ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗ ಶಂಕರದ ಹೊಸ ಕನಸು ಲೋಕ ಸಂಚಾರ ಆರಂಭ

By Mahesh
|
Google Oneindia Kannada News

'ಕನಸುಗಳಿಂದ ಕಟ್ಟಿದ ಶಕ್ತಿಯಂತೆ ನಾವು' ವಿಲಿಯಂ ಷೇಕ್ಸ್ ಪಿಯರ್

ರಂಗ ಶಂಕರ ಆ ಎಲ್ಲ ಕನಸುಗಳ ಮೂರ್ತರೂಪ, ಎಲ್ಲ ಅರ್ಥದಲ್ಲಿಯೂ-ಅಕ್ಷರಶಃ, ಭಾವಶಃ. ಅಲ್ಲಿ ಕನಸು ಸಾಕಾರಗೊಂಡಿದೆ.

ಶಂಕರ್ ನಾಗ್ ಒಬ್ಬ ಅಪ್ಪಟ ಕನಸುಗಾರ. ಆತನ ನೂರೆಂಟು ಕನಸುಗಳು ಸಾಕಾರಗೊಂಡಿದ್ದು ಕನ್ನಡ ನಾಡಿನಲ್ಲೇ. ಇಲ್ಲೇ ಆತ ಕಟ್ಟಿದ್ದು, ಬೆಳೆಸಿದ್ದು, ಜನ ತನ್ನನ್ನು ಪ್ರೀತಿಸುವಂತೆ ನಟಿಸಿದ್ದು, ನಿರ್ದೇಶಿಸಿದ್ದು ಮತ್ತು ಎಲ್ಲರ ಮನದಲ್ಲಿ ನೆಲೆಸಿದ್ದು. ಜೊತೆಗೇ ತನ್ನ ಮೊದಲ ಪ್ರೀತಿಯಾದ ರಂಗಭೂಮಿಯನ್ನು ಇನ್ನಿಲ್ಲದಂತೆ ಪ್ರೀತಿಸಿದ್ದು.

ಈ ನೆನಪಿಗೆಂದೇ ಎಲ್ಲ ರಂಗಕರ್ಮಿಗಳಿಗೆಂದು ರಂಗ ಶಂಕರವೆಂಬ ಒಂದು ಚೆಂದದ ತಾಣ ನಿರ್ಮಾಣಗೊಂಡಿತು. ಆತನ ಪ್ರೀತಿಗೆ ಅರ್ಪಣೆಯಾಯಿತು.[ಶಂಕರ್ ನಾಗ್ ಕನಸು ಈಗ ನನಸಾಗುತ್ತಿದೆ: ಅರುಂಧತಿ]

ರಂಗ ಶಂಕರವನ್ನು ಕಟ್ಟಿ, ಬೆಳೆಸಿ, ನಡೆಸುತ್ತಿರುವ ಸಂಸ್ಥೆ ದಿ ಸಂಕೇತ್ ಟ್ರಸ್ಟ್ ಗಣ್ಯರ, ಗೆಳೆಯರ, ರಂಗಾಸಕ್ತರ ಕೊಡುಗೆಗಳಿಂದ ಸಹಾಯದಿಂದ ಬೆಳೆದ ಒಂದು ಸಂಸ್ಥೆ. ಬೆಂಗಳೂರಿನಲ್ಲೇ ಏಕೆ, ಜಾಗತಿಕ ರಂಗ ಭೂಪಟದಲ್ಲಿ ಇಂದು ರಂಗ ಶಂಕರ ಗುರುತು ಮಾಡಿಕೊಳ್ಳಬೇಕಾದ ತಾಣ. ರಂಗ ಶಂಕರ ಎಂಬ ಹೇಸರೇ ರಂಗಭೂಮಿಯ ಉತ್ಕೃಷ್ಟತೆಗೆ ಮಾಪನ.[ಶಂಕರ್ ನಾಗ್ ಕನಸು]

ಹೊರೆಯಾಗದ ದರ, ಅಂತರಾಷ್ಟ್ರೀಯ ಮಟ್ಟದ ಅನುಕೂಲಗಳು, ಕಲೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವಂಥ ನಾಟಕ ಪ್ರಸ್ತುತಿ, ದಿನಕ್ಕೊಂದು ಪ್ರದರ್ಶನ ನೀಡಬೇಕೆಂಬ ತಪಸ್ಸಿನ ಫಲವಾಗಿ, ರಂಗ ಶಂಕರ ಜಗತ್ತಿನ ಎಲ್ಲೆಡೆಯೂ ಹೆಸರುವಾಸಿ. ಈ ಖ್ಯಾತಿಗೆ ಈಗ ಹನ್ನೊಂದು ವರ್ಷಗಳು.

