ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಸರ್ಕಾರವನ್ನು ಕಾಡಿದ 10 ವಿವಾದಗಳು

|
Google Oneindia Kannada News

ಬೆಂಗಳೂರು, ಮೇ 13 : ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯಲ್ಲಿ ತೇಲಿಬಂದು ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇ 16ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ತನ್ನ ಸಾಧನೆಯನ್ನು ಜನರಿಗೆ ತಲುಪಿಸುವ ಕೈಪಿಡಿ ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಸಾಲಮನ್ನಾ ಹೀಗೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದಲ್ಲಿ ಅನೇಕ ಎಡವಟ್ಟುಗಳನ್ನು ಮಾಡಿಕೊಂಡಿತು. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಿಂದಾಗಿ ಒಬ್ಬರು ಸಚಿವರನ್ನು ಸಂಪುಟದಿಂದ ಕೈ ಬಿಡಬೇಕಾದ ಅನಿವಾರ್ಯತೆಯೂ ಎದುರಾಯಿತು.

ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಗೆಲವಿನ ಖುಷಿ ಸರ್ಕಾರಕ್ಕೆ ಸಿಕ್ಕರೂ, ಲೋಕಸಭೆ ಚುನಾವಣೆ ಫಲಿತಾಂಶ ಏನಾಗುವುದೋ ಎಂಬ ಆತಂಕವೂ ಇದೆ. ಪ್ರತಿಪಕ್ಷಗಳು ಸರ್ಕಾರ ಇನ್ನೂ ಚುನಾವಣೆ ಮೂಡ್ ನಲ್ಲಿದೆ ಎಂದು ಕಟುವಾಗಿ ಟೀಕಿಸುತ್ತಿದ್ದರೆ, ಕಾಂಗ್ರೆಸ್ ಪ್ರಣಾಳಿಕೆ ಅಂಶಗಳನ್ನು ಈಡೇರಿಸಿದ್ದೇವೆ ಎಂದು ಎದೆತಟ್ಟಿ ಹೇಳುತ್ತಿದೆ.

ಸಂತೋಷ್ ಲಾಡ್ ರಾಜೀನಾಮೆ, ಮೂಡನಂಬಿಕೆ ಕಾಯ್ದೆ, ಕೃಷ್ಣ ಮಠ ವಿವಾದ, ರೈತ ಆತ್ಮಹತ್ಯೆ, ಗುಲ್ಬರ್ಗ ಶೂಟೌಟ್, ವಿಧಾನಸೌಧದ ಗೋಡೆ ಕೆಡವಿದ್ದು ಹೀಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಹಲವಾರು ವಿವಾದಗಳನ್ನು ಎದುರಿಸಬೇಕಾಯಿತು. ಅವುಗಳ ಕುರಿತು ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಉಡುಪಿ ಕೃಷ್ಣಮಠ ವಿವಾದ

ಉಡುಪಿ ಕೃಷ್ಣಮಠ ವಿವಾದ

ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಮುಖ್ಯಮಂತ್ರಿಯಾದರೆ ನನ್ನ ಮೊದಲ ಆದ್ಯತೆ ಉಡುಪಿಯ ಕೃಷ್ಣ ಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವುದು ಎಂದು ಪ್ರಚಾರ ಸಮಯದಲ್ಲೇ ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ತಕ್ಷಣ ಉಡುಪಿ ಕೃಷ್ಣಮಠ ವಿವಾದ ಆರಂಭವಾಯಿತು. ಪರ-ವಿರೋಧ ಚರ್ಚೆಗಳು ನಡೆದು ಕೊನೆಗೂ ಸರ್ಕಾರ ಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವ ಯಾವುದೇ ಚಿಂತನೆ ಇಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಿತು. ಆದರೆ, ಹೊಸ ಸರ್ಕಾರಕ್ಕೆ ಈ ವಿವಾದ ಸ್ವಲ್ಪ ಇರುಸು ಮುರುಸು ಉಂಟುಮಾಡಿತು.

