ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?

|
Google Oneindia Kannada News

ಬೆಂಗಳೂರು, ಜು.02 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಹಣದ ಬೇಡಿಕೆ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸರ್ಕಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳವನ್ನು ರಚನೆ ಮಾಡಿದೆ. ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ಆರೋಪವಾಗಿದೆ.

ಲೋಕಾಯುಕ್ತದಲ್ಲಿ ನಡೆದ ಈ ಹಗರಣದ ಬಗ್ಗೆ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ತನಿಖೆ ನಡೆಸುತ್ತಿದ್ದರು. ಆದರೆ, ಅಶ್ವಿನ್ ರಾವ್ ಹೈಕೋರ್ಟ್ ಮೆಟ್ಟಿಲೇರಿ ತನಿಖೆಗೆ ತಡೆಯಾಜ್ಞೆ ತಂದಿದ್ದಾರೆ. ಎಸ್‌ಐಟಿ ತನಿಖೆ ನಡೆಸಲಿ ಎಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. [ಲೋಕಾಯುಕ್ತ ಹಗರಣ : ಯಾರು, ಏನು ಹೇಳಿದರು?]

ಪ್ರತಿಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಲೋಕಾಯುಕ್ತ ನ್ಯಾ.ಭಾಸ್ಕರರಾವ್ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಆದರೆ, ಸದ್ಯಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. [ಲೋಕಾಯುಕ್ತದಲ್ಲೇ ಭ್ರಷ್ಟಾಚಾರ, ಮುಂದೇನು?]

2015ರ ಮೇ 11ರಂದು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಬರೆದ ಪತ್ರದಿಂದ ಈ ಹಗರಣ ಬೆಳಕಿಗೆ ಬಂದಿದೆ. ಸರ್ಕಾರಿ ಅಧಿಕಾರಿಯೊಬ್ಬರ ಮನೆ ಮೇಲೆ ನಡೆಯುವ ದಾಳಿ ತಪ್ಪಿಸಲು 1 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬುದು ಆರೋಪವಾಗಿದೆ. ಹಗರಣದ ವಿವರಗಳು ಚಿತ್ರಗಳಲ್ಲಿ

ಲೋಕಾಯುಕ್ತ ಕಚೇರಿಯಲ್ಲಿ ಏನಾಗಿತ್ತು?

ಲೋಕಾಯುಕ್ತ ಕಚೇರಿಯಲ್ಲಿ ಏನಾಗಿತ್ತು?

'ನಿಮ್ಮ ಮೇಲೆ ದಾಳಿ ನಡೆಯಲಿದೆ, ದಾಖಲೆಗಳನ್ನು ಸಂಗ್ರಹಣೆ ಮಾಡಲಾಗಿದೆ. ದಾಳಿ ತಪ್ಪಿಸಬೇಕಾದರೆ 1 ಕೋಟಿ ಕೊಡಿ' ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಎಂಬುವವರಿಂದ ಕೃಷ್ಣರಾವ್‌ ಎಂಬುವವರು ಹಣ ಕೇಳಿದ್ದರು. ಕೃಷ್ಣರಾವ್ ಹಣ ಕೇಳಿದ್ದಾರೆ ಎಂದು ಕೃಷ್ಣಮೂರ್ತಿ ಅವರು ಸೋನಿಯಾ ನಾರಂಗ್‌ ಅವರ ಬಳಿ ಮೌಖಿಕವಾಗಿ ಹೇಳಿಕೊಂಡಿದ್ದರು. ಇದರಿಂದ ಪ್ರಕರಣ ಬಹಿರಂಗಗೊಂಡಿತ್ತು.

ರಿಜಿಸ್ಟ್ರಾರ್‌ಗೆ ಪತ್ರ ಬರೆದ ಸೋನಿಯಾ ನಾರಂಗ್

ರಿಜಿಸ್ಟ್ರಾರ್‌ಗೆ ಪತ್ರ ಬರೆದ ಸೋನಿಯಾ ನಾರಂಗ್

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು ಕೃಷ್ಣಮೂರ್ತಿ ಅವರ ಹೇಳಿಕೆ ಆಧರಿಸಿ ಲೋಕಾಯುಕ್ತ ರಿಜಿಸ್ಟ್ರಾರ್ ಅವರಿಗೆ 2015ರ ಮೇ 11ರಂದು ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಆದರೆ, ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಅವರು ಪ್ರಕರಣದ ಬಗ್ಗೆ ಮೌನವಹಿಸಿದ್ದರು.

