ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೈರ್ಯಗೆಡಬೇಡಿ-ಯಡಿಯೂರಪ್ಪನವರಿಗೆ ಆತ್ಮೀಯ ಪತ್ರ

ಕರ್ನಾಟಕ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅತ್ಯಂತ ಜನಪ್ರಿಯ ಹಾಗೂ ದಕ್ಷ ಮುಖಂಡ. ಭ್ರಷ್ಟ ಹೌದೋ ಅಲ್ಲವೋ ಕೋರ್ಟ್ ನಿರ್ಧರಿಸುತ್ತದೆ. ಅದರೆ, ಬಿಜೆಪಿ ಮಟ್ಟಿಗೆ ಜನರನ್ನು ಸೆಳೆಯಲು ಯಡಿಯೂರಪ್ಪ ಅವರೇ ಬೇಕು. ಆದರೆ, ಜತೆಗೆ ಅಮಿತ್ ಶಾ ರಂಥವರು ಬೇಕು

By ಸಂದೀಪ್ ಕುಮಾರ್ ಶೆಟ್ಟಿ
|
Google Oneindia Kannada News

ಯಾರು ಏನೇ ಹೇಳಿದರೂ ಕರ್ನಾಟಕ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅತ್ಯಂತ ಜನಪ್ರಿಯ ಹಾಗೂ ದಕ್ಷ ಮುಖಂಡ. ಭ್ರಷ್ಟ ಹೌದೋ ಅಲ್ಲವೋ ಕೋರ್ಟ್ ನಿರ್ಧರಿಸುತ್ತದೆ. ಅದರೆ, ಬಿಜೆಪಿ ಮಟ್ಟಿಗೆ ಜನರನ್ನು ಸೆಳೆಯಲು ಯಡಿಯೂರಪ್ಪ ಅವರೇ ಬೇಕು.

ಸಂಸದ ಸ್ಥಾನ, ಉಪಾಧ್ಯಕ್ಷ ಸ್ಥಾನ ಗೌರವ ಸಿಕ್ಕರೂ ಯಡಿಯೂರಪ್ಪ ಮನಸ್ಸು ಮಾತ್ರ ಕರ್ನಾಟಕ, ಶಿವಮೊಗ್ಗ, ಶಿಕಾರಿಪುರ ಎಂದು ಗಂಟೆಗೊಮ್ಮೆ ಜಪಿಸುತ್ತಿರುತ್ತದೆ. ಯಡಿಯೂರಪ್ಪ ಅವರಿಗೆ ಸಂದೀಪ್ ಕುಮಾರ್ ಶೆಟ್ಟಿ ಅವರು ಬರೆದ ಆಪ್ತ ಪತ್ರ ಇಲ್ಲಿದೆ.. ಇದು ನಿಲುಮೆ. ಕಾಂನಲ್ಲಿ ಈ ಹಿಂದೆ ಪ್ರಕಟವಾಗಿದೆ. ಇಲ್ಲಿಂದ ಮುಂದೆ ಸಂದೀಪ್ ಕುಮಾರ್ ಅವರ ಪತ್ರ ನಿಮ್ಮ ಮುಂದೆ...

ಪ್ರೇಮಪೂರ್ವಕ ನಮಸ್ಕಾರಗಳು,
ಮೊನ್ನೆಯ ದಿನ ಭಾರತೀಯ ಜನತಾ ಪಕ್ಷದ ಪಾಲಿಗೆ ಅಷ್ಟೇನೂ ಆಶಾದಾಯಕವಾದ ದಿನ ಅಲ್ಲ. ಉಪಚುನಾವಣೆಯ ಫಲಿತಾಂಶ ಪಕ್ಷದ ವಿರುದ್ಧವಾಗಿ ಬಂದಿದೆ. ಪಕ್ಷದ ಸಂಘಟನೆಯಲ್ಲಿ ಮೂರು ದಶಕಗಳಿಗೂ ಹೆಚ್ಚಾಗಿ ದುಡಿದ ನಿಮಗೆ ಈ ರೀತಿಯ ಹಿನ್ನಡೆ ಹೊಸದು ಅಲ್ಲ, ತಿಳಿಯದೆ ಇರುವುದೂ ಅಲ್ಲ, ರಾಜಕೀಯ ಜೀವನದಲ್ಲಿ ಇದು ಸಾಮಾನ್ಯ ಮತ್ತು ಸ್ವಾಭಾವಿಕ ಕೂಡ.

