ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರುದ್ದ ದಿಕ್ಕಿನಲ್ಲಿ ಸಾಗುತ್ತಿದ್ದಾರೆಯೇ ದೇವೇಗೌಡ, ಕುಮಾರಸ್ವಾಮಿ?

|
Google Oneindia Kannada News

ರಾಜಕೀಯ ಎನ್ನುವ ಚದುರಂಗಾದಾಟದಲ್ಲಿ ಇಡುವ ಒಂದೊಂದು ಹೆಜ್ಜೆಯನ್ನು ತೂಗಿ, ಅಳೆದು ಇಡುವ ದೇವೇಗೌಡ್ರು ಮತ್ತು ಅವರ ಪೊಲಿಟಿಕಲ್ ಬ್ರೈನಿಗೆ ಸೂಕ್ತವಾದ ಉತ್ತರಾಧಿಕಾರಿ ಎಂದರೆ ಕುಮಾರಸ್ವಾಮಿ ಎನ್ನುವುದು ರಾಜ್ಯ ರಾಜಕೀಯ ವಲಯದಲ್ಲಿನ ಮಾತು.

ಆದರೆ ಇತ್ತೀಚಿನ ದಿನಗಳಲ್ಲಿ ತಂದೆ ಮತ್ತು ಮಗನ ನಡುವಿನ ಹೊಂದಾಣಿಕೆಯ ಕೊರತೆ, ಮಾಧ್ಯಮದ ಮುಂದೆ ಇವರಿಬ್ಬರು ಮತ್ತು ಇವರಿಬ್ಬರ ಆಪ್ತರು ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳು ಗೌಡ್ರ ಕುಟುಂಬ ರಾಜಕಾರಣದಲ್ಲಿ ಏನೇನೂ ಸರಿಯಿಲ್ಲ ಎನ್ನುವುದು ಮೇಲ್ನೋಟಕ್ಕೆ ಈಗ ಕಾಣುತ್ತಿರುವ ಸತ್ಯ. ಬಟ್, ಒಳಗಿನ ಗುಟ್ಟು ಗೊತ್ತಿಲ್ಲ.

ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಟ್ವೆಂಟಿ ಟ್ವೆಂಟಿ ರಾಜ್ಯಭಾರದ ಅವಧಿಯಲ್ಲಿ ಮಾತಿಗೆ ಒಪ್ಪಿದಂತೆ ಎಚ್ಡಿಕೆ, ಬಿಎಸ್ವೈಗೆ ಅಧಿಕಾರ ಹಸ್ತಾಂತರಿಸಿದ್ದರೆ ಕುಮಾರಸ್ವಾಮಿ ಇಂದು ರಾಜ್ಯ ರಾಜಕಾರಣದಲ್ಲಿ ಬೇರೇನೇ ಲೆವೆಲ್ ಇರುತ್ತಿದ್ದರು ಎನ್ನುವುದು ಬಹು ಚರ್ಚಿತ ವಿಚಾರವಾಗಿತ್ತು.

ಆ ಅವಧಿಯಲ್ಲಿ ಕುಮಾರಸ್ವಾಮಿಗೆ ಬಿಜೆಪಿಯವರು ಕೊಟ್ಟ 'ವಚನಭ್ರಷ್ಟ' ಬಿರುದಿಗೆ ದೇವೇಗೌಡ್ರೇ ಕಾರಣ ಎನ್ನುವುದನ್ನು ಸ್ವಪಕ್ಷೀಯರೇ ಒಪ್ಪಿಕೊಂಡಿದ್ದರು ಕೂಡಾ. (ಕುಮಾರಸ್ವಾಮಿ ರಾಜೀನಾಮೆ ಮಾತಾಡಿದ್ದು ಏಕೆ)

ಬಿಬಿಎಂಪಿ ಮೇಯರ್ ಚುನಾವಣೆಯ ವಿಷಯದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದ್ದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಣ ಹೊಂದಣಿಕೆಯ ವಿಚಾರದಲ್ಲೂ ತಂದೆ ಮತ್ತು ಮಗ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ.

ಇವರಿಬ್ಬರೂ ವಿರುದ್ದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎನ್ನುವುದು ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಆತಂಕದ ನಡುವೆ, ಇದನ್ನೇ ಬಳಸಿಕೊಂಡು ಕೆಲವರು ಲಾಭ ಮಾಡಿಕೊಳ್ಳಲು ನೋಡುತ್ತಿದ್ದಾರೆ ಎಂದು ಜಮೀರ್ ಅಹಮದ್ ಕಡೆ ಬೊಟ್ಟು ತೋರಿಸುವವರೂ ಜೆಡಿಎಸ್ ನಲ್ಲಿದ್ದಾರೆ.

