ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ: ಕರವೇ ವಿಶಿಷ್ಟ ಹೋರಾಟ

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ವಿಶಿಷ್ಟ ಹೋರಾಟಕ್ಕೆ ಮುಂದಾಗಿದ್ದು, ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಪ್ರಮುಖ ಮುಖಂಡರಿಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರು ಪತ್ರ ಬರೆದಿದ್ದಾರೆ.

|
Google Oneindia Kannada News

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ವಿಶಿಷ್ಟ ಹೋರಾಟಕ್ಕೆ ಮುಂದಾಗಿದ್ದು, ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಪ್ರಮುಖ ಮುಖಂಡರಿಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರು ಪತ್ರ ಬರೆದಿದ್ದಾರೆ. ಆ ಪತ್ರದ ಸಾರಾಂಶವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. (ಸಂ)

ಕಳೆದ ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ, ಕನ್ನಡಪರ ಹೋರಾಟದಲ್ಲಿ ಮಂಚೂಣಿಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ, ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ತಲೆದೋರಿರುವ ಭಾಷಾ ಅಸಮಾನತೆ, ಹಿಂದಿ ಹೇರಿಕೆ, ಮಾತೃಭಾಷಾ ಮಾಧ್ಯಮ ಕಲಿಕೆಗೆ ಇರುವ ಸಮಸ್ಯೆಗಳೂ ಸೇರಿದಂತೆ ಹತ್ತು ಹಲವಾರು ವಿಷಯಗಳ ಕುರಿತು ಚಳವಳಿಗಳನ್ನು ಸಂಘಟಿಸುತ್ತಿದೆ.

ಹಿಂದಿ ಫಲಕಕ್ಕೆ ಕಪ್ಪು ಮಸಿ ಬಳಿದ ರಕ್ಷಣಾ ವೇದಿಕೆಹಿಂದಿ ಫಲಕಕ್ಕೆ ಕಪ್ಪು ಮಸಿ ಬಳಿದ ರಕ್ಷಣಾ ವೇದಿಕೆ

ಕರ್ನಾಟಕದ ಬೆಂಗಳೂರಿನಲ್ಲಿ ನಗರ ಸಾರಿಗೆಯ ಉದ್ದೇಶಕ್ಕಾಗಿ ಆರಂಭವಾಗಿರುವ ನಮ್ಮ ಮೆಟ್ರೋ ನಾಮಫಲಕಗಳು, ಸೂಚನಾ ಫಲಕಗಳು, ಪ್ರಕಟಣೆಗಳಲ್ಲಿ ಹಿಂದಿ ಭಾಷೆಯನ್ನು ಬಳಸುವುದರ ವಿರುದ್ಧ ಕನ್ನಡಿಗರ ಬೃಹತ್ ಆಂದೋಲನ ನಡೆಯುತ್ತಿದೆ.

ಕೇಂದ್ರ ಸರ್ಕಾರದ ಉದ್ದಿಮೆಯಲ್ಲದ ನಮ್ಮ ಮೆಟ್ರೋದಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆ ಭಾಷಾ ವಿಭಾಗದ ಒತ್ತಡಕ್ಕೆ ಮಣಿದು ಬಲವಂತವಾಗಿ ಹಿಂದಿಯನ್ನು ಹೇರುತ್ತಿದ್ದು, ಸಂಬಂಧವೇ ಇಲ್ಲದಿದ್ದರೂ 1976ರ ಅಧಿಕೃತ ಭಾಷಾ ಕಾಯ್ದೆ ಸೆಕ್ಷನ್ 11ರ ಅಡಿಯಲ್ಲಿ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.

ಈ ಸಂಬಂಧ ಈಗಾಗಲೇ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಆಂದೋಲನ ನಡೆಯುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆಯೂ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ #NammaMetroHindiBeda ಎಂಬ ಹ್ಯಾಶ್ ಟ್ಯಾಗ್ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆದು ದೇಶದ ಗಮನ ಸೆಳೆದಿದೆ.

ಈಗಾಗಲೇ ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಟಿವಿ ವಾಹಿನಿಗಳು, ಪತ್ರಿಕೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಮಗೆ ಕೆಲವು ವಿಷಯಗಳನ್ನು ಗಮನಕ್ಕೆ ತರಲು ಬಯಸುತ್ತೇವೆ. ಮುಂದೆ ಓದಿ..