ಈ ಸಾಧನೆಯನ್ನು ಮುಂದಿಟ್ಟಕೊಂಡು, ರಂಗ ಶಂಕರ ತನ್ನ ತಂಡದ ಶ್ರದ್ಧೆ, ಆ ಮೂಲಕ ಗಳಿಸಿದ ನಂಬಿಕೆಯಿಂದ ಅರಿತ ಸತ್ಯ ಇದು: ರಂಗ ಶಂಕರದ ಅವಕಾಶ ರಾಜಧಾನಿ ಬೆಂಗಳೂರಿನ ನಾಟಕಪ್ರಿಯರಿಗೆ ಮಾತ್ರವೇ ಸೀಮಿತವಾಗಬಾರದು. ಒಳ್ಳೆಯದು ಅನಿಸಿಕೊಂಡಿದ್ದು ಎಲ್ಲರಿಗೂ ಸಿಗಬೇಕು. ಬೆಳಕು ಹಬ್ಬಬೇಕು. ಆ ಕಾರಣಕ್ಕೇ ಮತ್ತೊಂದು ಹೊಸ ಕನಸು, ರಂಗ ಶಂಕರದ ಲೋಕ ಸಂಚಾರ.

ಹೊಸ ಸಾಧ್ಯತೆಗಳನ್ನು ಹುಡುಕುವ ಒಂದು ಪ್ರಯತ್ನ

ಹೊಸ ಸಾಧ್ಯತೆಗಳನ್ನು ಹುಡುಕುವ ಒಂದು ಪ್ರಯತ್ನ

ಪ್ರಸಕ್ತ ವರ್ಷದಲ್ಲಿ ರಂಗ ಶಂಕರದ ನಾಲ್ಕು ನಾಟಕಗಳ ಪ್ರದರ್ಶನಗಳು, ಜಿಲ್ಲಾ ರಂಗಕರ್ಮಿಗಳನ್ನು ರಂಗಭೂಮಿಗೆ ಪರಿಚಯಿಸುವ ಒಂದು ರಂಗ ಶಿಬಿರ, ಶಾಲಾ ಪಠ್ಯೇತರ ಉದ್ದೇಶಕ್ಕಾಗಿ ರಂಗಭೂಮಿಯನ್ನು ಒಂದು ಸಾಧ್ಯತೆಯನ್ನಾಗಿ ಬಳಸಿಕೊಳ್ಳುವ ಬಗ್ಗೆ ಜಿಲ್ಲಾ ಶಾಲಾ ಉಪಾಧ್ಯಾಯರುಗಳಿಗೆ ಒಂದು ರಂಗ ಶಿಬಿರವನ್ನು ಏರ್ಪಡಿಸಿದೆ.

ಬರುವ ವರ್ಷಗಳಲ್ಲಿ ದೇಶದ ಅತಿ ಮುಖ್ಯ ಮತ್ತು ಜನಪ್ರಿಯ ನಾಟಕಗಳನ್ನು ಕರ್ನಾಟಕದ ಇತರ ಜಿಲ್ಲಾ ಕೇಂದ್ರಗಳಿಗೆ ಪರಿಚಯಿಸುವ ಉದ್ದೇಶ ರಂಗ ಶಂಕರದ್ದು.

ಪ್ರದರ್ಶನಗೊಳ್ಳುವ ನಾಟಕ : ಗುಮ್ಮ ಬಂದ ಗುಮ್ಮ

ಪ್ರದರ್ಶನಗೊಳ್ಳುವ ನಾಟಕ : ಗುಮ್ಮ ಬಂದ ಗುಮ್ಮ

ಮಕ್ಕಳ ಕನ್ನಡ ನಾಟಕ : 90 ನಿಮಿಷಗಳು
ಜರ್ಮನ್ ಮೂಲ: ವೋಲ್ಕರ್ ಲುದ್ವಿಷ್
ಕನ್ನಡಕ್ಕೆ: ಎಸ್ ಸುರೇಂದ್ರನಾಥ್
ನಿರ್ದೇಶನ: ಸುಂದರ್‍ರಾಜ್