ಸಂತೋಷ ತರಲಿಲ್ಲ ಸಂತೋಷ್ ಲಾಡ್

ಸಂತೋಷ ತರಲಿಲ್ಲ ಸಂತೋಷ್ ಲಾಡ್

ಸಂಪುಟ ವಿಸ್ತರಣೆ ಬಳಿಕ ಸಿಎಂ ಸಿದ್ದರಾಮಯ್ಯ ಸಂಪುಟ ಸೇರಿ ವಾರ್ತಾ ಮತ್ತು ಮೂಲ ಸೌಕರ್ಯ ಖಾತೆ ಹೊಣೆ ಹೊತ್ತ ಸಚಿವ ಸಂತೋಷ್ ಲಾಡ್ ಸಿಎಂ ಸಿದ್ದರಾಮಯ್ಯ ಅವರಿಗೆ ಸಂತೋಷ ತರಲಿಲ್ಲ. ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ್ ಸಂತೋಷ್ ಲಾಡ್ ಬೆಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಆದ್ದರಿಂದ ಅವರ ರಾಜೀನಾಮೆ ಪಡೆಯಬೇಕು ಎಂದು ದಾಖಲೆ ಬಿಡುಗಡೆ ಮಾಡಿದರು. ರಾಜ್ಯಪಾಲರು, ಕೆಪಿಸಿಸಿ ಕಚೇರಿ, ಹೈಕಮಾಂಡ್ ಮುಂತಾದವರಿಗೆ ಲಾಡ್ ಬಗ್ಗೆ ದಾಖಲೆ ಸಲ್ಲಿಸಿದರು. ರಾಜ್ಯದಲ್ಲಿ ಈ ಬಗ್ಗೆ ತೀವ್ರ ವಿವಾದವೆದ್ದು, ಬುದ್ಧಿಜೀವಿಗಳು ಲಾಡ್ ರಾಜೀನಾಮೆ ಪಡೆಯಿರಿ ಎಂದು ಸಿಎಂಗೆ ಮನವಿ ಮಾಡಿದರು. ಕೊನೆಗೂ ಒತ್ತಡಕ್ಕೆ ಮಣಿದ ಸಿಎಂ ಲಾಡ್ ರಾಜೀನಾಮೆ ಪಡೆದು ವಿವಾದಕ್ಕೆ ತೆರೆ ಎಳೆದರು.

ಮೂಡನಂಬಿಕೆ ಕಾಯ್ದೆ ವಿವಾದ

ಮೂಡನಂಬಿಕೆ ಕಾಯ್ದೆ ವಿವಾದ

ಸಿಎಂ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತರಲು ಹೊರಟಿದ್ದ ಕರ್ನಾಟಕದ ಮೂಢನಂಬಿಕೆಗಳ ತಡೆ ಪ್ರತಿಬಂಧಕ ವಿಧೇಯಕದ ವಿರುದ್ಧ ರಾಜ್ಯದಲ್ಲಿ ಹಲವಾರು ಅಪಸ್ವರ ಕೇಳಿಬಂದಿತು. ಸ್ವತಃ ಕಾಂಗ್ರೆಸ್ ಪಕ್ಷದವರೇ ಕಾಯ್ದೆ ವಿರುದ್ಧವಾಗಿ ಹೇಳಿಕೆ ನೀಡಿದರು. ವಿವಿಧ ಮಠಾಧೀಶರು, ಬುದ್ಧಿಜೀವಿಗಳು ಕಾಯ್ದೆ ಬಗ್ಗೆ ಸ್ಪಷ್ಟನೆ ಇಲ್ಲದ ಕಾರಣ ಇದನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು. ಹಲವಾರು ಹೋರಾಟಗಳು ನಡೆದ ನಂತರ ಸರ್ಕಾರ ಬೆಳಗಾವಿ ಚಲಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ನಿರ್ಧಾರದಿಂದ ಹಿಂದೆ ಸರಿಯಿತು.

