ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಆಡಳಿತದತ್ತ ಭಾರತ ಕೊಂಡೊಯ್ಯುತ್ತೇವೆ : ಮೋದಿ

|
Google Oneindia Kannada News

ಬೆಂಗಳೂರು, ಏ.3 : 'ಭಾರತದಲ್ಲಿ ಜನಸಂಖ್ಯೆಗಿಂತಲು ಹೆಚ್ಚು ಮೊಬೈಲ್ ಇದೆ. ನಾವು ಮೊಬೈಲ್ ಆಡಳಿತಕ್ಕೆ ಒತ್ತು ಕೊಡುತ್ತೇವೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕ ಸೇವೆ ನೀಡುತ್ತೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಸಂಜೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ 10 ಸಾವಿರಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಿ ಮೋದಿ ಕೇಂದ್ರ ಸರ್ಕಾರದ ಸಾಧನೆ, ಮುಂದಿನ ಗುರಿಯನ್ನು ತಿಳಿಸಿದರು.

Prime Minister Narendra Modi

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಆಗಮಿಸಿರುವ ವಿವಿಧ ರಾಜ್ಯಗಳ ಪಕ್ಷದ ನಾಯಕರು ನ್ಯಾಷನಲ್ ಕಾಲೇಜು ಮೈದಾನಕ್ಕೆ ಮೋದಿ ಭಾಷಣ ಕೇಳಲು ಬಂದಿದ್ದರು. ವೇದಿಕೆಯಲ್ಲಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಮುಖ್ಯಮಂತ್ರಿಗಳು, ಕರ್ನಾಟಕದ ಬಿಜೆಪಿ ನಾಯಕರಿದ್ದರು. [ಕಾರ್ಯಕಾರಿಣಿ ಸಭೆಯ ಮುಖ್ಯಾಂಶಗಳು]

ಮೊಬೈಲ್ ಆಡಳಿತ : ಬೆಂಗಳೂರು ಐಟಿಯಿಂದ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಡಿಜಿಟಲ್ ಇಂಡಿಯಾ ಮೂಲಕ ಕಳೆದ ಹಲವು ವರ್ಷಗಳಲ್ಲಿ ಆಗದೇ ಇರುವುದನ್ನು ನಾವು ಮಾಡಿ ತೋರಿಸುತ್ತೇವೆ. ಭಾರತದಲ್ಲಿ ಜನಸಂಖ್ಯೆಗಿಂತಲು ಹೆಚ್ಚು ಮೊಬೈಲ್ ಇದೆ. ನಾವು ಮೊಬೈಲ್ ಆಡಳಿತಕ್ಕೆ ಒತ್ತು ಕೊಡುತ್ತೇವೆ ಎಂದು ಮೋದಿ ಹೇಳಿದರು.

ಯುವ ಜನರ ಕೌಶಲ್ಯ : ನಾವು ಮಂಗಳಯಾನವನ್ನು ಅತಿ ಕಡಿಮೆ ಖರ್ಚಿನಲ್ಲಿ ಮಾಡಿದ್ದೇವೆ. ಇದು ನಮ್ಮ ಯುವಜನರ ಕೌಶಲ್ಯವಾಗಿದೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮೂಲಕ ಹೊಸ ಭಾರತ ನಿರ್ಮಾಣ ಮಾಡುತ್ತೇವೆ.

rally

ಕೃಷಿ ವಲಯಕ್ಕೆ ತಂತ್ರಜ್ಞಾನ ಬರಬೇಕು : ರೈತರು ಅಭಿವೃದ್ಧಿಯಾಗಬೇಕಾದರೆ ಗ್ರಾಮಗಳು ಅಭಿವೃದ್ಧಿಯಾಗಬೇಕು. ಕೃಷಿ ವಲಯಕ್ಕೆ ತಂತ್ರಜ್ಞಾನ ಬರಬೇಕು. ಬೆಂಗಳೂರು ನಗರದಲ್ಲಿ ವಾಸಿಸುವ ವ್ಯಕ್ತಿಗೆ ಸಿಗುವಂತೆ ವಿದ್ಯುತ್ ಸೌಲಭ್ಯ ಗ್ರಾಮಗಳಿಗೂ ದೊರೆಯಬೇಕು. ಗ್ರಾಮಸ್ಥರ ಮಧ್ಯೆ ಬದುಕಿ ಇಂದು ನಾನು ಈ ಸ್ಥಾನಕ್ಕೆ ಬಂದಿದ್ದೇನೆ.