ಬಿಬಿಎಂಪಿ ಮೇಯರ್ ವಿಚಾರದಲ್ಲೇ ಗೌಡ್ರ ಕುಟುಂಬದಲ್ಲಿ ಬಿರುಕು ಕಂಡಿದ್ದು, ಮುಂದೆ ಓದಿ..

ಬಿಬಿಎಂಪಿ ಚುನಾವಣೆ

ಬಿಬಿಎಂಪಿ ಚುನಾವಣೆ

ಬಿಬಿಎಂಪಿ ಮೇಯರ್ ಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಜೊತೆ ಸಖ್ಯ ಬೆಳೆಸಲು ಕುಮಾರಸ್ವಾಮಿಗೆ ಸುತರಾಂ ಇಷ್ಟವಿರಲಿಲ್ಲ. ದೇವೇಗೌಡರ ಅಣತಿಯಂತೆ ನಡೆದ ಈ ಹೊಂದಾಣಿಕೆ ಪ್ರಕ್ರಿಯೆಯ ಉಸ್ತುವಾರಿಯನ್ನು ಜಮೀರ್ ಅಹಮದ್ ವಹಿಸಿಕೊಂಡಿದ್ದರು. ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆಸುವ ಸಂದರ್ಭದಲ್ಲೂ ಎಚ್ಡಿಕೆ ಉತ್ಸುಕತೆ ತೋರಿರಲಿಲ್ಲ.

ಮೈತ್ರಿ ಮಾಡಿಕೊಂಡ ದಿನವೇ ಪಶ್ಚಾತ್ತಾಪ

ಮೈತ್ರಿ ಮಾಡಿಕೊಂಡ ದಿನವೇ ಪಶ್ಚಾತ್ತಾಪ

ಮೈತ್ರಿ ಮಾಡಿಕೊಂಡ ದಿನವೇ ಪಶ್ಚಾತ್ತಾಪವಾಗಿತ್ತು. ಇಂತಹ ಆಡಳಿತ ನೋಡಿಕೊಂಡು ಎಷ್ಟು ದಿನ ಇರಲು ಸಾಧ್ಯ. ಧಿಮಾಕು ಮಾಡಿ ಎಂದು ನಿಮಗೆ ಆಡಳಿತ ನೀಡಿಲ್ಲ. ಇಂತಹ ಆಡಳಿತ ನಡೆಸಿದರೆ ಮೈತ್ರಿಯನ್ನು ವಾಪಸ್ ಪಡೆಯಬೇಕಾಗುತ್ತದೆ ಎಂದು ಬೆಂಬಲ ನೀಡಿದ್ದ ಒಂದೂವರೆ ತಿಂಗಳಲ್ಲೇ ಕುಮಾರಸ್ವಾಮಿ ಗುಡುಗಿದ್ದು ನಮ್ಮ ಮುಂದಿದೆ.

ವಿಧಾನ ಪರಿಷತ್ ಚುನಾವಣೆ

ವಿಧಾನ ಪರಿಷತ್ ಚುನಾವಣೆ

ಇನ್ನೇನು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ವಿಚಾರದಲ್ಲೂ ಗೌಡ್ರು ಮತ್ತು ಎಚ್ಡಿಕೆ ದ್ವಂದ್ವ ಹೇಳಿಕೆ ನೀಡುತ್ತಿರುವುದು ಇಬ್ಬರೂ ಬೇರೆ ಬೇರೆ ದಾರಿಯಲ್ಲಿ ಸಾಗುತ್ತಿದ್ದಾರೆಯೇ ಎನ್ನುವ ಶಂಕೆ ಮೂಡಿದೆ. ಜಮೀರ್ ಅಹಮದ್ ಮತ್ತು ಕುಮಾರಸ್ವಾಮಿ ನೀಡಿರುವ ಹೇಳಿಕೆಯಿಂದ ಪಕ್ಷದೊಳಗಿನ ಆಂತರಿಕ ಅಸಮಾಧಾನ ಹೊರಬಿದ್ದಿದೆ.

ದೇವೇಗೌಡ್ರು ಹೇಳಿದ್ದರೆ ನನಗೆ ಗೊತ್ತಿಲ್ಲ

ದೇವೇಗೌಡ್ರು ಹೇಳಿದ್ದರೆ ನನಗೆ ಗೊತ್ತಿಲ್ಲ

ಪರಿಷತ್ ಚುನಾವಣೆಗೆ ಕಾಂಗ್ರೆಸ್‌ ಜತೆ ಮೈತ್ರಿ ಕುರಿತಂತೆ ಮಾತುಕತೆ ನಡೆಸಲು ನಾನು ಯಾವ ಶಾಸಕರಿಗೂ ಹೇಳಿಲ್ಲ. ದೇವೇಗೌಡರು ಹೇಳಿರುವ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ. ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್‌ ಅಥವಾ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿಯೇ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಕುಮಾರಸ್ವಾಮಿ ಹೇಳಿದ್ದರು.

