ಸಾರಿಗೆ ಮುಷ್ಕರ : ಮಂಗಳವಾರದ 10 ಬೆಳವಣಿಗೆಗಳು

Subscribe to Oneindia Kannada

ಬೆಂಗಳೂರು, ಜುಲೈ 26 : ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮತ್ತು ಸರ್ಕಾರದ ನಡುವಿನ ಹಗ್ಗ-ಜಗ್ಗಾಟ ಮುಂದುವರೆದಿದೆ. ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಜನರು ಪರದಾಡುತ್ತಿದ್ದಾರೆ. ಸರ್ಕಾರ ಪಟ್ಟು ಸಡಿಲಿಸುತ್ತಿಲ್ಲ, ಅತ್ತ ನೌಕರರು ತಮ್ಮ ಹಠವನ್ನು ಬಿಡುತ್ತಿಲ್ಲ.

ತರಬೇತಿಯಲ್ಲಿರುವ ಚಾಲಕರು, ಮುಷ್ಕರಕ್ಕೆ ಕೈ ಜೋಡಿಸದೇ ಇರುವ ಸಂಘಟನೆಗಳ ನೆರವಿನಿಂದ ಬಸ್ ಓಡಿಸುವ ಸರ್ಕಾರದ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಮಂಡ್ಯ, ಮದ್ದೂರಿನಲ್ಲಿ ಸಂಜೆ ವೇಳೆಗೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. [ಸಾರಿಗೆ ಮುಷ್ಕರ : 2ನೇ ದಿನ ಏನೇನಾಯ್ತು]

ಸಾರಿಗೆ ಇಲಾಖೆಯಲ್ಲಿರುವ ತರಬೇತಿ ಪಡೆದಿರುವ ಸುಮಾರು 15 ಸಾವಿರ ಚಾಲಕ ಕಂ ನಿರ್ವಾಹಕರನ್ನು ಮುಂದಿಟ್ಟುಕೊಂಡು ಪೊಲೀಸ್ ರಕ್ಷಣೆಯಲ್ಲಿ ಬಸ್ಸುಗಳನ್ನು ಓಡಿಸಲು ಸರ್ಕಾರ ಮುಂದಾಗಿತ್ತು. ಆದರೆ, ಬೆಂಗಳೂರಿನ ಮೆಜೆಸ್ಟಿಕ್‌ಗೆ ಬಂದ ಬಸ್ಸುಗಳ ಚಾಲಕರ ಮೇಲೆ ಹಲ್ಲೆ ಮಾಡುವ ಯತ್ನ ನಡೆದಿದೆ. ಆದ್ದರಿಂದ, ಬಸ್ ಸಂಚಾರ ಸ್ಥಗಿತಗೊಂಡಿದೆ. [ಸಾರಿಗೆ ಮುಷ್ಕರದ ಚಿತ್ರಗಳು]

ಶೇ. 10ರಷ್ಟು ವೇತನ ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಅದಕ್ಕೆ ಅಂಟಿಕೊಂಡಿದೆ. ಮುಷ್ಕರ ಕೈಬಿಟ್ಟು ಸರ್ಕಾರದ ಜತೆ ಮಾತುಕತೆಗೆ ಬರುವಂತೆ ಮುಷ್ಕರ ನಿರತ ಸಂಘಟನೆಗಳಿಗೆ ಸೂಚಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದರು.[ದೇವರ ಮೇಲೆ ಭಾರ ಹಾಕಿ ಬಿಎಂಟಿಸಿ ಹತ್ತಿ!]

1 : ಆಟೋದವರಿಂದ ಅಧಿಕ ದರ ವಸೂಲಿ

ಮಂಗಳವಾರ ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮುಂಜಾನೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಂಗಳೂರಿನಲ್ಲಿ ಆಟೋಗಳು ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿಗೆ ಮುಂದಾದರು. ಸಂಚಾರಿ ಪೊಲೀಸರು ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆ ಆಟೋ ಚಾಲಕರು ಹೆಚ್ಚಿನ ದರ ವಸೂಲಿ ಮಾಡದಂತೆ ತಡೆಯಲು ವಿಶೇಷ ಕಾರ್ಯಾಚರಣೆ ನಡೆಸಿದರು.

2 : ವೇತನ ಹೆಚ್ಚಳ ಸಾಧ್ಯವೇ ಇಲ್ಲ : ಸಿದ್ದರಾಮಯ್ಯ

ವಿಧಾನಸೌಧದಲ್ಲಿ ಮಂಗಳವಾರ ಬೆಳಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಶೇ 10ಕ್ಕಿಂತ ಹೆಚ್ಚು ವೇತನ ಹೆಚ್ಚಳ ಸಾಧ್ಯವೇ ಇಲ್ಲ. ಸಾರಿಗೆ ಇಲಾಖೆ ನೌಕರರು ತಮ್ಮ ಹಠಮಾರಿ ಧೋರಣೆಯನ್ನು ಕೈ ಬಿಟ್ಟು ಮಾತುಕತೆಗೆ ಬರಲಿ' ಎಂದು ಕರೆ ನೀಡಿದರು.