ಮಣ್ಣಿಗೆ ಹೆಲ್ತ್ ಕಾರ್ಡ್ ಬೇಕು : ನನಗೆ ರೈತರ ಎಲ್ಲಾ ಕಷ್ಟಗಳು ಗೊತ್ತು. ರೈತರ ಜಮೀನು ರೋಗಮುಕ್ತವಾಗಬೇಕು. ಅದಕ್ಕಾಗಿ ಮಣ್ಣಿನ ಗುಣಮಟ್ಟ ಪರೀಕ್ಷೆ ಮಾಡಿಸುತ್ತಿದ್ದೇವೆ. ಮನುಷ್ಯನ ಹೆಲ್ತ್ ಕಾರ್ಡ್‍ನಂತೆ ಭಾರತದ ಭೂಮಿಯ ಹೆಲ್ತ್ ಕಾರ್ಡ್ ಸಿಗುತ್ತದೆ. ಉತ್ತಮ ಬೀಜ, ಬೇಕಾದಷ್ಟು ನೀರು ಸಿಕ್ಕರೆ ರೈತರು ಕಲ್ಲಿಗೆ ಏಟು ಹೊಡೆದು ಚಿನ್ನ ಮಾಡುತ್ತಾರೆ.

ರಾಜ್ಯಗಳ ಅನುದಾನ ಹೆಚ್ಚಿಸಿದ್ದೇವೆ : ಹಿಂದೆ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ 14,600 ಕೋಟಿ ಅನುದಾನ ಸಿಗುತ್ತಿತ್ತು. ನಾವು ಅದನ್ನು 24 ಸಾವಿರ ಕೋಟಿ ರೂ.ಗೆ ಏರಿಕೆ ಮಾಡಿದ್ದೇವೆ. ರಾಜ್ಯಗಳ ಅಭಿವೃದ್ಧಿಗಾಗಿ ದೆಹಲಿಯ ಖಜಾನೆ ಖಾಲಿ ಮಾಡಿದ್ದೇವೆ. ಮುಂದಿನ 5 ವರ್ಷಗಳಲ್ಲಿ ರಾಜ್ಯಗಳಿಗೆ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.

ಹಸಿರು ಕ್ರಾಂತಿ ಆಗಬೇಕು : ನಮ್ಮ ರಾಷ್ಟ್ರಧ್ವಜಲ್ಲಿ ಕೇಸರಿ, ಬಿಳಿ, ಹಸಿರು ಜೊತೆ ಅಶೋಕ ಚಕ್ರದಲ್ಲಿ ನೀಲಿ ಬಣ್ಣವಿದೆ. ಈ 4 ಬಣ್ಣಗಳ ಮೂಲಕ ನಾವು ಮತ್ತೊಮ್ಮೆ ಕ್ರಾಂತಿ ಮಾಡಬೇಕು. 2ನೇ ಹಸಿರು ಕ್ರಾಂತಿ, ಬಿಳಿಯಿಂದ ಕ್ಷೀರ ಕ್ರಾಂತಿ, ನೀಲಿ ಬಣ್ಣದ ಮೂಲಕ ಪೆಟ್ರೋಲಿಯಂ, ಸಾಗರ ವ್ಯಾಪರಗಳ ಮೂಲಕ ಕ್ರಾಂತಿ ಮಾಡಬೇಕು ಎಂದರು.

