ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರದ ಕರ್ನಾಟಕ ಬಂದ್ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಏ. 18 : ಕುಡಿಯುವ ನೀರಿಗಾಗಿ ಕರ್ನಾಟಕ ಸರ್ಕಾರ ಆರಂಭಿಸಲಿರುವ ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಕ್ರಮ ಖಂಡಿಸಿ ಏ.18ರ ಶನಿವಾರ ವಿವಿಧ ಕನ್ನಡ ಪರ ಸಂಘಟನೆಗಳು 'ಕನ್ನಡ ಒಕ್ಕೂಟ'ದ ಹೆಸರಿನಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. [ಚಿತ್ರಗಳಲ್ಲಿ ನೋಡಿ ಕರ್ನಾಟಕ ಬಂದ್]

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಬಂದ್ ಕರೆ ನೀಡಲಾಗಿತ್ತು. ಆದರೆ, ಮಧ್ಯಾಹ್ನ 3 ಗಂಟೆ ನಂತರ ಜನಜೀವನ ಸಹಜ ಸ್ಥಿತಿಗೆ ಬಂದಿತು. ಆಂಬ್ಯುಲೆನ್ಸ್ ಮತ್ತು ಅಗ್ನಿ ಶಾಮಕ ವಾಹನಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಿದವು. ಕರ್ನಾಟಕ ಬಂದ್‌ನ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ. [ಕೃಷ್ಣಾ ನದಿ ಬತ್ತಿದಾಗ ಕರ್ನಾಟಕ ಬಂದ್ ಯಾಕ ಮಾಡಲಿಲ್ಲಾ?]

Mekedatu project

ಸಮಯ 4.30 : ಕನ್ನಡ ಪರ ಸಂಘಟನೆಗಳ ಮನವಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಮೇಕೆದಾಟು ಯೋಜನೆಗೆ ಕಾನೂನಿನ ತೊಡಕಿಲ್ಲ. ಈ ಯೋಜನೆ ಜಾರಿಯಾಗುವುದರಿಂದ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಿಗೆ ಕುಡಿಯುವ ನೀರು ದೊರೆಯಲಿದೆ ಎಂದರು. ಮೇಕೆದಾಟು ಯೋಜನೆ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು.

kannada

ಸಮಯ 4.15 : ಕನ್ನಡ ಪರಸಂಘಟನೆಗಳ ಸದಸ್ಯರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶೀಘ್ರವೇ ಮೇಕೆದಾಟು ಯೋಜನೆ ಆರಂಭಿಸುವಂತೆ ಮನವಿ ಮಾಡಿದ್ದಾರೆ.

ಸಮಯ 3.30 : ಬೆಂಗಳೂರಿನಲ್ಲಿ ಕೆಎಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭ. ಪೆಟ್ರೋಲ್‌ ಬಂಕ್‌ಗಳು ಓಪನ್

ಸಮಯ 03.06 : ಕನ್ನಡ ಒಕ್ಕೂಟದ ಪ್ರತಿಭಟನಾ ಮೆರವಣಿಗೆ ಅಂತ್ಯ. ಫ್ರೀಡಂಪಾರ್ಕ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗಾಗಿ ಹೊರಟ ನಾಯಕರು.

tumakuru

ಸಮಯ 2.58 : ಬೆಂಗಳೂರಿನಲ್ಲಿ ತಣ್ಣಗಾದ ಬಂದ್ ಬಿಸಿ ಹಲವು ಪ್ರದೇಶಗಳಲ್ಲಿ ಆಟೋಗಳ ಸಂಚಾರ ಆರಂಭ

ಸಮಯ 2.34 : ಕನ್ನಡ ಒಕ್ಕೂಟದ ಹೋರಾಟಕ್ಕೆ ನಟ ಪುನೀತ್ ರಾಜ್‌ಕುಮಾರ್ ಬೆಂಬಲ. ಫ್ರೀಡಂಪಾರ್ಕ್‌ಗೆ ಆಗಮಿಸಿದ ಪುನೀತ್

ಸಮಯ 2 ಗಂಟೆ : ಟೌನ್‌ಹಾಲ್‌ನಿಂದ ಆರಂಭವಾಗಿದ್ದ ನೂರಾರು ಕಾರ್ಯಕರ್ತರ ಪ್ರತಿಭಟನಾ ಜಾಥಾ ಫ್ರೀಡಂಪಾರ್ಕ್ ತಲುಪಿದೆ. ಮಾರಸಂದ್ರ ಮುನಿಯಪ್ಪ, ವಾಟಾಳ್ ನಾಗರಾಜ್, ನಟ ನೆನಪಿರಲಿ ಪ್ರೇಮ್ ಸೇರಿದಂತೆ ಹಲವು ನಾಯಯಕರು ತೆರೆದ ವಾಹನದಲ್ಲಿ ಜಾಥಾ ಮೂಲಕ ಆಗಮಿಸಿದ್ದಾರೆ.