ಭಾಷಾ ಸಮಾನತೆ ನೆಲೆಗೊಳ್ಳಬೇಕು ಎನ್ನುವ ಕರವೇ ಹೋರಾಟ

ಭಾಷಾ ಸಮಾನತೆ ನೆಲೆಗೊಳ್ಳಬೇಕು ಎನ್ನುವ ಕರವೇ ಹೋರಾಟ

ಕಳೆದ ಹದಿನೆಂಟು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಭಾರತ ಒಕ್ಕೂಟದಲ್ಲಿ ಭಾಷಾ ಸಮಾನತೆ ನೆಲೆಗೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಚಟುವಟಿಕೆಗಳನ್ನು ನಡೆಸುತ್ತ ಬರುತ್ತಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಅಳವಡಿಸಲಾಗಿರುವ 22 ಭಾಷೆಗಳಿಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಎಂದು ನಾವು ಒತ್ತಾಯಿಸುತ್ತ ಬಂದಿದ್ದೇವೆ. ಸಂವಿಧಾನದ 343 ರಿಂದ 351ರವರೆಗಿನ ಪರಿಚ್ಛೇದಗಳು ಬಹಳ ಸ್ಪಷ್ಟವಾಗಿ ದೇಶದ ಭಾಷಾ ಬಹುತ್ವದ ವಿರೋಧಿಯಾಗಿದ್ದು, ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಮರಣಶಾಸನದಂತಿದೆ. ಹಿಂದಿಯೇತರ ಪ್ರದೇಶಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲು ಈ ಪರಿಚ್ಛೇದಗಳು ಸುಲಭವಾಗಿ ಅವಕಾಶ ಮಾಡಿಕೊಟ್ಟಿದ್ದು, ಕೇಂದ್ರ ಸರ್ಕಾರ ನೂರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡಿ ಎಲ್ಲ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಿದೆ.

ಪ್ರಾದೇಶಿಕ ಭಾಷೆಗಳನ್ನು ಬಗ್ಗುಬಡಿಯುವ ಕೇಂದ್ರ

ಪ್ರಾದೇಶಿಕ ಭಾಷೆಗಳನ್ನು ಬಗ್ಗುಬಡಿಯುವ ಕೇಂದ್ರ

ಮೊದಲು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಅಧಿಕೃತ ಭಾಷೆಗಳ ಕಾಯ್ದೆಯನ್ನು ಅಳವಡಿಸಿ, ಪ್ರಾದೇಶಿಕ ಭಾಷೆಗಳನ್ನು ಬಗ್ಗುಬಡಿಯುತ್ತಿತ್ತು, ಈಗ ರಾಜ್ಯ ಸರ್ಕಾರದ ಉದ್ಯಮಗಳು, ಇಲಾಖೆಗಳಿಗೂ ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ಹರಡುತ್ತ ಬರುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆಯೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆಯುತ್ತಿರುವ ಹಿಂದಿಹೇರಿಕೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಒಕ್ಕೂಟ. ಈ ಒಕ್ಕೂಟದ ಎಲ್ಲ ರಾಜ್ಯಗಳು ತಮ್ಮ ಭಾಷೆ, ಸಂಸ್ಕೃತಿಯ ಅನನ್ಯತೆಯ ಜತೆಗೇ ಒಕ್ಕೂಟದ ಭಾಗವಾಗಿ ಇರಬೇಕು. ಅದೇ ಪ್ರಜಾಪ್ರಭುತ್ವದ ಸೌಂದರ್ಯ.

ಕೇಂದ್ರ ಸರ್ಕಾರದ ಭಾಷಾ ನೀತಿ

ಕೇಂದ್ರ ಸರ್ಕಾರದ ಭಾಷಾ ನೀತಿ

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾದ ಭಾರತ ತನ್ನ ಬಹು ಸಂಸ್ಕೃತಿ, ಬಹುಭಾಷೆ, ಬಹು ಪರಂಪರೆಗಳ ಮೂಲಕವೇ ಬೆಳಗಬೇಕಿದೆ. ಆದರೆ ಕೇಂದ್ರ ಸರ್ಕಾರದ ಭಾಷಾ ನೀತಿಯಿಂದಾಗಿ ಹಿಂದಿಯೇತರ ರಾಜ್ಯಗಳು ಅಭದ್ರತೆಯಿಂದ ನಲುಗುವಂತಾಗಿದೆ, ಎಲ್ಲ ಪ್ರಾದೇಶಿಕ ಭಾಷೆಗಳನ್ನು ಹಿಂದಿಯ ಮೂಲಕ ನಿರ್ನಾಮ ಮಾಡುವ ಸಂಚು ವೇಗವಾಗಿ ನಡೆಯುತ್ತಿದೆ. ದೇಶ ಅಖಂಡವಾಗಿ ಇರಬೇಕೆಂದರೆ ಎಲ್ಲ ಭಾಷಾ ಸಮುದಾಯಗಳಿಗೂ ಸಮಾನ ಗೌರವ, ಹಕ್ಕುಗಳನ್ನು ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿರುತ್ತದೆ. ಭಾರತದ ಸಂವಿಧಾನ ತನ್ನೆಲ್ಲ ಪ್ರಜೆಗಳಿಗೆ ಸಮಾನವಾದ ಹಕ್ಕುಗಳನ್ನು ನೀಡುವ ಪ್ರಸ್ತಾವನೆಯನ್ನು ನೀಡುತ್ತದೆಯಾದರೂ, 343ರಿಂದ 351ರವರೆಗಿನ ಪರಿಚ್ಛೇದಗಳು ಭಾಷಾ ಸಮಾನತೆಯನ್ನು ನಿರಾಕರಿಸುತ್ತವೆ ಮತ್ತು ಬಹುಸಂಖ್ಯಾತ ಹಿಂದಿಯೇತರ ಸಮುದಾಯಗಳ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ.