ಸಮಯ 7.30 : ಮೊದಲು ರೈಲ್ವೇ ಬಜೆಟ್ ಹೇಗೆ ಆಗುತ್ತಿತ್ತು ಗೊತ್ತೆ.? ಸಂಸದರು ಬೋಗಿ, ಮೂಲಸೌಕರ್ಯಕ್ಕಾಗಿ ಪತ್ರ ಬರೆಯುತ್ತಿದ್ದರು. ಸಂಸದರ ಪತ್ರವನ್ನು ಬಜೆಟ್ ಮಾಡುತ್ತಿದ್ದರು. ಆದರೆ, ನಾವು ಈ ರೀತಿ ಮಾಡಲಿಲ್ಲ. ಹೊಸ ರೀತಿಯಲ್ಲಿ ಬಜೆಟ್ ಮಂಡನೆ ಮಾಡಿದ್ದೇವೆ. 10 ವರ್ಷದಲ್ಲಿ ರೈಲ್ವೇ ಎಲ್ಲಿರಬಹುದು?, ಕಾರ್ಮಿಕರ ರಕ್ಷಣೆ ಹೇಗೆ ಮಾಡಬೇಕು? ಎಂಬ ದೂರದೃಷ್ಟಿಯ ಬಜೆಟ್ ಮಂಡನೆ ಮಾಡಿದ್ದೇವೆ.

ಸಮಯ 7.20 : ಕಡತಗಳು ಬಂದಾಗ ನಾನು ಅಧಿಕಾರಿಗಳಲ್ಲಿ ಕೇಳುತ್ತೇನೆ. 2007ರ ಫೈಲ್ 2014ರವರೆಗೆ ವಿಲೇವಾರಿಯಾಗಿಲ್ಲ. 5-7 ವರ್ಷಗಳ ಕಾಲ ಕಡತ ವಿಲೇವಾರಿಯಾಗಲೇ ಇಲ್ಲ. ನಾವು ತಪ್ಪನ್ನು ಸರಿ ಮಾಡಿದೆವು. ಈಗ ಭಾರತ ವೇಗವಾಗಿ ಮುಂದುವರಿಯುತ್ತಿದೆ.

modi6

ಸಮಯ 7.08 : ಕೇಂದ್ರ ಸರ್ಕಾರ ರಾಜ್ಯಗಳಿಗೆ ಪ್ರಾಮುಖ್ಯತೆ ನೀಡುತ್ತೇವೆ. ಆದರೆ, ಹಿಂದೆ ಹಾಗಿರಲಿಲ್ಲ. ಕೇಂದ್ರಕ್ಕೆ ರಾಜ್ಯಗಳು ಬೇಡಿಕೆ ನೀಡಬೇಕಿತ್ತು. ನಾವು ರಾಜ್ಯಗಳನ್ನು ಪಾಲುದಾರರನ್ನಾಗಿಸುತ್ತೇವೆ. ಒಟ್ಟಿಗೆ ಸೇರಿ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ದೆಹಲಿಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಎಲ್ಲ ರಾಜ್ಯಗಳು ಒಂದೇ.

ಸಮಯ 7 ಗಂಟೆ : ಪ್ರತಿಪಕ್ಷಗಳು ಕಪ್ಪುಹಣದ ಬಗ್ಗೆ ಲೇವಡಿ ಮಾಡುತ್ತಿದ್ದವು. ಕಪ್ಪುಹಣ ಎಲ್ಲಿ ಬಂತು? ಎಂದು ಕೇಳುತ್ತಿದ್ದವು. ನಾವು ಕಪ್ಪುಹಣವನ್ನು ವಾಪಸ್ ತರಲು ವಿದೇಶದ ನೆರವು ಕೇಳಿದ್ದೇವೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ನಾವು ಕಪ್ಪು ಹಣ ತರಲು ಎಸ್‍ಐಟಿ ರಚನೆ ಮಾಡಿದೆವು. ಸುಪ್ರೀಂಕೋರ್ಟ್ ಆದೇಶನೀಡಿದರೂ ಹಿಂದಿನ ಸರ್ಕಾರ ಎಸ್‍ಐಟಿ ರಚನೆ ಮಾಡಿರಲಿಲ್ಲ.

