ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಜಾವರ ಶ್ರೀಗಳಿಗೆ ದಿನೇಶ್ ಅಮಿನ್ ಮಟ್ಟು ಬಹಿರಂಗ ಪತ್ರ

ಉಡುಪಿಯಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳ ನಡುವೆ, ಸಿಎಂ ಮಾಧ್ಯಮ ಕಾರ್ಯದರ್ಶಿ ದಿನೇಶ್ ಅಮಿನ್ ಮಟ್ಟು ಉಡುಪಿ ಪೇಜಾವರ ಶ್ರೀಗಳಿಗೆ ಬರೆದ ಬಹಿರಂಗ ಪತ್ರ.

By ದಿನೇಶ್ ಅಮಿನ್ ಮಟ್ಟು
|
Google Oneindia Kannada News

ಉಡುಪಿಯಲ್ಲಿ ನಡೆಯುತ್ತಿರುವ ಉಡುಪಿ ಚಲೋ, ಕನಕ ನಡೆ, ಸ್ವಾಭಿಮಾನದ ನಡಿಗೆ ಮುಂತಾದ ವಿದ್ಯಮಾನಗಳ ನಡುವೆ, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ದಿನೇಶ್ ಅಮಿನ್ ಮಟ್ಟು ಅವರು ಉಡುಪಿ ಪರ್ಯಾಯ ಪೇಜಾವರ ಶ್ರೀಗಳಿಗೆ ತಮ್ಮ ಫೇಸ್ ಬುಕ್ ಟೈಂನಲ್ಲಿ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ (ಸಂ)

ಪೇಜಾವರ ಸ್ವಾಮಿಜಿಯವರಿಗೆ ಗೌರವಪೂರ್ವಕ ನಮನಗಳು. ಇದು ಬಹಿರಂಗವಾಗಿ ನಾನು ಬರೆಯುತ್ತಿರುವ ಎರಡನೇ ಪತ್ರ. ಹಿಂದೊಮ್ಮೆ ನಾನು ಬರೆಯುತ್ತಿದ್ದ ಅಂಕಣದಲ್ಲಿ ನಿಮಗೊಂದು ಪತ್ರ ಬರೆದಿದ್ದೆ. ಅದಕ್ಕೆ ನೀವು ಗೌರವದಿಂದಲೇ ಪೋನಿನಲ್ಲಿ ಪ್ರತಿಕ್ರಿಯಿಸಿದ್ದೀರಿ. ಅದಕ್ಕೆ ಧನ್ಯವಾದಗಳು. (ಅವ್ರದ್ದು ಕನಕ ನಡೆ, ಇವ್ರದ್ದು ಸ್ವಾಭಿಮಾನದ ನಡಿಗೆ)

ಈ ಪತ್ರಕ್ಕೂ ಅಷ್ಟೇ ಆಸಕ್ತಿಯಿಂದ ಪ್ರತಿಕ್ರಿಯಿಸುತ್ತೀರಿ ಎಂದು ನಾನು ನಂಬಿದ್ದೇನೆ. ಇದು ವೈಯಕ್ತಿಕ ನೆಲೆಯಲ್ಲಿ ಬರೆಯುತ್ತಿರುವ ಪತ್ರ. ಈ ಪತ್ರಕ್ಕೂ ನಾನು ಸರ್ಕಾರದಲ್ಲಿ ಹೊಂದಿರುವ ಹುದ್ದೆಗಾಗಲಿ ಇಲ್ಲವೆ ದಲಿತ-ದಮನಿತರ ಸ್ವಾಭಿಮಾನ ಹೋರಾಟ ಸಮಿತಿಗಾಗಲಿ ಯಾವ ಸಂಬಂಧವೂ ಇಲ್ಲ. [ದಿನೇಶ್ ಅಮಿನ್ ಮಟ್ಟು ಅವರಿಗೆ ಭರತ್ ಶಾಸ್ತ್ರೀ ಓಪನ್ ಲೆಟರ್]

ಜವಾಬ್ದಾರಿಯುತ ನಾಗರಿಕನಾಗಿ ಕರ್ತವ್ಯ ಪ್ರಜ್ಞೆಯಿಂದ ಈ ಪತ್ರ ಬರೆಯುತ್ತಿದ್ದೇನೆ ಎಂದು ಸ್ಪಷ್ಟನೆಯನ್ನೂ ನೀಡಬಯಸುತ್ತೇನೆ. ವಿವರಗಳಿಗೆ ಹೋಗುವುದಿಲ್ಲ. ನಿಮ್ಮೂರಿನಲ್ಲಿ ನಡೆದ ಉಡುಪಿ ಚಲೋ ಕಾರ್ಯಕ್ರಮ ಮತ್ತು ಅದರ ನಂತರದ ಬೆಳವಣಿಗೆಗಳು ನಿಮಗೆ ಗೊತ್ತಿದೆ. ಈ ಬಗ್ಗೆ ಹೆಚ್ಚುಕಡಿಮೆ ಪ್ರತಿದಿನ ನೀವು ಪ್ರತಿಕ್ರಿಯಿಸುತ್ತಿದ್ದೀರಿ.

