ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ನಾಟಿ ಓಟ, ಅಲ್ಲಿನ ಮಕ್ಕಳ ಪಾಲಿನ ಓಲಂಪಿಕ್ಸ್

By ಬಿ.ಎಂ. ಲವಕುಮಾರ್, ಮಡಿಕೇರಿ
|
Google Oneindia Kannada News

ಈಗ ಕೊಡಗಿಗೊಂದು ಸುತ್ತು ಹೊಡೆದರೆ ವಿಶಾಲಗದ್ದೆಗಳಲ್ಲಿ... ಸುರಿಯುವ ಮಳೆಯಲ್ಲಿ... ಕೆಸರು ಗದ್ದೆ ಕ್ರೀಡಾಕೂಟಗಳು ನಡೆಯುತ್ತಿರುವ ಮನಮೋಹಕ ದೃಶ್ಯ ಕಂಡುಬರುತ್ತದೆ.

ಬೇಸಿಗೆಯಲ್ಲಿ ಹಾಕಿ, ಕ್ರಿಕೆಟ್, ವಾಲಿಬಾಲ್, ಫುಟ್ಭಾಲ್ ಮೊದಲಾದ ಆಟಗಳ ಗುಂಗಿನಲ್ಲೇ ಕಳೆದವರು ಈಗ ಸುರಿಯುವ ಮಳೆಗೆ ಕೆಸರುಗದ್ದೆಯನ್ನೇ ಮೈದಾನವಾಗಿಸಿಕೊಂಡು ಅಲ್ಲಿ ವಿವಿಧ ಕ್ರೀಡೆಗಳನ್ನು ಏರ್ಪಡಿಸಿ ಖುಷಿ ಪಡುತ್ತಿದ್ದಾರೆ.

Fields turn sports ground in Kodagu during monsoon

ಕಳೆದ ಕೆಲವು ದಶಕಗಳಿಂದ ಇಲ್ಲಿ ಕೆಸರುಗದ್ದೆ ಕ್ರೀಡಾಕೂಟ ಜನಪ್ರಿಯವಾಗುತ್ತಿದ್ದು, ಗ್ರಾಮೀಣ ಜನರ ಮಳೆಗಾಲದ ಮನೋರಂಜನೆಯಾಗಿ ಗಮನಸೆಳೆಯುತ್ತಿದೆ. ಮಳೆಗಾಲದಲ್ಲಿ ಕೊಡಗಿನಲ್ಲಿ ನಡೆದಾಡುವುದೇ ತ್ರಾಸದಾಯಕ. ಹೀಗಿರುವಾಗ ಕೆಸರುಗದ್ದೆಯನ್ನೇ ಕ್ರೀಡಾಂಗಣವಾಗಿಸಿಕೊಂಡು ಆಡುತ್ತಾ... ಕುಣಿಯುತ್ತಾ ಸಂಭ್ರಮಿಸುವುದು ಇಲ್ಲಿನ ಮತ್ತೊಂದು ವಿಶೇಷ.

ಹಾಗೆ ನೋಡಿದರೆ ಕೆಸರುಗದ್ದೆ ಕ್ರೀಡೆ ಕೊಡಗಿನವರಿಗೆ ಹೊಸತಲ್ಲ. ಇದು ಹಿಂದಿನಿಂದಲೂ ಸಂಪ್ರದಾಯವಾಗಿ ನಡೆದುಕೊಂಡು ಬಂದಿದ್ದ ನಾಟಿ ಓಟಕ್ಕೊಂದು ಹೊಸಮೆರಗು ಎಂದರೆ ತಪ್ಪಾಗಲಾರದು.

Fields turn sports ground in Kodagu during monsoon

ಇತಿಹಾಸದ ಪುಟಗಳನ್ನು ತಿರುವಿದರೆ, ಇದು ರಾಜಮಹಾರಾಜರ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತೆಂದೂ ಸೈನಿಕರು ಭತ್ತದ ಗದ್ದೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ, ರಾಜ ಗದ್ದೆಯ ಏರಿಯಲ್ಲಿ ನಿಂತು ವೀಕ್ಷಿಸುತ್ತಿದ್ದರೆಂದು ತಿಳಿದು ಬರುತ್ತದೆ.

