ರೈತರ ನೆರವಿಗೆ ನಾವಿದ್ದೇವೆ ಎಂದ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 18 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾಹುಕಾಲದಲ್ಲಿಯೇ 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ರೈತರ ನೆರವಿಗೆ ನಾವಿದ್ದೇವೆ ಎಂದ ಸಿದ್ದರಾಮಯ್ಯ ಅವರು, ವಾಹನ ಸವಾರರ ಜೇಬಿಗೆ ತೆರಿಗೆಯ ಕತ್ತರಿ ಹಾಕಿದರು.

ಗರಿಗರಿ ರೇಷ್ಮೆ ಪಂಚೆ, ಶರ್ಟ್, ಶಲ್ಯ ತೊಟ್ಟ ಸಿದ್ದರಾಮಯ್ಯ ಅವರು 11 ಗಂಟೆ ವೇಳೆಗೆ ವಿಧಾನಸೌಧಕ್ಕೆ ಆಗಮಿಸಿದರು. ಶಾಸಕರ ಸ್ವಾಗತದ ನಡುವೆಯೇ ಬಜೆಟ್ ಪ್ರತಿ ಇದ್ದ ಸೂಟ್‌ಕೇಸ್‌ ಹಿಡಿದು ಮಾಧ್ಯಮಗಳಿಗೆ ಪೋಸ್ ಕೊಟ್ಟು ಒಳ ನಡೆದರು. [ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]

11.30ಕ್ಕೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮಂಕುತಿಮ್ಮನ ಕಗ್ಗದ ಮೂಲಕ ಬಜೆಟ್ ಭಾಷಣ ಆರಂಭಿಸಿದರು. ಎರಡು ಬಾರಿ ಕರೆಂಟ್ ಕೈ ಕೊಟ್ಟು, ಪ್ರತಿಪಕ್ಷಗಳು ಕತ್ತಲೆ ಭಾಗ್ಯ ಎಂದು ಕೂಗಿದರೂ ಸಮಾಧಾನವಾಗಿ 2 ಗಂಟೆ ಹೊತ್ತಿಗೆ ಭಾಷಣ ಓದಿ ಮುಗಿಸಿದರು. [ಇಂಧನ ಕ್ಷೇತ್ರಕ್ಕೆ ಏನು ಸಿಕ್ತು?]

ರೈತರಿಗೆ ಬಲ ತುಂಬಿದ ಸಿದ್ದರಾಮಯ್ಯ : ತಮ್ಮ ಬಜೆಟ್ ಭಾಷಣದಲ್ಲಿ ಬರಗಾಲ, ಸಾಲಭಾದೆಯಿಂದ ಕಂಗೆಟ್ಟಿರುವ ರೈತನಿಗೆ ಬಲ ತುಂಬಿದ ಸಿದ್ದರಾಮಯ್ಯ ಅವರು ರೈತರ ಸಂಕಷ್ಟ ನಿವಾರಣೆ ಮಾಡಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ 'ಕರ್ನಾಟಕ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚನೆ' ಮಾಡಲಾಗುತ್ತದೆ ಎಂದು ಘೋಷಿಸಿದರು.

karnataka budget

ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ ಅವರು, ಯೋಜನೆಯಡಿ 100 ಮಾದರಿ ಗ್ರಾಮಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದರು. ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಮುಂದುವರೆಸುವುದಾಗಿ ಹೇಳಿದರು. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

ತೆರಿಗೆ ಹೊರೆ : ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಮದ್ಯದ ಮೇಲಿನ ಅಬಕಾರಿ ಸುಂಕವನ್ನು 45 ರಿಂದ 50 ರೂ.ಗೆ ಹೆಚ್ಚಿಸಿ ಪಾನಪ್ರಿಯರ ಜೇಬಿಗೆ ಕತ್ತರಿ ಹಾಕಿದ್ದಾರೆ. ಮತ್ತೊಂದು ಕಡೆ ಬಿಯರ್ ಮೇಲಿನ ಅಬಕಾರಿ ಸುಂಕವನ್ನು 5 ರಿಂದ 10 ರೂ.ಗೆ ಹೆಚ್ಚಿಸಿದ್ದಾರೆ. [ಬಜೆಟ್ 2016 : ಕುಡುಕರ ಜೇಬಿಗೆ ಕತ್ತರಿ ಗ್ಯಾರಂಟಿ]