ಸಮಯ 01.15 : ತಮಿಳುನಾಡಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸುವ ಮೂಲಕ ರಾಮನಗರ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು.

ಸಮಯ 12.45 : ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು. [ಕನ್ನಡ ಹೋರಾಟಗಾರರಿಗೆ ಕುವ್ವತ್ತು ಇಲ್ಲ : ಮದ್ರಾಸಿ]

ಸಮಯ 12.15 : ಮೇಕೆದಾಟು ಯೋಜನೆಯನ್ನು ಕಾನೂನು ಚೌಕಟ್ಟಿನಲ್ಲಿ ಜಾರಿಗೊಳಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಟಿವಿ9ನೊಂದಿಗೆ ಮಾತನಾಡಿದ ಅವರು 'ಮೇಕೆದಾಟು ಯೋಜನೆ ಮಾಡಿಯೇ ಸಿದ್ಧ. ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸುವ ಹಿರಿಯ ವಕೀಲ ಪಾಲಿ ನಾರಿಮನ್ ಅವರ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಶೀಘ್ರದಲ್ಲೇ ಯೋಜನೆಯ ಅಂತಿಮ ವರದಿ ಸಿದ್ಧಗೊಳ್ಳಲಿದೆ' ಎಂದು ಅವರು ಹೇಳಿದರು.

mb patil

ಸಮಯ 12 ಗಂಟೆ : ಬೆಂಗಳೂರು ನಗರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ನಗರ ಪೊಲೀಸ್ ಆಯಕ್ತ ಎಂ.ಎನ್.ರೆಡ್ಡಿ ಟ್ವಿಟ್ ಮಾಡಿದ್ದಾರೆ.

Vatal Nagaraj

ಸಮಯು 11.30 : ಟೌನ್ ಹಾಲ್, ಚಾಲುಕ್ಯ ವೃತ್ತ, ಮೇಕ್ರಿ ವೃತ್ತದಿಂದ ವಿವಿಧ ಸಂಘಟನೆಗಳ ಸದಸ್ಯರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದು ಎಲ್ಲರೂ ಫ್ರೀಡಂಪಾರ್ಕ್ ತಲುಪಲಿದ್ದಾರೆ. ವಾಟಾಳ್ ನಾಗರಾಜ್ ಸೈಕಲ್ ಏರಿ ನೂರಾರು ಕಾರ್ಯಕರ್ತರರೊಂದಿಗೆ ತೆರಳುತ್ತಿದ್ದಾರೆ. [ಮೇಕೆದಾಟು ಯೋಜನೆ ವಿವಾದವೇನು?]

ಸಮಯ 11.20 : ಬಂದ್ ವೇಳೆ ಕೆಲಸ ಮಾಡುತ್ತಿದ್ದ ಬೆಸ್ಕಾಂ ಸಿಬ್ಬಂದಿಗೆ ಖಾಲಿ ಚೆಂಬು ನೀಡಿದ ಕರವೇ ಕಾರ್ಯಕರ್ತರು. ಇನ್ನು ಮುಂದೆ ನಿಮಗೆ ಕುಡಿಯಲು ನೀರು ಸಿಗೋಲ್ಲ ಎಂದು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು.

town hall bangalore

ಸಮಯ 11 ಗಂಟೆ : ಬೆಂಗಳೂರಿನ ಕೆ.ಆರ್ ಮಾರ್ಕೆಟ್‍ನಲ್ಲಿ ಬಹುತೇಕ ವ್ಯಾಪಾರ ಬಂದ್ ಆಗಿದೆ. ಹೂವಿನ ವ್ಯಾಪಾರ ಮಾತ್ರ ಎಂದಿನಂತೆ ನಡೆಯುತ್ತಿದೆ.

