ಎಸ್ಸೆಂ ಕೃಷ್ಣ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ಸಕಾಲವೆ?

ಹೊಸ ಪೀಳಿಗೆಯ ರಾಜಕಾರಣಿಗಳ ಶಕ್ತಿ, ಹುಮ್ಮಸ್ಸಿನೊಂದಿಗೆ ಪಳಗಿದ ರಾಜಕಾರಣಿಗಳ ಮುತ್ಸದ್ದಿತನ, ಪಕ್ವವಾದ ಅನುಭವ, ಚಿಂತನೆ ಜೊತೆಗೂಡಿದರೆ ಸಮೃದ್ಧ ರಾಜ್ಯವನ್ನು ಕಟ್ಟಲು ಸಾಧ್ಯ. ಅಂಥದೊಂದು ಮುತ್ಸದ್ದಿತನ ಕೃಷ್ಣ ಅವರಲ್ಲಿತ್ತು. ಈಗಲೂ ಇದೆಯಾ?

Written by: ಯಶೋಧರ, ಬೆಂಗಳೂರು
Subscribe to Oneindia Kannada

ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ, ಮಾಜಿ ಕೆಪಿಸಿಸಿ ಅಧ್ಯಕ್ಷ, 84 ವರ್ಷ 'ಹರೆಯದ' ವರ್ಣರಂಜಿತ ರಾಜಕಾರಣಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಬಡಾ ಸಲಾಂ ಹೊಡೆದಿರುವುದು ಕರ್ನಾಟಕ ರಾಜಕೀಯ ವಲಯದಲ್ಲಿ ಅಷ್ಟೊಂದು ಅಲ್ಲೋಲಕಲ್ಲೋಲ ಸೃಷ್ಟಿಸಿದೆಯಾ?

ಈ ವರ್ಷ ಮೇ 1 ಬಂದರೆ ಎಸ್ಸೆಂ ಕೃಷ್ಣ ಅವರಿಗೆ ಭರ್ತಿ 85 ವರ್ಷಗಳಾಗುತ್ತವೆ. ವ್ಯಕ್ತಿ ಯಾರೇ ಇರಲಿ ಈ ವಯಸ್ಸಿನಲ್ಲಿ ಸಕ್ರಿಯವಾಗಿ ಯಾವುದೇ ಕ್ಷೇತ್ರದಲ್ಲಿ ದುಡಿಮೆ ಮಾಡಬೇಕು, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯಾರೂ ಮನಃಪೂರ್ವಕವಾಗಿ ಇಚ್ಛಿಸುವುದಿಲ್ಲ. ಏಕೆಂದರೆ, ಅದು ಅಮಾನವೀಯ! [ಸೋತು ಸೊರಗಿದ್ದ ಅತೃಪ್ತರನ್ನು ಬಡಿದೆಬ್ಬಿಸಿದ ಕೃಷ್ಣರ ಪಾಂಚಜನ್ಯ]

ಕಾರ್ಮಿಕರ ದಿನದಂದೇ ಹುಟ್ಟಿರುವ ಕೃಷ್ಣ ಅವರು ನಿಜಕ್ಕೂ ರಾಜಕೀಯ ಕರ್ಮಿಯೇ. ಕಾರ್ಮಿಕರಿಗೆ ನಿವೃತ್ತಿ ವಯಸ್ಸು ಇರುತ್ತದೆ, ಆದರೆ ರಾಜಕಾರಣಿಗಳಿಗೆಂಥ ನಿವೃತ್ತಿ ವಯಸ್ಸು? ಇಂಥ ಎಷ್ಟು ರಾಜಕಾರಣಿಗಳು ರಾಜಕೀಯದಲ್ಲಿ ಇನ್ನೂ ತಮ್ಮ ಕರಾಮತ್ತನ್ನು ತೋರಿಸುತ್ತಿಲ್ಲ? ಯಸ್, ಕೃಷ್ಣ ಕೂಡ ಅದೇ ಉತ್ಸಾಹದಿಂದ ಇದ್ದಾರೆ.[ಎಸ್ಸೆಂ ಕೃಷ್ಣ ಬಿಜೆಪಿ ಸೇರಲಿ: ಒನ್ಇಂಡಿಯಾ ಓದುಗರ ಬಹುಮತ]

