ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿದ ಸರ್ಕಾರ

|
Google Oneindia Kannada News

ಬೆಂಗಳೂರು, ಮಾರ್ಚ್ 15 : ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವನ್ನು (Anti Corruption Bureau- ACB) ರಚನೆ ಮಾಡಿ ಆದೇಶ ಹೊರಡಿಸಿದೆ. ಎಡಿಜಿಪಿ ಈ ದಳದ ಮುಖ್ಯಸ್ಥರಾಗಿರುತ್ತಾರೆ.

ಈಗಿರುವ ಕರ್ನಾಟಕ ಲೋಕಾಯುಕ್ತ ಕಾಯ್ದೆಯು ಲೋಕಾಯುಕ್ತರಿಗೆ ಸಾರ್ವಜನಿಕ ನೌಕರರ ವಿರುದ್ಧದ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಅಧಿಕಾರ ನೀಡುತ್ತದೆ, ಆದರೆ, ಸಾರ್ವಜನಿಕ ನೌಕರರ ಹಾಗೂ ಇತರರ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕ್ರಿಮಿನಲ್ ತನಿಖೆಗಳನ್ನು ನಡೆಸಲು ಅಧಿಕಾರ ನೀಡಿಲ್ಲ. [ಭಾಸ್ಕರರಾವ್ ವಿರುದ್ಧದ ತನಿಖೆಗೆ ರಾಜ್ಯಪಾಲರ ಒಪ್ಪಿಗೆ ಬೇಕು]

ಸುಪ್ರೀಂಕೋರ್ಟ್‌ ತೀರ್ಪಿನ ಆಧಾರದ ಮೇಲೆ ಕರ್ನಾಟಕ ಹೈಕೋರ್ಟ್‌ ಅನೇಕ ಪ್ರಕರಣಗಳಲ್ಲಿ ಕರ್ನಾಟಕ ಲೋಕಾಯುಕ್ತದ ಪೊಲೀಸ್ ವಿಭಾಗದ ಅಧಿಕಾರಿಗಳು ಭ್ರಷ್ಟಾಚಾರ ತಡೆ ಅಧಿನಿಯಮದಡಿ ನಡೆಸುವ ಕ್ರಿಮಿನಲ್ ಪ್ರಕರಣಗಳ ತನಿಖೆಯ ಮೇಲುಸ್ತುವಾರಿ ಮಾಡಲು ಲೋಕಾಯುಕ್ತರಿಗೆ ಅಧಿಕಾರವಿಲ್ಲ ಎಂದು ಹೇಳಿದೆ. [ಕರ್ನಾಟಕ ಲೋಕಾಯುಕ್ತರ ನೇಮಕ ಮತ್ತಷ್ಟು ವಿಳಂಬ]

siddaramaiah

ಲೋಕಾಯುಕ್ತ ಕಾಯ್ದೆಯ ಪ್ರಕರಣ 15 (1) ರಡಿ ಲೋಕಾಯುಕ್ತರಿಗೆ ನೆರವಾಗುವ ಮತ್ತು ಭ್ರಷ್ಟಾಚಾರ ತಡೆ ಅಧಿನಿಯಮದಡಿಯ ಅಪರಾಧ ಪ್ರಕರಣಗಳನ್ನು ತನಿಖೆ ನಡೆಸುವ ಜವಾಬ್ದಾರಿಯನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ನೀಡಲು ಈ ಹಿಂದೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವು ಲೋಕಾಯುಕ್ತ/ ಪೊಲೀಸ್ ಅಧಿಕಾರಿಗಳು ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಗೊಂದಲ ಸೃಷ್ಟಿಸಿದೆ. [ನ್ಯಾಯಮೂರ್ತಿ ಆನಂದ ನೂತನ ಉಪ ಲೋಕಾಯುಕ್ತ]