ಶಾದಿ ಭಾಗ್ಯ ತಂದ ವಿವಾದ

ಶಾದಿ ಭಾಗ್ಯ ತಂದ ವಿವಾದ

ಮುಸ್ಲಿಂ ಯುವತಿಯರ ವಿವಾಹಕ್ಕೆ ಸರ್ಕಾರದಿಂದ 50 ಸಾವಿರ ರೂ. ಸಹಾಯಧನ ನೀಡುವ 'ಶಾದಿಭಾಗ್ಯ' (ಬಿದಾಯಿ) ಯೋಜನೆ ಜಾರಿಗೆ ತಂದ ಸರ್ಕಾರ ಇದರಿಂದ ತೀವ್ರ ವಿರೋಧ ಎದುರಿಸಬೇಕಾಯಿತು. ಎಲ್ಲಾ ಅಲ್ಪ ಸಂಖ್ಯಾತ ವರ್ಗಕ್ಕೂ ಈ ಯೋಜನೆಯನ್ನು ವಿಸ್ತರಿಸಿ ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಬಿಜೆಪಿ, ಕೆಜೆಪಿ, ಜೆಡಿಎಸ್ ಸರ್ಕಾರದ ವಿರುದ್ಧ ಪ್ರತಿಭಟಿಸಿದವು. ಕೊನಗೂ ಒತ್ತಾಯಕ್ಕೆ ಮಣಿದ ಸರ್ಕಾರ ಜೈನ, ಕ್ರೈಸ್ತ ಸಮುದಾಯದವರಿಗೂ ಯೋಜನೆ ವಿಸ್ತರಿಸುವುದಾಗಿ ಹೇಳಿ ವಿವಾದಕ್ಕೆ ತೆರೆ ಎಳೆಯಿತು.

 ರೈತ ಆತ್ಮಹತ್ಯೆ ವಿವಾದ

ರೈತ ಆತ್ಮಹತ್ಯೆ ವಿವಾದ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವಾಗ ಕಬ್ಬಿಗೆ ಬೆಂಬಲ ನೀಡಿ ಎಂದು ಪ್ರತಿಭಟನೆ ನಡೆಸುತ್ತಿದ್ದ ರೈತ ವಿಠಲ ಅರಬಾವಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡರು. ಇದು ಸರ್ಕಾರದ ವಿರುದ್ಧ ಭಾರೀ ಹೋರಾಟಕ್ಕೆ ಸಾಕ್ಷಿಯಾಯಿತು. ಆದರೆ, ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರೈತ ಕುಡಿದು ಸತ್ತ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮತ್ತಷ್ಟು ಮುಜುಗರ ಅನುಭವಿಸಿದರು. ಸರ್ಕಾರ ರೈತರಿಗೆ ಘೋಷಿಸಿದ ಬೆಂಬಲ ಇನ್ನೂ ದೊರಕಿಲ್ಲ ಎಂದು ಪ್ರತಿಭಟನೆ ನಡೆಯುತ್ತಿದೆ.

ವಿಧಾನಸೌಧದ ಗೋಡೆ ಒಡೆದಿದ್ದು

ವಿಧಾನಸೌಧದ ಗೋಡೆ ಒಡೆದಿದ್ದು

ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ವಿಧಾನಸೌಧದ ತಮ್ಮ ಕಚೇರಿಯ ಗೋಡೆ ಒಡೆದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದರು. ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ತಮ್ಮ ಬಂಗಲೆಯನ್ನು 2 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಿಸಿದ್ದಾರೆ ಎಂಬ ಅಂಶಗಳು ಸರ್ಕಾವನ್ನು ಇಕ್ಕಟ್ಟಿಗೆ ಸಿಲುಕಿಸಿದವು. ಒಂದು ವರ್ಷದಲ್ಲಿ ಸರ್ಕಾರಕ್ಕೆ ಈ ವಿಷಯಗಳು ಮುಜುಗರ ತಂದೊಡ್ಡಿದವು.

ಪ್ರವಾಸ ಭಾಗ್ಯ ವಿವಾದ

ಪ್ರವಾಸ ಭಾಗ್ಯ ವಿವಾದ

ಕರ್ನಾಟಕ ದರ್ಶನ ಹೆಸರಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಆರಂಭಿಸಿದ ಪ್ರವಾಸ ಭಾಗ್ಯ ಯೋಜನೆಯೂ ವಿವಾದ ವೆಬ್ಬಿಸಿತು. ಪ್ರತಿ ಜಿಲ್ಲೆಯಿಂದ ಅಲ್ಪಸಂಖ್ಯಾತ ಮತ್ತು ಹಿಂದುಳಿದ 450 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಪ್ರವಾಸ ಕರೆದುಕೊಂಡು ಹೋಗುವ ಯೋಜನೆಯಿಂದ ಮಕ್ಕಳಲ್ಲಿ ತಾರತಮ್ಯ ಭಾವನೆ ತುಂಬಿದಂತಾಗುತ್ತದೆ ಎಂಬ ಕೂಗು ಎದ್ದಿತು. ಕೊನೆಗೂ ಸರ್ಕಾರ ಈ ಪ್ರವಾಸ ರದ್ದುಗೊಳಿಸುವ ಮೂಲಕ ನಿಟ್ಟುಸಿರು ಬಿಟ್ಟಿತು.