ಎಳಸು ರಾಜಕಾರಣಿಗಳಿಂದ ದೇಶವನ್ನು, ರಾಜ್ಯವನ್ನು ನಡೆಸಲು ಸಾಧ್ಯವಿಲ್ಲ ಎಂಬುದು ಬಹುತೇಕರು ಒಪ್ಪತಕ್ಕ ಮಾತು. ಹಾಗಂತ, ಹೊಸ ನೀರು ಹರಿದುಬಂದಾಗ ಹಳೆ ನೀರು ಕೊಚ್ಚಿಕೊಂಡು ಹೋಗಬೇಕಂತೇನೂ ಇಲ್ಲ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎಂಬ ಡಿವಿಜಿಯವರ ಮಾತು ಅಕ್ಷರಶಃ ಸತ್ಯ. [ಹಿರಿಯರ ಕಡೆಗಣನೆ: ಕಾಂಗ್ರೆಸ್ಸಿನಲ್ಲಿ ಮತ್ತೆರಡು ರಾಜೀನಾಮೆ]

ಬಿಸಿರಕ್ತದ, ಹೊಸ ಪೀಳಿಗೆಯ ರಾಜಕಾರಣಿಗಳ ಶಕ್ತಿ, ಹುಮ್ಮಸ್ಸಿನೊಂದಿಗೆ ಪಳಗಿದ ರಾಜಕಾರಣಿಗಳ ಮುತ್ಸದ್ದಿತನ, ಪಕ್ವವಾದ ಅನುಭವ, ಚಿಂತನೆ ಜೊತೆಗೂಡಿದರೆ ಸಮೃದ್ಧ ರಾಜ್ಯವನ್ನು ಕಟ್ಟಲು ಸಾಧ್ಯ. ಅಂಥದೊಂದು ಮುತ್ಸದ್ದಿತನ ಎಸ್ಸೆಂ ಕೃಷ್ಣ ಅವರಲ್ಲಿತ್ತು. ಈಗಲೂ ಇದೆಯಾ?

ಸಿಂಗಪುರದ ಕನಸು ಕಂಡಿದ್ದ ಕೃಷ್ಣ

ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಸಿಂಗಪುರ ಮಾಡಬೇಕೆಂದು ಕನಸು ಕಂಡವರು ಎಸ್ಸೆಂ ಕೃಷ್ಣ. ಉದ್ಯಮಿಗಳನ್ನು ಕರೆತಂದರು, ಅವರಿಗೆ ಕೆಂಪುಹಾಸು ಹಾಸಿಕೊಟ್ಟರು, ಬೆಂಗಳೂರು ಅಂತಾರಾಷ್ಟ್ರೀಯ ಭೂಪಟದಲ್ಲಿ ರಾರಾಜಿಸುವಂತೆ ಶಕ್ತಿಮೀರಿ ಶ್ರಮಿಸಿದರು. ಇಂದು ಬೆಂಗಳೂರಲ್ಲಿ ಬೀಡುಬಿಟ್ಟಿರುವ ಎಷ್ಟೋ ಉದ್ಯಮಿಗಳು ಕೃಷ್ಣರವರಿಗೆ ಚಿರಋಣಿಯಾಗಿರಬೇಕು.[ರಾಜೀನಾಮೆಗೆ ಮುನ್ನ ಕೃಷ್ಣ, ಶಾರನ್ನು ಭೇಟಿ ಮಾಡಿದ್ದೇಕೆ?]

