ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರೇಂದ್ರ ಹೆಗ್ಗಡೆಯವರ ಮೇಲೆ ಮತ್ತೇನಿದು ಗಂಭೀರ ಆರೋಪ !

|
Google Oneindia Kannada News

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮೇಲೆ ಮತ್ತೆ ಗುರುತರ ಆರೋಪದ ಗುಮ್ಮ ದಕ್ಷಿಣ ಕನ್ನಡ ಭಾಗದಲ್ಲಿ ಸಂಚಲನ ಮೂಡಿಸಲು ಆರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟಿನ ಸೋಮನಾಥ್ ನಾಯಕ್ ಮತ್ತು ಟ್ರಸ್ಟಿ ರಂಜನ್ ರಾವ್ ಯರ್ಡೂರು ಎನ್ನುವವರು ಹೆಗ್ಗಡೆಯವರ ವಿರುದ್ದ ದಾಖಲೆ ಸಮೇತ ಜಿಲ್ಲಾಧಿಕಾರಿ ಬಳಿ ದೂರು ನೀಡಿರುವುದು ಈಗ ಈ ಭಾಗದಲ್ಲಿ ಭಾರೀ ಸುದ್ದಿಯಾಗಿದೆ.

ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಅವರ ತೇಜೋವಧೆಗೆ ಮತ್ತು ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಾಗರಿಕ ಸೇವಾ ಟ್ರಸ್ಟ್ ಅಪಪ್ರಚಾರ ನಡೆಸುತ್ತಿದೆ. (ಧರ್ಮಸ್ಥಳ ದೇವಾಲಯ ವಶ ಪಡಿಸಿಕೊಳ್ಳಲು ಹೊರಟಿತ್ತೇ ಸರಕಾರ)

ಇದರಿಂದ ಕ್ಷೇತ್ರದ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟಾಗಿದೆ ಎಂದು ಗುರುವಾಯನಕೆರೆ- ವೇಣೂರು ರಸ್ತೆಯಲ್ಲಿನ ಶಕ್ತಿನಗರದ ಸೋಮನಾಥ ನಾಯಕ್ ಅವರ ಮನೆಯ ಮುಂದೆ ಪ್ರತಿಭಟನೆ ಇಂದು (ಸೆ 30) ನಡೆಯುತ್ತಿದೆ.

ನಾಗರಿಕ ಸೇವಾ ಟ್ರಸ್ಟ್ ನವರು ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರ ವಿರುದ್ದ ಸಹಿಸಂಗ್ರಹ ಅಭಿಯಾನವನ್ನು ಜನಜಾಗೃತಿ ವೇದಿಕೆ ಮತ್ತು ಶಾರದಾಂಬ ಸೇವಾ ಸಮಿತಿ ಇತ್ತೀಚೆಗೆ ಆರಂಭಿಸಿತ್ತು.

ಪಿಯು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ವಿಚಾರದಲ್ಲೂ ಹೆಗ್ಗಡೆಯವರ ಕುಟುಂಬದ ಹೆಸರು ಕೇಳಿಬಂದಿತ್ತು. ಕೇಸನ್ನು ಸಿಬಿಐಗೆ ವಹಿಸಬೇಕು ಎನ್ನುವ ಸಾರ್ವಜನಿಕ ಪ್ರತಿಭಟನೆ ತಾರಕಕ್ಕೇರಿದ ನಂತರ ಸರಕಾರ ಕೇಸನ್ನು ಸಿಬಿಐ ಸುಪರ್ದಿಗೆ ವಹಿಸಿತ್ತು.