ಸಂಘಟನೆಯ ಮೇಲೆ ವಿಶ್ವಾಸವಿಡಿ

ಸಂಘಟನೆಯ ಮೇಲೆ ವಿಶ್ವಾಸವಿಡಿ

ಬಿಜೆಪಿ ಪಕ್ಷದ ಅಧಿಕೃತ ಮುಖ್ಯಮಂತ್ರಿ ಅಭ್ಯರ್ಥಿ ನೀವು ಆದರೆ ನಿಮಗೆ ಇನ್ನು ಅದರ ಬಗ್ಗೆ ನಂಬಿಕೆ ಬಂದ ಹಾಗೆ ಇಲ್ಲ. ಇನ್ನೂ ಕೂಡಾ ಪಕ್ಷದ ಇತರ ನಾಯಕರು ಮುಖ್ಯಮಂತ್ರಿಗಳಾಗಬಹುದು ಎಂಬ ಭಯ ನಿಮ್ಮನ್ನು ಬಿಟ್ಟಿಲ್ಲ ಎಂದು ತೋರುತ್ತದೆ. ಈ ಭಯವನ್ನು ಬಿಡಿ. ಇತ್ತೀಚಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ವ್ಯಕ್ತಿ ನೀವೊಬ್ಬರೆ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ, ಸಂಘಟನೆಯ ಮೇಲೆ ವಿಶ್ವಾಸವಿಡಿ.

ಮೋದಿ ಪ್ರಧಾನಿ ಅಭ್ಯರ್ಥಿ ಆಗಿ ಘೋಷಣೆ

ಮೋದಿ ಪ್ರಧಾನಿ ಅಭ್ಯರ್ಥಿ ಆಗಿ ಘೋಷಣೆ

2014ರ ಚುನಾವಣೆಯ ಉದಾಹರಣೆ ತೆಗೆದುಕೊಳ್ಳಿ, ಪ್ರಧಾನಿ ಅಭ್ಯರ್ಥಿ ಆಗಿ ಘೋಷಣೆ ಅದ ಮೇಲೆ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಸಂಘಟನೆ ತೋರಿಸಿದ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಹೊರತಾಗಿ, ಇವನೇ ಅಭ್ಯರ್ಥಿ ಆಗಬೇಕು, ಅವನೇ ಅಭ್ಯರ್ಥಿ ಆಗಬೇಕು ಎಂದು ಚಂಡಿ ಹಿಡಿಯಲಿಲ್ಲ. ತನಗೆ ಜೈಕಾರ ಹಾಕುವವರೆ ಸುತ್ತ ಇರಬೇಕು, ಪಕ್ಷದ ಜವಾಬ್ದಾರಿ ಹೊರಬೇಕು ಎಂದು ಕೂಗಾಡಿ, ಏಕಸ್ವಾಮ್ಯ ಬೇಕೆಂದು ರಂಪ ಮಾಡಲಿಲ್ಲ. ಇದು ಸಂಘಟನೆಗೆ ಅವರು ಕೊಟ್ಟ ಗೌರವ, ಅದು ಇವತ್ತು ಅವರನ್ನು ಯಾವ ಎತ್ತರಕ್ಕೆ ತಂದು ನಿಲ್ಲಿಸಿದೆ ನೋಡಿ. ಅದು ನಿಮಗ್ಯಾಕೆ ಮಾದರಿ ಆಗಬಾರದು?

ನಿಷ್ಠಾವಂತರಿಗೆ ಬೆಲೆ ಕೊಡಿ

ನಿಷ್ಠಾವಂತರಿಗೆ ಬೆಲೆ ಕೊಡಿ

ಮೋದಿಯವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಅದ ಮೇಲೆ ಅವರ ಕಾರ್ಯ ವ್ಯಾಪ್ತಿಯನ್ನು ಗಮನಿಸಿ, ಎಲ್ಲೂ ಕೂಡ ಅಪನಂಬಿಕೆಯಿಂದ, ಭಟ್ಟಂಗಿಗಳನ್ನು ಕಟ್ಟಿಕೊಂಡು ಓಡಾಡಲಿಲ್ಲ. ಸಭೆಯಲ್ಲಿ ಮಾತನಾಡಬೇಕಾದ ವಿಷಯದಿಂದ ಹಿಡಿದು, ತನ್ನ ಜೊತೆ ವೇದಿಕೆಯಲ್ಲಿ, ತನ್ನ ಸುತ್ತ ಮುತ್ತ ಯಾರಿರಬೇಕು ಅನ್ನುವ ಪ್ರತಿ ಸೂಕ್ಷ್ಮ ವಿಚಾರದವರೆಗೂ, ಅದರ ನಿರ್ಧಾರವನ್ನು ಸಂಘಟನೆಗೆ ಬಿಟ್ಟರು. ಯಾವತ್ತೂ ತನ್ನ ಸುತ್ತ ಮುತ್ತ ಒಂದಿಬ್ಬರು ನಾಯಕರ ಕೋಟೆ ಕಟ್ಟಿ ಕೊಳ್ಳಲಿಲ್ಲ. ಅದರ ಫಲಶ್ರುತಿ ಇಂದು ನಮ್ಮ ಮುಂದಿದೆ. ಇದನ್ನು ಯಾಕೆ ನೀವೂ ರೂಪಿಸಿಕೊಳ್ಳಬಾರದು?