ಮೂರ‍್ನಾಲ್ಕು ದಶಕಗಳ ಹಿಂದೆ ಕೊಡಗಿನಲ್ಲಿ ಈಗಿನಂತೆ ಕೆಸರುಗದ್ದೆ ಕ್ರೀಡೆಯ ಭರಾಟೆ ಇರಲಿಲ್ಲ. ಜೊತೆಗೆ ಕೆಸರಿನಲ್ಲಿ ಆಟವಾಡಿ ಸಂಭ್ರಮ ಪಡಲು ಸಮಯವೂ ಇರಲಿಲ್ಲ. ಇದಕ್ಕೆ ಕಾರಣವೂ ಇತ್ತು. ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಈಗಿನಷ್ಟು ಕಾಫಿ ತೋಟಗಳಿರಲಿಲ್ಲ. ದಟ್ಟ ಮರಗಿಡಗಳ ನಡುವೆ ಹೆಚ್ಚಾಗಿ ಏಲಕ್ಕಿ ಬೆಳೆಯುತ್ತಿದ್ದರು. ಏಲಕ್ಕಿ ತೋಟದ ಕೆಲಸ ಕೂಡ ಮಳೆಗಾಲದಲ್ಲಿ ಆರಂಭವಾಗುತ್ತಿತ್ತು.

Fields turn sports ground in Kodagu during monsoon

ಆದರೆ ವಾಣಿಜ್ಯ ಬೆಳೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ರೈತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭತ್ತದ ಕೃಷಿಯನ್ನು ಮಾಡುತ್ತಿದ್ದರು. ಹೀಗಾಗಿ ಜೂನ್ ತಿಂಗಳ ಪ್ರಾರಂಭದಲ್ಲಿ ರೈತರು ನೇಗಿಲು ಹಿಡಿದು ಗದ್ದೆಗಿಳಿದರೆ ನಾಟಿ ಕೆಲಸ ಮುಗಿಸಿ ಈಚೆಗೆ ಬರುವ ವೇಳೆಗೆ ತಿಂಗಳುಗಳೇ ಕಳೆದು ಹೋಗುತ್ತಿತ್ತು. ಈ ಸಂದರ್ಭ ಪೇಟೆ, ಪಟ್ಟಣದ ರಂಗು ರಂಗಿನ ಬದುಕಾಗಲೀ, ಮನೋರಂಜನೆಯಾಗಲೀ ಅವರಿಗೆ ದೊರೆಯುತ್ತಿರಲಿಲ್ಲ.

ಆದ್ದರಿಂದ ಆಯಾ ಗ್ರಾಮದ ಕೆಲವು ಕುಟುಂಬಗಳು ನಡೆಸುತ್ತಿದ್ದ ನಾಟಿ ಓಟದಲ್ಲಿ ಕೆಲವರು ಪಾಲ್ಗೊಂಡು ಓಡಿ ತಮ್ಮ ಪ್ರತಿಭೆ ಪ್ರದರ್ಶಿಸಿದರೆ ಮತ್ತೆ ಕೆಲವರು ಅದನ್ನು ನೋಡಿ ಆನಂದ ಪಡೆಯುತ್ತಿದ್ದರು. ಒಟ್ಟಾರೆ ಹೇಳಬೇಕೆಂದರೆ ಆ ದಿನಗಳಲ್ಲಿ ಈ ನಾಟಿ ಓಟ ಮಣ್ಣಿನ ಮಕ್ಕಳ ಪಾಲಿಗೊಂದು ಓಲಂಪಿಕ್ಸ್ ಆಗಿತ್ತು ಎಂದರೆ ತಪ್ಪಾಗಲಾರದು. ಭತ್ತದ ನಾಟಿ ಕೆಲಸ ಕೂಡ ಒಂದು ರೀತಿಯ ಸಂಭ್ರಮ ಹಾಗೂ ಕಠಿಣವಾದ ಕೆಲಸವಾಗಿತ್ತು.

Fields turn sports ground in Kodagu during monsoon

ಆಧುನಿಕ ಉಪಕರಣಗಳು ಇರಲಿಲ್ಲ ಎತ್ತುಗಳಿಂದಲೇ ಉಳುಮೆ ಮಾಡಿ ಸುರಿಯುವ ಮಳೆಯಲ್ಲೇ ನಾಟಿ ಮಾಡಬೇಕಿತ್ತು. ಈ ನಾಟಿ ಕೆಲಸ ಒಂದೆರಡು ದಿನಕ್ಕೆ ಮುಗಿಯುತ್ತಿರಲಿಲ್ಲ ತಿಂಗಳಾನುಗಟ್ಟಲೆ ನಡೆಯುತ್ತಿತ್ತು. ಹೆಚ್ಚಿನವರು ಚಿಕ್ಕಗದ್ದೆಗಳಲ್ಲಿ ನಾಟಿ ನೆಟ್ಟು ದೊಡ್ಡ ಗದ್ದೆಯೊಂದನ್ನು ಉಳಿಸಿಕೊಳ್ಳುತ್ತಿದ್ದರು. ಈ ಗದ್ದೆ ನಾಟಿಗೆ ಹೆಚ್ಚಿನ ಜನ ಸೇರುತ್ತಿದ್ದರು. ಜೊತೆಗೆ ನಾಟಿ ನೆಡಲು ಬರುವವರಿಗೆ ಮಧ್ಯಾಹ್ನ ಬಾಡೂಟವನ್ನು ಏರ್ಪಡಿಸಲಾಗುತ್ತಿತ್ತು(ಇವತ್ತಿಗೂ ಇದೆ).