ನಾಗರಿಕ ಸೇವಾ ಟ್ರಸ್ಟಿನ ಸೋಮನಾಥ ನಾಯಕ್ ಮತ್ತು ಟ್ರಸ್ಟಿ ರಂಜನ್ ರಾವ್ ಯರ್ಡೂರು ಅವರನ್ನು 'ಒನ್ ಇಂಡಿಯಾ ಕನ್ನಡ' ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರು ಹೇಳಿದ್ದೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಹೆಗ್ಗಡೆಯವರ ಜಮೀನು ಮುಟ್ಟುಗೋಲು

ಹೆಗ್ಗಡೆಯವರ ಜಮೀನು ಮುಟ್ಟುಗೋಲು

ಭೂ ಅತಿಕ್ರಮ ಕಾಯ್ದೆಯನ್ವಯ ಈಗಾಗಲೇ ವೀರೇಂದ್ರ ಹೆಗ್ಗಡೆಯವರಿಗೆ ಸೇರಿದ 132 ಎಕರೆ ಜಮೀನನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ. ಭೂಸುಧಾರಣೆ ಕಾಯ್ದೆಯಡಿ ಇನ್ನಷ್ಟು ಹೆಗ್ಗಡೆಯವರ ಹೆಸರಿನಲ್ಲಿರುವ ಜಮೀನು ಸರಕಾರದ ಪಾಲಾಗಲಿದೆ ಎಂದು ಟ್ರಸ್ಟಿನ ಸೋಮನಾಥ ನಾಯಕ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಇಬ್ರಾಹಿಂ

ಜಿಲ್ಲಾಧಿಕಾರಿ ಇಬ್ರಾಹಿಂ

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಇಬ್ರಾಹಿಂ ಒಬ್ಬ ಖಡಕ್ ಅಧಿಕಾರಿ. ಆರ್ಟಿಐ ಮೂಲಕ ಸಂಗ್ರಹಿಸಿರುವ ದಾಖಲೆಗಳನ್ನು ಜಿಲ್ಲಾಧಿಕಾರಿಯವರ ಕಚೇರಿಗೆ ನೀಡಿದ್ದೇವೆ. ಈಗಾಗಲೇ ಹದಿನೈದು ಕೇಸಿಗೆ ಸಂಬಂಧಿಸಿದಂತೆ ತನಿಖೆಗಳಿಗೆ ಆದೇಶ ನೀಡಲಾಗಿದೆ. ಸತ್ಯ ಸ್ವಲ್ಪ ದಿನದಲ್ಲೇ ಹೊರಬೀಳಲಿದೆ - ಸೋಮನಾಥ ನಾಯಕ್. (ಚಿತ್ರ: ಗುರುವಾಯನಕೆರೆಯಲ್ಲಿನ ಪ್ರತಿಭಟನೆ)

ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ಇಲಾಖೆಗೆ ತರಬೇಕು

ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ಇಲಾಖೆಗೆ ತರಬೇಕು

ಹಿಂದೂ ಧಾರ್ಮಿಕ ದತ್ತಿ ವಿಧೇಯಕ 1997 ಮತ್ತು ಯಡಿಯೂರಪ್ಪ ಅವಧಿ (2011) ಯಲ್ಲಿ ಆದ ತಿದ್ದುಪಡಿಯನ್ವಯ ಯಾವುದೇ ವ್ಯಕ್ತಿ, ಕುಟುಂಬಕ್ಕೆ ಸೇರಿದ ದೇವಾಲಯಗಳಿಗೆ ಸಾರ್ವಜನಿಕರು ಪ್ರವೇಶಿಸುತ್ತಾರೋ, ಸಾರ್ವಜನಿಕರಿಂದ ಕಾಣಿಕೆ/ದೇಣಿಗೆ ರೂಪದಲ್ಲಿ ಹಣ ಸಂಗ್ರಹವಾದರೆ, ಅದು ಸರಕಾರದ ಸ್ವತ್ತಾಗ ಬೇಕು. ಹಾಗಾಗಿ ನಾವು ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಲು ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ - ನಾಗರಿಕ ಸೇವಾ ಟ್ರಸ್ಟಿನ ಸೋಮನಾಥ ನಾಯಕ್