ಜಮೀರ್ ಹೇಳಿದ್ದು

ಜಮೀರ್ ಹೇಳಿದ್ದು

ದೇವೇಗೌಡ್ರ ಮತ್ತು ಕುಮಾರಸ್ವಾಮಿ ಅವರ ಸೂಚನೆಯಂತೆ ನಾನು ಮೈತ್ರಿ ಕುರಿತು ದಿಗ್ವಿಜಯ್‌ ಸಿಂಗ್‌ ಜತೆ ಮಾತುಕತೆ ನಡೆಸಿದ್ದೆ ಎಂದು ಪಕ್ಷದ ಶಾಸಕ ಜಮೀರ್‌ ಅಹಮದ್‌, ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮೈತ್ರಿ ಸಂಬಂಧ ದೇವೇಗೌಡರ ಮಾಡಿರುವ ಪ್ರಸ್ತಾಪವನ್ನು ದಿಗ್ವಿಜಯ್‌ ಸಿಂಗ್‌ ಬಳಿ ಮಂಡಿಸಿ, ವೇದಿಕೆ ಸಿದ್ದಪಡಿಸಿದ್ದೇನೆ. ಸೀಟು ಹಂಚಿಕೆ ಮುಂತಾದ ವಿಚಾರಗಳನ್ನು ಗೌಡ್ರು ಮತ್ತು ಕುಮಾರಣ್ಣ ಅವರೇ ಮಾತನಾಡಬೇಕು ಎಂದು ಜಮೀರ್ ಹೇಳಿದ್ದಾರೆ. ಇವರಿಬ್ಬರೂ ಮಾಧ್ಯಮಗಳ ಮುಂದೆ ವಿಭಿನ್ನ ಹೇಳಿಕೆ ನೀಡುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಮೈತ್ರಿಗೆ ಗೌಡ್ರ ಒಪ್ಪಿಗೆ

ಮೈತ್ರಿಗೆ ಗೌಡ್ರ ಒಪ್ಪಿಗೆ

ನಮ್ಮ ಶಾಸಕಾಂಗ ಪಕ್ಷ ಸಭೆಯಲ್ಲಿ ಮೈತ್ರಿಯ ಬಗ್ಗೆ ಮಾತುಕತೆ ನಡೆದಿದೆ. ನಮ್ಮ ವರಿಷ್ಠ ದೇವೇಗೌಡ್ರು ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಗೌಡ್ರು, ಕುಮಾರಸ್ವಾಮಿಯವರ ಮನವೊಲಿಸಲಿದ್ದಾರೆ. ನಮ್ಮ ಪಕ್ಷದಲ್ಲಿ ಸಣ್ಣಪುಟ್ಟ ಮನಸ್ತಾಪ ಇರುವುದು ಹೌದು, ನಾಲ್ಕು ದಿನ ಕಾಂಗ್ರೆಸ್ ನವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಕಾಯೋಣ ಎಂದು ಜೆಡಿಎಸ್ ಮುಖಂಡ, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ಗೌಡ್ರ ಜೊತೆಗಿನ ಮಾತುಕತೆಯ ನಂತರ ಗುರುವಾರ (ನ 26) ಹೇಳಿದ್ದಾರೆ.

ರಾಜೀನಾಮೆ ನೀಡಬಹುದೆಂದು ಸುದ್ದಿಯಾಗಿದ್ದು

ರಾಜೀನಾಮೆ ನೀಡಬಹುದೆಂದು ಸುದ್ದಿಯಾಗಿದ್ದು

ಸಮನ್ವಯದ ಕೊರತೆ ಪಕ್ಷದೊಳಗೆ ಹೆಚ್ಚಾಗುತ್ತಿರುವುದಕ್ಕೆ ಕುಮಾರಸ್ವಾಮಿ ತನ್ನ ಆಪ್ತರಲ್ಲಿ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ, ಜೊತೆಗೆ ರಾಜ್ಯಾಧಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತ ಪಡಿಸಿದ್ದರು ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಕುಮಾರಸ್ವಾಮಿ, ರಾಜ್ಯಾಧಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ನಾನು ಎಲ್ಲಿಯೂ ವ್ಯಕ್ತಪಡಿಸಿಲ್ಲ, ಅಂತಹ ಚಿಂತನೆಯೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

English summary
Former PM and JDS supremo HD Devegowda and son H D Kumaraswamy not in sync.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X