ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕನ್ನಡದ ಜೀವನಾಡಿ ಅಘನಾಶಿನಿಯೂ ಬರಿದು

By Madhusoodhan
|
Google Oneindia Kannada News

ಶಿರಸಿ, ಮೇ. 13: ಈ ಬಾರಿಯ ಬಿಸಿಲಿನ ಆರ್ಭಟ ಮಲೆನಾಡನ್ನು ತತ್ತರ ಮಾಡಿದೆ. ಶತಮಾನದ ಇತಿಹಾಸದಲ್ಲೇ ಅಘನಾಶಿನಿ ನದಿ ಸಹ ತನ್ನ ಹರಿವನ್ನು ನಿಲ್ಲಿಸಿದ್ದು ಬೇಸಿಗೆಯ ತಾಪ-ಪರಿತಾಪದ ಕತೆ ಹೇಳುತ್ತಿದೆ.

ಕರ್ನಾಟಕದ 136 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ಸಾರಿ ಬರದ ವಾತಾವರಣ. ಮಲೆನಾಡು ಭಾಗವಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳದಲ್ಲಿ ಪರವಾಗಿಲ್ಲ ಎಂಬ ಸ್ಥಿತಿ ಇದೆ. ಆದರೆ ಮುಂಡಗೋಡು, ಬನವಾಸಿ ಬರಪೀಡಿತ ಪಟ್ಟಿಗೆ ಸೇರಿದೆ. ಕರಾವಳಿಯ ಕುಮಟಾ, ಹೊನ್ನಾವರ, ಭಟ್ಕಳ, ಕಾರವಾರ, ಅಂಕೋಲಾದಲ್ಲೂ ಕುಡಿಯುವ ನೀರಿಗೆ ಜನರು ಪರಿತಾಪ ಪಡುವಂತೆ ಆಗಿದೆ.[ಬಕ್ಕ ಬರಿದಾದ ಕೆಆರ್‌ಎಸ್]

ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುವ ಅಘನಾಶಿನಿ ಬತ್ತಿದ್ದನ್ನು ಕಂಡವರು ಇಲ್ಲ. ಎರಡು ಕವಲುಗಳಾಗಿ ಹರಿವ ನದಿ ಸಿದ್ದಾಪುರ ತಾಲೂಕಿನ ಉಂಚಳ್ಳಿಯಲ್ಲಿ ಜಲಪಾತವಾಗಿ ಧುಮ್ಮಿಕ್ಕಿ ಕರಾವಳಿಯನ್ನು ಸೇರಿಕೊಳ್ಳುತ್ತದೆ. ಆದರೆ ಈ ಬಾರಿ ನದಿಯಲ್ಲಿನ ಜೀವ ಜಲವೇ ಮಾಯವಾಗಿದೆ.[ಜಲಪಾತಗಳ ತವರು ಉತ್ತರ ಕನ್ನಡ]

ಯಲ್ಲಾಪುರಕ್ಕೆ ನೀರಿನ ಮೂಲವಾಗಿದ್ದ ಬೇಡ್ತಿ ನದಿ ಈಗಾಗಲೇ ಬತ್ತಿ ಹೋಗಿದೆ. ಶಾಲ್ಮಲಾ ನದಿ ಕೂಡ ಬತ್ತಲು ಆರಂಭವಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಹಳ್ಳಗಳು, ಜಲಮೂಲಗಳೆಲ್ಲ ಸಂಪೂರ್ಣವಾಗಿ ಬತ್ತಿಹೋಗಿದೆ.

ಅಘನಾಶಿನಿ ಕಣಿವೆಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಉಂಚಳ್ಳಿ ಜಲಪಾತ ಅಥವಾ ಲುಶಿಂಗ್ ಟನ್ ಜಲಪಾತ ಬರಿದಾಗಿದೆ.

ಏಪ್ರಿಲ್ ನಲ್ಲೇ ಬತ್ತಿದ ನದಿ

ಏಪ್ರಿಲ್ ನಲ್ಲೇ ಬತ್ತಿದ ನದಿ

ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಆದರೆ ಈ ಸಾರಿ ಮಾತ್ರ ಎಪ್ರಿಲ್ ತಿಂಗಳಿನಲ್ಲಿಯೇ ನೀರಿನ ಮಟ್ಟ ಕುಸಿದಿತ್ತು. ಈಗ ನೀರಿನ ಹರಿವೇ ನಿಂತು ಹೋಗಿದೆ.