ವಾಹನ ಸವಾರರಿಗೆ ಬಿಸಿ : ಬಜೆಟ್‌ನಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ.26ರಿಂದ 30ಕ್ಕೆ, ಡೀಸೆಲ್ ಮೇಲಿನ ದರವನ್ನು ಶೇ.16.65 ರಿಂದ 19ಕ್ಕೆ ಹೆಚ್ಚಿಸಿರುವ ಸಿದ್ದರಾಮಯ್ಯ ಅವರು ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಎಲ್ಲಾ ರೀತಿಯ ತೆರಿಗೆಯನ್ನು ರದ್ದುಗೊಳಿಸಿದ್ದಾರೆ.

ತೆರಿಗೆ ಹೆಚ್ಚಾಯಿತು ಎಂದು ಜನರು ತಂಪು ಪಾನೀಯ ಕುಡಿಯುವಂತಿಲ್ಲ. ಏಕೆಂದರೆ, ಮೃದು ಪಾನೀಯಗಳ ಮೇಲಿನ ತೆರಿಗೆ ಶೇ.14.5 ರಿಂದ 20ಕ್ಕೆ ಏರಿಕೆಯಾಗಿದೆ. ಪ್ರೆಷರ್‌ ಕುಕ್ಕರ್ ಹೊರತುಪಡಿಸಿ ಇತರ ಅಲ್ಯೂಮಿನಿಯಂ ಗೃಹೋಪಯೋಗಿ ಪಾತ್ರೆಗಳಿಗೆ ತೆರಿಗೆ ವಿನಾಯ್ತಿ ಕೊಟ್ಟಿದ್ದಾರೆ.

siddaramaiah

ಸೆಟ್‌ಟಾಪ್ ಬಾಕ್ಸ್ ಮೇಲಿನ ತೆರಿಗೆ ಶೇ.14.5 ರಿಂದ ಶೇ.5.5ಕ್ಕೆ ಇಳಿಕೆ ಮಾಡಿದ್ದಾರೆ. ಹೊಸ ಬೆಳಕು ಯೋಜನೆಗೆ ಒತ್ತು ಕೊಡಲು ಎಲ್ ಇಡಿ ಬಲ್ಪ್ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿದ್ದಾರೆ. ವಿದ್ಯುತ್ ಉತ್ಪಾದನೆಗೆ ಒತ್ತು ಕೊಟ್ಟಿರುವ ಸಿದ್ದರಾಮಯ್ಯ ಅವರು ತುಮಕೂರು ಜಿಲ್ಲೆಯ ಪಾವಗಡದಲ್ಲಿನ ಸೋಲಾರ್ ಪಾರ್ಕ್‌ನಲ್ಲಿ 2017ರ ಅಂತ್ಯಕ್ಕೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಮಂತ್ರ ಪಠಣೆ : ತಮ್ಮ ಬಜೆಟ್‌ ಭಾಷಣದಲ್ಲಿ ಮಂಕುತಿಮ್ಮನ ಕಗ್ಗ ಓದಿದ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲೂ ಕನ್ನಡ ಭಾಷೆಗೆ ಒತ್ತು ಕೊಟ್ಟಿದ್ದಾರೆ. ವಿಶ್ವಕನ್ನಡ ಸಮ್ಮೇಳನ ನಡೆಸಲು 30 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಕನ್ನಡದ ಪ್ರಮುಖ ಬರಹಗಳನ್ನು ಸಂರಕ್ಷಿಸಿ, ಗಣಕೀಕರಣಗೊಳಿಸಿ ಆನ್‌ಲೈನ್ ಮೂಲಕ ಪ್ರಸಾರ ಮತ್ತು ಪ್ರಕಟಣೆ ಮಾಡಲು ಅನುದಾನ ಕೊಟ್ಟಿದ್ದಾರೆ. [ಕನ್ನಡಕ್ಕೆ ಸಿದ್ದರಾಮಯ್ಯ ಕೊಟ್ಟಿದ್ದೇನು?]