ಇದು ಮಕ್ಕಳ ಪಾತ್ರಗಳನ್ನು ವಯಸ್ಕರೇ ವಹಿಸುವ ಜರ್ಮನಿಯ ಗ್ರಿಪ್ಸ್ ಶೈಲಿಯ ನಾಟಕ. ಆದರೆ ಪುಟ್ಟ ಮಕ್ಕಳಿಗಾಗಿ ಮೀಸಲಾದ ನಾಟಕ ಇದು. ಕೊಂಚ ಹಾಸ್ಯ, ಕೊಂಚ ಗಂಭೀರವಾದ ನಾಟಕ ಇದು. ಮಕ್ಕಳಿಗೆ ಅವರದೇ ಸಮಸ್ಯೆಗಳನ್ನು, ಅವರದ್ದೇ ಪ್ರಪಂಚವನ್ನು ಮುಖಾಮುಖಿಯನ್ನಾಗಿಸುವ ಪ್ರಯತ್ನ ಈ ನಾಟಕದ್ದು. ಆರು ವರ್ಷದ ಪುಟ್ಟ-ಮುನ್ನಿ-ಗುಂಡ ಮೂರು ಮಕ್ಕಳ ನಡುವಿನ ಹುಡುಗಾಟದ, ನಂಬಿಕೆಯ, ಸ್ನೇಹದ ಕತೆಯಿದು. ಸ್ನೇಹ ಮತ್ತು ನಂಬಿಕೆ ಎಲ್ಲಾ ಅಂತಸ್ತುಗಳನ್ನು, ಜಾತಿ-ಮತಗಳನ್ನೂ ಮೀರಿ ಬೆಳೆಯಬಲ್ಲದೆಂಬುದು, ಈ ಮಕ್ಕಳ ಸ್ನೇಹ ಮತ್ತು ನಂಬಿಕೆ ದೊಡ್ಡವರ ತಿಳುವಳಿಕೆಯಾಚೆಗಿನದು ಎಂದು ಎತ್ತಿ ತೋರಿಸುವ ನಾಟಕ. ಮಕ್ಕಳ ಪ್ರಪಂಚದ ಜೊತೆಯಲ್ಲೇ ಮಕ್ಕಳನ್ನು ತಂದೆ-ತಾಯಿಗಳು ಅರಿತುಕೊಳ್ಳುವ ಪರಿಯನ್ನೂ ಈ ನಾಟಕ ತೋರಿಸುತ್ತದೆ. ತಮ್ಮದೇ ಪ್ರಪಂಚ ರಂಗದ ಮೇಲೆ ಹರಡಿಕೊಳ್ಳುವುದರಿಂದ ಮಕ್ಕಳಿಗೆ ಇದು ತೀರಾ ಅಪ್ಯಾಯಮಾನವಾಗುವುದರಲ್ಲಿ ಅನುಮಾನೇ ಇಲ್ಲ.

ದಿ ಇನ್‍ಕ್ರೆಡಿಬಲ್ ಮುಲ್ಲಾ ನಸ್ರುದ್ದೀನ್

ದಿ ಇನ್‍ಕ್ರೆಡಿಬಲ್ ಮುಲ್ಲಾ ನಸ್ರುದ್ದೀನ್

ಮಕ್ಕಳ ಇಂಗ್ಲಿಷ್ ನಾಟಕ : 60 ನಿಮಿಷಗಳು
ರಚನೆ-ನಿರ್ದೇಶನ: ಪುಷಾನ್ ಕೃಪಲಾನಿ
ಒಬ್ಬ ಶಾಲಾ ಬಾಲಕನಿಗೆ ತನ್ನ ಕತೆಗಳಿಂದ ತನ್ನ ಸಹಪಾಟಿಗಳನ್ನು ಮಂತ್ರಮುಗ್ಧಗೊಳಿಸುವ ಅಪೂರ್ವ ಶಕ್ತಿಯಿತ್ತು. ಜೊತೆಗಾರರೆಲ್ಲಾ ಅವನ ಕತೆಗಳಲ್ಲಿ ಎಷ್ಟು ಮುಳುಗಿಹೋಗುತ್ತಿದ್ದರೂ ಎಂದರೆ ಅವರ ವಿದ್ಯಾಭ್ಯಾಸವೆಲ್ಲಾ ಹಾಳಾಗಿಹೋಗುತ್ತಿತ್ತು. ಉಪಾಧ್ಯಾಯರು ಎಷ್ಟೇ ಪ್ರಯತ್ನಪಟ್ಟರೂ ತರಗತಿಯನ್ನು ಹದ್ದುಬಸ್ತಿಗೆ ತರಲು ಸಾಧ್ಯವಾಗುತ್ತಿರಲಿಲ್ಲ. ಆ ಶಾಲಾ ಬಾಲಕನನ್ನು ಜಗತ್ತಿನ ಅತಿ ದೊಡ್ಡ ಮೂರ್ಖ ಅಥವಾ ಜಗತ್ತಿನ ಅತಿ ಬುದ್ಧಿವಂತ ಎಂದು ತೀರ್ಮಾನಿಸಿದರು. ಈ ಬಾಲಕನ ಶಾಲಾ ದಿನಗಳ ಶತಮಾನಗಳ ನಂತರ ನಾವೆಲ್ಲಾ ಈತನ ಕತೆಗಳನ್ನು ಕೇಳುತ್ತಾ, ಆನಂದಿಸುತ್ತಾ, ಅವನನ್ನು ಆರಾಧಿಸುತ್ತಾ ಬೆಳೆದಿದ್ದೇವೆ, ಬೆಳೆಯುತ್ತಿದ್ದೇವೆ. ಆತನೇ ಮುಲ್ಲಾ ನಸ್ರುದ್ದೀನ್, ಅರೇಬಿಯಾದ ತೆನಾಲಿ ರಾಮ.