ತನಿಖೆ ನಡೆಸುವಂತೆ ಸೂಚನೆ ನೀಡಿದ ಉಪ ಲೋಕಾಯುಕ್ತರು

ತನಿಖೆ ನಡೆಸುವಂತೆ ಸೂಚನೆ ನೀಡಿದ ಉಪ ಲೋಕಾಯುಕ್ತರು

ಈ ಪ್ರಕರಣ ಬೆಳಕಿಗೆ ಬಂದ ಸುಮಾರು ಒಂದೂವರೆ ತಿಂಗಳ ನಂತರ ಉಪ ಲೋಕಾಯುಕ್ತ ಸುಭಾಷ್‌ ಬಿ.ಅಡಿ ಅವರು ಈ ಬಗ್ಗೆ ತನಿಖೆ ನಡೆಸುವಂತೆ ಸೋನಿಯಾ ನಾರಂಗ್ ಅವರಿಗೆ ಸೂಚನೆ ನೀಡಿದ್ದರು. ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರು ಈ ತನಿಖೆಗೆ ತಡೆ ನೀಡಿದ್ದರು ಮತ್ತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಲೋಕಾಯುಕ್ತರು ಹೇಳುವುದೇನು?

ಲೋಕಾಯುಕ್ತರು ಹೇಳುವುದೇನು?

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ವೈ.ಭಾಸ್ಕರರಾವ್ ಅವರು, ತಮ್ಮ ಮೇಲಿನ ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ನನ್ನ ಮಗ ಅಶ್ವಿನ್ ರಾವ್ ಹೆಸರನ್ನು ಅನಗತ್ಯವಾಗಿ ತರಲಾಗುತ್ತಿದೆ. ಈ ಪ್ರಕರಣಕ್ಕೂ ನನ್ನ ಮಗನಿಗೂ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದ್ದರು. ಕೃಷ್ಣ ರಾವ್ ಯಾರು? ಎಂಬುದು ನನಗೆ ತಿಳಿದಿಲ್ಲ. ಕೃಷ್ಣರಾವ್ ನನ್ನ ಸಹಾಯಕರಲ್ಲ. ಕೃಷ್ಣರಾವ್ ಅವರ ಜೊತೆ ನಾನು ಕೆಲಸ ಮಾಡಿಲ್ಲ ಎಂದು ಹೇಳಿದ್ದರು.

ಸರ್ಕಾರದಿಂದ ಎಸ್‌ಐಟಿ ರಚನೆ

ಸರ್ಕಾರದಿಂದ ಎಸ್‌ಐಟಿ ರಚನೆ

ಲೋಕಾಯುಕ್ತ ಪತ್ರ ಆಧರಿಸಿ ಪ್ರಕರಣದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ದಳವನ್ನು ರಚನೆ ಮಾಡಿದೆ. ಕಮಲ್ ಪಂತ್ ಅವರು ತನಿಖಾದಳದ ಮುಖ್ಯಸ್ಥರಾಗಿದ್ದಾರೆ. ಆದರೆ, ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸಿಬಿಐ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿವೆ.

ಅಶ್ವಿನ್ ರಾವ್ ವಿರುದ್ಧ ಎಫ್‌ಐಆರ್

ಅಶ್ವಿನ್ ರಾವ್ ವಿರುದ್ಧ ಎಫ್‌ಐಆರ್

ಉಪ ಲೋಕಾಯುಕ್ತರ ಆದೇಶದ ಅನ್ವಯ ಪ್ರಕರಣದ ತನಿಖೆ ಆರಂಭಿಸಿದ್ದ ಎಸ್ಪಿ ಸೋನಿಯಾ ನಾರಂಗ್ ಅವರು ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13ರಡಿ ಐಪಿಸಿ ಸೆಕ್ಷನ್ 384, 419, 120 (ಬಿ) ಅನ್ವಯ ಅಶ್ವಿನ್ ರಾವ್ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಎಸ್‌ಐಟಿ ತನಿಖೆಗೆ ಹೈಕೋರ್ಟ್ ಒಪ್ಪಿಗೆ

ಎಸ್‌ಐಟಿ ತನಿಖೆಗೆ ಹೈಕೋರ್ಟ್ ಒಪ್ಪಿಗೆ

ಸೋನಿಯಾ ನಾರಂಗ್ ನಡೆಸುತ್ತಿದ್ದ ತನಿಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ತನಿಖೆಗೆ ತಡೆ ನೀಡುವಂತೆ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಎನ್. ಕುಮಾರ್ ಅವರ ಪೀಠ ತನಿಖೆಗೆ ತಡೆಯಾಜ್ಞೆ ನೀಡಿದ್ದು, ಸರ್ಕಾರ ಹಗರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚನೆ ಮಾಡಿದೆ. ಎಸ್ಐಟಿಯೇ ತನಿಖೆ ನಡೆಸಲಿ ಎಂದು ಆದೇಶ ನೀಡಿದೆ.

English summary
Karnataka government constituted a Special Investigation Team (SIT) to conduct a probe on corruption allegations in Karnataka Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X