ಕಾವೇರಿ ಐತಿಹಾಸಿಕ ಒಗ್ಗಟ್ಟು 'ಪರಂಪರೆ'ಯಾಗಿ ಮುಂದುವರಿಯಲಿ

Written by: ಬಾಲರಾಜ್ ತಂತ್ರಿ
Subscribe to Oneindia Kannada

ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಸರಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ, ರಾಜ್ಯದ ಎಲ್ಲಾ ಪಕ್ಷಗಳು ಐಕ್ಯತೆ ಪ್ರದರ್ಶಿಸುವುದರ ಜೊತೆಗೆ ರಾಜ್ಯದ ಜನರ ಭಾವನೆಗೆ ಸ್ಪಂದಿಸಿದೆ.

ಶುಕ್ರವಾರ (ಸೆ 23) ನಡೆದ ಐತಿಹಾಸಿಕ ವಿಶೇಷ ಅಧಿವೇಶನದಲ್ಲಿ, ನೆಲಜಲ ವಿಚಾರದಲ್ಲಿ ಪಕ್ಷಕ್ಕಿಂತ ರಾಜ್ಯದ ಹಿತ ಮುಖ್ಯ ಎಂದು ಆಡಳಿತ, ವಿರೋಧ ಪಕ್ಷದವರು ಯಾವುದೇ ಕೊಂಕು, ವ್ಯಂಗ್ಯ, ವಾಕ್ ಪ್ರಹಾರ, ಸಭಾತ್ಯಾಗ ನಡೆಸದೇ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದ್ದು ಮೆಚ್ಚುವಂತದ್ದು. (ಕಾವೇರಿ ನೀರು ಕುಡಿಯೋಕೆ ಮಾತ್ರ)

ಕೇಂದ್ರ ಸರಕಾರ, ಮೋದಿ ಹೆಸರನ್ನು ಎಷ್ಟು ಬೇಕೋ ಅಷ್ಟೇ ಸದನದಲ್ಲಿ ಪ್ರಸ್ತಾವಿಸಿ, ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ದ ಆಕ್ರೋಶವಾಗಿ ಮಾತನಾಡದೇ ಎಲ್ಲಾ ಜನಪ್ರತಿನಿಧಿಗಳು ಶಿಸ್ತಿನ ಜೊತೆಗೆ, ಸುಪ್ರೀಂಕೋರ್ಟಿಗೆ ಏನು ಸಂದೇಶ ರವಾನಿಸಬೇಕೋ ಆ ಕೆಲಸವನ್ನು ಅಧಿವೇಶನದಲ್ಲಿ ಮಾಡಿದ್ದಾರೆ.

ಪ್ರಮುಖವಾಗಿ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿದ್ದ ಕೆಳಮನೆಯಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಮುಖಂಡ ದತ್ತಾ ವಿಧೇಯಕ ಮಂಡಿಸಿದ್ದು, ರಾಜ್ಯದ ಜನತೆಗೆ ಆಶಾದಾಯಕ ಸಂದೇಶ ರವಾನಿಸಿದಂತಾಗಿದೆ. (ರಂಗೋಲಿ ಕೆಳಗೆ ನುಸುಳಿದ ಕರ್ನಾಟಕ)

ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ಉದ್ದೇಶ ನಮಗಿಲ್ಲ ಎಂದು ಸದನದಲ್ಲಿ ಮಾತನಾಡಿದ ಎಲ್ಲಾ ಮುಖಂಡರು ಹೇಳಿದ್ದು, ಕರ್ನಾಟಕವನ್ನು 'ವಿಲನ್'ಎಂದು ಊರಿಗೆಲ್ಲಾ ತೋರಿಸುವ ಕೆಲವು ವಿಘ್ನಸಂತೋಷಿಗಳಿಗೆ ಸರಿಯಾದ ತಿರುಗೇಟು ನೀಡಿದಂತಾಗಿದೆ.

ಕಾವೇರಿ, ಬೆಳಗಾವಿ ವಿಚಾರದಲ್ಲಿ

ಈ ಹಿಂದೆ ಕೂಡಾ ನಾಲ್ಕು ಬಾರಿ (1991, 1995, 1997, 2012) ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನಗಳನ್ನು ನಡೆಸಲಾಗಿತ್ತು. ಜೊತೆಗೆ, ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿ ಮೂರು ಬಾರಿ ವಿಶೇಷ ಅಧಿವೇಶನಗಳನ್ನು ಕರೆಯಲಾಗಿತ್ತು.