kr market

ಸಮಯ 10.30 : ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಪ್ರತಿಭಟನೆ ಆರಂಭ. ಪ್ರತಿಭಟನಾ ನಿರತ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರೊಬ್ಬರು ಅಸ್ವಸ್ಥ. ಕೂಡಲೇ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. [ಬನ್ನಿ ಮೇಕೆದಾಟು, ಸಂಗಮ ಸುತ್ತಿ ಬರೋಣ]

ಸಮಯ 10 ಗಂಟೆ : ಬೆಂಗಳೂರಿನ ಟೌನ್‌ಹಾಲ್ ಮುಂದೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತಿಥಿ ಮಾಡಿದ ಕನ್ನಡ ಕಾರ್ಯಕರ್ತ ಅಶ್ವಥ್ ನಾರಾಯಣ್. ಕೇಲವೇ ಕ್ಷಣದಲ್ಲಿ ಟೌನ್‌ಹಾಲ್ ಮುಂಭಾಗದಿಂದ ಪ್ರತಿಭಟನೆ ಆರಂಭ.

mekedatu

ಸಮಯ 9.30 : 'ಮೇಕೆದಾಟು ಯೋಜನೆಗೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದು ಕನ್ನಡಿಗರ ಶಕ್ತಿ ಪ್ರದರ್ಶನವಾಗಬೇಕು ಮತ್ತು ತಮಿಳುನಾಡಿಗೆ ಎಚ್ಚರಿಕೆಯ ಗಂಟೆಯಾಗಬೇಕು' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

residency road

ಸಮಯ 9.05 : ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ವಾಹನ ಸಂಚಾರ ವಿರಳ. ಬೆಳಗ್ಗಿನ ಚಿತ್ರ ಪ್ರದರ್ಶನ ರದ್ದುಗೊಳಿಸಿದ ಎಲ್ಲಾ ಚಿತ್ರಮಂದಿರಗಳು.

ಸಮಯ 9 ಗಂಟೆ : ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತ. ರೈಲ್ವೆ ನಿಲ್ದಾಣದ ಸುತ್ತಮುತ್ತಲೂ ಆಟೋ, ಟ್ಯಾಕ್ಸಿ ಸಂಚಾರ ಸಂಪೂರ್ಣ ಬಂದ್

mejestic

ಸಮಯ 8.40 : ಮಡಿಕೇರಿಯಿಂದ ಹಾಸನಕ್ಕೆ ತೆರಳಬೇಕಾಗಿದ್ದ ಎಲ್ಲಾ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತ. ಕೆಎಸ್ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರಿಂದ ಕರ್ನಾಟಕ ಬಂದ್‌ಗೆ ಬೆಂಬಲ

ಸಮಯ 8.33 : ಚಾಮರಾಜನಗರದ ಭುವನೇಶ್ವರಿ ಸರ್ಕಲ್‌ನಲ್ಲಿ ಕನ್ನಡ ಪರ ಸಂಘಟನೆಗಳಿಂದ ಟೈರ್‌ಗೆ ಬೆಂಕಿ ಹಚ್ಚಿ, ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪ್ರತಿಕೃತಿ ದಹಿಸಿ ಪ್ರತಿಭಟನೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತ, ಬಂದ್‌ಗೆ ವ್ಯಾಪರಸ್ಥರಿಂದಲೂ ಬೆಂಬಲ

ಸಮಯ 8.11 : ಕೃಷ್ಣಾ ನೀರಾವರಿ ಯೋಜನೆಗೆ ಬೆಂಬಲ ನೀಡಿ ಎಂದು ಬೇಡಿಕೆ ಇಟ್ಟಿರುವ ಕಲಬುರಗಿ ಭಾಗದ ಜನರು ಮೇಕೆದಾಟು ಯೋಜನೆಗೆ ಬೆಂಬಲ ನೀಡಲು ನಾವು ಬಂದ್ ಆಚರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಕಲಬುರಗಿಯಲ್ಲಿ ಜನಜೀವನ ಎಂದಿನಂತೆ ಇದೆ. ಬಸ್ಸುಗಳು ಸಂಚಾರ ನಡೆಸುತ್ತಿವೆ.