ಪಾಂಚಜನ್ಯ ಊದಿ ಮುಖ್ಯಮಂತ್ರಿಯಾದರು

1999ರಲ್ಲಿ ಪಾಂಚಜನ್ಯ ಊದಿ, ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕೃಷ್ಣ ಮುಖ್ಯಮಂತ್ರಿಯಾಗಿ ಇಡೀ ಜಗತ್ತು ತಮ್ಮೆಡೆ ತಿರುಗಿನೋಡುವಂತೆ ಮಾಡಿದರು. ಸಾಕಷ್ಟು ಅಭಿವೃದ್ಧಿ ಮಂತ್ರ ಪಠಿಸಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮತ್ತೆ ಗೆಲುವಿನ ಪಥಕ್ಕೆ ತರಲು ಅವರಿಗೆ ಸಾಧ್ಯವಾಗಲಿಲ್ಲ.[ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ-ಜನಾರ್ದನ ಪೂಜಾರಿ]

ಮುಂದಿನದು ಅವರ ಅವನತಿಯ ಹಾದಿ

1999ರಿಂದ 2004ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಪಡಬಾರದ ಕಷ್ಟಪಟ್ಟರು. ರಾಜ್ ಅಪಹರಣ, ಭೀಕರ ಬರ, ಸಂಚಾರಿ ಪೀಠ, ಕಾವೇರಿ ಗಲಾಟೆ ಅವರನ್ನು ಕಂಗೆಡಿಸಿತು. ಚುನಾವಣೆಯಲ್ಲಿ ಸೋತ ನಂತರ ಅವರನ್ನು ಮೂಲೆಗುಂಪು ಮಾಡಲಾಯಿತು. ಸಮಾಧಾನಕರ ಬಹುಮಾನವೆಂಬಂತೆ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡಲಾಯಿತು.

ಎಸ್ಸೆಂ ಕೃಷ್ಣ ಮಹಾನ್ ಮಹತ್ವಾಕಾಂಕ್ಷಿ

ರಾಜಕೀಯದಲ್ಲಿ ಏಳುಬೀಳನ್ನೇನೇ ಕಂಡಿರಲಿ ಎಸ್ಸೆಂ ಕೃಷ್ಣ ಮಹಾನ್ ಮಹತ್ವಾಕಾಂಕ್ಷಿ. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ಕರ್ನಾಟಕಕ್ಕೆ ವಾಪಸ್ ಬಂದು ಕಾಂಗ್ರೆಸ್ ಪಕ್ಷದ ಹತೋಟಿ ತೆಗೆದುಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಲೇ ಇದ್ದರು. ಅವರು ಆ ಸಮಯದಲ್ಲಿ ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲಿಯೇ ಹೆಚ್ಚಾಗಿ ಇರುತ್ತಿದ್ದುದೂ ಟೀಕೆಗೆ ಗುರಿಯಾಗಿತ್ತು. ಸಮಯ ಸಿಕ್ಕಾಗ ವಿಂಬಲ್ಡನ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದರು.

ಸಿದ್ದರಾಮಯ್ಯನವರನ್ನು ತಿವಿಯುತ್ತಲೇ ಇದ್ದಾರೆ

ಕೃಷ್ಣ ಅವರಲ್ಲಿ ಅಧಿಕಾರದಾಹ ಇದೆಯೆಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ಆದರೆ, ಅವರು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ನಡೆಯುತ್ತಿರುವುದನ್ನು ತಮ್ಮ ಮೊನಚು ದೃಷ್ಟಿಕೋನದಿಂದ ಗಮನಿಸುತ್ತಲೇ ಇದ್ದಾರೆ, ಮೊನಚಾದ ಮಾತುಗಳಿಂದ ಸಿದ್ದರಾಮಯ್ಯನವರನ್ನು ತಿವಿಯುತ್ತಲೇ ಇದ್ದಾರೆ. ಈ ಕಾರಣದಿಂದಾಗಿಯೇ ಸಿದ್ದುವಿನ ನಿಷ್ಠುರತೆಯನ್ನೂ ಕಟ್ಟಿಕೊಂಡಿದ್ದಾರೆ.

