ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ, ಹಳ್ಳಿಗರ ಪ್ರತಿಜ್ಞೆ

By Prasad
|
Google Oneindia Kannada News

ಚಿಕ್ಕಬಳ್ಳಾಪುರ, ಏ. 24 : ನೀರು ಕೊಡದ ಸರಕಾರದ ನಿರಾಸಕ್ತಿಯಿಂದ ಬೇಸತ್ತಿರುವ ದಕ್ಷಿಣ ಕರ್ನಾಟಕ ಬಯಲು ಸೀಮೆಯ ಜನರು, ಸದ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಮುಂದೊಂದು ದಿನ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಿದರೂ ಅಚ್ಚರಿಯಿಲ್ಲ.

ನೀರಿನ ಬವಣೆಯನ್ನು ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರದ ಕೆಲ ಭಾಗಗಳ ಜನರು ಈ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸಬೇಕೆಂದು ಹೋರಾಟ ನಡೆಸಿವೆ. ಇದಕ್ಕೆ ಯುವಶಕ್ತಿ ಸಂಘಟನೆ ಕೈಜೋಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲೆಂದು ಶುಕ್ರವಾರ, ಏ. 24ರಂದು 11 ಗಂಟೆಗೆ ಸಭೆ ಕರೆಯಲಾಗಿತ್ತು. ಎಲ್ಲ ಹೋರಾಟಗಾರರು, ರೈತರು, ಸಾರ್ವಜನಿಕರು ಸಭೆ ಸೇರಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. [ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!]

No water : Villagers decide to boycott gram panchayat election

ಶಿಡ್ಲಘಟ್ಟ ತಾಲೂಕಿನ ಈ-ತಿಮ್ಮಸಂದ್ರ ಗ್ರಾಮ ಪಂಚಾಯಿತಿಯ ಎಲ್ಲಾ ರಾಜಕೀಯ ಮುಖಂಡರು ಮತ್ತು ನಾಗರಿಕರು ಕೂಡ "ಶಾಶ್ವತ ನೀರಾವರಿ ಯೋಜನೆ, ಪ್ರತ್ಯೇಕ ನೀರಾವರಿ ನಿಗಮ ಹಾಗು ಪ್ರಗತಿ ಪರಿಶೀಲನ ಸಮಿತಿ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಿ ಕಾರ್ಯರೂಪಕ್ಕೆ ತರುವವರೆಗೂ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಾಮಪತ್ರ ಸಹ ಹಾಕದೆ ಸಾಮೂಹಿಕವಾಗಿ ಬಹಿಷ್ಕರಿಸುತ್ತೇವೆ" ಎಂದು ಪ್ರತಿಜ್ಞೆ ಮಾಡಿದರು.

ಬಯಲು ಸೀಮೆಗೆ ಮಾದರಿಯಾದ ಈ-ತಿಮ್ಮಸಂದ್ರದ ಎಲ್ಲಾ ಮುಖಂಡರಿಗೆ ಮತ್ತು ನಾಗರಿಕರಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿಯ ಪರವಾಗಿ ಅನಂತ ಧನ್ಯವಾದಗಳು. ನಿಮ್ಮ ಈ ಸ್ವಾರ್ಥರಹಿತ ನಡೆ ಕಿಚ್ಚಿನಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹರಡಿ ಬಯಲು ಸೀಮೆಯ ಎಲ್ಲಾ ನೀರಾವರಿ ಬೇಡಿಕೆಗಳು ಈಡೇರಲೆಂದು ಆಶಿಸುತ್ತೇವೆ ಎಂದು ಹೋರಾಟಗಾರರು ಹೇಳಿದ್ದಾರೆ.

ಈ ನಿರ್ಧಾರಕ್ಕೆ ಪ್ರಮುಖ ಕಾರಣರಾದ ಪಿ.ಶಿವಾರೆಡ್ಡಿಯವರಿಗೆ, ಎಸ್ ಶ್ರೀನಾಥ್, ಎಂ ವಿ ದೇವರಾಜ್, ಎಂ ಡಿ ರಾಜೇಶ್, ಎಚ್ ಪಿ ಕೃಷ್ಣಾರೆಡ್ಡಿ, ಡಾ ಸಮಿಉಲ್ಲರವರಿಗೆ ಧನ್ಯವಾದಗಳು ಎಂಬ ಸಂದೇಶವನ್ನು ಫೇಸ್ ಬುಕ್ಕಿನಲ್ಲಿ ಅವರು ಸಾರಿದ್ದಾರೆ. ಇನ್ನಾದರೂ ದಪ್ಪ ಚರ್ಮದ ಶಾಸಕರಿಗೆ, ಅಧಿಕಾರಿಗಳು ಈ ಹಳ್ಳಿಗರ ಮೊರೆ ಕೇಳುವುದೆ? [ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಕ್ರಾಂತಿ]