ಇದನ್ನು ಇಲ್ಲಿನವರು ಕಂಬಳ (ದಕ್ಷಿಣ ಕನ್ನಡದಲ್ಲಿ ಕೋಣಗಳನ್ನು ಕೆಸರುಗದ್ದೆಯಲ್ಲಿ ಓಡಿಸುವುದಕ್ಕೆ ಕಂಬಳ ಎನ್ನುತ್ತಾರೆ) ಎಂದು ಕರೆಯುತ್ತಾರೆ. ನಾಟಿ ಮುಗಿದ ಮೇಲೆ ಸಂಜೆ ನಾಟಿ ನೆಟ್ಟ ಗದ್ದೆಯಲ್ಲಿ ಓಟ ಏರ್ಪಡಿಸಲಾಗುತ್ತಿತ್ತು. ನಾಟಿ ಓಟದಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ನಗದು, ಬಾಳೆಗೊನೆ, ತೆಂಗಿನಕಾಯಿ, ವೀಳ್ಯದೆಲೆ ನೀಡಲಾಗುತ್ತಿತ್ತು.

Fields turn sports ground in Kodagu during monsoon

ನಾಟಿ ಓಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆಯಾಗಿತ್ತಲ್ಲದೆ, ಮನೋರಂಜನೆಯೂ ಸಿಗುತ್ತಿತ್ತು. ಓಟದಲ್ಲಿ ಗೆದ್ದವನನ್ನು ಊರಿನಲ್ಲಿ ಓಟ್‌ಕಾರ ಎಂದೇ ಜನ ಗುರುತಿಸುತ್ತಿದ್ದರು. ಆತ ನಾಟಿ ಓಟ ನಡೆಯುವ ಗದ್ದೆಗಳಿಗೆ ತೆರಳಿ ಅಲ್ಲಿ ಓಟದಲ್ಲಿ ಪಾಲ್ಗೊಂಡು ಗಮನಸೆಳೆಯುತ್ತಿದ್ದರೆ, ಮತ್ತೊಂದೆಡೆ ಆತನನ್ನು ಸೋಲಿಸಿ ತಾನು ಓಟ್‌ಕಾರನಾಗಬೇಕೆಂದು ಕೆಲವರು ಪ್ರಯತ್ನಪಡುತ್ತಿದ್ದರು.
Fields turn sports ground in Kodagu during monsoon

ಇಂತಹ ನಾಟಿ ಓಟಗಳು ಕೊಡಗಿನಲ್ಲಿ ಅಲ್ಲಲ್ಲಿ ನಡೆಯುತ್ತಿತ್ತಾದರೂ ಕಳೆದ ಕೆಲ ವರ್ಷಗಳಿಂದ ಇದು ಒಂದಷ್ಟು ಬದಲಾಗಿ ಕೆಸರುಗದ್ದೆ ಕ್ರೀಡಾಕೂಟವಾಗಿ ಮಾರ್ಪಾಡಾಗಿ ಅಲ್ಲಲ್ಲಿ ನಡೆಯತೊಡಗಿದೆ. ಹೀಗಾಗಿ ಬೇಸಿಗೆಯಲ್ಲಿ ನಡೆಯುತ್ತಿದ್ದ ಕೆಲವು ಕ್ರೀಡಾಕೂಟಗಳು ಮಳೆಗಾಲದಲ್ಲಿ ಅದು ಕೆಸರುಗದ್ದೆಯಲ್ಲಿ ನಡೆಯುತ್ತಿರುವುದು ಕೊಡಗಿನವರು ಕ್ರೀಡಾಪ್ರೇಮಿಗಳು ಎನ್ನುವುದಕ್ಕೆ ಸಾಕ್ಷಿಯಾಗಿದೆ.
English summary
Kesaru gadde vota or naati vota in Kodagu is very popular during monsoon. Paddy fields turn sports ground when there is not much work for the people. It has become popular sports too. Read the history behind the Kesaru gadde vota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X