ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಿ ಪೂಜೆಯಲ್ಲಿ ಕುರಿ, ಕೋಳಿಗೆ ಹೈಕೋರ್ಟ್ ಜೀವದಾನ!

By ಬಾಲರಾಜ್ ತಂತ್ರಿ
|
Google Oneindia Kannada News

ಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದ ಹಲವಾರು ಸಾಂಪ್ರದಾಯಿಕ ಆಚರಣೆಗಳಿಗೆ ಇತ್ತೀಚೆಗೆ ಸರಕಾರ ನಿಷೇಧ ಹೇರುತ್ತಿದೆ. ಇದಕ್ಕೆ ಸಾರ್ವಜನಿಕರಿಂದ, ಸ್ಥಳೀಯರಿಂದ ಮತ್ತು ಭಕ್ತಾದಿಗಳಿಂದ ವಿರೋಧವಿದ್ದರೂ ಸರಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡು ಬರುತ್ತಲೇ ಇದೆ.

ಮೂಢನಂಬಿಕೆ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಮಡೆಸ್ನಾನ ನಿಷೇಧ ವಿಚಾರ ಸುರ್ಪೀಂಕೋರ್ಟ್ ತನಕ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಾದ ನಂತರ ಕರಾವಳಿಯ ಮತ್ತೊಂದು ಸಾಂಪ್ರದಾಯಿಕ 'ಕಂಬಳ' ಆಚರಣೆಗೂ ಸರಕಾರ ನಿಷೇಧ ಹೇರಿತ್ತು.

ಕಂಬಳ ಪ್ರಾಣಿ ಹಿಂಸೆ ಎನ್ನುವುದಾದರೆ ಕುದುರೆ ರೇಸ್ ಇನ್ನೇನು ಎಂದು ಸಾರ್ವಜನಿಕರು ಮರು ಪ್ರಶ್ನೆ ಎಸೆದಾಗ ಸರಕಾರ ನಿರುತ್ತರವಾಗಿತ್ತು. ಬಹುಷಃ ಕುದುರೆ ರೇಸಿನಿಂದ ಸರಕಾರಕ್ಕೆ ಆದಾಯ ಬರುತ್ತೆ ಎನ್ನುವ ಕಾರಣಕ್ಕೋ ಅಥವಾ ಲಾಬಿಯನ್ನು ಮಣಿಸಲು ಅಶಕ್ತರೆಂದೋ ಅಥವಾ ಪ್ರೆಸ್ಟೀಜ್ ಎನ್ನುವ ಕಾರಣಕ್ಕಾಗೋ ಒಟ್ಟಿನಲ್ಲಿ ಕುದುರೆ ರೇಸಂತೂ ಸದ್ಯಕ್ಕೆ ಬ್ಯಾನ್ ಆಗಿಲ್ಲ.

Karnataka High Court banned animal sacrifice during Kaup Maripooja Festival in Udupi district

ವಿಚಾರಕ್ಕೆ ಬರುವುದಾದರೆ ಉಡುಪಿ ನಗರ ಹೊರವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಕಾಪು ಮಾರಿಗುಡಿ ದೇವಾಲಯದಲ್ಲಿ ನಡೆಯುವ ವಾರ್ಷಿಕ 'ಕಾಲಾವಧಿ ಸುಗ್ಗಿ ಮಾರಿಪೂಜೆ' ಯ ಸಮಯದಲ್ಲಿ ದೇವಿಗೆ ಅರ್ಪಿಸುವ 'ಪ್ರಾಣಿಬಲಿ'ಗೆ ಹೈಕೋರ್ಟ್ ಈಗ ನಿಷೇಧ ಹೇರಿದೆ.

ಅಯ್ಯೋ ಪ್ರಾರಬ್ದವೇ ರಾಜ್ಯದಲ್ಲಿ ಕೋಳಿ/ಕುರಿಬಲಿಗೆ ನಿಷೇಧ ಹೇರಿದ್ದಾರಾ ಎಂದು ಯಾರೂ ಗಾಭರಿ ಪಡಬೇಕಾದ ಅವಶ್ಯಕತೆಯಿಲ್ಲ.

ಇದು ಉಡುಪಿಯಲ್ಲಿ ನಡೆಯುವ ವಾರ್ಷಿಕ 'ಸುಗ್ಗಿಪೂಜೆ' ಪೂಜಾದಿನಕ್ಕೆ ಅನ್ವಯವಾಗುವಂತೆ ಮತ್ತು ಆ ದೇವಾಲಯದ ಆವರಣಕ್ಕೆ ಮಾತ್ರ ಸೀಮಿತವಾಗಿರುವಂತಹ ಕೋರ್ಟ್ ನೀಡಿಎರುವ ಆದೇಶ. ಈ ನಿಷೇಧ ವರ್ಷದ ತಡಕಿನಂದು 300 ರು. ಕೆಜಿಗೆ ಮಾರಾಟವಾಗುವ ನಾಟಿ ಚಿಕನ್‌ಗೆ, 400 ರು. ಕೆಜಿಗೆ ಬಿಕರಿಯಾಗುವ ಬಕರಿಗೆ ಅನ್ವಯವಾಗುವುದಿಲ್ಲ ಬಿಡಿ.

