ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಜ್ರ ಖಚಿತ ಉಬ್ಲೋ ವಾಚ್ ಪ್ರಕರಣದ ಕಥೆ ಎಲ್ಲಿಗೆ ಬಂತು?

|
Google Oneindia Kannada News

ಬೆಂಗಳೂರು, ಮಾರ್ಚ್ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಉಬ್ಲೋ ವಾಚ್ ಪ್ರಕರಣದ ಬಗ್ಗೆ ಸಲ್ಲಿಕೆಯಾಗಿದ್ದ ಪಿಐಎಲ್‌ಅನ್ನು ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರು ಮಾಡಿರುವ ಮನವಿಯನ್ನು ಪರಿಗಣಿಸಲು ಜಾರಿ ನಿರ್ದೇಶನಾಲಯಕ್ಕೆ ಕಾಲವಕಾಶಬೇಕು, ತನಿಖೆ ನಡೆಸುವ ಕುರಿತು ಅದು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕೋರ್ಟ್ ಹೇಳಿದೆ.

ಹಿರಿಯ ವಕೀಲ ಎಸ್.ನಟರಾಜ್ ಶರ್ಮಾ ಅವರು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಊಬ್ಲೋ ವಾಚ್‌ ಅನ್ನು ವಶಕ್ಕೆ ಪಡೆದು, ಕ್ಯಾಬಿನೆಟ್ ಬೋರ್ಡ್‌ ರೂಂನಲ್ಲಿ ಇಡಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು, ಜಾರಿ ನಿರ್ದೇಶನಾಲಯಕ್ಕೆ ಈ ಬಗ್ಗೆ ತನಿಖೆ ನಡೆಸಲು ಸೂಚಿಸಬೇಕು ಎಂದು ಕೋರಿದ್ದರು. [ವಜ್ರದ ವಾಚ್ ಕೊಟ್ಟ ಸಿದ್ದರಾಮಯ್ಯ ಹೇಳಿದ್ದೇನು?]

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ಪೀಠ, ಅರ್ಜಿಯನ್ನು ವಜಾಗೊಳಿಸಿತು. ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ದೆಹಲಿ, ಬೆಂಗಳೂರು, ಚೆನ್ನೈ ನಿರ್ದೇಶನಾಲಯದ ಕಚೇರಿಗಳಿಗೆ ಕಾಲವಕಾಶ ಬೇಕು ಎಂದು ಹೇಳಿತು. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]

ಅಂದಹಾಗೆ ಸಿದ್ದರಾಮಯ್ಯ ಅವರು ವಜ್ರ ಖಚಿತ ಊಬ್ಲೋ ವಾಚ್‌ ಅನ್ನು ಮಾರ್ಚ್ 2ರಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದಾರೆ. ನಂತರ ಸ್ಪೀಕರ್ ಅದನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ನೀಡಿದ್ದು, ವಜ್ರ ಖಚಿತ ವಾಚ್ ಈಗ ಸರ್ಕಾರದ ಆಸ್ತಿಯಾಗಿದೆ.... [ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!]

ಪಿಐಎಲ್‌ನಲ್ಲಿ ಮಾಡಿದ್ದ ಮನವಿ ಏನು?

ಪಿಐಎಲ್‌ನಲ್ಲಿ ಮಾಡಿದ್ದ ಮನವಿ ಏನು?

ಹಿರಿಯ ವಕೀಲ ಎಸ್.ನಟರಾಜ್ ಶರ್ಮಾ ಅವರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ವಾಚ್ ಹರಾಜು ಹಾಕದಂತೆ ನಿರ್ದೇಶನ ನೀಡಬೇಕು, ವಾಚ್‌ ಅನ್ನು ವಶಕ್ಕೆ ಪಡೆದು ಕ್ಯಾಬಿನೆಟ್ ಬೋರ್ಡ್‌ ರೂಂನಲ್ಲಿ ಇಡಲು ನಿರ್ದೇಶನ ನೀಡಬೇಕು, ವಾಚ್ ವಿವಾದದ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.