ರಾಮಕೃಷ್ಣ ಅನ್ನುತ್ತ ಕಾಲಕಳೆಯುವ ಕಾಲ

ಅವರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಏನೇ ಇರಲಿ, ಎಂಬತ್ತೈದರ ವಯಸ್ಸಿನಲ್ಲಿ ಅವರಿಂದ ರಾಜಕಾರಣ ಮಾಡಿಸುವುದು ಸಹಜವೆ, ಸಾಧುವೆ? ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ರಾಮಕೃಷ್ಣ ಅನ್ನುತ್ತ ಕಾಲಕಳೆಯುವ ಕಾಲವಿದು. ಆದರೂ ಅವರಲ್ಲಿರುವ ಆ ಅದಮ್ಯ ಉತ್ಸಾಹವನ್ನು ಮೆಚ್ಚಲೇಬೇಕು.

ಕೃಷ್ಣರಿಗಾಗಿ ಕೃಷ್ಣಾರ್ಪಣ ಯಡಿಯೂರಪ್ಪ?

ಒಂದು ವೇಳೆ ಬಿಜೆಪಿ ಬಂದರೂ ಅವರು ಯಾವ ಸ್ಥಾನವನ್ನು ತುಂಬಲಿದ್ದಾರೆ? ಮುಖ್ಯಮಂತ್ರಿ ಪದವಿಯ ಆಸೆಯನ್ನು ಯಡಿಯೂರಪ್ಪ ಕೃಷ್ಣರಿಗಾಗಿ ಕೃಷ್ಣಾರ್ಪಣ ಅನ್ನುತ್ತಾರಾ? ಇಷ್ಟೆಲ್ಲ ರಾಮಾಯಣ ನಡೆದ ನಂತರ ಕಾಂಗ್ರೆಸ್ಸಿನಲ್ಲಿ ಇರುತ್ತೇನೆಂದರೂ ಅವರಿಗೆ ಮೂರು ಕಾಸಿನ ಮರ್ಯಾದೆ ಸಿಗುವುದಿಲ್ಲ. ಇನ್ನು ಜೆಡಿಎಸ್ ಬಾಗಿಲು ಅವರಿಗಾಗಿ ಎಂದೂ ತೆರೆಯುವುದಿಲ್ಲ.

ಸಾಕಷ್ಟು ಉತ್ಸಾಹವಿದ್ದರೂ ಇನ್ನು ಸಾಕು

ಕೃಷ್ಣ ಅವರೇ, ಕಪಿಲ್ ದೇವ್ ಅವರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಕಡೆಗಾಲದಲ್ಲಿ ಎಂಥ ಮರ್ಯಾದೆ ಸಿಕ್ಕಿತ್ತೆಂದು ನಿಮಗೆ ನೆನಪಿರಬಹುದು. ನಿಮ್ಮಲ್ಲಿ ಸಾಕಷ್ಟು ಉತ್ಸಾಹವಿದ್ದರೂ ಇನ್ನು ಸಾಕು. ರಾಜ್ಯ ಮತ್ತು ರಾಷ್ಟ್ರ ರಾಜಕಾರಣವನ್ನು ಬದಿಗಿಟ್ಟು ಗೌರವಯುತವಾಗಿ ಯುವಜನತೆಗೆ ದಾರಿಮಾಡಿಕೊಡಿ. ಸಾಧ್ಯವಾದರೆ, ಯುವ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಿ. ನಿಮಗೆ ಶುಭವಾಗಲಿ.

English summary
Should SM Krishna, 85-year-old politician has bid adeau to Congress. The doors may be open in BJP, but is it good to continue in politics at this age? He should pave way for young politicians, guide them to become better citizen. Enough is enough sir, please retire from active politics.
Please Wait while comments are loading...