ಶಾಸಕರ ವಿದೇಶ ಪ್ರವಾಸ

ಶಾಸಕರ ವಿದೇಶ ಪ್ರವಾಸ

ಶಾಸಕರು ಅಧ್ಯಯನದ ಹೆಸರಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ವಿದೇಶ ಪ್ರವಾಸ ಕೈಗೊಂಡಿದ್ದು ಮತ್ತು ವಿವಿಧ ಸಮಿತಿಯವರು ಬರಗಾಲದ ಸಂದರ್ಭದಲ್ಲಿ ವಿದೇಶ ಪ್ರವಾಸ ಹೋಗಲು ಸಜ್ಜಾಗಿದ್ದು ಸರ್ಕಾರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುವಂತೆ ಮಾಡಿತು. ಸರ್ಕಾರ ಅಧ್ಯಯನ ಸಾಧಕ ಬಾಧಕಗಳ ಕುರಿತು ವರದಿ ನೀಡಲು ಸಮಿತಿಯೊಂದನ್ನು ರಚಿಸಿ ವಿವಾದಗಳಿಗೆ ಅಂತ್ಯ ಹಾಡಿತು. ಆದ್ದರಿಂದ ಎರಡು ಶಾಸಕರ ತಂಡದ ಅಧ್ಯಯನಕ್ಕೆ ಪ್ರವಾಸಕ್ಕೆ ಬ್ರೇಕ್ ಬಿದ್ದಿತು.

ಸರ್ಕಾರವನ್ನು ಕಾಡಿದ ಎನ್ ಕೌಂಟರ್

ಸರ್ಕಾರವನ್ನು ಕಾಡಿದ ಎನ್ ಕೌಂಟರ್

ಗುಲ್ಗರ್ಗಾರದಲ್ಲಿ ನಡೆದ ಭೂಗತ ಪಾತಕಿ ಮುನ್ನಾ ಎನ್ ಕೌಂಟರ್ ಮತ್ತು ಶೃಂಗೇರಿಯಲ್ಲಿ ಎಎನ್ಎಫ್ ಸಿಬ್ಬಂದಿ ನಡೆಸಿದ ನಕಲಿ ಎನ್ ಕೌಂಟರ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದವು. ಗುಲ್ಬರ್ಗದಲ್ಲಿ ಭೂಗತ ಪಾತಕಿ ಗುಂಡಿಗೆ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವನ್ನಪ್ಪಿದರೆ, ಶೃಂಗೇರಿಯಲ್ಲಿ ಅಮಾಯಕನೊಬ್ಬ ಸಾವನ್ನಪ್ಪಿದ. ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಈ ಎರಡೂ ಘಟನೆಯನ್ನು ತೀವ್ರವಾಗಿ ಖಂಡಿಸಿದವು. ಸರ್ಕಾರ ಎರಡೂ ಪ್ರಕರಣದ ಪರಿಹಾರ ವಿತರಣೆಯಲ್ಲೂ ಗೊಂದಲ ಮಾಡಿಕೊಂಡು ಮುಜುಗರ ಅನುಭವಿಸಿತು.

ದರ ಹೆಚ್ಚಳದ ಗಿಫ್ಟ್ ಕೊಟ್ಟ ಸರ್ಕಾರ

ದರ ಹೆಚ್ಚಳದ ಗಿಫ್ಟ್ ಕೊಟ್ಟ ಸರ್ಕಾರ

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ವರ್ಷದ ಸಂಭ್ರಮಕ್ಕೆ ಕೆಎಸ್ಆರ್ ಟಿಸಿ, ಬಿಎಂಟಿಸಿ, ವಿದ್ಯುತ್, ಟೋಲ್ ದರ ಹೆಚ್ಚಳದ ಕೊಡುಗೆಯನ್ನು ರಾಜ್ಯದ ಜನರಿಗೆ ನೀಡಿದೆ. ಬೆಂಗಳೂರಿನಲ್ಲಿ ನೀರಿನ ದರವನ್ನು ಹೆಚ್ಚಳ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಪ್ರಯಾಣದರ ಏರಿಕೆ ಮಾಡಿದ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.

English summary
The Siddaramaiah government, which is completing one year in office on May 13. CM Siddaramaiah said, the government will celebrate its one year in office after the counting of votes on May 16. Here is the Top 10 controversies of Siddaramaiah Government in one year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X