ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟ್ಟು, ಪಟ್ಟು ಎರಡರ ಕಾಂಬೋ ಬಿಎಸ್ ವೈಗೆ 74ನೇ ಜನ್ಮದಿನ

ಫೆಬ್ರವರಿ 27 (ಸೋಮವಾರ)ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ 74 ವರ್ಷ. ರಾಜ್ಯ ರಾಜಕಾರಣದಲ್ಲಿ ಹಲವು ಶ್ರೇಯ, ಅಪಕೀರ್ತಿ ಎರಡನ್ನೂ ಪಡೆದಿರುವ ಅವರ ಜನ್ಮದಿನದಂದು ಶುಭಾಶಯ ಹೇಳೋಣ

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ತಮ್ಮ ಎಪ್ಪತ್ನಾಲ್ಕನೇ ಜನ್ಮದಿನ (ಫೆಬ್ರವರಿ 27, 1943) ಆಚರಿಸಿಕೊಳ್ಳುತ್ತಿರುವ ಯಡಿಯೂರಪ್ಪನವರಿಗೊಂದು ಶುಭಾಶಯ ಹೇಳೋಣ. ಯಡಿಯೂರಪ್ಪನವರು ಅಂದಾಕ್ಷಣ ನೆನಪಾಗೋದು ನಿಗಿನಿಗಿ ಸಿಟ್ಟು, ನಾಯಕತ್ವ ಗುಣ, ಸಂಘಟನಾ ಚಾತುರ್ಯ, ಹುಂಬತನ...ಅವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ, ಸಫಾರಿ ದಿರಿಸಿನಲ್ಲಿ ಕಲ್ಪಿಸಿಕೊಂಡರೆ ಅದು ಬೂಕನಹಳ್ಳಿ ಸಿದ್ದಲಿಂಗಪ್ಪ ಯಡಿಯೂರಪ್ಪ.

ಬಿಜೆಪಿ ಪಾಲಿಗೆ ಇರುವ ಮಾಸ್ ಲೀಡರ್ ಅಂದರೆ ಅದು ಯಡಿಯೂರಪ್ಪ. ಅವರ ಮೇಲೆ ಅದೆಷ್ಟೇ ಆರೋಪ ಕೇಳಿಬಂದರೂ ಪಕ್ಷದೊಳಗೆ ಅಸಮಾಧಾನ ಇದ್ದರೂ ಚುನಾವಣೆ ವೇಳೆಯಲ್ಲಿ ಪಕ್ಷಕ್ಕೆ ಮತ ಸೆಳೆಯುವ ಶಕ್ತಿ ಇರುವ ಅಯಸ್ಕಾಂತ ಬಿಎಸ್ ವೈ. ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿರುವ ಅವರಿಗೆ ಹಿಂದಿ-ಇಂಗ್ಲಿಷ್ ಭಾಷೆ ಕೈ ಹಿಡಿದಿದ್ದರೆ ರಾಷ್ಟ್ರ ರಾಜಕಾರಣದಲ್ಲಿ ಹವಾ ಎಬ್ಬಿಸುವಂಥ ಛಾತಿ ಇರುವ ನಾಯಕ ಅವರು.[ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ವ್ಯಕ್ತಿಚಿತ್ರ]

ಆದರೆ, ಯಡಿಯೂರಪ್ಪನವರ ಆಪ್ತ ವಲಯವನ್ನು ಗಮನಿಸಿ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ನಂತರ ಬಹಳ ಬದಲಾಗಿದೆ. ಅದನ್ನು ಇನ್ನೂ ಸ್ಪಷ್ಟವಾಗಿ ಗುರುತಿಸಬೇಕು ಅಂದರೆ, ಜೆಡಿಎಸ್ ಜತೆ ದೋಸ್ತಿ ಮಾಡಿ, ಯಾವಾಗ ಉಪ ಮುಖ್ಯಮಂತ್ರಿ ಆದರೋ ಆಗಿನಿಂದಲೇ ಪಕ್ಷದೊಳಗೆ ಅವರ ಬಗ್ಗೆ ಅಸಮಾಧಾನ ಶುರುವಾಯಿತು.

