿ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ಕೃಷಿ ವಿಜ್ಞಾನಿ ಚನ್ನೇಶ್, ಕೃಷಿ ತಜ್ಞ ಶಿವಾನಂದ ಕಳವೆ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಸೇರಿದಂತೆ ಅನೇಕ ಕೃಷಿ ಸಾಧಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.[ಆನ್ ಲೈನ್ ಕೃಷಿ ಮಾರುಕಟ್ಟೆ ಬಗ್ಗೆ ತಿಳಿದುಕೊಳ್ಳಿ]

gadag


ದೇವೇಂದ್ರಗೌಡ ಡಿ. ಭರಮಗೌಡ್ರ ಜೀವನ ಮತ್ತು ಸಾಧನೆ

ಅಸಲಿ ಸಾವಯುವ ಕೃಷಿಯ ಮನೆತನದಲ್ಲಿ 08-05-1947 ರಂದು (ಊರು-ಯಳವತ್ತಿ, ತಾ: ಶಿರಹಟ್ಟಿ, ಜಿ: ಗದಗ) ಜನಿಸಿದ ದೇವೇಂದ್ರಗೌಡ ಡಿ. ಭರಮಗೌಡ್ರ ಉತ್ತರ ಕರ್ನಾಟಕದ ಸಹಜ ಸಾಗುವಳಿಯ ಹರಿಕಾರರಾಗಿ ಬೆಳೆದವರು. ಕಾರಣಾಂತರಗಳಿಂದ ಸೇನೆ ಸೇರುವುದು ತಪ್ಪಿದ್ದು ಅವರನ್ನು ಕೃಷಿಯಲ್ಲಿ ಮುಂದುವರಿಯುವಂತೆ ಮಾಡಿತು.

ಬಾಲ್ಯವನ್ನು ತನ್ನ ಊರಿನ ಗ್ರಾಮ್ಯ ವಾತಾವರಣದಲ್ಲಿ ಹಾಗೂ ಕೃಷಿ ಪರಿಸರದಲ್ಲಿ ಕಳೆದ ಭರಮಗೌಡ್ರರು ಬೇಸಾಯದ ಒಳಹೊರಗನ್ನು ಬಲ್ಲವರಾಗಿದ್ದರು. ಇವರ ತಂದೆ ದ್ಯಾಮನಗೌಡರು ಸಾವಯುವ ಕೃಷಿಯಲ್ಲಿ ತಲೆ-ತಲಾಂತರಗಳಿಂದ ಬಂದ ಅನುಭವಗಳ ಕೆನೆಯೇ ಆಗಿದ್ದರು. ಅವರ ತಂದೆಯವರು ಕೃಷಿ ವೃತ್ತಿಯಲ್ಲಿ ಸಂಪೂರ್ಣ ಬದ್ಧತೆಯಿಂದ ತೊಡಗಿಸಿಕೊಂಡವರು. ಕಠಿಣ ಪರಿಶ್ರಮಪಟ್ಟವರು. ಅವರು ಮೌಖಿಕವಾಗಿ ಹರಿದುಬಂದ ತಮ್ಮ ಜ್ಞಾನಭಂಡಾರವನ್ನು ಮಗನಿಗೆ ಧಾರೆ ಎರೆದರು.[ಸಾಂಬಾರ ಪದಾರ್ಥಗಳ ರಾಣಿ ಏಲಕ್ಕಿ ನೇಪಥ್ಯಕ್ಕೆ ಸರಿದದ್ಯಾಕೆ?]

gadag

ಸಹಜ ಕೃಷಿಗೆ ಕಾಲಿರಿಸಿದ್ದು: ಅರವತ್ತರ ದಶಕದಲ್ಲಿ ಹಸಿರು ಕ್ರಾಂತಿಯ ಪ್ರಾರಂಭಿಕ ಸಂಭ್ರಮದ ದಿನಗಳಲ್ಲಿ ಭರಮಗೌಡ್ರ ಅವರು ಅದರ ಸೆಳೆವಿಗೆ ಸಿಕ್ಕು ನೈಜ ದಡ ಮುಟ್ಟಲು ಹದಿನೈದು ವರ್ಷಗಳನ್ನೇ ಕಳೆದುಕೊಂಡರು. ರಾಸಾಯನಿಕ ಗೊಬ್ಬರ. ಹೈಬ್ರೀಡ್ ಬೀಜ, ರಾಸಾಯನಿಕ ಕೀಟನಾಶಕಗಳನ್ನು ಅತ್ಯಂತ ಉದಾರವಾಗಿ ಬಳಸಿದವರು. ತಮ್ಮ ನಲವತ್ತೊಂದನೇ ವಯಸ್ಸಿನಲ್ಲಿ, ಸರಕಾರಿ ಕೃಷಿ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟ ರಾಸಾಯನಿಕ ಕ್ರಮವನ್ನು ಬೀಳ್ಕೊಟ್ಟು ಸಹಜ ಸಾಗುವಳಿಗೆ ಧುಮುಕಿದರು.