ರಾಜ್ಯದ ಪರವಾಗಿ ನಿಲ್ಲಲಿ

ರಾಜ್ಯದ ಜನಪ್ರತಿನಿಧಿಗಳು ತೋರಿದ ಐಕ್ಯತೆ ಬರೀ ರಾಜಧಾನಿಗೆ ಸೀಮಿತವಾಗಿರದೇ ಮಹದಾಯಿ, ಕೃಷ್ಣ, ತುಂಗಭದ್ರ, ನೇತ್ರಾವತಿ ಮುಂತಾದ ಜ್ವಲಂತ ನೀರಿನ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ರಾಜ್ಯದ ಪರವಾಗಿ ನಿಲ್ಲಬೇಕಾಗಿದೆ.

ಮಹದಾಯಿ ವಿಚಾರ

ಸುಪ್ರೀಂಕೋರ್ಟ್ ತೀರ್ಪಿನಿಂದ ಕಾವೇರಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಲಾಯಿತು. ಮಹದಾಯಿ ವಿಚಾರದಲ್ಲಿ ರಾಜ್ಯ ಸರಕಾರ ಯಾಕೆ ಕಠಿಣ ನಿಲುವು ತಾಳಲಿಲ್ಲ, ಗೋವಾ ಮುಖ್ಯಮಂತ್ರಿಗಳ ಜೊತೆ ಯಾಕೆ ಸರಕಾರ ಮಾತುಕತೆಗೆ ಮುಂದಾಗಲಿಲ್ಲ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಉತ್ತರಕರ್ನಾಟಕದ ಭಾಗದ ಜನರಿಗೆ ಕಾಡದಂತೆ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕಾಗಿದೆ.

ಕನ್ನಡಪರ ಹೋರಾಟಗಾರರು

ಜೊತೆಗೆ ಕೃಷ್ಣ, ತುಂಗಭದ್ರಾ ಕಣಿವೆ ಭಾಗದ ಜನರು ನೀರು ಹಂಚಿಕೆಯ ವಿಚಾರದಲ್ಲಿ ನೆರೆರಾಜ್ಯದವರ ಜೊತೆಗೆ ಎದುರಿಸುತ್ತಿರುವ ಸಮಸ್ಯೆಗೂ ರಾಜ್ಯ ಒಂದಾಗಬೇಕಾಗಿದೆ. ಕನ್ನಡಪರ ಹೋರಾಟಗಾರರ ಚಳುವಳಿಯ ಕಿಚ್ಚು ಬರೀ ಬೆಂಗಳೂರು, ಮಂಡ್ಯ, ಮೈಸೂರಿಗೆ ಸೀಮಿತವಾಗದೇ ರಾಜ್ಯದೆಲ್ಲಡೆ ಪಸರಿಸಿದರೆ 'ನಾವೆಲ್ಲಾ ಒಂದು' ಎನ್ನುವ ಭಾವನೆ ಕರ್ನಾಟಕದ ಎಲ್ಲಾ ಭಾಗದ ಜನರಿಗೆ ಮೂಡದೆ ಇರುತ್ತದೆಯೇ?

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

ಅದೇ ರೀತಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗೊಂದಲ ಮೂಡಿಸಿರುವ ಎತ್ತಿನಹೊಳೆ ಯೋಜನೆ ವಿಚಾರದಲ್ಲೂ ಸಂಬಂಧಪಟ್ಟ ಜಿಲ್ಲೆಯ ಜನ ಪ್ರತಿನಿಧಿಗಳು ಒಗ್ಗಟ್ಟಾಗಿ ಆ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಜೊತೆಗೆ, ರಾಜ್ಯ ಸರಕಾರಕ್ಕೂ ಯಾವುದು ಸರಿ, ತಪ್ಪು ಎನ್ನುವ ವಸ್ತುನಿಷ್ಟ ಜನಾಭಿಪ್ರಾಯ ತಿಳಿಸುವ ಕೆಲಸವನ್ನು ಇಲ್ಲಿನ ಪ್ರತಿನಿಧಿಗಳು ಮಾಡಬೇಕಾಗಿದೆ.

ರಾಜ್ಯದ ಜನರ ಆಶಯ

ಕಾವೇರಿ ವಿಚಾರದಲ್ಲಿ ಸರಕಾರ ಮತ್ತು ಜನಪ್ರತಿನಿಧಿಗಳು ತೋರಿದ ಒಗ್ಗಟ್ಟು, ಶಕ್ತಿಪ್ರದರ್ಶನ, ಐಕ್ಯತೆ ಬರೀ ಕಾವೇರಿ ವಿಚಾರಕ್ಕೆ ಸೀಮಿತವಾಗದೇ ರಾಜ್ಯದ ಇತರ ಜಲ ಸಮಸ್ಯೆಗೂ ಪರಂಪರೆಯಾಗಿ ಮುಂದುವರಿಯಲಿ ಎನ್ನುವುದು ರಾಜ್ಯದ ಜನರ ಆಶಯ.

English summary
After Supreme Court verdict on Cauvery, special session concluded on Sep 23. All parties should unite not only on Cauvery issue but all the problems state facing across Karnataka.
Please Wait while comments are loading...