ಸಚಿವರ ಮಾತಿಗೆ ಆಕ್ರೋಶ : ಎತ್ತಿನಹೊಳೆ ನೀರು ಕೋಲಾರ, ಚಿಕ್ಕಬಳ್ಳಾಪುರ ತಲುಪುವುದು ಅನುಮಾನ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಇತ್ತೀಚೆಗೆ ನೀಡಿರುವ ಹೇಳಿಕೆಗೆ ಕೂಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟ ಅನಗತ್ಯ ಎಂದಿದ್ದ ಭೈರೇಗೌಡರ ಮಾತಿಗೆ ತಿರುಗೇಟು ನೀಡಿರುವ ಅವರು, "ಸಮಾಜದ ಒಳಿತಿಗಾಗಿ ಮಾಡುವ ಹೋರಾಟ ಅನಗತ್ಯ ಎಂದೂ ಆಗಲಾಗದು, ಮುಂದಿನ ದಿನಗಳಲ್ಲಿ ಪ್ರತಿಫಲ ಅನುಭವಿಸುತ್ತೀರಿ" ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ಬೇಡಿಕೆಗಳು

1. ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ, ಬೆ೦ಗಳೂರು (ಗ್ರಾ೦ ಮತ್ತು ನಗರ), ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ಪ್ರತ್ಯೇಕ ನೀರಾವರಿ ನಿಗಮದ ಸ್ಥಾಪನೆ.

2. ಈ ಜಿಲ್ಲೆಗಳಿಗೆ ಅಗತ್ಯವಾದ ನೀರು ತರುವ ಎಲ್ಲಾ ಯೋಜನೆಗಳನ್ನು, ನಿಗಮದ ವ್ಯಾಪ್ತಿಗೆ ಒಳಪಡಿಸಬೇಕು.

3. ಯುದ್ಧೋಪಾದಿಯಲ್ಲಿ ಈ ಯೋಜನೆಗಳ ಸಾಧ್ಯತಾ ವರದಿ, ಯೋಜನಾ ವರದಿಗಳನ್ನು ಸಿದ್ಧಪಡಿಸಿ, ಕಾಲಮಿತಿಯಲ್ಲಿ ನೀರನ್ನು ತರಲು ಬೇಕಾದ ಹಣ ಬಿಡುಗಡೆ.

4. ನಿಗಮದ ಕೆಲಸವನ್ನು ಪ್ರತಿ ತಿ೦ಗಳು ಪರಿಶೀಲಿಸಲು ಜನಪ್ರತಿನಿಧಿಗಳು, ತಜ್ಞರು, ಹೋರಾಟಗಾರರು ಮತ್ತು ಅಧಿಕಾರಿಗಳನ್ನೊಳಗೊ೦ಡ ಸಮಿತಿ ರಚಿಸಿ, ಪ್ರತಿ ತಿ೦ಗಳ ಪ್ರಗತಿಯನ್ನು ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆ.

ಹೋರಾಟದ ಮುಂದಿನ ರೂಪುರೇಷೆ

ಇಡೀ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ೦ಪೂರ್ಣವಾಗಿ ಗ್ರಾಮ ಪ೦ಚಾಯ್ತಿ ಚುನಾವಣೆಗಳನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ಬಯಲು ಸೀಮೆಯ ವಿದ್ಯಾವ೦ತ ಯುವಜನತೆಯ ಸ೦ಘಟನೆಯಾದ ಯುವ ಶಕ್ತಿ ಪ್ರತಿ ಹಳ್ಳಿ, ಪ೦ಚಾಯ್ತಿ, ಹೋಬಳಿ ಹಾಗು ತಾಲ್ಲೂಕು ಮಟ್ಟದ ನಾಯಕರ ಮನವೊಲಿಸುವಲ್ಲಿ ನಿರತವಾಗಿದ್ದು. ಮು೦ದಿನ ಒ೦ದೆರಡು ವಾರಗಳಲ್ಲಿ ಹಲವು ಪ೦ಚಾಯ್ತಿಯ ಜನ ಬಹಿಷ್ಕಾರದ ನಿರ್ಧಾರ ಹೊರ ಹಾಕಲಿದ್ದಾರೆ.

English summary
Villagers of Chikkaballapur and Kolar districts have decided to boycott gram panchayat election for not providing water to the villages. The villagers have been asking for permanent solution to water scarcity in these bayalu seeme districts including Tumakuru and Ramnagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X