ಬೀಜ ಸಂಸ್ಕರಣೆ: ಯಾವ ಯಾವ ಬೀಜಗಳನ್ನು ಹೇಗೆ ಹಿಡಿಯಬೇಕು, ಅವುಗಳನ್ನು ಹುಳ ಹತ್ತದ ಹಾಗೆ, ಮುಕ್ಕಾಗದ ಹಾಗೆ ಹೇಗೆ ಸಂಸ್ಕರಿಸಬೇಕು, ಸಂರಕ್ಷಿಸಬೇಕು ಎಂಬುದನ್ನು ವೈಜ್ಞಾನಿಕವಾಗಿ ಅವರು ಬಲ್ಲವರಾಗಿದ್ದರು. ಹೊಟ್ಟಿನ ಬಣವೆಗಳಲ್ಲಿ, ಚೀಲಗಳಲ್ಲಿ, ಗಡಿಗೆಗಳಲ್ಲಿ ಸಂರಕ್ಷಿಸುವ ರೀತಿಯನ್ನು ಅವರು ಪಾರಂಪರಿಕವಾಗಿ ಬಂದ ಜ್ಞಾನದಿಂದ ಅರಿತುಕೊಂಡಿದ್ದರು. [ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

ಸಹಜ ಸಾಗುವಳಿಯು ಭರಮಗೌಡ್ರರು ಶೋಧನಾ ಪ್ರವಾಸ ಕೈಗೊಳ್ಳುವಂತೆ ಪ್ರೇರೇಪಿಸಿತು. ಪಾಂಡಿಚೇರಿಯ ಅರೋವಿಲ್ಲೆದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ ಉಪಯೋಗಿಸದೆ ವಿದೇಶಿಯರು ಕೃಷಿ ಮಾಡುತ್ತಿದ್ದನ್ನು ಕಂಡು ಪ್ರಭಾವಿತರಾದರು. ಹೊಶಂಗಾಬಾದದ ರಾಜುಟೈಟಸ್, ಹಾಗೂ ಪ್ರೊ. ಭಿಡೆ ಅವರನ್ನು ಸಂದರ್ಶಿಸಿ ಸಾವಯುವ ಕೃಷಿಯ ಬಗ್ಗೆ ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡರು.

gadag

ಕೃಷಿ ಹೊಂಡಗಳ ಪರಿಚಯ: ಮಾಗಿ ಉಳುಮೆ ಮಾಡುವದು, ಹೊಲದ ಬದು ಹಾಗೂ ಕೃಷಿ ಹೊಂಡಗಳ ನಿರ್ವಹಣೆ ಮಾಡುವದು, ಹೊಳಗಟ್ಟಿ/ಪರಸುಗಳನ್ನು ಸುಸ್ಥಿತಿಯಲ್ಲಿಡುವದು, ಕರಿಕೆ, ಮುಳ್ಳುಕಂಟಿ, ದಾಗಡಿ ಬಳ್ಳಿಗಳನ್ನು ತೆಗೆಯುವದು, ಹುಲ್ಲುಗಡ್ಡಿ ಬೆಳೆಯುವ ಬದುಗಳ ಮಗ್ಗಲು ಕಡಿಯುವದು, ನೇಗಿಲು ಹೊಡೆಯುವದು, ಮಣ್ಣಿಗೆ ಬೇವಿನಹಿಂಡಿ ಸೇರಿಸುವದು, ಬೆಳೆ ಆವರ್ತನ ಮಾಡುವದು ಅವಶ್ಯವೆಂದು ಭರಮಗೌಡ್ರರು ಪ್ರತಿಪಾದಿಸಿದರು.

ಒಣಬೇಸಾಯಕ್ಕೂ ಆದ್ಯತೆ: ಒಣಬೇಸಾಯದಲ್ಲಿ 3-4 ಎಕರೆಗೆ ಒಂದರಂತೆ ಕೃಷಿಹೊಂಡ ನಿರ್ಮಿಸಬೇಕೆಂದು ಅಭಿಪ್ರಾಯಪಟ್ಟರು. ಕೇಂದ್ರ ಸರಕಾರ ನೀರಿನ ಬರ ನೀಗಿಸಲು ನದಿಗಳ ಜೋಡಣೆ ಯೋಜನೆಯನ್ನು, ಅದು ಪರಿಸರವನ್ನು ವಿನಾಶಗೊಳಿಸುವದೆಂದು ಅವರು ವಿರೋಧಿಸಿದರು. ಎರೆಭೂಮಿಗೆ ಮಸಾರಿ (ಕೆಂಪು) ಮಣ್ಣನ್ನು ಮಸಾರಿ ಎರೆ ಮಣ್ಣನ್ನು ಹಾಗೂ ಕರ್ಕಲಾದ ಕಪ್ಪು ಮಣ್ಣಿಗೆ ಹಳ್ಳದಲ್ಲಿ ಸಿಗುವ ಉರುಟು ಉಸುಕನ್ನು ಹಾಕುವದರಿಂದ, ಮಳೆನೀರು ಭೂಮಿಯಲ್ಲಿ ಇಳಿಯುತ್ತದೆಂದು ಅವರು ಕಂಡುಕೊಂಡಿದ್ದರು.

