ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಬಳ್ಳಾಪುರ ವಿದ್ಯುತ್ ಸ್ಪರ್ಶ ಪ್ರಕರಣ, ಬೆಸ್ಕಾಂ ನಿರ್ಲಕ್ಷ್ಯ

|
Google Oneindia Kannada News

ಬೆಂಗಳೂರು, ಸೆ.15 : ಗಣೇಶಮೂರ್ತಿ ವಿಸರ್ಜನೆ ಮಾಡಿ ಮರಳುತ್ತಿದ್ದ ಐವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ನಡೆದಿದೆ. ಘಟನೆಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಕನಸವಾಡಿ ವಿಭಾಗದ ಜಂಟಿ ಅಭಿಯಂತರರನ್ನು ಅಮಾನತು ಮಾಡಲಾಗಿದೆ.

ಮೃತಪಟ್ಟವರನ್ನು ಟ್ರಾಕ್ಟರ್‌ ಚಾಲಕ ಕನಸವಾಡಿಯ ನಿವಾಸಿ ನಾಗೇಶ (26), ರಾಜು (23), ದರ್ಶನ್‌ (25), ಮಾರಸಂದ್ರದ ಅರುಣ್‌ (22), ಅಂಜನ್‌ (25) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಾಕ್ಟರ್‌ನಲ್ಲಿ 15 ಜನರು ಪ್ರಯಾಣಿಸುತ್ತಿದ್ದರು. ಹಲವರು ಮರದ ಬೇಂಚ್‌ಗಳ ಮೇಲೆ ಕುಳಿತಿದ್ದರಿಂದ ಪ್ರಾಣ ಉಳಿಸಿಕೊಂಡಿದ್ದಾರೆ.

Ganesha Chaturthi

ಘಟನೆ ವಿವರ : ಕನಸವಾಡಿ ಗ್ರಾಮದಲ್ಲಿ ಕೂರಿಸಿದ್ದ ಗಣೇಶನನ್ನು ಶನಿವಾರ ಸಂಜೆ ವಿಸರ್ಜನೆ ಮಾಡಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ಟ್ರಾಕ್ಟರ್‌ ಅನ್ನು ಸಜ್ಜುಗೊಳಿಸಿ, ವಿದ್ಯುತ್‌ ಅಲಂಕಾರಕ್ಕಾಗಿ ಟ್ರಾಕ್ಟರ್‌ ಹಿಂಬದಿಯ ಟ್ರೇಲರ್‌ ಮೇಲೆ ಕಬ್ಬಿಣದ ಪಲ್ಲಕ್ಕಿಯನ್ನು ಜೋಡಿಸಲಾಗಿತ್ತು. ಬಳಿಕ ಗಣೇಶ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಶನಿವಾರ ರಾತ್ರಿ ವಿಸರ್ಜಿಸಲಾಗಿತ್ತು. [ಯಡಿಯೂರು ಕೆರೆ ಮೇಲೊಂದು ಪಕ್ಷಿ ನೋಟ]

ವಿಸರ್ಜನೆ ನಂತರ 15 ಜನರು ಗ್ರಾಮಕ್ಕೆ ಟ್ರಾಕ್ಟರ್‌ನಲ್ಲಿ ಮರಳುತ್ತಿದ್ದರು. ಈ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಹಾದು ಹೋಗಿದ್ದ 11 ಕೆವಿ ಸಾಮರ್ಥ್ಯದ ಹೈ-ಟೆನ್ಷನ್ ವಿದ್ಯುತ್‌ ತಂತಿಯೊಂದು ಟ್ರಾಕ್ಟರ್‌ ಮೇಲೆ ಜೋಡಿಸಿದ್ದ ಕಬ್ಬಿಣದ ಪಲ್ಲಕ್ಕಿಗೆ ತಾಗಿದೆ. ಇದರಿಂದ ತಕ್ಷಣ ವಿದ್ಯುತ್‌ ಪ್ರವಹಿಸಿದ್ದು ಟ್ರಾಕ್ಟರ್‌ನಲ್ಲಿ ಕುಳಿತಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ : ಮೃತಪಟ್ಟವರ ಶವಗಳನ್ನು ಬೆಸ್ಕಾಂ ಕಚೇರಿ ಮುಂಭಾಗವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಹಲವು ಬಾರಿ ವಿದ್ಯುತ್‌ ತಂತಿಯನ್ನು ಸರಿಪಡಿಸುವಂತೆ ಮನವಿ ಮಾಡಿದ್ದರೂ, ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಘಟನಾ ಸ್ಥಳಕ್ಕೆ ಸಂಸದ ಎಂ.ವೀರಪ್ಪ ಮೊಯ್ಲಿ, ಶಾಸಕ ಟಿ.ವೆಂಕಟರಮಣಯ್ಯ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಘಟನೆಗೆ ಸಂಬಂಧಪಟ್ಟಂತೆ ಕನಸವಾಡಿ ವಿಭಾಗದ ಜಂಟಿ ಅಭಿಯಂತರ ತಿಮ್ಮಣ್ಣ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಬೆಸ್ಕಾಂ ಮುಖ್ಯ ಎಂಜಿನಿಯರ್‌ ಹನುಮಂತರಾಜು ಹೇಳಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಬೆಸ್ಕಾಂನಿಂದ 2 ಲಕ್ಷ ರೂ ಪರಿಹಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರು ಮೃತರ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ನೀಡಿದ್ದಾರೆ.

English summary
Five young men were electrocuted while returning after immersing a Ganesha idol late on Saturday night in Doddaballapur taluk of Bangalore Rural district. Three people injured in accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X