ಸಮಯ 8 ಗಂಟೆ : ಯಾವುದೇ ಕಾರಣಕ್ಕೂ ಬಂದ್ ಮಾಡುವುದು ಬೇಡ ಎಂಬುದು ಕರಾವಳಿ ಭಾಗದ ಜನರ ಅಭಿಪ್ರಾಯ. 'ನೇತ್ರಾವತಿ ಉಳಿಸಿ' ಯೋಜನೆಗೆ ಸರ್ಕಾರ ಬೆಂಬಲ ನೀಡಿಲ್ಲ. ಆದ್ದರಿಂದ ಮೇಕೆದಾಟು ಯೋಜನೆಗೆ ನಾವು ಬೆಂಬಲ ನೀಡುವುದಿಲ್ಲ ಎಂದು ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಕರೆ ನೀಡಿದ್ದು, ಜನಜೀವನ ಎಂದಿನಂತೆ ಇದೆ.

petrol bunk

ಸಮಯ 7.50 : ಬೆಂಗಳೂರು ರೈಲ್ವೆ ನಿಲ್ದಾಣದ ಸುತ್ತ-ಮುತ್ತ ವಾಹನ ಸಂಚಾರ ಸಂಪೂರ್ಣ ಸ್ಥಗಿತ. ಆಟೋ, ಪ್ರಿಪೇಯ್ಡ್‌ ಟ್ಯಾಕ್ಸಿಗಳ ಸಂಚಾರ ಬಂದ್

ಸಮಯ 7.35 : ಮೈಸೂರು ಮತ್ತು ಚಾಮರಾಜನಗರದಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಬೈಕ್ ಜಾಥಾ ಮೂಲಕ ಜನರಲ್ಲಿ ಬಂದ್‌ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಂಗಡಿಗಳನ್ನು ತೆರೆಯದಂತೆ ವ್ಯಾಪಾರಸ್ಥರಿಗೆ ಮನವಿ ಮಾಡುತ್ತಿದ್ದಾರೆ.

ಸಮಯ 7. 33 : ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, 'ಬಂದ್ ಇದೆ ಎಂಬುದು ಎಲ್ಲಾ ಜನರಿಗೆ ಗೊತ್ತು. ಬಂದ್ ಸಮಯ ಉಪಯೋಗಿಸಿಕೊಂಡು ಕಿಡಿಗೇಡಿಗಳು ಬಸ್ಸುಗಳಿಗೆ ಕಲ್ಲು ಹೊಡೆದರೆ ಸಂಸ್ಥೆಗೆ ನಷ್ಟ ಉಂಟಾಗುತ್ತದೆ. ಆದ್ದರಿಂದ ಬೆಳಗ್ಗೆ ಸಂಚಾರ ಸ್ಥಗಿತಗೊಳಿಸಲಾಗಿದ್ದು. ಮಧ್ಯಾಹ್ನದ ನಂತರ ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ಆರಂಭಿಸುವಂತೆ ಸಂಸ್ಥೆಯ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ' ಎಂದು ಮಾಧ್ಯಮಗಳಿಗೆ ಹೇಳಿದರು.

Bandh

ಸಮಯ 7 ಗಂಟೆ : ಬೆಂಗಳೂರಿನ ಮಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಸಿಬ್ಬಂದಿಯಿಂದ ಬಂದ್‌ಗೆ ಬೆಂಬಲ. ಇಂದು ಬಂದ್‌ಗೆ ಬೆಂಬಲ ನೀಡುತ್ತಿದ್ದೇವೆ, ಬಸ್ ಸಂಚಾರವಿಲ್ಲ ಎಂದು ಪ್ರಯಾಣಿಕರನ್ನು ನಿಲ್ದಾಣದಿಂದ ಹೊರಗೆ ಕಳಿಸುತ್ತಿದ್ದಾರೆ.

ಸಮಯ 6.30 : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸುಗಳು ಎಂದಿನಿಂತೆ ಸಂಚರಿಸುತ್ತಿವೆ. ಆದರೆ, ಮೆಜೆಸ್ಟಿಕ್‌ನಿಂದ ಸಂಚರಿಸುವ ಎಲ್ಲಾ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕ್ಯಾಬ್, ಆಟೋಗಳು ಮುಂಜಾನೆ ಸಂಚರಿಸುತ್ತಿವೆ.

English summary
Peaceful bandh in Karnataka on April 18th, Saturday. Various Kannada organizations under the banner of 'Kannada Okkuta', called for a Karnataka bandh to pressurize to take up Mekedatu drinking water project. Here is live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X