ಭಾಷಾ ಸಮುದಾಯಗಳು ಒಂದಾಗಬೇಕು

ಭಾಷಾ ಸಮುದಾಯಗಳು ಒಂದಾಗಬೇಕು

ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಭಾಷಾ ಸಮುದಾಯಗಳು ಒಂದಾಗಬೇಕಿದೆ. ನಮ್ಮ ವಿರೋಧ ಹಿಂದಿಯ ವಿರುದ್ಧವಲ್ಲ. ಹಿಂದಿಯೂ ಸಹ ಇತರ ಎಲ್ಲ ಪ್ರಾದೇಶಿಕ ಭಾಷೆಗಳ ಹಾಗೆ ಒಂದು ಪ್ರಾದೇಶಿಕ ಭಾಷೆ. ಹೆಚ್ಚು ಸಂಖ್ಯೆಯ ಜನರು ಅದನ್ನು ಬಳಸುತ್ತಾರೆ ಎಂಬ ಕಾರಣಕ್ಕೆ ಇತರೆ ಭಾಷಿಕರ ಮೇಲೆ ಅದನ್ನು ಹೇರುವುದು ಸರಿಯಲ್ಲ. ಹಿಂದಿಗಿಂತ ದೊಡ್ಡ ಇತಿಹಾಸವಿರುವ, ಸಾವಿರಾರು ವರ್ಷಗಳ ಲಿಖಿತ ಪರಂಪರೆ ಇರುವ ಭಾಷೆಗಳು ದೇಶದಲ್ಲಿವೆ. ಒಂದು ಭಾಷೆಯನ್ನು ಮೇಲು, ಮತ್ತೊಂದನ್ನು ಕೀಳು ಎನ್ನುವ ಹಾಗೆ ಸರ್ಕಾರಗಳೇ ನಡೆದುಕೊಳ್ಳುವುದು ತರವಲ್ಲ. ಇದೇ ರೀತಿಯ ತಾರತಮ್ಯ ನೀತಿ ಮುಂದುವರೆದರೆ ದೇಶದ ಅಖಂಡತೆಗೆ ದೊಡ್ಡ ಸವಾಲು ಉಂಟಾಗುತ್ತದೆ.

ಹಸಿಹಸಿ ಸುಳ್ಳು ಹೇಳುತ್ತಾ ಬರುತ್ತಿರುವ ಕೇಂದ್ರ

ಹಸಿಹಸಿ ಸುಳ್ಳು ಹೇಳುತ್ತಾ ಬರುತ್ತಿರುವ ಕೇಂದ್ರ

ಹೀಗೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ದುರದೃಷ್ಟವೆಂದರೆ ಸಂವಿಧಾನದಲ್ಲಿ ಯಾವ ಉಲ್ಲೇಖ ಇಲ್ಲದಿದ್ದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹಸಿಹಸಿ ಸುಳ್ಳು ಹೇಳುತ್ತಾ, ಆ ಮೂಲಕ ರಾಷ್ಟ್ರೀಯತೆಯ ಪ್ರಶ್ನೆಯನ್ನು ಮುಂದಿಟ್ಟು ಪ್ರಾದೇಶಿಕ ನುಡಿಗಳನ್ನಾಡುವ ಜನರನ್ನು ಹಿಂದಿಗೆ ಒಗ್ಗಿಸುವ ಕೆಲಸವನ್ನು ಕಾಲಕಾಲದಿಂದ ಮಾಡುತ್ತ ಬರಲಾಗಿದೆ. ಹಿಂದಿಹೇರಿಕೆಯನ್ನು ವಿರೋಧಿಸುವವರನ್ನು ರಾಷ್ಟ್ರದ್ರೋಹಿಗಳೆಂದು ಕರೆಯಲಾಗುತ್ತಿದೆ. ಮಾತ್ರವಲ್ಲ, ದೇಶದ ಅಭಿವೃದ್ಧಿಗೆ ಹಿಂದಿಯೇತರ ನುಡಿಗಳನ್ನಾಡುವ ಜನರ ಯಾವ ಕೊಡುಗೆಯೂ ಇಲ್ಲವೆಂದು ಸುಳ್ಳು ಪ್ರೊಪಗಂಡಾ ಹರಡಲಾಗುತ್ತದೆ. ಇದೆಲ್ಲವೂ ಒಂದು ಭಾಷಿಕರನ್ನು ಇನ್ನೊಂದು ಭಾಷಿಕರ ವಿರುದ್ಧ ಎತ್ತಿಕಟ್ಟುವಂತೆ ಮಾಡುತ್ತಿದ್ದು, ದ್ವೇಷದ ವಾತಾವರಣವನ್ನು ಹರಡಲಾಗುತ್ತಿದೆ.