ಈ ನಾಟಕದಲ್ಲಿ ಈ ನಸ್ರುದ್ದೀನ್, ತನ್ನ ಖಲೀಫನ ಆಜ್ಞೆಯ ಮೇರೆಗೆ, ಭಾರತಕ್ಕೆ ಬರುತ್ತಾನೆ, ಬುದ್ಧಿವಂತರ ಹುಡುಕಾಟದಲ್ಲಿ. ಜ್ಞಾನದ ಹುಡುಕಾಟದಲ್ಲಿ. ಇಡೀ ನಾಟಕ ಈ ಮುಲ್ಲಾ ನಸ್ರುದ್ದೀನನ ಪುಟ್ಟ ಪುಟ್ಟ ಕತೆಗಳ, ಘಟನೆಗಳ ಸರಣಿ. ಇಡೀ ನಾಟಕವನ್ನು ಕೇವಲ ಐದು ನಟರು ಪ್ರಸ್ತುತ ಪಡಿಸುತ್ತಾರೆ. ತೀರಾ ಸರಳ ರಂಗ ಸಜ್ಜಿಕೆ ಈ ನಾಟಕದ ವೈಶಿಷ್ಟ್ಯ.
ಕನ್ನಡ ನಾಟಕ : ದ್ವೀಪ

ಕನ್ನಡ ನಾಟಕ : ದ್ವೀಪ

ಕನ್ನಡ ನಾಟಕ / 90 ನಿಮಿಷಗಳು
ರಚನೆ - ನಿರ್ದೇಶನ: ಅಭಿಷೇಕ್ ಮಜುಮ್‍ದಾರ್
ಕನ್ನಡಕ್ಕೆ: ಡಾ. ಜಯಶ್ರಿ ಕಂಬಾರ

ಒಬ್ಬ ಮತ್ತು ಒಬ್ಬಾಕೆ ಒಂದು ಪ್ರಳಯದಲ್ಲಿ, ಭೂಖಂಡದ ಯಾವುದೋ ಒಂದು ಭಾಗ ತುಂಡರಿಸಿ, ಅರಬ್ಬೀ ಸಮುದ್ರದಲ್ಲಿ ನಡುಗಡ್ಡೆಯಾದ ಒಂದು ಪುಟ್ಟ ನೆಲದಲ್ಲಿ ಬಂದು ಬೀಳುವುದರಿಂದ ನಾಟಕ ಆರಂಭವಾಗುತ್ತದೆ. ಪ್ರಳಯದ ನಂತರವೂ ಬದುಕಿ ಉಳಿದ ಈ ಇಬ್ಬರಿಗೂ ತಮ್ಮ ಸಂಬಂಧಗಳ ನೆನಪಿಲ್ಲ, ತಮ್ಮ ಇರವಿನ ನೆನಪಿಲ್ಲ, ತಮ್ಮ ಭಾಷೆಯನ್ನುಳಿದು ಬೇರೇನೂ ನೆನಪಿಲ್ಲ.

ಅವರ ಮುಂದಿರುವ ಏಕೈಕ ಗುರಿಯೆಂದರೆ, ತಮ್ಮ ನೆನಪಿನಲ್ಲಿ ಉಳಿದಷ್ಟು ಅಂಶಗಳಿಂದ ತಾವು ಮರೆತಿರುವುದು ಏನೆಂದು ಗುರುತಿಸಿಕೊಳ್ಳುವುದು, ಈ ಕ್ಷಣದಲ್ಲಿ ನೆನಪಿಸಿಕೊಳ್ಳಬೇಕಾದದ್ದು ಏನೆಂದು ಗುರುತಿಟ್ಟುಕೊಳ್ಳುವುದು, ಮತ್ತು ತಮ್ಮ ಉಳಿವಿಗಾಗಿ ಹೊಸ ಜೀವನ ನಡೆಸುವುದರ ಜೊತೆಗೆ ಇಲ್ಲಿಂದ ಹೊರ ಬೀಳುವ ದಾರಿ ಹುಡುಕುವುದು. ತಪ್ಪಿಸಿಕೊಳ್ಳಲು ಅವರಿಗಿರುವ ಒಂದೇ ಆಸರೆಯೆಂದರೆ ಆಗಾಗ್ಗೆ ಈ ನಡುಗಡ್ಡೆಗೆ ಬಂದು ಹೋಗುವ ಆಮೆಗಳು, ಮತ್ತು ಅವುಗಳ ಹೆಜ್ಜೆ ಗುರುತುಗಳು.

