ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಕಳೆದುಕೊಂಡ ಮಕ್ಕಳ ಬದುಕಿಗೆ ಆಸರೆಯಾದ ಪಂಚವಾದ್ಯ

By ದೇವರಾಜ ನಾಯ್ಕ್, ಕಾರವಾರ
|
Google Oneindia Kannada News

ಕಾರವಾರ, ಜುಲೈ 19 : ಆಟ ಆಡುತ್ತಾ ದಿನ ಕಳೆಯುವ, ವಿದ್ಯೆ ಕಲಿಯುವ ವಯಸ್ಸಿನಲ್ಲಿ ಹವ್ಯಾಸಕ್ಕೆ ಕಲಿತ ಪಂಚ ವಾದ್ಯವೀಗ ಇವರ ಬದುಕು. ಸಂಸಾರದ ನೊಗ ಹೊತ್ತಿದ್ದ ಅಪ್ಪನ ಅಗಲಿಕೆಯ ಬಳಿಕ ಎದೆಗುಂದದೆ ಒಂದೆಡೆ ವಿದ್ಯಾಭ್ಯಾಸ, ಇನ್ನೊಂದೆಡೆ ಹೊಟ್ಟೆಪಾಡಿಗೆ ವಾದ್ಯ ನುಡಿಸುತ್ತಾ ಜೀವನದ ಕಠಿಣ ಹಾದಿಗಳನ್ನು ದಾಟುತ್ತಿರುವ ಇವರು ಎಂಥವರಿಗೂ ಆದರ್ಶ.

ಹೌದು, ಭಟ್ಕಳದ ಮಣ್ಕುಳಿಯ ದಿ.ಮಂಜುನಾಥ ದೇವಾಡಿಗ ಅವರ ನಾಲ್ವರು ಮಕ್ಕಳ ಸ್ವಾವಲಂಬೀ ಜೀವನದ ಚಿತ್ರಣವಿದು. ಅಕ್ಷತಾ (23), ಅಮೃತಾ (20), ಆದಿತ್ಯ (18), ಅರ್ಪಿತಾ (16) 'ತಂದೆ ಹಾಕಿದ ಆಲದ ಮರ' ಪಂಚ ವಾದ್ಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ.

Music gives these children bread and butter

ಮನೆಯ ಯಜಮಾನ ಮಂಜುನಾಥ ದೇವಾಡಿಗ ಅವರು 2011ರಲ್ಲಿ ದೈವಾಧೀನರಾದರು. ಅವರ ಅಗಲಿಕೆಯ ಬಳಿಕ ಜೀವನದ ನಿರ್ವಹಣೆ ಕಷ್ಟಸಾಧ್ಯ ಎಂದು ಭಾವಿಸದೆ, ತಾಯಿ ಶಾರದಾ ದೇವಾಡಿಗ ಅವರ ಮಮತೆಯಲ್ಲಿ ವಿದ್ಯಾಭ್ಯಾಸದ ಜತೆ ಜತೆಯಲ್ಲಿ ಮದುವೆ, ಮುಂಜಿ, ದೇವರ ಕಾರ್ಯಗಳಿಗೆ ಪಂಚವಾದ್ಯ ನುಡಿಸಲು ತೆರಳಿದರು. ಅಂದು ಮಾಡಿದ ಆ ದೃಢ ಮನಸ್ಸಿನಿಂದಲೇ ಇಂದು ಇವರ ಕುಟುಂಬದ ನಿರ್ವಹಣೆ ನಿರಾತಂಕವಾಗಿ ಸಾಗುತ್ತಿದೆ.

ಬಿಡುವಿನ ವೇಳೆಯಲ್ಲಿ ಪಂಚವಾದ್ಯ ನುಡಿಸುತ್ತಲೇ, ಅದರಿಂದ ಬಂದ ಹಣದಿಂದ ಕುಟುಂಬದ ನಿರ್ವಹಣೆ ಜತೆಗೆ ಅಕ್ಷತಾ ಎಮ್.ಎ ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅಮೃತಾ ಬಿಕಾಂ ಅಂತಿಮ, ಆದಿತ್ಯ ಬಿಕಾಂ ದ್ವಿತೀಯ ಹಾಗೂ ಅರ್ಪಿತಾ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಾರೆ.