ಋಣ ಸಂದಾಯವೇ ದೊಡ್ಡ ಭಾರ

ಋಣ ಸಂದಾಯವೇ ದೊಡ್ಡ ಭಾರ

ಅಂಥ ಸುದೀರ್ಘ ರಾಜಕೀಯ ಅನುಭವ ಇದ್ದರೂ ಯಡಿಯೂರಪ್ಪನವರು ಕಲಿತ ಪಾಠಗಳು ಕಡಿಮೆಯೇನೋ ಅನಿಸುವುದು ಸತ್ಯ. ಅವರು ಅಧಿಕಾರಕ್ಕೆ ಬಂದ ಮೇಲೆ ಋಣ ಸಂದಾಯವೇ ದೊಡ್ಡ ಭಾರವಾಗಿ ಹೋಯಿತು. ಒಂದು ಕಡೆ ಕುಟುಂಬ, ಮತ್ತೊಂದು ಕಡೆ ಆಪ್ತವಲಯ, ಜತೆಗೆ ಬಳ್ಳಾರಿ ಬಳುವಳಿಗೆ ಬೆಲೆ ಕಟ್ಟಿಕಟ್ಟಿಯೇ ಬೆಂಡಾಗಿ ಹೋದರು.

ಯಡಿಯೂರಪ್ಪ ಎಂಬ ಅನಿವಾರ್ಯ

ಯಡಿಯೂರಪ್ಪ ಎಂಬ ಅನಿವಾರ್ಯ

ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿ ಜೈಲು ಸೇರಿದ ಮೊದಲಿಗರಾಗಿ ಯಡಿಯೂರಪ್ಪನವರ ಹೆಸರು ದಾಖಲಾಗಲು ಕಾರಣವಾಗಿದ್ದೇ ಈ ಅಂಶಗಳು. ಯಡಿಯೂರಪ್ಪನವರ ಕೆಜೆಪಿ ಸ್ಥಾಪನೆ ಎಂಬ ನಿರ್ಧಾರ ವಿಚಿತ್ರ ನಡೆ ಎನಿಸಿತು. ತಮಾಷೆ ಅಂದರೆ, ತತ್ವ-ಸಿದ್ಧಾಂತಕ್ಕಾಗಿ ನಾವು ಯಾರನ್ನಾದರೂ ಬಿಜೆಪಿಯಿಂದ ಕೈ ಬಿಡಲು ಎಂದು ವಿಧಾನಸಭೆ ಚುನಾವಣೆ ವೇಳೆ ಜಾಹೀರಾತು ಕೊಟ್ಟಿದ್ದ ಪಕ್ಷಕ್ಕೆ ಯಡಿಯೂರಪ್ಪ ಏನು ಅಂತ ಗೊತ್ತಾಗಲು ಬಹಳ ಸಮಯ ಬೇಕಾಗಲಿಲ್ಲ.

ಸುಸ್ತಾದವರಂತೆ ಕಾಣುವ ಬಿಎಸ್ ವೈ

ಸುಸ್ತಾದವರಂತೆ ಕಾಣುವ ಬಿಎಸ್ ವೈ

ಆದರೆ, ಇತ್ತೀಚೆಗೆ ಬಿಎಸ್ ವೈ ಸುಸ್ತಾದವರಂತೆ ಕಾಣುತ್ತಾರೆ. ದಶಕಗಳ ಕಾಲ ಜತೆಗಿದ್ದ ಸ್ನೇಹಿತರು, ಪಕ್ಷದ ಕಾರ್ಯಕರ್ತರಲ್ಲೇ ಅವರ ನಿರ್ಧಾರಗಳ ಬಗ್ಗೆ ಪದೇ ಪದೇ ಅಸಮಾಧಾನ ಕೇಳಿಬರುತ್ತಿದೆ. ಕೇಸುಗಳು ಹೈರಾಣ ಮಾಡಿವೆ. ವಿಧಾನಸೌಧದೊಳಗೆ ಕೂತು ವಿಪಕ್ಷ ನಾಯಕರಾಗಿ ಗುಡುಗುವ ಆಸೆ ಇದ್ದರೂ ಸಂಸದ ಸ್ಥಾನದ ಸ್ಪರ್ಧೆಯನ್ನು ಒಲ್ಲದ ಮನಸ್ಸಿನಲ್ಲಿ ಒಪ್ಪಿದ ತಪ್ಪು ಕಾಡುತ್ತಿರುವಂತಿದೆ.