ಶಿರಸಿಗೆ ಕುಡಿಯುವ ನೀರಿನ ಕಂಟಕ

ಶಿರಸಿಗೆ ಕುಡಿಯುವ ನೀರಿನ ಕಂಟಕ

ಅಘನಾಶಿನಿ ನಂಬಿಕೊಂಡಿದ್ದ ಶಿರಸಿಗೆ ಕುಡಿವ ನೀರಿಲ್ಲ. ಇದಲ್ಲದೇ ಅಘನಾಶಿನಿ ನದಿಯ ನೀರನ್ನೇ ಅವಲಂಬಿಸಿದ್ದ ಶಿರಸಿ ತಾಲೂಕಿನ ರೇವಣಕಟ್ಟಾ, ಸರಕುಳಿ, ಸಿದ್ದಾಪುರ ತಾಲೂಕಿನ ಹಿತ್ಲಕೈ, ಬಾಳೂರು, ಬಾಳೇಸರ ಮುಂತಾದ ಗ್ರಾಮಗಳಲ್ಲಿ ನೀರಿಲ್ಲದೇ ಜನಸಾಮಾನ್ಯರು ಹೈರಾಣಾಗಿದ್ದಾರೆ.

ಬತ್ತಿದ ಉಪನದಿಗಳು

ಬತ್ತಿದ ಉಪನದಿಗಳು

ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ಕೂಡ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆಯಲ್ಲಿ ನೀರಿಲ್ಲ. ಶಿರಸಿ ಸಮೀಪದ ಹನುಮಂತಿ ಕೆರೆ ಹೂಳು ತುಂಬಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯಲ್ಲಿಯೂ ಕೂಡ ನೀರಿಲ್ಲ.

ದೇವರ ಅಭಿಷೇಕಕ್ಕೂ ನೀರಿಲ್ಲ

ದೇವರ ಅಭಿಷೇಕಕ್ಕೂ ನೀರಿಲ್ಲ

ಅಘನಾಶಿನಿ ನದಿ ತೀರದಲ್ಲಿದ್ದ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕಕೂ ನೀರಿಲ್ಲ. ದೇವರ ಪೂಜೆಗಾಗಿ ಕಿಲೋಮೀಟರ್ ದೂರದಿಂದ ನೀರು ಹೊತ್ತು ತರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡೇತೋಟದ ಕೋಟೆ ವಿನಾಯಕ, ಬಾಳೂರಿನ ದೇವಾಲಯಗಳಲ್ಲಿ ದೇವರ ಅಭಿಷೇಕಕ್ಕೆ ದೂರದ ಸ್ಥಳಗಳಿಂದ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆ ಒಂದೇ ಕಾರಣವಲ್ಲ

ಬೇಸಿಗೆ ಒಂದೇ ಕಾರಣವಲ್ಲ

ನೀರು ಬತ್ತಲು ಬೇಸಿಗೆಯೊಂದೇ ಕಾರಣವಲ್ಲ. ಅಘನಾಶಿನಿಯ ಮೈತುಂಬ ಹರಡಿಕೊಂಡಿದ್ದ ಪಂಪ್ ಸೆಟ್ ಪೈಪ್ ಗಳು ನೀರನ್ನು ಮನಸೋ ಇಚ್ಛೆ ಬಳಸಿಕೊಂಡಿದ್ದು ನೀರು ಹರಿವಿಕೆ ನಿಲ್ಲಿಸಲು ಕಾರಣವಾಯಿತು. ಅಲ್ಲಲ್ಲಿ ಮರಳು ಗಣಿಗಾರಿಕೆ, ಹೊಳೆಯ ದಂಡೆಯ ಮರಗಳಿಗೆ ಕೊಡಲಿ ಏಟು ಎಲ್ಲವೂ ಕಾಣದ ಸಮಸ್ಯೆಯಾಗಿ ಉಳಿದುಕೊಂಡಿವೆ.

English summary
Entire Uttara Kannada district is facing severe drinking water problem. Aghanashini river has also completely dried, adding salt to the wound. The well known falls too have become silent. People residing in western ghat and malenadu too are affected by drinking water problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X