ಮನವಿ ಪರಿಗಣಿಸಿಲ್ಲ

ಮನವಿ ಪರಿಗಣಿಸಿಲ್ಲ

ಮುಖ್ಯಮಂತ್ರಿಗಳು ಉಡುಗೊರೆ ಪಡೆದ ದುಬಾರಿ ವಾಚ್ ಬಗ್ಗೆ ತನಿಖೆ ನಡೆಸುವಂತೆ ಫೆ.17ರಂದು ದೆಹಲಿಯ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ, ಫೆ.21ರಂದು ಜಾರಿ ನಿರ್ದೇಶನಾಲಯದ ಚೆನ್ನೈ ವಲಯ ಹಾಗೂ ಬೆಂಗಳೂರು ಪ್ರಾದೇಶಿಕ ಕಚೇರಿಗೆ ಮನವಿ ಮಾಡಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮನವಿ ಪರಿಗಣಿಸಲು ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು

ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು

ಅರ್ಜಿದಾರರ ಪರವಾಗಿ ವಾದ ಮಂಡನೆ ಮಾಡುವಾಗ ವಿದೇಶದಿಂದ ದುಬಾರಿ ವಾಚ್‌ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಆದರೆ, ಈ ಪ್ರಕರಣದಲ್ಲಿ ವಿದೇಶಿ ನಿಯಮಗಳು ಪಾಲನೆಯಾಗಿವೆಯೇ? ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್, 'ಇದಕ್ಕೆ ನಾವೇನು ಮಾಡಲು ಸಾಧ್ಯ?. ಅವಶ್ಯವಿದ್ದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದೆ.

ಹೈಕೋರ್ಟ್ ಹೇಳಿದ್ದೇನು?

ಹೈಕೋರ್ಟ್ ಹೇಳಿದ್ದೇನು?

ಮುಖ್ಯಮಂತ್ರಿಗಳು ವಾಚ್ ಅನ್ನು ಈಗಾಗಲೇ ಸರ್ಕಾರಕ್ಕೆ ಹಸ್ತಾಂತರ ಮಾಡಿರುವುದರಿಂದ ಪಿಐಎಲ್ ಅನ್ನು ಕೋರ್ಟ್ ವಜಾಗೊಳಿಸಿತು. ಅರ್ಜಿದಾರರು ಮಾಡಿರುವ ಮನವಿಯನ್ನು ಪರಿಗಣಿಸಲು ಜಾರಿ ನಿರ್ದೇಶನಾಲಯಕ್ಕೆ ಕಾಲವಕಾಶಬೇಕು, ಈ ವಿಚಾರದಲ್ಲಿ ಅದು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿತು.

ವಾಚ್ ಈಗ ಸರ್ಕಾರದ ಆಸ್ತಿ

ವಾಚ್ ಈಗ ಸರ್ಕಾರದ ಆಸ್ತಿ

ಸಿದ್ದರಾಮಯ್ಯ ಅವರ ಕೈಯಲ್ಲಿ ವಜ್ರ ಖಚಿತ ಊಬ್ಲೋ ವಾಚ್ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಆರೋಪ ಮಾಡಿದ್ದರು. ನಂತರ ರಾಜ್ಯದಲ್ಲಿ ವಾಚ್ ವಿವಾದದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಮಾರ್ಚ್ 2ರಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಊಬ್ಲೋ ವಾಚ್‌ ಅನ್ನು ಪ್ರತಿಪಕ್ಷಗಳ ಗದ್ದಲದ ನಡುವೆಯೇ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದರು.