ಸವಾಲಿನ ಸನ್ನಿವೇಶಕ್ಕೆ ಎದೆ ಕೊಟ್ಟು ನಿಲ್ತಾರೆ

ಸವಾಲಿನ ಸನ್ನಿವೇಶಕ್ಕೆ ಎದೆ ಕೊಟ್ಟು ನಿಲ್ತಾರೆ

ಜಾತಿ ಬಲ ಬೆನ್ನಿಗಿರುವುದು, ಎಂಥ ಸವಾಲಿನ ಸನ್ನಿವೇಶಕ್ಕೂ ಎದೆ ಕೊಟ್ಟು ನಿಲ್ಲುವ ಗುಣ ಯಡಿಯೂರಪ್ಪನವರ ಪಾಲಿಗೆ ಪ್ಲಸ್ಸು. ಏರುತ್ತಿರುವ ವಯಸ್ಸು, ಪಕ್ಷದೊಳಗೆ ಬಿಗಿಯಾಗಿರುವ ಹಿಡಿತ, ಓಲೈಕೆ ಮಾಡುವುದರಲ್ಲಿ-ಪ್ರತಿ ತಂತ್ರ ಹೆಣೆಯುವುದರಲ್ಲೇ ಖರ್ಚಾಗುತ್ತಿರುವ ಕಾಲ ಹಾಗೂ ಬುದ್ಧಿ ಇವೆಲ್ಲವನ್ನೂ ನೋಡುತ್ತಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೇಗೆ ಪರಿಣಾಮ ಬೀರಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಏಕಾಂಗಿಯಂತೆ ಕಾಣುತ್ತಿದ್ದಾರೆ

ಏಕಾಂಗಿಯಂತೆ ಕಾಣುತ್ತಿದ್ದಾರೆ

ಹಾಗಂತ ಯಡಿಯೂರಪ್ಪ ಬಡಪೆಟ್ಟಿಗೆ ಬಗ್ಗುವವರಲ್ಲ. ಸಿದ್ದರಾಮಯ್ಯ-ಕಾಂಗ್ರೆಸ್ ಸರಕಾರದ ವಿರುದ್ಧ ಕತ್ತಿ ಹಿರಿದು ಹೋರಾಟ ಮಾಡುತ್ತಿರುವ ಅವರು, ಏಕಾಂಗಿಯಂತೆ ಕಾಣುತ್ತಿದ್ದಾರೆ. ರಾಜಕಾರಣದ ವರಸೆ ಬದಲಾಗಿರುವ ಕಾಲಮಾನದಲ್ಲಿ ಎಲ್ಲರನ್ನೂ ಜೊತೆಯಾಗಿ ನಡೆಸಿಕೊಂಡು ಹೋಗುವುದು ಬಹಳ ಮುಖ್ಯ. ಆದರೆ ಬಗ್ಗುವ ಜಾಯಮಾನವಲ್ಲದ ಯಡಿಯೂರಪ್ಪನವರು ಇದಕ್ಕೆ ಹೊಂದಿಕೊಳ್ತಾರಾ?

ಡೊನೇಷನ್ ಗೇಟ್ ಕದನ

ಡೊನೇಷನ್ ಗೇಟ್ ಕದನ

ಕಾಂಗ್ರೆಸ್ ಹೈ ಕಮಾಂಡ್ ಗೆ ಸಾವಿರ ಕೋಟಿ ಕಪ್ಪ ನೀಡಲಾಗಿದೆ ಎಂಬುದು ಯಡಿಯೂರಪ್ಪನವರ ಇತ್ತೀಚಿನ ಆರೋಪ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನವರು ಅನಂತ ಕುಮಾರ್-ಯಡಿಯೂರಪ್ಪನವರ ಸಂಭಾಷಣೆ ಸಿಡಿ ಬಿಡುಗಡೆ ಮಾಡಿದರು. ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಿಸ್ತೀನಿ ಎಂಬ ಬಿಎಸ್ ವೈ ಹೇಳಿಕೆಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, "ಅವರಿಗೆಲ್ಲೋ ತಲೆ ಕೆಟ್ಟಿದೆ" ಎಂದರು. ಕಡೆಗೆ ಬಿಜೆಪಿಯವರು ಕಪ್ಪ ಕೊಟ್ಟಿದ್ದಾರೆ. ಬಿಎಸ್ ವೈ ಆಪ್ತ ಲೆಹರ್ ಸಿಂಗ್ ಮನೆಯಲ್ಲಿ ಡೈರಿ ಸಿಕ್ಕಿದೆ ಎಂದು ಕಾಂಗ್ರೆಸ್ ನವರು ಬಾಂಬ್ ಸಿಡಿಸಿದ್ದಾರೆ. ಇದೀಗ ಮುಂದೇನು ಯಡಿಯೂರಪ್ಪನವರೇ ಎಂದು ಕೇಳುವ ಸಮಯ.

English summary
Former chief minister and BJP Karnataka state president BS Yeddyurappa's 74th birthday on February 27th. Here is the characterstics and changes of BSY after he became CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X