ರಾಜಕೀಯ ನಡೆಸುವ ರೀತಿ ಬದಲಾಗಿದೆ.

ರಾಜಕೀಯ ನಡೆಸುವ ರೀತಿ ಬದಲಾಗಿದೆ.

ಯಡಿಯೂರಪ್ಪ ಅವರೆ, ನೀವೊಬ್ಬ ಅದ್ಭುತ ಸಂಘಟಕರಾಗಿದ್ದೀರಿ ಅನ್ನುವುದರ ಬಗ್ಗೆ ಯಾವ ಸಂಶಯವೂ ಇಲ್ಲ. ಪಕ್ಷದ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಮಹತ್ತರವಾದದ್ದು. ಆದರೆ, ಇವತ್ತು ರಾಜಕೀಯದ ಪರಿಸ್ಥಿತಿ, ರಾಜಕೀಯ ನಡೆಸುವ ರೀತಿ ಬದಲಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ತಾವು ಸಂಪೂರ್ಣವಾಗಿ ವಿಫಲರಾಗಿದ್ದೀರಿ. ನೀವು ವಿಫಲರಾಗಿದ್ದೀರಿ ಅನ್ನುವುದಕ್ಕಿಂತ ಹೆಚ್ಚಾಗಿ ನಿಮ್ಮ ಸುತ್ತ ನೀವು ನಿರ್ಮಿಸಿಕೊಂಡಿರುವ ಕೋಟೆ ನಿಮ್ಮನ್ನು ಆ ಬಂಧನದಲ್ಲಿ ಇರಿಸಿದೆ ಎಂದರೆ ಹೆಚ್ಚು ಸೂಕ್ತವೇನೋ.

ಅತ್ಯುತ್ತಮ ಸಂಘಟಕನ ಕೈಗೆ ನೀಡಿ

ಅತ್ಯುತ್ತಮ ಸಂಘಟಕನ ಕೈಗೆ ನೀಡಿ

ದಯವಿಟ್ಟು ನೀವು ಕರ್ನಾಟಕದ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಗಿ ಕೆಲಸ ಮಾಡಿ. ಸಂಘಟನೆಯ ಕೆಲಸವನ್ನು ಒಬ್ಬ ಅತ್ಯುತ್ತಮ ಸಂಘಟಕನ ಕೈಗೆ ನೀಡಿ. ಪಕ್ಷದಲ್ಲಿ ಉತ್ತಮ ಸಂಘಟಕರಿದ್ದಾರೆ, ಅವರನ್ನು ಗುರುತಿಸಿ ಅವರಿಗೆ ಕೊಡಬೇಕಾದ ಜವಾಬ್ದಾರಿ ಕೊಡಿ. ನಿಮಗೆ ಈಗ ಬೇಕಾಗಿರುವುದು ಸೋನಿಯಾ ಗಾಂಧಿಯವರ ಸುತ್ತ ಮುತ್ತ ಇದಂತಹ ಭಟ್ಟಂಗಿಗಳ ಗುಂಪಲ್ಲ, ಮೋದಿಯವರ ಜೊತೆ ನಿಂತಂತಹ ಅಮಿತ್ ಶಾ ಅಂತಹ ಒಬ್ಬ ಚಾಣಕ್ಯ ಮತ್ತು ಚಾಣಾಕ್ಷ. ಇದನ್ನು ಆದಷ್ಟು ಬೇಗ ಅರಿತುಕೊಂಡು ನಿಮಗೊಬ್ಬ ಅಮಿತ್ ಶಾನನ್ನು ರೂಪಿಸಿಕೊಳ್ಳಿ.

