ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿಎಂ ಆಗುವುದಕ್ಕಿಂತ 150 ಸ್ಥಾನ ಗೆಲ್ಲುವುದು ನನ್ನ ಗುರಿ': ಬಿಎಸ್ವೈ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 12: ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಏಪ್ರಿಲ್ 14(ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಜನ್ಮದಿನ) ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆಯುವ ಈ ಸಮಾರಂಭದ ನಂತರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕಕ್ಕಾಗಿ ಯಡಿಯೂರಪ್ಪ ಹಾಗೂ ಬಿಜೆಪಿ ಕಂಡ ಕನಸುಗಳ ಪಟ್ಟಿ ಅನಾವರಣಗೊಳ್ಳಲಿದೆ. ಇದಕ್ಕೂ ಮುನ್ನ ಯಡಿಯೂರಪ್ಪ ಅವರು ತಮ್ಮ ಗುರಿ, ಕನಸಿನ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ.[ಬೇವು ಉಂಡಿದ್ದ ಯಡಿಯೂರಪ್ಪಗೆ ಯುಗಾದಿ ಬೆಲ್ಲ]

ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದು ಬಂದಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ 1988, 1999 ಮತ್ತು 2007ರಲ್ಲಿ ಯಡಿಯೂರಪ್ಪ ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸಿದ್ದರು.[ಹೈಕಮಾಂಡ್ ನಾಯಕರು ಕೊಟ್ಟ ಸಂದೇಶ ಏನು?]

'ನನ್ನ ಗುರಿ ಕರ್ನಾಟಕದ ಮುಖ್ಯಮಂತ್ರಿಯಾಗುವುದಲ್ಲ, 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಬಲವನ್ನು 46ರಿಂದ 150ಕ್ಕೇರಿಸುವುದು ನನ್ನ ಗುರಿ ಎಂದಿದ್ದಾರೆ. ಬಿಜೆಪಿಯನ್ನು ತಳಮಟ್ಟದಿಂದ ಬಲವರ್ಧನೆ ಮಾಡಲು, ಪಕ್ಷದ ಸಂಘಟನೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಸಂದರ್ಶನ ಸಾರಾಂಶ ಇಲ್ಲಿದೆ...

2018 ಚುನಾವಣೆಗೂ ಮುನ್ನ ನಿಮ್ಮ ಮುಂದಿರುವ ಚಾಲೆಂಜ್?

2018 ಚುನಾವಣೆಗೂ ಮುನ್ನ ನಿಮ್ಮ ಮುಂದಿರುವ ಚಾಲೆಂಜ್?

ಕರ್ನಾಟಕದ 30 ಜಿಲ್ಲೆಗಳ ಪೈಕಿ 9 ಜಿಲ್ಲೆಗಳಲ್ಲಿ ಮಾತ್ರ ಬಿಜೆಪಿ ಪ್ರಭುತ್ವ ಹೊಂದಿದ್ದು, 46 ಜನ ಶಾಸಕರನ್ನು ಹೊಂದಿದ್ದೇವೆ. 13 ಜಿಲ್ಲೆಗಳಿಗೆ ತಲಾ ಒಬ್ಬರಂತೆ ಶಾಸಕರಿದ್ದಾರೆ. ಬೆಂಗಳೂರು ನಗರ ಹಾಗೂ ಬೆಳಗಾವಿ ಸೇರಿ 21 ಶಾಸಕರಿದ್ದಾರೆ. 46-47 ಜನ ಶಾಸಕರ ಸಂಖ್ಯೆಯನ್ನು 150 ಕ್ಕೇರಿಸುವುದು ನನ್ನ ಮುಂದಿರುವ ಚಾಲೆಂಜ್. ಈಗಾಗಲೇ ಶಾಸಕರುಗಳ ಜೊತೆ ಸಭೆ ಆರಂಭಿಸಿದ್ದೇನೆ.

ಮುಖ್ಯಮಂತ್ರಿ ಸ್ಥಾನ ಮೇಲೆ ನೀವು ಕಣ್ಣಿರಿಸಿಲ್ಲವೇ?

ಮುಖ್ಯಮಂತ್ರಿ ಸ್ಥಾನ ಮೇಲೆ ನೀವು ಕಣ್ಣಿರಿಸಿಲ್ಲವೇ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನನ್ನನ್ನು ಕರೆಸಿಕೊಂಡು ಕರ್ನಾಟಕಕ್ಕೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನೀವು ಪ್ರಚಾರ ಕೈಗೊಳ್ಳಬೇಕಿದೆ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕಲು ಯೋಜನೆ ಹಾಕಿಕೊಳ್ಳಿ ಎಂದರು. ಇದೆಲ್ಲವೂ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮುನ್ನ ನಡೆದ ಮಾತುಕತೆ. ಹೀಗಾಗಿ ಕೇಂದ್ರದ ನಾಯಕರ ಆದೇಶ ಪಾಲನೆ ನನ್ನ ಕರ್ತವ್ಯ.