ತುಳುನಾಡಿನ ಏಳು ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಈ ವಾರ್ಷಿಕ ಮೂರು ದಿನಗಳ ಪೂಜೆ ಮತ್ತು ಉತ್ಸವ ಮಂಗಳವಾರ (ಮಾ 24) ದಿಂದ ಗುರುವಾರದ (ಮಾ26) ವರೆಗೆ ನಡೆಯಲಿದೆ. (ಉಡುಪಿ ಕೋರ್ಟಿನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ)

ಆ ಒಂದು ದಿನದಂದು ಪ್ರಾಣಿಬಲಿಗೆ ನಿಷೇಧ ಹೇರಿ ವರ್ಷದ ಉಳಿದ 364 ದಿನಗಳಲ್ಲಿ ಚಿಕನ್/ಮಟನ್ ತಿಂದರೆ ಪರವಾಗಿಲ್ಲವೇ? ದೇವರ ಹೆಸರಿನಲ್ಲಿ ಕುರಿಕೋಳಿ ಬಲಿಕೊಟ್ಟರೂ, ಮನೆಯಲ್ಲಿ ಅಥವಾ ಹೋಟೇಲಿನಲ್ಲಿ ಮಾಂಸ ತಿಂದರೂ ಬಲಿಯಾಗುವುದು ಕುರಿ ಕೋಳಿಯಲ್ಲವೇ? ಎನ್ನುವುದಕ್ಕೆ ಕೋರ್ಟಿನಲ್ಲಿ ನಿಷೇಧ ಹೇರುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು ಉತ್ತರಿಸಬೇಕು, ಅಥವಾ ಅವರಿಗೆ ಕೋರ್ಟಿನಲ್ಲಿ ದಾವೆ ಸಲ್ಲಿಸಲು ಪ್ರೇರೇಪಿಸಿರುವವರು ಉತ್ತರಿಸಬೇಕು.

ರಾಜ್ಯ ಸರಕಾರದ ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮರಾಯ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಉಡುಪಿ ಜಿಲ್ಲೆಯ ಕಾಪು ಹೊಸಮಾರಿಗುಡಿ ದೇವಾಲಯ ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು - ಉಡುಪಿ ರಸ್ತೆಗೆ ಹೊಂದಿಕೊಂಡಿದೆ. ಈ ದೇವಾಲಯ ಉಡುಪಿ ನಗರ ವ್ಯಾಪ್ತಿಯಿಂದ ಸುಮಾರು ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ.

Karnataka High Court banned animal sacrifice during Kaup Maripooja Festival in Udupi district

ಒಟ್ಟಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಪ್ರಾಣಿಬಲಿ ನಿಷೇಧದ ನಿರ್ಧಾರದಿಂದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಯಿಂದ ಬರುವ ಲಕ್ಷಾಂತರ ಭಕ್ತಾದಿಗಳ ಧಾರ್ಮಿಕ ನಂಬಿಕೆಗೆ ಪೆಟ್ಟು ಬೀಳುವುದಂತೂ ನಿಜ.

ಈ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರನ್ನು 'ಒನ್ ಇಂಡಿಯಾ' ಸಂಪರ್ಕಿಸಿದಾಗ, ದೇವಾಲಯದ ಸುತ್ತಮುತ್ತ ಮತ್ತು ಭಕ್ತಾದಿಗಳಿಗೆ ಪ್ರಾಣಿಬಲಿಗೆ ನಿಷೇಧ ಹೇರಿರುವುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಕೋರ್ಟಿನ ಪ್ರತಿ ಇನ್ನೂ ನಮ್ಮ ಕೈಸೇರಿಲ್ಲ ಎಂದು ಹೇಳಿದ್ದಾರೆ.

ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗಿರುವುದು ಕರ್ತವ್ಯ. ಕೋರ್ಟ್ ಆದೇಶದ ಪ್ರತಿ ಸೋಮವಾರ (ಮಾ 23) ನಮ್ಮ ಕೈಸೇರಲಿದೆ. ಕೋರ್ಟ್ ಆದೇಶದಂತೆ ಪ್ರಾಣಿಬಲಿಗೆ ನಿಷೇಧ ಹೇರಲಿದ್ದೇವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಅಣ್ಣಾಮಲೈ ಒನ್ ಇಂಡಿಯಾಗೆ ತಿಳಿಸಿದ್ದಾರೆ.

ಹದಿನೇಳನೇ ಶತಮಾನದ ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Karnataka High Court banned animal sacrifice during historical Kaup Maripooja Festival in Marigudi temple in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X