ಸಿಟಿ ರವಿ ಮತ್ತು ಶೋಭಾ ಕರಂದ್ಲಾಜೆ

ಸಿಟಿ ರವಿ ಮತ್ತು ಶೋಭಾ ಕರಂದ್ಲಾಜೆ

ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರಬೇಕು ಎನ್ನುವ ನಮ್ಮ ದೂರಿಗೆ ಸಿ ಟಿ ರವಿ ಮತ್ತು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ. ಅವರ ಸರಕಾರದಲ್ಲಿ ಮಸೂದೆಗೆ ತಿದ್ದುಪಡಿಯಾಗಿದ್ದು, ಜೊತೆಗೆ ಅವರಿಬ್ಬರೂ ಸರಕಾರದ ಭಾಗಿಯಾಗಿದ್ದರು ಎನ್ನುವುದನ್ನು ಅವರು ಮರೆಯಬಾರದು ಎಂದು ಟ್ರಸ್ಟಿನ ಸೋಮನಾಥ ನಾಯಕ್ ಹೇಳಿದ್ದಾರೆ.

ವಾರ್ಷಿಕ ಮುನ್ನೂರು ಕೋಟಿಗೂ ಹೆಚ್ಚು ಆದಾಯ

ವಾರ್ಷಿಕ ಮುನ್ನೂರು ಕೋಟಿಗೂ ಹೆಚ್ಚು ಆದಾಯ

ಧರ್ಮಸ್ಥಳ ದೇವಾಲಯಕ್ಕೆ ವಾರ್ಷಿಕ ಮುನ್ನೂರು ಕೋಟಿಗೂ ಅಧಿಕ ಆದಾಯವಿದೆ. ಇದು ಹೆಗ್ಗಡೆಯವರ ಒಡೆತನದ ದೇವಾಲಯ. ಆದರೆ ಇದು ಸಾರ್ವಜನಿಕವಾಗಿ ಬಹಳ ಪ್ರಸಿದ್ದ. ಹಾಗಾಗಿ ಇದು ಒಂದು ಕುಟುಂಬದ ಸ್ವತ್ತಲ್ಲ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಇಬ್ರಾಹಿಂ ಅವರಲ್ಲಿ ನಮ್ಮ ಮನವಿ ಮತ್ತು ದೂರನ್ನು ಸಲ್ಲಿಸಿದ್ದೇವೆ. ಸಚಿವ ಜಯಚಂದ್ರ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರುವುದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಹೇಳಿಕೆ ಮತ್ತು ಮಸೂದೆಯನ್ನು ಅಪಹ್ಯಾಸ ಮಾಡುವಂತಹ ಹೇಳಿಕೆ ಎಂದು ಟ್ರಸ್ಟಿನ ರಂಜನ್ ರಾವ್ ಹೇಳಿದ್ದಾರೆ.

ಪ್ರತಿಭಟನಾ ಸಭೆ

ಪ್ರತಿಭಟನಾ ಸಭೆ

ಗುರುವಾಯನಕೆರೆಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಭೆಗೆ ಹೆಗ್ಗಡೆಯವರು ಐವತ್ತು ಸಾವಿರ ಜನ ನಿರೀಕ್ಷಿಸುತ್ತಿದ್ದರು. ಬೆಳ್ತಂಗಡಿ ಭಾಗದ ಜನರು ಈ ಪ್ರತಿಭಟನೆಗೆ ಸೊಪ್ಪು ಹಾಕುವುದಿಲ್ಲ. ಪಕ್ಕದ ಉಡುಪಿ, ಶಿವಮೊಗ್ಗ ಜಿಲ್ಲೆಯಿಂದ ಪ್ರತಿಭಟನೆಗೆ ಜನ ಬಂದಿರಬಹುದು. ಪೊಲೀಸ್ ಮೂಲದ ಪ್ರಕಾರ 15 - 20 ಸಾವಿರ ಜನ ಸೇರಿರಬಹುದು ಅಷ್ಟೇ - ರಂಜನ್ ರಾವ್. (ಚಿತ್ರ: ಗುರುವಾಯನಕೆರೆಯಲ್ಲಿನ ಪ್ರತಿಭಟನೆ)

English summary
Protest in Guruvyanakere (Dakshina Kannada district) opposing allegations against Dharmadhikari of Dharmasthala temple Dr. Veerendra Heggade and hand over the Dharmasthala temple to Muzrai department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X