ಸಿಬಿಐ ತನಿಖೆಗೆ ಒತ್ತಾಯ

ಸಿಬಿಐ ತನಿಖೆಗೆ ಒತ್ತಾಯ

ಊಬ್ಲೋ ವಾಚ್ ವಿವಾದದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಒತ್ತಾಯಿಸುತ್ತಿವೆ. ಸಿದ್ದರಾಮಯ್ಯ ಅವರ ತಮ್ಮ ಉಬ್ಲೋ ವಾಚ್‌ ಅನ್ನು ಸರ್ಕಾರಕ್ಕೆ ನೀಡಿದ್ದಾರೆ. ಆದರೆ, ಅವರ ಬಳಿ ವಾಚ್ ಬಗ್ಗೆ ಸರಿಯಾದ ದಾಖಲೆಗಳಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿದ್ದು, ವಾಚ್‌ನ ಮೂಲದ ಬಗ್ಗೆ ವಿಷಯ ಬಹಿರಂಗವಾಗಬೇಕು. ಆದ್ದರಿಂದ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿವೆ.

ಕುಮಾರಸ್ವಾಮಿ ಅವರ ವಿರುದ್ಧ ತನಿಖೆ

ಕುಮಾರಸ್ವಾಮಿ ಅವರ ವಿರುದ್ಧ ತನಿಖೆ

ಊಬ್ಲೋ ವಾಚ್ ವಿವಾದಕ್ಕೆ ಸಂಬಂಧಿಸಿದಂತೆ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ತನಿಖೆ ನಡೆಸಲು ಬೆಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ. ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಅವರು ಕುಮಾರಸ್ವಾಮಿ ಅವರ ವಿರುದ್ಧ ದೂರು ಕೊಟ್ಟಿದ್ದರು. ವಾಚ್‌ ಡಾ.ಸುಧಾಕರ ಶೆಟ್ಟಿ ಅವರಿಗೆ ಸೇರಿದ್ದು ಎಂದು ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಹಗರಣದಲ್ಲಿ ಸಿಲುಕಿಸಲು ಕುಮಾರಸ್ವಾಮಿ ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಿದ್ದರಾಮಯ್ಯ ಹೇಳಿರುವುದೇನು?

ಸಿದ್ದರಾಮಯ್ಯ ಹೇಳಿರುವುದೇನು?

ಸ್ಪೀಕರ್‌ಗೆ ವಾಚ್ ಹಸ್ತಾಂತರ ಮಾಡುವಾಗ ನೀಡಿರುವ ಒಂದು ಪುಟದ ಪತ್ರದಲ್ಲಿ ಸಿದ್ದರಾಮಯ್ಯ ಅವರು, '2015ರ ಜುಲೈನಲ್ಲಿ ಎನ್‌ಆರ್‌ಐ ಹಾಗೂ ದುಬೈ ನಿವಾಸಿಯಾಗಿರುವ ಸ್ನೇಹಿತ ಡಾ.ಗಿರೀಶ್‌ ಚಂದ್ರ ವರ್ಮಾ ಬೆಂಗಳೂರಿಗೆ ಬಂದಿದ್ದರು. ಆಗ ಊಬ್ಲೋ ಬಿಗ್ ಬ್ಯಾಂಗ್ 301 - ಎಂ ಕೈ ಗಡಿಯಾರವನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆ. ಡಾ.ವರ್ಮಾ ಅವರಿಗೆ ಕರ್ನಾಟಕ ಸರ್ಕಾರ ಅಥವ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಸಂಬಂಧ, ವ್ಯವಹಾರಗಳಿಲ್ಲ. ಈ ಉಡುಗೊರೆ ಸಂಬಂಧ ಮಾರ್ಚ್ 2ರಂದು ನಾನು ತೆರಿಗೆ ಕಟ್ಟಿದ್ದೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.

English summary
Karnataka High Court dismissed a public interest litigation (PIL) filed by advocate Nataraj Sharma, seeking directions to enforcement directorate (ED) to probe the matter relating to the chief minister Siddaramaiah accepting Hublot watch from a non-resident Indian friend. While dismissing the petition court said that enforcement directorate is free to probe the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X