ದೇಶಿ ಬೀಜಗಳಿಗೆ ಮಾನ್ಯತೆ: ದೇಶಿ ಬೀಜಗಳು, ಸುಧಾರಿತ ಬೀಜಗಳು, ಸಂಕರ ಬೀಜಗಳು ಮೊಳಕೆಯೊಡೆಯದ ಬೀಜಗಳ ಬಗ್ಗೆ ಅವರಿಗೆ ಕೂಲಂಕುಷ ಜ್ಞಾನವಿತ್ತು. ಎಂತಲೇ ಅವರು ದೇಶಿ ಬೀಜಗಳಿಗೆ ಮಾನ್ಯತೆ ಕೊಟ್ಟು, ಈ ಬೀಜಗಳನ್ನು ಉಳಿಸಿಕೊಳ್ಳಲು ಕನಿಷ್ಟ ಪಕ್ಷ ಪ್ರತಿ ತಾಲೂಕಿಗೆ/ಜಿಲ್ಲೆಗೆ ಒಂದರಂತೆ ಬೀಜ ಬ್ಯಾಂಕನ್ನು ಸ್ಥಾಪಿಸಲು ಒತ್ತಾಯಿಸಿದರು.

ಸಾವಯವ ಕೃಷಿಕ ಜೀವನ ಪರಂಪರೆ: ಭರಮಗೌಡ್ರರ ಯೋಜನೆ, ಯೋಚನೆ ಸಮಾಜಮುಖಿಯಾಗಿತ್ತು. ಅವರಿಗೆ ವಾಸ್ತವಿಕ ವ್ಯವಹಾರಗಳ ಗಾಢ ಅನುಭವಯಿತ್ತು. ಯಾರ ಮುಲಾಜಿಲ್ಲದೇ ಸಾವಯುವ ಕೃಷಿಯ ಪರವಾಗಿ ಮಾತನಾಡುತ್ತಿದ್ದರು. ಹಾಗೂ ಬರೆಯುತ್ತಿದ್ದರು. ಮಳೆಯಾಶ್ರಿತ ರೈತರ ಏಕೈಕ ರಕ್ಷಣೆಯೆಂದರೆ ಸಾವಯುವ ಕೃಷಿಯೆಂದು ನಂಬಿದ್ದರು. ಎಂತಲೇ ಅವರು ತಮ್ಮ ಬದುಕು ಬೇಸಾಯದ ಪುಸ್ತಕದ ಕೊನೆಯಲ್ಲಿ ಸಾವಯುವ ಕೃಷಿಕ ನೇಣಿಗೆ ಶರಣಾಗಲಾರ ಎಂದು ಪ್ರತಿಪಾದಿಸಿದರು.

ರೈತರ ಪ್ರತಿನಿಧಿ: ಭರಮಗೌಡ್ರರು ಕ್ಯಾಲಿಫೋರ್ನಿಯಾದ, ಆಷ್ಟ್ರೇಲಿಯಾ ಬ್ರಿಟನ್ ಮುಂತಾದ ದೇಶಗಳ ಹೆಸರಾಂತ ಸಂಸ್ಥೆಗಳ ಗೌರವಾನ್ವಿತ ಸದಸ್ಯರಾಗಿದ್ದರು. ಕೇಂದ್ರ ಸರಕಾರದ ಹನ್ನೊಂದನೆ ಪಂಚವಾರ್ಷಿಕ ಯೋಜನೆಯ ಪ್ಲ್ಯಾನಿಂಗ್ ಕಮಿಷನ್ನಿನ ತೋಟಗಾರಿಕೆ ಮತ್ತು ಸಾವಯುವ ಕೃಷಿಯ ವರ್ಕಿಂಗ್ ಗ್ರೂಪದ ಏಕಮೇವ ರೈತ ಸದಸ್ಯರಾಗಿದ್ದರು.