ಭಾಷಾ ಸಮಾನತೆ ಜಾರಿಗೊಳ್ಳಬೇಕು

ಭಾಷಾ ಸಮಾನತೆ ಜಾರಿಗೊಳ್ಳಬೇಕು

ದೇಶದಲ್ಲಿ ಭಾಷಾ ಸಮಾನತೆ ಜಾರಿಗೊಳ್ಳಬೇಕು, ಸಂವಿಧಾನದ ಪರಿಚ್ಛೇದ 8ರಲ್ಲಿ ಅಡಕ ಮಾಡಲಾಗಿರುವ ಎಲ್ಲ 22 ಭಾಷೆಗಳನ್ನು ಭಾರತ ಒಕ್ಕೂಟ ಸರ್ಕಾರದ ಅಧಿಕೃತ ಭಾಷೆಗಳನ್ನಾಗಿ ಮಾಡಬೇಕು. ಅನಗತ್ಯವಾಗಿ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು. ಮೆಟ್ರೋದಂಥ ಸಾರಿಗೆ ವ್ಯವಸ್ಥೆಯಲ್ಲಿ ಹಿಂದಿಯನ್ನು ತುರುಕುವುದನ್ನು ನಿಲ್ಲಿಸಬೇಕು. ಎಲ್ಲ ಭಾಷಾ ಸಮುದಾಯಗಳೂ ಸಹ ಒಂದಾಗಿಯೇ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ. ಇಲ್ಲದೇ ಹೋದಲ್ಲಿ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳೂ ನಾಶಗೊಳ್ಳುತ್ತವೆ.

ಹಿಂದಿಯನ್ನೂ ಒಳಗೆ ಬಿಟ್ಟುಕೊಂಡರೆ ನಮ್ಮ ಭಾಷೆಗಳೇ ನಾಶವಾಗುತ್ತವೆ

ಹಿಂದಿಯನ್ನೂ ಒಳಗೆ ಬಿಟ್ಟುಕೊಂಡರೆ ನಮ್ಮ ಭಾಷೆಗಳೇ ನಾಶವಾಗುತ್ತವೆ

ಈಗಾಗಲೇ ಇಂಗ್ಲಿಷ್ ನಮ್ಮನ್ನು ಆವರಿಸಿಕೊಂಡಿದ್ದು, ಅದರಿಂದ ಪಾರಾಗುವ ದಾರಿ ಕಾಣದೆ ಅನಿವಾರ್ಯವಾಗಿ ಸಂವಹನಕ್ಕಾಗಿ ಬಳಸುತ್ತಿದ್ದೇವೆ. ಒಂದು ವೇಳೆ ಹಿಂದಿಯನ್ನೂ ಒಳಗೆ ಬಿಟ್ಟುಕೊಂಡರೆ ನಮ್ಮ ಭಾಷೆಗಳೇ ನಾಶವಾಗುತ್ತವೆ. ಈ ಮಹತ್ವದ ಉದ್ದೇಶಕ್ಕಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ತಾವು ಸಂಪೂರ್ಣ ಬೆಂಬಲ ನೀಡಬೇಕು ಎಂದು ಕೋರುತ್ತೇವೆ. ಅದೇ ರೀತಿ ತಮ್ಮ ರಾಜ್ಯಗಳಲ್ಲಿ ಭಾಷಾ ಸಮಾನತೆಗಾಗಿ ಚಳವಳಿಗಳು ಆರಂಭಗೊಂಡರೆ ಕರ್ನಾಟಕದ ಎಲ್ಲ ಪ್ರಾಜ್ಞರು ಬೆಂಬಲಿಸುತ್ತಾರೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ. ದೇಶದಲ್ಲಿ ಭಾಷಾ ಸಮಾನತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಆಂದೋಲನಕ್ಕೆ ತಾವೆಲ್ಲರೂ ಕೈ ಜೋಡಿಸಬೇಕು ಮತ್ತು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಬೇಕು ಎಂದು ವಿನಂತಿಸುತ್ತೇವೆ.

English summary
Hindi imposition in BMRCL: Karave State President TA Narayana Gowda letter Non Hindi state leaders including Mamta Banerjee, E Palaniswami etc.,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X