3 : ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ

ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರು, ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಮತ್ತು 4 ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿದರು. ಸಾರಿಗೆ ಇಲಾಖೆಯಲ್ಲಿರುವ ತರಬೇತಿ ಪಡೆದಿರುವ ಸುಮಾರು 15 ಸಾವಿರ ಚಾಲಕ ಕಂ ನಿರ್ವಾಹಕರನ್ನು ಬಳಸಿಕೊಂಡು ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಯಿತು.

4 : ಪೊಲೀಸ್ ಮಹಾನಿರ್ದೇಶಕರ ಜೊತೆ ಸಭೆ

ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರು ಬೆಂಗಳೂರು ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಸೇರಿದಂತೆ ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಸ್ ಸೇವೆ ಆರಂಭಿದ ನಂತರ ಭದ್ರತೆ ನೀಡುವ ಕುರಿತು ಚರ್ಚೆ ನಡೆಯಿತು. ಪ್ರತಿ ಬಿಎಂಟಿಸಿ ಬಸ್ ಮುಂದೆ ಚೀತಾ, ಹಿಂದೆ ಎಸ್ಕಾರ್ಟ್ ವಾಹನ ಓಡಿಸಲು ತೀರ್ಮಾನಿಸಲಾಯಿತು. ಬಸ್ ವೊಳಗೆ ಹ್ಯಾಂಡಿಕ್ಯಾಮ್ ಹೊಂದಿದ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಯಿತು.

5 : ಶಾಂತಿನಗರದಿಂದ ಹೊರಟ ಮೊದಲ ಬಸ್

ಮಂಗಳವಾರ ಮಧ್ಯಾಹ್ನ 3.30ರ ವೇಳೆಗೆ ಬೆಂಗಳೂರಿನ ಶಾಂತಿನಗರದಿಂದ ಮೆಜೆಸ್ಟಿಕ್‌ಗೆ ಪೊಲೀಸರ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಾಯಿತು. ನಂತರ ಶಿವಾಜಿನಗರ, ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸಲಾಯಿತು.

6 : ತನ್ನ ನಿಲುವಿಗೆ ಅಂಟಿಕೊಂಡ ಸರ್ಕಾರ

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರು ತುರ್ತು ಸಭೆ ನಡೆಸಿದರು. ಶೇ. 10ರಷ್ಟು ವೇತನ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನಿಲಾಗಿದ್ದು ಮುಷ್ಕರ ಕೈಬಿಟ್ಟು ಸರ್ಕಾರದ ಜತೆ ಮಾತುಕತೆಗೆ ಬರುವಂತೆ ಮುಷ್ಕರ ನಿರತ ಸಂಘಟನೆಗಳಿಗೆ ಸೂಚಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

7 : ರಾಜ್ಯದ ವಿವಿಧೆಡೆ ಬಸ್ ಸಂಚಾರ

ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಧಾರವಾಡ ನಗರಗಳಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು. ಮೈಸೂರಿನಿಂದ ಕುಶಾಲನಗರ, ನಂಜನಗೂಡಿಗೆ ಬಸ್ ಸಂಚಾರ ಆರಂಭವಾಯಿತು.

8 : ಜನಾರ್ದನ ಪೂಜಾರಿ ವಾಗ್ದಾಳಿ

'ರಾಜ್ಯ ಸಾರಿಗೆ ಇಲಾಖೆಯ ಸಿಬ್ಬಂದಿಯ ಮುಷ್ಕರವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಸಿದ್ದರಾಮಯ್ಯ ತಾವೇ ಬುದ್ಧಿವಂತರೆಂದು ಭಾವಿಸುತ್ತಿದ್ದಾರೆ. ಸಿದ್ದು ಮೌನದಿಂದಾಗಿ ಸರಕಾರದ ಇಮೇಜ್ ಹಾಳಾಗುತ್ತಿದೆ. ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಕಣ್ಣಿದ್ದೂ ಕುರುಡರಾಗಿದ್ದಾರೆ. ಕಾರ್ಮಿಕರ ಮುಷ್ಕರದ ಬಗ್ಗೆ ಹಿರಿಯರಲ್ಲಿ ಚರ್ಚಿಸಬಹುದಿತ್ತಲ್ಲವೇ? ನಿಮ್ಮ ಬುದ್ಧಿಗೇಡಿ ವರ್ತನೆಯಿಂದಾಗಿ ಕಾಂಗ್ರೆಸ್ ಅವನತಿ ಹಾದಿಯಲ್ಲಿದೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

9 : ಚಾಲಕನಿಗೆ ಥಳಿಸಿದ ಮುಷ್ಕರ ನಿರತರು

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಸ್ಸು ತೆಗೆದುಕೊಂಡು ಬಂದ ಚಾಲಕನಿಗೆ ಮುಷ್ಕರ ನಿರತ ಸಿಬ್ಬಂದಿಗಳು ಥಳಿಸಿದರು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಬಿಎಂಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

10 : ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಷ್ಕರದ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದರು. ನೌಕರರ ಮನವೊಲಿಸಲು ಎಲ್ಲಾ ಸಚಿವರು  ರಾಮಲಿಂಗಾ ರೆಡ್ಡಿ ಅವರಿಗೆ ಸೂಚಿಸಿದರು.

English summary
Karnataka State Road Transport Corporation employees strike enters 2nd day. Employees demanding for 35 percent salary hike. Here are 10 latest developments of July 26, 2016.
Please Wait while comments are loading...