ಸಮಯ 6.50 : ನಮ್ಮ ಇವತ್ತಿನ ನಿರ್ಣಯಗಳಿಂದ ದೇಶ ಅಭಿವೃದ್ಧಿಯಾಗುತ್ತಿದೆ. ಹಗರಣ ವಿರುದ್ಧ ಹೋರಾಟ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಭ್ರಷ್ಟಾಚಾರ ನಡೆಯಲು ಬಿಡುವುದಿಲ್ಲ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ. ದೇಶದ ಭವಿಷ್ಯವನ್ನು ಬದಲಿಸುವುದು ನಮ್ಮ ಗುರಿ.

modi rally2

ಸಮಯ 6.40 : ಈ ದೇಶ ಹಿಂದುಳಿಯಲು ಕಾರಣಗಳೇ ಇಲ್ಲ, ನಾವು ಅಭಿವೃದ್ಧಿಯ ಹಾದಿಯಲ್ಲಿ ಹಿಂದುಳಿಯಲು ಕಾರಣಗಳೇ ಇಲ್ಲ ಎಂಬುದು ಹತ್ತು ತಿಂಗಳಿನಲ್ಲಿ ನಮಗೆ ತಿಳಿದಿದೆ. ಹಿಂದೆ ಪತ್ರಿಕೆ, ಟಿವಿಗಳಲ್ಲಿ ಅಭಿವೃದ್ಧಿಯ ವಿಷಯದ ಬದಲು ಹಗರಣ, ಭ್ರಷ್ಟಾಚಾರದ ಸುದ್ದಿಗಳು ಬರುತ್ತಿದ್ದವು, ಅಭಿವೃದ್ಧಿಯ ವಿಷಯಗಳು ಮರೆಯಾಗಿದ್ದವು.

ಸಮಯ 6.30 : ಸಮಾವೇಶಕ್ಕೆ ಮೋದಿ ಆಗಮಿಸಿದ್ದು ಭಾಷಣ ಆರಂಭಿಸಿದ್ದಾರೆ.

ಸಮಯ 6.22 : ಸಮಾವೇಶ ಉದ್ದೇಶಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತನಾಡುತ್ತಿದ್ದಾರೆ. ದೇಶದ ಜನರಿಗೆ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿತ್ತು. ಜನರು ಇದಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು.

ಸಮಯ 5.55 : ಸಮಾವೇಶ ಉದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ದೆಹಲಿ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದೆ. ಆದರೆ, ನಂತರ ಹಲವು ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ ಎಂದರು.

ಸಮಯ 5.30 : ಬಿಜೆಪಿಗೆ ಸೇರ್ಪಡೆ : ಯಾದಗಿರಿ ಜಿಲ್ಲೆಯ ಶಹಾಪುರದ ಕೆಜೆಪಿ ಶಾಸಕ ಗುರು ಪಾಟೀಲ್ ಹಲವಾರು ನಾಯಕರ ಜೊತೆ ಇಂದು ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಜಗದೀಶ್ ಶೆಟ್ಟರ್ ಭಾಷಣ : ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಒಂಭತ್ತು ತಿಂಗಳು ಕಳೆದಿದೆ. ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತಮ ಬೆಂಬಲ ಸಿಕ್ಕಿದೆ. ಕೇಂದ್ರದಲ್ಲಿ ಅಭಿವೃದ್ಧಿ ಪರವಾದ ಸರ್ಕಾರ ಎಂದಿಗೂ ಬಂದಿರಲಿಲ್ಲ. ಮೋದಿ ಅವರ ಜನಪ್ರಿಯತೆ ಇಂದು ವಿಶ್ವಮಟ್ಟದಲ್ಲಿ ಬೆಳೆದಿದೆ ಎಂದು ಪ್ರತಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಹೇಳಿದರು.

ಕರ್ನಾಟಕದಲ್ಲಿಯೂ ಒಂದು ಸರ್ಕಾರವಿದೆ. ಅಭಿವೃದ್ಧಿ ಚಟುವಟಿಕೆ ಇಲ್ಲದ ಸರ್ಕಾರ ಇದಾಗಿದ್ದು, ಸಿದ್ದರಾಮಯ್ಯ ಅವರು ನಿದ್ದೆರಾಮಯ್ಯ ಆಗಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯದ ಜೊತೆಗೆ ನಾಡಿನ ಜನರಿಗೆ ಸಾಲಭಾಗ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಶೆಟ್ಟರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಸಮಾವೇಶದ ವಿಡಿಯೋ ನೋಡಿ

English summary
Highlights of Prime Minister Narendra Modi rally at Basavanagudi, Bengaluru on April 3, Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X