ತಂದೆಯೇ ಗುರು : 'ತಂದೆ ಕಾರ್ಯಕ್ರಮಗಳಿಗೆ ವಾದ್ಯ ನುಡಿಸಲು ತೆರಳಿದಾಗ ಅವರ ಜತೆಯಲ್ಲಿಯೇ ನಾವು ನಾಲ್ವರು ತೆರಳುತ್ತಿದ್ದೆವು. ಅವರು ನುಡಿಸುವುದನ್ನೇ ನೋಡುತಾ ಕರಗತ ಮಾಡಿಕೊಂಡೆವು. ನಾವು ಕೂಡ ತಂದೆಯಂತೆ ನುಡಿಸಲು ಪ್ರಾರಂಭಿಸಿದೆವು. ಇದೆಲ್ಲಾ ಆಕಸ್ಮಿಕವಾಗಿತ್ತು. ಆದರೆ ಅಂದು ನಮಗೆ ತಿಳಿದಿರಲಿಲ್ಲ. ಮುಂದೊಂದು ದಿನ ಇದೇ ಕಲಿಕೆ ನಮ್ಮ ಬದುಕಿನ ಭಾಗವಾಗುತ್ತದೆ ಎಂದು. ನಮ್ಮ ನಾಲ್ವರಿಗೂ ತಂದೆಯವರೇ ಜೀವನದ ಪಾಠ ಕಲಿಸಿದ ಮೊದಲ ಗುರು ಎನಿಸಿಕೊಂಡರು' ಎನ್ನುತ್ತಾರೆ ಅಕ್ಷತಾ.

ಪಂಚ ವಾದ್ಯಗಳಲ್ಲಿ ಡೋಲಕ್, ತಾಳ, ಹಾರ್ಮೋನಿಯಮ್‌ನ್ನು ಕಲಿಯುವುದು ಹಾಗೂ ನುಡಿಸುವುದು ಸುಲಭ. ಆದರೆ ಸ್ಯಾಕ್ಸೋಫೋನ್ ನುಡಿಸಲು ತರಬೇತಿ ಪಡೆದಿರಬೇಕು. ಜತೆಗೆ ಉಸಿರು ಬಿಗಿ ಹಿಡಿದು ನುಡಿಸುವಷ್ಟು ದೈಹಿಕ ಸಾಮರ್ಥ್ಯ ಬೇಕು. ಆದರೆ ತಂದೆಯ ನುಡಿಸುವಿಕೆಯನ್ನೇ ನೋಡ ನೋಡುತ್ತಲೇ ಆದಿತ್ಯ ಅದನ್ನು ಕಲಿತುಕೊಂಡಿದ್ದ. ಬೇರೆಯವರ ತರಬೇತಿ ಇಲ್ಲದೇ ಭಾವ ಗೀತೆ, ಭಕ್ತಿ ಗೀತೆ, ಚಲನಚಿತ್ರ ಗೀತೆಗಳನ್ನು ರಾಗಬದ್ಧವಾಗಿ ನುಡಿಸುವ ಈತನ ಸಾಧನೆ ನಿಜಕ್ಕೂ ಹೆಮ್ಮೆಯ ವಿಷಯ.

ಯಕ್ಷಗಾನ, ಚೆಂಡೆಯಲ್ಲಿಯೂ ಎತ್ತಿದ ಕೈ : ಕೇವಲ ವಾದ್ಯವೊಂದೇ ಅಲ್ಲ. ಯಕ್ಷಗಾನ ಬಯಲಾಟ, ಚೆಂಡೆ ವಾದನದಲ್ಲಿಯೂ ಇವರು ಎತ್ತಿದ ಕೈ. ಆದಿತ್ಯ ಇತ್ತೀಚೆಗೆ ತಬಲಾ, ಶಹನಾಯಿ, ಯಕ್ಷಗಾನದ ತರಬೇತಿ ಪಡೆಯುತ್ತಿದ್ದಾರೆ. ಅದಕ್ಕೂ ಮುನ್ನ ಚೆಂಡೆ ವಾದನಗಳಲ್ಲಿಯೂ ಇವರು ಭಾಗವಹಿಸುತ್ತಿದ್ದರು. ತನ್ನ ಬಿಡುವಿನ ದಿನಗಳಲ್ಲಿ ಮೇಳಗಳಲ್ಲಿ ಭಾಗವಹಿಸಿ ಯಕ್ಷಗಾನ ಪ್ರದರ್ಶನ ಕೂಡ ನೀಡುತ್ತಾರೆ.

English summary
Music has given these children bread and butter after the death of father. These talented children from Mankuli village in Bhatkal taluk in Uttara Kannada did not panic after the death of their father.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X