ಆರೋಗ್ಯವೇ ಭಾಗ್ಯ : ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮೈಕ್ರೋನ್ಯೂಟ್ರಿಯಂಟ್ಸ್ ಒದಗಿಸಲು 42 ಕೋಟಿ ವೆಚ್ಚದಲ್ಲಿ ಹಿಂದುಳಿದ ತಾಲೂಕುಗಳಲ್ಲಿ 'ಮಾತೃ ಪುಷ್ಠಿವರ್ಧಿನಿ' ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾರವಾರ, ಚಾಮರಾಜನಗರ ಮತ್ತು ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭ. ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 15 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ನಿರ್ಮಾಣ ಮುಂತಾದ ಘೋಷಣೆಗಳನ್ನು ಮಾಡಿದರು. [ಬಜೆಟ್ : ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?]

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಲು 'ಇಂದಿರಾ ಸುರಕ್ಷಾ ಯೋಜನೆ' ಜಾರಿಗೊಳಿಸುದಾಗಿ ಹೇಳಿದ ಅವರು, 52.96 ಕೋಟಿ ರೂ. ವೆಚ್ಚದಲ್ಲಿ 'ಆಪತ್ಭಾಂದವ ಯೋಜನೆ'ಯಡಿ ಹೆದ್ದಾರಿಗಳಲ್ಲಿ ಅಪಘಾತಕ್ಕೊಳಗಾದವರ ತುರ್ತು ಚಿಕಿತ್ಸೆಗೆ 5 ಸ್ಥಳಗಳಲ್ಲಿ ಅಪಘಾತ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದರು.

ರಾಜಧಾನಿಗೆ ಏನ್ ಸಿಕ್ತು? : ರಾಜ್ಯದ ರಾಜಧಾನಿ ಬೆಂಗಳೂರನ್ನು ಮರೆಯದ ಸಿದ್ದರಾಮಯ್ಯ ಅವರು, ಬಿಡಿಎನಿಂದ 3000 ಹೊಸ ಮನೆಗಳ ನಿರ್ಮಾಣ ಮಾಡಲಾಗುತ್ತದೆ ಎಂದರು. ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ಅನುದಾನ ಕೊಟ್ಟರು. ಕೆಂಪೇಗೌಡ ಲೇಔಟ್‍ನ 10 ಸಾವಿರ ನಿವೇಶನವನ್ನು 2017ರ ಮಾರ್ಚ್ ಒಳಗೆ ಹಂಚಿಕೆ ಮಾಡಲಾಗುತ್ತದೆ ಎಂದರು. [ಬೆಂಗಳೂರಿಗೆ ಕೊಟ್ಟ ಕೊಡುಗೆ ಏನು?]

ಪ್ರಾದೇಶಿಕ ಅಸಮಾನತೆ ನಿವಾರಣೆ : ಪ್ರಾದೇಶಿಕ ಅಸಮಾನತೆ ನಿವಾರಿಸಲು ಸಿದ್ದರಾಮಯ್ಯ ಅವರು ಹೈದರಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1000 ಕೋಟಿ, ಮಲೆನಾಡು ಅಭಿವೃದ್ಧಿಗೆ 50 ಕೋಟಿ, ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ 45 ಕೋಟಿ ರೂ. ಕೊಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister and Finance Minister Siddaramaiah has tabled Karnataka Budget 2016-17 on Friday, March 18, 2016.
Please Wait while comments are loading...