ಕೃಷಿ ನೀತಿ ರೂಪಿಸುವುದರಲ್ಲಿ ಪಾತ್ರಳ ಕರ್ನಾಟಕ ಸರಕಾರ 2004 ರಲ್ಲಿ ಸಾವಯುವ ಕೃಷಿನೀತಿ ಮತ್ತು ಯೋಜನಾ ವರದಿಯನ್ನು ರೂಪಿಸುವಲ್ಲಿ ಭಾಗಿಯಾಗಿದ್ದರು. ದ.ಕೋರಿಯಾ, ನೆದರ್ಲ್ಯಾಂಡ್, ಜರ್ಮನಿ, ಪ್ರಾನ್ಸ್, ಘಾನಾ, ಚೀನಾ ರಾಷ್ಟ್ರಗಳ ಅಂತರ ರಾಷ್ಟ್ರೀಯ ಸಾವಯುವ ಕೃಷಿ ಕಾರ್ಯಕ್ರಮಗಳಲ್ಲಿ ನಮ್ಮ ದೇಶದ ಸರಕಾರೇತರ ಸಂಸ್ಥೆಗಳ ಪರವಾಗಿ ಭಾಗವಹಿಸಿದ್ದರು.

ಸಂದ ರಾಜ್ಯೋತ್ಸವ ಪ್ರಶಸ್ತಿ: 2007 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಭರಮಗೌಡ್ರರು, ಅದೇ ವರ್ಷ ಮಂಡ್ಯದ ಜಿ. ಮಾದೇಗೌಡ ಪ್ರತಿಷ್ಠಾನ ಕೊಡಮಾಡಿದ ಸಮಾಜಸೇವೆ ಮತ್ತು ಸಾವಯುವ ಕೃಷಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡರು. ಶ್ರೀ ಶ್ರೀ ರವಿಶಂಕರ ಗುರೂಜಿ, ರಾಜ್ಯ ಸರಕಾರದ ಸರಕಾರೇತರ ಸಂಸ್ಥೆಗಳಿಂದ ಭರಮಗೌಡ್ರರು ಸನ್ಮಾನಿತರಾಗಿದ್ದರು.

ಕೃಷಿ ಪರ್ತಕರ್ತ: ಸಹಜ ಸಾಗುವಳಿ ಅಡಿಕೆ ಪತ್ರಿಕೆ ಗಳಲ್ಲಿ ಸಂಪಾದಕ ಮಂಡಳಿಯಲ್ಲಿ ಪ್ರಧಾನ ಸಲಹೆಗಾರರಾಗಿದ್ದರು. ಆಕಾಶವಾಣಿ, ದೂರದರ್ಶನದಲ್ಲಿ ಅವರ ಸಂದರ್ಶನಗಳು ಬಿತ್ತರಗೊಂಡಿವೆ. ಪ್ರಾಂತೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಅವರ ಲೇಖನಗಳು ಹಾಗೂ ಸಂದರ್ಶನಗಳು ಪ್ರಕಟಗೊಂಡಿವೆ. ಒ ಎಫ್ ಎ ಐ ಇಕ್ರಾ, ಧರಿತ್ರಿ, ಕೆ ವಿ ಕೆ ಮುಂತಾದ ಸಂಸ್ಥೆಗಳಲ್ಲಿ ತರಬೇತಿ ಕೊಡುವ ಸಂಪನ್ಮೂಲ ವ್ಯಕ್ತಿಯಾಗಿದ್ದರು.[ಕರಿಮೆಣಸು ಬೆಳೆಗಾರನ ಕಂಗೆಡಿಸಿದ 'ಸೊರಗುರೋಗ']

ಸಾವಯುವ ಕೃಷಿಯ ಜಂಗಮನಂತೆ ರಾಜ್ಯ, ರಾಷ್ಟ್ರ, ಹಲವು ದೇಶಗಳಲ್ಲಿ ಸಂಚರಿಸಿ, ಸಂಚಲನ ಉಂಟು ಮಾಡಿದ ಭರಮಗೌಡ್ರು ಜನವರಿ 13, 2016 ರಂದು ನಿಧನರಾದರು, ಬದುಕು ಬೇಸಾಯ ಕೃತಿ (ದಾಖಲೆ, ನಿರೂಪಣೆ-ವಿ. ಗಾಯತ್ರಿ, ಪ್ರಕಾಶಕರು ಇಕ್ರಾ, ಬೆಂಗಳೂರು) ಅವರ ಆತ್ಮಕಥೆ. ಬದುಕು ಬೇಸಾಯ ಸಾವಯುವ ಕೃಷಿಕರಿಗೆ ಒಂದು ಕೈಪಿಡಿಯಂತಿದೆ.

ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹೂಟ್ಟೂರಿನಲ್ಲಿಯೇ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಗೌರವ ಸೂಚಿಸಲಾಗುತ್ತಿದೆ.

English summary
Gadag: Remembering agriculturist, agri-journalist, Karnataka Sate Award for best agriculturist Bharamagowdra "Krashi rushi Shri Bharamagowdra Pratistana" will inagurate at his birth place Yalavatii, Shirahatti Taluk, on 8 may 2016. Swamijis and many agriculturist will participate in this event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X