ಸಿಎಂ ಸ್ಥಾನಕ್ಕೆ ಪೈಪೋಟಿ, ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣ?

ಸಿಎಂ ಸ್ಥಾನಕ್ಕೆ ಪೈಪೋಟಿ, ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣ?

ಕೇಂದ್ರದ ನಾಯಕರ ನಿರ್ಧಾರಕ್ಕೆ ನಾವು ಬದ್ಧರಾಗಿರಬೇಕು. ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡುವ ವಿಷಯದಲ್ಲಿ ಕರ್ನಾಟಕದಲ್ಲಿ ಯಾವುದೇ ಭಿನ್ನಮತ ಎದ್ದಿಲ್ಲ. ಎಲ್ಲಾ ಶಾಸಕರು, ಸಂಸದರು, ಪಕ್ಷದ ಕಾರ್ಯಕರ್ತರ ಬೆಂಬಲವಿದೆ. ಸಿಎಂ ಸ್ಥಾನಕ್ಕೆ ಪೈಪೋಟಿ ಎಂಬುದರಲ್ಲಿ ಅರ್ಥವಿಲ್ಲ.

ಲಿಂಗಾಯತ ನಾಯಕರಾಗಿ ಮುಂದುವರೆಯುತ್ತೀರಾ?

ಲಿಂಗಾಯತ ನಾಯಕರಾಗಿ ಮುಂದುವರೆಯುತ್ತೀರಾ?

ನಾನು ಹಲವು ಸಲ ಹೇಳಿದ್ದೇನೆ. ನಾನು ಲಿಂಗಾಯತ ಸಮುದಾಯದ ಮುಖಂಡ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ಎಲ್ಲಾ ಜಾತಿ, ಮತ, ಧರ್ಮಗಳ ನಾಯಕನಾಗಿ ಮುಂದುವರೆಯುತ್ತೇನೆ. ಸಿಎಂ ಆಗಿದ್ದಾಗ ಭೋವಿ, ಬಂಜರಾ, ವಾಲ್ಮಿಕಿ ಸಮುದಾಯಕ್ಕೆ ಆದ್ಯತೆ ನೀಡಿದ್ದೇನೆ. ಬಜೆಟ್ ನಲ್ಲಿ ಮುಸ್ಲಿಮರು, ಕ್ರೈಸ್ತರಿಗೂ ಸಮಪಾಲು ನೀಡಿದ್ದೇನೆ. ಲಿಂಗಾಯತ ಸಮುದಾಯಕ್ಕೆ ಎಂದಿಗೂ ನಾನು ಸೀಮಿತವಾಗಿಲ್ಲ.

ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನನ್ನ ವಿರುದ್ಧದ ಭೂ ಹಗರಣಗಳೆಲ್ಲವೂ ಡಿನೋಟಿಫಿಕೇಷನ್ ಗೆ ಸಂಬಂಧಿಸಿದ್ದು, ಡಿನೋಟಿಫೈ ಮಾಡುವುದು ರೈತರು ಹಾಗೂ ಬಡವರಿಗೆ ಪ್ರಯೋಜನವಾಗಲೆಂದು ಅಷ್ಟೆ. ಅವರಿಗೆ ನ್ಯಾಯ ಸಲ್ಲಿಸುವುದು ನನ್ನ ಗುರಿಯಾಗಿತ್ತು. ಆದರೆ, ಸ್ವಜನಪಕ್ಷಪಾತದ ಸುಳ್ಳು ಆರೋಪ ಮಾಡಲಾಯಿತು. ಇದಕ್ಕೆ ಹೈಕೋರ್ಟ್ ನೀಡಿರುವ ಆದೇಶ ತಕ್ಕ ಉತ್ತರ ನೀಡಿದೆ.

ಕಾಂಗ್ರೆಸ್ ಸರ್ಕಾರದ ಬಗ್ಗೆ ಹೇಳಿ

ಕಾಂಗ್ರೆಸ್ ಸರ್ಕಾರದ ಬಗ್ಗೆ ಹೇಳಿ

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಸಹದ್ಯೋಗಿಗಳು ದಪ್ಪ ಚರ್ಮದ ನಾಯಕರಾಗಿದ್ದಾರೆ. ಯಾರೊಬ್ಬರೂ ರಾಜ್ಯ ಪ್ರವಾಸ ಕೈಗೊಳ್ಳುತ್ತಿಲ್ಲ. ಜನರ ಕಷ್ಟಕ್ಕೆ ಕಾಂಗ್ರೆಸ್ ಸರ್ಕಾರ ಆಗಿ ಬರುತ್ತಿಲ್ಲ.

English summary
My mission is to win 150 plus Assembly seats in elections 2018. Former Karnataka CM ( BJP) and State BJP president designate B S Yeddyurappa carves a vision. BSY will sworn in as President on 14th April 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X