ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರಿಗೆ ಸ್ಪೀಕರ್ ಕಾಗೋಡು ಕೊಟ್ಟ ಸಲಹೆ ಏನು?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 28 : 'ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣವನ್ನು 7 ದಿನಗಳ ಒಳಗಾಗಿ ಪಾವತಿ ಮಾಡದಿದ್ದರೆ ಸಚಿವರುಗಳ ವಿರುದ್ಧ ದಾವೆ ಹೂಡಲು ಅವಕಾಶವಿದ್ದು, ಉದ್ಯೋಗದಾರರಿಂದ ಉದ್ಯೋಗದಾತರರ ವಿರುದ್ಧ ದೂರು ಕೊಡಿಸುವ ಕೆಲಸ ಮಾಡಿ' ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಧಾನಸಭೆಯಲ್ಲಿ ಶಾಸಕರಿಗೆ ಕಿವಿ ಮಾತು ಹೇಳಿದರು.

ಸೋಮವಾರದ ಕಲಾಪದ ವೇಳೆ ಬಜೆಟ್ ಮೇಲಿನ ಚರ್ಚೆಯಲ್ಲಿ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಅವರು ಮಾತನಾಡುತ್ತಿದ್ದಾಗ, ಮಧ್ಯಪ್ರವೇಶಿಸಿದ ಸ್ಪೀಕರ್, 'ಕಾನೂನಿನಲ್ಲಿ ಏಳು ದಿನಗಳ ಒಳಗಾಗಿ ಹಣ ಪಾವತಿಸಬೇಕೆಂದು ನಿಯಮವಿದೆ ಇದು ಪಾಲನೆಯಾದರೆ ಎಲ್ಲರಿಗೂ ಹಣ ದೊರೆಯಲಿದೆ. ಸಕಾಲದಲ್ಲಿ ಹಣ ಬಿಡುಗಡೆ ಮಾಡಲು ವಿಳಂಬವಾದರೆ ರಾಜ್ಯ ಸರ್ಕಾರ ಬೊಕ್ಕಸದಿಂದ ಕೂಲಿ ಹಣ ಪಾವತಿಸಬೇಕು. ನಂತರ ಕೇಂದ್ರದ ಹಣವನ್ನು ಸರಿದೂಗಿಸಿಕೊಳ್ಳಬೇಕು' ಎಂದು ಕಿವಿ ಮಾತು ಹೇಳಿದರು.

'ದುಡಿಯುವ ವರ್ಗಕ್ಕೆ ಕೆಲಸ ನೀಡಿದ ಇಡೀ ಜಗತ್ತಿನ ಅತ್ಯಂತ ಉನ್ನತ ಯೋಜನೆ ಇದಾಗಿದೆ. ಇದರಡಿ ಉತ್ತಮ ಕೆಲಸ ನಡೆದರೆ ಎಲ್ಲಾ ಪಂಚಾಯತಿಗಳನ್ನು ಬಂಗಾರ ಮಾಡಬಹುದು. ಆದರೆ, ಶಾಸಕರು ಮತ್ತು ಸರ್ಕಾರದ ಇಚ್ಛಾಶಕ್ತಿ ಕರತೆಯಿಂದಾಗಿ ಇದರಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು. [ಎಸಿಬಿ ರಚನೆ ವಿವಾದ : ಸರ್ಕಾರಕ್ಕೆ ಗಡುವು ಕೊಟ್ಟ ಬಿಜೆಪಿ]

assembly session

ಎಸಿಬಿ ರಚನೆ ಗದ್ದಲ : ಭ್ರಷ್ಟಾಚಾರ ನಿಗ್ರಹದಳ ರಚನೆ ವಿಚಾರ ಇಂದು ವಿಧಾನಸಭೆಯಲ್ಲಿ ಮತ್ತೊಮ್ಮೆ ಪ್ರತಿಧ್ವನಿಸಿತು. ಸದನ ಆರಂಭಗೊಂಡ ಕೂಡಲೇ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಎಸಿಬಿ ರಚನೆಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಈ ಮಾಸವರೆಗೆ ಯಥಾಸ್ಥಿತಿ ಕಾಪಾಡಬೇಕು. ಇಲ್ಲದಿದ್ದರೆ ಜನರ ಶಾಪ ಸರ್ಕಾರಕ್ಕೆ ತಟ್ಟುತ್ತದೆ. ಈಗಾಗಲೇ ಬಿಜೆಪಿ ಅಧಿಸೂಚನೆ ವಾಪಸ್ಸು ಪಡೆಯುವಂತೆ ರಸ್ತೆಗಿಳಿದು ಹೋರಾಟ ಮಾಡಲಾಗುತ್ತಿದೆ' ಎಂದರು. [ಎಸಿಬಿ ಬಗ್ಗೆ ಗೊಂದಲ : ಸಿದ್ದರಾಮಯ್ಯ ನೀಡಿದ ಸ್ಪಷ್ಟನೆಗಳು]

ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಶಾಪ ನಿಮಗೆ ತಟ್ಟುತ್ತದೆ. ನಮಗಲ್ಲ. ಲೋಕಪಾಲ್ ಕಾಯ್ದೆ ವ್ಯಾಪ್ತಿಗೆ ಸಿಬಿಐ ತರಲು ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿ ಎಂದು ತಿರುಗೇಟು ನೀಡಿದರು. ಎಸಿಬಿ ರಚನೆಗೆ ನೀವೇ ಕಾರಣ. ಮಹಾರಾಷ್ಟ್ರದಲ್ಲಿರುವುದು ಯಾವ ದಳ ಎಂದು ಪ್ರಶ್ನಿಸಿದರು. ಬಿಜೆಪಿ ಆಡಳಿತವಿರುವ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣದಲ್ಲಿ ಈಗಾಗಲೇ ಮಾಡಲಾಗಿದೆ. ರಾಜ್ಯದಲ್ಲೂ ಎಸಿಬಿ ರಚನೆ ಮಾಡಿ ಅಧಿಸೂಚನೆ ಹೊರಡಿಸಲಾಗಿದ್ದು, ಮತ್ತೆ ವಾಪಸ್ಸು ಪಡೆಯುವ ಪ್ರಶ್ನೆ ಇಲ್ಲ ಎಂದು ಪುನರುಚ್ಚರಿಸಿದರು'.

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, 'ಎಸಿಬಿ ಭ್ರಷ್ಟಾಚಾರ ರಕ್ಷಣಾ ದಳವಾಗಿದೆ. ಸರ್ಕಾರ ಯಥಾಸ್ಥಿತಿ ಕಾಪಾಡಬೇಕು. ಲೋಕಾಯುಕ್ತ ಸಂಸ್ಥೆ ಬಲಗೊಳಿಸುವ ಬಗ್ಗೆ ಚರ್ಚೆ ಮಾಡೋಣ. ಸಿಬಿಐ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡಲಿ. ಆದರೆ ನಾವು ಎಸಿಬಿ ವಿರುದ್ಧ ಹೋರಾಟವನ್ನು ಜನರ ಬಳಿಗೆ ಕೊಂಡೊಯ್ಯವುದಾಗಿ ಎಚ್ಚರಿಕೆ ನೀಡಿದರು'. ಈ ವಿಚಾರದಲ್ಲಿ ಬಿಜೆಪಿ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಮೇಕೆದಾಟು ಯೋಜನೆ, ಸರ್ಕಾರಕ್ಕೆ ತರಾಟೆ : 'ಕಾವೇರಿ ನದಿ ಪಾತ್ರದ ಮೇಕೆದಾಟು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿ ಇದುವರೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಸಮಗ್ರ ಯೋಜನಾ ವರದಿ ಸಲ್ಲಿಸಲು ಯಾಕೆ ವಿಳಂಬ ಮಾಡಲಾಗುತ್ತಿದೆ' ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. [ಮೂರು ತಿಂಗಳಲ್ಲಿ ಮೇಕೆದಾಟು ಯೋಜನೆ ಡಿಪಿಆರ್ ಸಿದ್ಧ]

ಬಜೆಟ್ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇಕೆದಾಟು ಯೋಜನೆಯ ವಿಷಯದಲ್ಲಿ ಸರ್ಕಾರ ಇದುವರೆಗೆ ಸಮಗ್ರ ಯೋಜನಾ ವರದಿಯನ್ನು ರೂಪಿಸಿಲ್ಲ. ಹೀಗಾದರೆ ಯೋಜನೆ ಜಾರಿ ಯಾವಾಗ. ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು. [ಮೇಕೆದಾಟು ಯೋಜನೆ ವಿವಾದವೇನು?]

ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಯಾರಿಗೆ ಆಸಕ್ತಿ ಇದೆ ಎಂದು ಕೇಳಿ ಹಲವು ಕಂಪನಿಗಳು ಮುಂದೆ ಬರುವವರೆಗೆ ಮೌನವಾಗಿದ್ದ ಸರ್ಕಾರ ಇದೀಗ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಇಚ್ಚಾಶಕ್ತಿ ಇರುವ ಕಂಪನಿಯಿಂದ ವರದಿ ತಯಾರು ಮಾಡಿಸುತ್ತಿದೆ.

ಈ ಕಂಪನಿ ಮೊದಲು ವರದಿ ನೀಡಿ,ಆನಂತರ ಸದರಿ ವರದಿಯನ್ನು ಜಲಸಂಪನ್ಮೂಲ ಇಲಾಖೆಯ ಮುಂದೆ ಮಂಡಿಸಿ ಅದರ ಒಪ್ಪಿಗೆ ಪಡೆದು ಮುಂದುವರಿಯುವಷ್ಟರಲ್ಲಿ ಬಹಳ ಸಮಯ ಕಳೆದು ಹೋಗಿರುತ್ತದೆ. ಹೀಗಾಗಿ ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರಲು ಸರ್ಕಾರ ಮುಂದಾಗಬೇಕು. ಇನ್ನಷ್ಟು ವಿಳಂಬ ಮಾಡಬಾರದು. ಹಾಗೆ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ ಎಂದು ನೇರವಾಗಿ ಎಚ್ಚರಿಸಿದರು.

ರಾಜ್ಯದಲ್ಲಿ ನೀರಾವರಿ ಯೋಜನೆಗಳು ಜಾರಿಯಾಗುವುದು ವಿಳಂಬವಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ನೀರಾವರಿ ಯೋಜನೆಗಳಿಗೆ ಭೂಮಿ ವಶಪಡಿಸಿಕೊಳ್ಳುವ ವಿಷಯದಲ್ಲಿ ದುಬಾರಿ ಹಣ ತೆರಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದು ಅವರು ವಿವರಿಸಿದರು.

English summary
Karnataka Budget session 2016 : Monday March 28 highlights. What happened in the Assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X