ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC ಪರೀಕ್ಷೆಗೆ ಇಂದು ಮಂಗಳ, ಕಾಲೇಜಿಗೆ ದಾರಿ ಯಾವುದಯ್ಯ

By Prasad
|
Google Oneindia Kannada News

ಬೆಂಗಳೂರು, ಏಪ್ರಿಲ್ 12 : ಕಟ್ಟಕಡೆಯ ಪೇಪರಾದ ಸಮಾಜಶಾಸ್ತ್ರ ಪರೀಕ್ಷೆಯನ್ನು ಕರ್ನಾಟಕದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬರೆದು ನಿರಾಳರಾಗಿದ್ದಾರೆ, ಹೊತ್ತಗೆಗಳನ್ನೆಲ್ಲ ಬಿಸಾಕಿ, ಹುರ್ರೆ ಅಂತ ಬೇಸಿಗೆಯ ರಜಾ ಮಜಾ ಅನುಭವಿಸಲು ಅಣಿಯಾಗಿದ್ದಾರೆ.

ಹಲವಾರು ಬೇಡಿಕೆಗಳನ್ನು ಈಗಾಗಲೆ ಚೀಲದಲ್ಲಿ ಇಟ್ಟುಕುಳಿತಿರುವ ಶಿಕ್ಷಕರಿಂದ ಇನ್ನೇನು ಮೌಲ್ಯಮಾಪನ ಶುರುವಾಗಲಿದೆ. ಫಲಿತಾಂಶ ಎಂದು ಬರುತ್ತೋ ಏನೋ? ಬಂದರೂ ಹೇಗಿರುತ್ತೋ ಏನೋ? ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಪೋಷಕರಲ್ಲಿ ಈಗಾಗಲೆ ದುಗುಡ ಆರಂಭವಾಗಿರುತ್ತದೆ. ಎಸ್ಸೆಸ್ಸೆಲ್ಸಿ ನಂತರ ಮುಂದೇನು?[ಚಿಂತೆ ಬೇಡ, SSLC ಜೀವನ ಬದಲಿಸುವ ನಿರ್ಣಾಯಕ ಮಜಲಲ್ಲ]

Karnataka SSLC examination over, what next?

ಮಗ ಅಥವಾ ಮಗಳನ್ನು ಯಾವ ಕಾಲೇಜಿಗೆ ಹಾಕುವುದು? ಪಿಯುಸಿ ಓದಿಸುವುದಾ, ಡಿಪ್ಲೋಮಾ ಓದಿಸುವುದಾ? ಅಥವಾ ಓದಿದ್ದು ಸಾಕು ಎಂದು ಕೆಲಸಕ್ಕೆ ಹಚ್ಚಿಬಿಡುವುದಾ? ಪಿಯುಸಿಯಾದರೆ ಸೈನ್ಸಾ, ಕಾಮರ್ಸಾ ಅಥವಾ ಆರ್ಟ್ಸಾ? ವಿಜ್ಞಾನವಾದರೆ ಶುಲ್ಕವೆಷ್ಟು? ವಾಣಿಜ್ಯ ಓದಿದರೆ ಮುಂದಿನ ಭವಿಷ್ಯ ಹೇಗಿರುತ್ತದೋ? ಅವಳಿಗೆ ಕಲೆಯಲ್ಲಿಯೇ ಆಸಕ್ತಿಯಿದ್ದರೆ ಇನ್ನೇನು ಮಾಡೋಕಾಗುತ್ತೆ?

ಕೆಲ ಪ್ರತಿಷ್ಠಿತ ಕಾಲೇಜುಗಳು ತೊಂಬತ್ತು ತೊಂಬತ್ತೈದರ ಗಡಿ ಹಾಕಿಕೊಂಡು, ಜಾಣ ಹುಡುಗರನ್ನೇ ಮತ್ತಷ್ಟು ಜಾಣರನ್ನಾಗಿ ಮಾಡಲು ಸಜ್ಜಾಗಿರುತ್ತವೆ. ಕೆಲ ಪೋಷರರು ಲಕ್ಷಗಟ್ಟಲೆ ದೇಣಿಗೆ ನೀಡಿದರೂ ಚಿಂತೆಯಿಲ್ಲ ಇಂಥದೇ ಕಾಲೇಜು ಸಿಗಬೇಕೆಂದು ಪಟ್ಟುಹಿಡಿದಿರುತ್ತಾರೆ. ಕರ್ನಾಟಕದ ಪಿಯು ಕಾಲೇಜುಗಳು ಭರ್ಜರಿ ಡಿಮ್ಯಾಂಡಪ್ಪೋ ಡಿಮ್ಯಾಂಡು![ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

Karnataka SSLC examination over, what next?

ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿಪರೀತ ತಳಮಳದ ಘಟ್ಟವಿದು. ಎಸ್ಸೆಸ್ಸೆಲ್ಸಿ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು ಚಿಗುರುಮೀಸೆ ಬಿಟ್ಟುಕೊಂಡು ಪ್ಯಾಂಟು ಶರ್ಟು ತೊಟ್ಟು ಕಾಲೇಜಿನ ಮೆಟ್ಟಿಲೇರಲು ತುದಿಗಾಲಲ್ಲಿ ನಿಂತಿರುತ್ತಾರೆ. ವಿದ್ಯಾರ್ಥಿನಿಯರು ಜಡೆ ಬಿಟ್ಟುಕೊಂಡು ಚೂಡಿ ಧರಿಸಿ ಬುಕ್ಕುಗಳನ್ನು ಎದೆಗವಚಿಕೊಂಡು ಕಾಲೇಜಿಗೆ ರೆಡಿಯಾಗಿರುತ್ತಾರೆ.

ಮೊಗ್ಗಿನ ಮನಸ್ಸಿನ ಹುಡುಗ ಹುಡುಗಿಯರು ಅರಳಿ ಸುಗಂಧ ಸೂಸುವ ಕಾಲವಿದು. ಹೂವುಗಳು ಅರಳುವ ಮೊದಲೇ ಕಮರಿಹೋಗದಂತೆ ಪೋಷಕರು ಕಾಪಾಡುವ ಹಂತವೂ ಇದೇ. ಓದಿ ಕಲಿತು ಬುದ್ಧಿವಂತರಾಗಲು ಹಲವಾರು ಅವಕಾಶಗಳಿವೆ. ಮಕ್ಕಳಲ್ಲಿರುವ ಆಸಕ್ತಿ, ಅವರ ಸಾಮರ್ಥ್ಯ ನೋಡಿಕೊಂಡು ಸೂಕ್ತವಾದ ಕಲಿಕೆಗೆ ಅವರನ್ನು ಪೋಷಕರು ಒಡ್ಡಬೇಕು.

Karnataka SSLC examination over, what next?

ಎಸ್ಸೆಸ್ಸೆಲ್ಸಿಯೇ ಅಂತಿಮ ಘಟ್ಟವೇನಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದವರು ಹಲವಾರು ಜನರು ಸಾಧನೆ ಮಾಡಿ ತೋರಿಸಿದ್ದಾರೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನದ, ಪ್ರೋತ್ಸಾಹದ, ಜೀವನದ ಬಗ್ಗೆ ಲವಲವಿಕೆ ತುಂಬುವ ಅಗತ್ಯವಿರುತ್ತದೆ. ಎಸ್ಸೆಸ್ಸೆಲ್ಸಿಯಲ್ಲಿ ಪಡೆಯುವ ಅಂಕಗಳು ದಿಕ್ಕನ್ನು ತೋರಿಸುತ್ತವೆಯಷ್ಟೇ, ಆದರೆ ನಮ್ಮ ಜೀವನದ ದಾರಿಯನ್ನು ನಿರ್ಧರಿಸಲಾರವು.

Karnataka SSLC examination over, what next?

ಸದ್ಯಕ್ಕೆ ಏಪ್ರಿಲ್ 12ರಂದು ಕಡೆಯ ಪರೀಕ್ಷೆ ಬರೆದಿರುವ ಮಕ್ಕಳು, ಫಲಿತಾಂಶ, ಕಾಲೇಜು, ಮುಂದಿನ ಓದು, ಭವಿಷ್ಯ ಮಣ್ಣುಮಸಿ ಎಂದು ವೃಥಾ ಚಿಂತೆ ಮಾಡದೆ, ಡಾ ರಾಜ್ ಕುಮಾರ್ ಪುಣ್ಯತಿಥಿಯಂದು ರಾಜಣ್ಣನಿಗೊಂದು ನಮಸ್ಕಾರ ಹೇಳಿ ಕನ್ನಡ ಪಿಚ್ಚರ್ ನೋಡಿಕೊಂಡು ಬರಲಿ. ಸಿಕ್ಕಿರುವ ರಜಾದಿನಗಳನ್ನು ಅರ್ಥಪೂರ್ಣವಾಗಿ ಕಳೆಯಲಿ. ಮುಂದೆ ಹೇಗಿದ್ದರೂ ಇದ್ದೇ ಇದೆ...

English summary
What next after SSLC examination? Many students, parents would be thinking about this question in Karnataka as the SSLC exam is just concluded on 12th April. Colleges in Karnataka will be busy admitting students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X