ಈ ಹಿನ್ನೆಲೆಯಲ್ಲಿ ಸರ್ಕಾರ ಕೇಂದ್ರ ಸರ್ಕಾರದ ಮಾದರಿಯಲ್ಲಿ ಒಂದು ಹೊಸ ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸುವ ಮೂಲಕ ಎರಡು ಪಾತ್ರಗಳನ್ನು ಪ್ರತ್ಯೇಕಿಸಲು ನಿರ್ಧರಿಸಿದೆ. ಈ ಹೊಸ ಭ್ರಷ್ಟಾಚಾರ ನಿಗ್ರಹ ದಳದ ಸೃಜನೆಯಿಂದಾಗಿ, ಸದರಿ ಸಂಸ್ಥೆಯು ಭ್ರಷ್ಟಾಚಾರ ತಡೆ ಅಧಿನಿಯಮದಡಿಯ ಅಪರಾಧ ಪ್ರಕರಣಗಳನ್ನು ತನಿಖೆ ನಡೆಸುವ ಶಾಸನಬದ್ಧ ಅಧಿಕಾರವನ್ನು ಹೊಂದಿರುತ್ತದೆ.

ಈ ದಳ ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳ ಜಾಗೃತ ಆಯೋಗದ ಮಾದರಿಯಲ್ಲಿರುತ್ತದೆ. ಜಾಗೃತ ಅಧಿಕಾರಿಗಳು ಆಯಾ ಇಲಾಖೆಗಳ ಅಧಿಕಾರಿ/ನೌಕರರ ವಿರುದ್ಧ ದೂರು/ ಕುಂದು ಕೊರತೆಗಳನ್ನು ಸ್ವೀಕರಿಸಲು ಹಾಗೂ ಅವುಗಳನ್ನು ಪರಿಶೀಲಿಸಿ ತ್ವರಿತ ಪರಿಹಾರ ದೊರೆಯುವಂತೆ ಮಾಡಲು ಅಧಿಕಾರ ಹೊಂದಿರುತ್ತಾರೆ.

ಈ ಬಗ್ಗೆ ವಿವರವಾದ ಮಾರ್ಗದರ್ಶನಗಳನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತದೆ. ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರ ತಡೆ ಅಧಿನಿಯಮದಡಿಯ ಅಪರಾಧ ಪ್ರಕರಣಗಳನ್ನು ತನಿಖೆ ನಡೆಸುವ ಕಾರ್ಯವಿಧಾನವನ್ನು ನಿರ್ದಿಷ್ಟಪಡಿಸುವ ಒಂದು ಪೊಲೀಸ್ ಕೈಪಿಡಿಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಹೊರಡಿಸುವಂತೆಯೂ ನಿರ್ದೇಶಿಸಿದೆ.

ಜಾಗೃತ ವ್ಯವಸ್ಥೆಯ ಮಾರ್ಗದರ್ಶನ ಹಾಗು ಮೇಲುಸ್ತುವಾರಿ ಹಾಗೂ ಜಾಗೃತ ಅಧಿಕಾರಿಗಳ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಆಡಳಿತಾತ್ಮಕ ಮೇಲುಸ್ತುವಾರಿಗಾಗಿ ಒಂದು ಜಾಗೃತ ಸಲಹಾ ಮಂಡಳಿಯನ್ನು ರಚನೆ ಮಾಡಲಾಗುತ್ತದೆ.

ಈ ಭ್ರಷ್ಟಾಚಾರ ನಿಗ್ರಹ ದಳವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಒಟ್ಟಾರೆ ಮೇಲ್ವಿಚಾರಣೆಯಡಿ ಕಾರ್ಯನಿರ್ವಹಣೆ ಮಾಡಲಿದೆ. ಈ ದಳಕ್ಕೆ ಬೆಂಬಲ ನೀಡಲು ಇಲಾಖೆಯಲ್ಲಿ ಸರ್ಕಾರದ ಕಾರ್ಯದರ್ಶಿ ದರ್ಜೆಯ ಒಂದು ಹುದ್ದೆ ಸೃಷ್ಟಿಸಿ ಅವರ ನೇತೃತ್ವದ ಜಾಗೃತ ವಿಭಾಗವನ್ನು ರಚಿಸಲಾಗುತ್ತದೆ. ಜಾಗೃತ ವಿಭಾಗದ ಕಾರ್ಯದರ್ಶಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಮುಖ್ಯಮಂತ್ರಿಗಳಿಗೆ ವರದಿ ಮಾಡುತ್ತಾರೆ.

English summary
Karnataka government has created an Anti Corruption Bureau (ACB) in its effort to give transparent and efficient administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X