ಕಾಂಗ್ರೆಸ್ ಪಕ್ಷಕ್ಕೆ ಈ ಬದಲಾವಣೆ ಅರ್ಥ ಆಗಿಲ್ಲ

ಕಾಂಗ್ರೆಸ್ ಪಕ್ಷಕ್ಕೆ ಈ ಬದಲಾವಣೆ ಅರ್ಥ ಆಗಿಲ್ಲ

ದೇಶದಲ್ಲಿ ಚುನಾವಣೆಯನ್ನು ಎದುರಿಸುವ ರೀತಿ ಇಂದು ಬದಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ಬದಲಾವಣೆ ಅರ್ಥ ಆಗಿಲ್ಲ, ಇನ್ನೂ ಕೆಲವು ವರ್ಷಗಳೆ ಬೇಕು ಈ ಪಕ್ಷಕ್ಕೆ ಬದಲಾದ ಚುನಾವಣಾ ಹೋರಾಟದ ನೆಲೆಯನ್ನು ಅರ್ಥ ಮಾಡಿಕೊಳ್ಳಲಿಕ್ಕೆ. ದುರಂತ ಎಂದರೆ ಈ ಬದಲಾದ ನೆಲೆ ನಿಮಗೆ ಅರ್ಥ ಆಗದೆ ಇರುವುದು. ಜಾತಿ, ಹಣ, ದರ್ಪ ಇದರ ಕಾಲ ಮುಗಿಯಿತು. ಚುನಾವಣೆಯನ್ನು ಅಭಿವೃದ್ಧಿಯ ನೆಲೆಯಲ್ಲಿ, ಸಬ್ಕಾ ಸಾಥ್ ಸಬ್ಕ ವಿಕಾಸ್ ಅನ್ನುವ ನೆಲೆಯಲ್ಲಿ ನಡೆಸಲಾಗುತ್ತಿದೆ. ಕರ್ನಾಟಕದ ಜನರೂ ಬಿಜೆಪಿಯಿಂದ ಅದನ್ನೆ ನಿರೀಕ್ಷೆ ಮಾಡುತ್ತಿದ್ದಾರೆ

ದೂರದರ್ಶಿತ್ವ ಉಳ್ಳ ಒಬ್ಬ ಸಂಘಟಕ

ದೂರದರ್ಶಿತ್ವ ಉಳ್ಳ ಒಬ್ಬ ಸಂಘಟಕ

ಈ ಜಾತಿ ಅನ್ನುವ ಲೆಕ್ಕಾಚಾರದಲ್ಲಿ ಅಲ್ಲ ಚುನಾವಣೆಯನ್ನು ಎದುರಿಸಲು ನಿಮ್ಮ ಸುತ್ತ ಮುತ್ತ ಇರುವ ಯಾವ ಒಬ್ಬನಿಗೂ ಸಾಧ್ಯವಿಲ್ಲ, ಅಂಥವರನ್ನು ಎಷ್ಟು ದೂರ ಇಟ್ಟು ಕೆಲಸ ಮಾಡುತ್ತಿರೋ ಅಷ್ಟು ಉತ್ತಮ ನಿಮಗೆ ಮತ್ತು ಬಿಜೆಪಿಗೆ.

ಅದಕೊಬ್ಬ ರಾಜಕೀಯ ಚಿಂತಕ, ಮುತ್ಸದ್ಧಿ, ದೂರದರ್ಶಿತ್ವ ಉಳ್ಳ ಒಬ್ಬ ಸಂಘಟಕ ಬೇಕು. ನಿಮಗೊಬ್ಬ, ನಿಮ್ಮ ಜೊತೆ ನಿಲ್ಲುವ, ಕಾರ್ಯಕರ್ತರ ನಾಡಿ ಮಿಡಿತವನ್ನು ಅರಿತ, ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನಿಲ್ಲಿಸಿ ಅಮಿತ ಸಂತೋಷವನ್ನು ಹೊಂದುವಂತಹ ಕರ್ನಾಟಕದ ಅಮಿತ್ ಶಾ ಬೇಕು. ಇನ್ನೂ ತಡವಾಗಿಲ್ಲ, ನೀವು ಸಂಘಟನೆಯನ್ನು ಗೌರವಿಸಿ, ಸಂಘಟನೆ ನಿಮ್ಮನ್ನು ಕಾಪಾಡುತ್ತದೆ.

ಆತ್ಮೀಯ ಸ್ನೇಹಿತ, ಸಂಸದ ಪ್ರತಾಪ ಹೇಳಿದ ರೀತಿಯಲ್ಲಿ ಇದು ಆಳಿಗೊಂದು ಕಲ್ಲು ಅಲ್ಲ ಬದಲಾಗಿ ಇದು ನಿಮ್ಮ ಸುತ್ತ ಮುತ್ತ ಇರುವ, ಆದರೆ ನಿಮ್ಮನ್ನು ಮಾತನಾಡಿಸಲು ಸಾಧ್ಯವಿಲ್ಲದ, ಹಿತೈಷಿಗಳ ಪ್ರತಿನಿಧಿಯಾಗಿ ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ.

Open letter to BS Yeddyurappa project yourself as BJP CM Candidate
English summary
Open letter to BS Yeddyurappa by a citizen states that BSY should project himself as BJP CM Candidate in upcoming assembly election. BSY also needs a leader like Amith Shah to counter Congress and other parties strategy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X