ಅವರಿಗಿರುವ ಒಂದೇ ತೊಂದರೆಯೆಂದರೆ ಮತ್ತೆ ಮತ್ತೆ ಮರುಕಳಿಸುತ್ತಿರುವ ಪ್ರಳಯ, ಪ್ರತಿ ಪ್ರಳಯವಾದ ನಂತರ ಅವರು ಪ್ರಾರಂಭಿಸಬೇಕಾದ ಹೊಸ ಜೀವನದ ಕಷ್ಟಗಳು. ಮತ್ತೊಂದೆಡೆ ಈ ಇಬ್ಬರನ್ನು ಹುಡುಕುತ್ತಿರುವ ಮೂರು ದೇಶಗಳ ಮೂವರು ವಾಯು ಸೇನಾ ವಿಭಾಗದವರು.

ಮರ್ಯಾದೆ ಪ್ರಶ್ನೆ

ಮರ್ಯಾದೆ ಪ್ರಶ್ನೆ

ಯುವಕರಿಗಾಗಿ ಕನ್ನಡ ನಾಟಕ / 90 ನಿಮಿಷಗಳು
ರಚನೆ: ಲುಟ್ಜ್ ಹ್ಯೂಬ್ನರ್ / ಸುರೇಂದ್ರನಾಥ್ ಎಸ್
ನಿರ್ದೇಶನ: ಸುರೇಂದ್ರನಾಥ್ ಎಸ್

ನಾಲ್ವರು ಕಾಲೇಜು ವಿದ್ಯಾರ್ಥಿಗಳು, ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರು. ಮೈಸೂರಿಗೊಂದು ಜಾಲಿ ಟ್ರಿಪ್ ಈ ನಾಲ್ವರದ್ದು. ಬೆಂಗಳೂರು-ಮೈಸೂರಿನ ಹಾದಿಯಲ್ಲಿ ಕ್ರಮೇಣ ನಂಬಿಕೆಗಳು ನಾಶವಾಗುತ್ತವೆ.

ಸಿಟ್ಟು-ಸೆಡವು ತಲೆಯೆತ್ತುತ್ತದೆ. ಅಹಂ ಮೆರೆಯುತ್ತದೆ. ಅನುಮಾನಗಳು ಫೂತ್ಕರಿಸುತ್ತವೆ. ಮಜಾ ಮಾಡಲು ಹೋದ ಪ್ರಯಾಣ ದುರಂತದಲ್ಲಿ ಕೊನೆಗೊಳ್ಳುತ್ತದೆ. ನಾಟಕದ ಆರಂಭದಲ್ಲೇ ನಾಟಕದಲ್ಲಿ ಕೊಲೆಯಾದವರು ಯಾರು, ಕೊಲೆ ಮಾಡಿದ್ದು ಯಾರು ಎನ್ನುವ ವಿವರಗಳು ಸಿಕ್ಕಿಬಿಡುತ್ತವೆ, ಹಾಗಾಗಿ ಇದು ಕೊಲೆ-ಮಾಡಿದವರು-ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ನಾಟಕವಲ್ಲ, ಬದಲಿಗೆ ಕೊಲೆ-ಯಾಕೆ-ಮಾಡಿದರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.ಭಾಷೆ, ವೇಷಭೂಷ, ಹಾವಭಾವಗಳ ಮೂಲಕ ಇಂದಿನ ಕಾಲೇಜು ವಿದ್ಯಾರ್ಥಿಗಳ ಜೀವನದ ಒಂದು ಸೂಕ್ಷ್ಮ ದರ್ಶನ ಮಾಡಿಸುವ ಪ್ರಯತ್ನ ಕೂಡಾ ಇಲ್ಲಿದೆ.

English summary
Ranga Shankara Loka Sanchara in Karnataka's Cities Davangere, Haveri, Tumakuru, Chitradurga. Ranga Shankara Born from a dream envisioned by actor – director Shankar Nag the theatre is a celebration of artistic excellence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X