ಪೇಜಾವರ ಸ್ವಾಮಿಗಳನ್ನೇ ಯಾಕೆ ಕೆಣಕುತ್ತೀರಿ? ಬೇರೆಯವರಿಲ್ವೆ ? ಎಂದು ನಮ್ಮವರು-ನಿಮ್ಮವರು ಸೇರಿಯೇ ಕೆಲವರು ಕೇಳುತ್ತಿರುತ್ತಾರೆ. ನೀವು ಕೂಡಾ ಆ ಪ್ರಶ್ನೆಯನ್ನು ಕೇಳಿದ್ದೀರಿ. ನಿಮ್ಮ ಹೆಸರೆತ್ತಿ ನಾನು ಮಾತನಾಡಿರುವುದರಿಂದ ನನಗೆ ತಿಳಿದ ರೀತಿಯಲ್ಲಿ ಈ ಪ್ರಶ್ನೆಗೆ ಉತ್ತರಿಸುತ್ತೇನೆ. (ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಸುಮ್ನೆ ಬಿಡ್ತೀವಾ)

ವೈಯಕ್ತಿಕವಾಗಿ ನನಗೆ ನಿಮ್ಮ ಬಗ್ಗೆ ಗೌರವ ಇದೆ. ಇದು ಬಾಯುಪಚಾರದ ಮಾತಲ್ಲ. ನಿಮ್ಮನ್ನೇ ಯಾಕೆ ಎಂಬ ನಿಮ್ಮ ಪ್ರಶ್ನೆಗೆ ತಿರುಗಿ 'ನನ್ನನ್ನೇ ಯಾಕೆ?' ಎಂದು ನಾನು ಮರುಪ್ರಶ್ನಿಸಬಹುದು. ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಯಾವ ಮೂಲೆಯಲ್ಲಿ ಪ್ರಗತಿಪರರಿಂದ ಸಣ್ಣ ಪ್ರತಿಭಟನೆ,ಪ್ರತಿರೋಧ, ಚಳುವಳಿ, ಜಾಥಾಗಳು ನಡೆದರೂ ಕೂಡಾ ಅದರ ಹಿಂದೆ ನನ್ನ ಕುಮ್ಮಕ್ಕು ಇದೆಯೆಂದು ನಿಮ್ಮ ಸ್ನೇಹಿತರು ತೀರ್ಮಾನಿಸಿ ನನ್ನ ಮೇಲೆ ಅತ್ಯಂತ ಕೀಳು ಶಬ್ದಗಳಲ್ಲಿ ವೈಯಕ್ತಿಕವಾಗಿ ದಾಳಿ ನಡೆಸುತ್ತಾರೆ. ಮುಂದೆ ಓದಿ..

ದಿನೇಶ್ ಅಮಿನ್ ಪತ್ರ

ದಿನೇಶ್ ಅಮಿನ್ ಪತ್ರ

ನನ್ನ ಮೇಲಿನ ಅವರ ಆಕ್ರೋಶಕ್ಕೆ ಕಾರಣ ಇರಬಹುದು. ನಾನು ಸರಿಕಂಡದ್ದನ್ನು ಮುಲಾಜಿಲ್ಲದೆ ಸಮರ್ಥಿಸಿಕೊಂಡಿದ್ದೇನೆ, ಸರಿಕಾಣದ್ದನ್ನು ನಿರ್ಭಿತಿಯಿಂದ ಖಂಡಿಸಿದ್ದೇನೆ. ಮುಂದೆಯೂ ಮಾಡುತ್ತೇನೆ. ಇದಕ್ಕಾಗಿಯೇ ನನ್ನ ಮೇಲೆ ದಾಳಿ ನಡೆಸಲಾಗುತ್ತಿದೆ. ನಾನು ಬಾಯಿಮುಚ್ಚಿಕೊಂಡು ಕೂತಿದ್ದರೆ ಯಾರೂ ನನ್ನ ಸುದ್ದಿಗೆ ಬರುತ್ತಿರಲಿಲ್ಲ. ಇದು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡವರೆಲ್ಲ ತೆರಬೇಕಾದ ಬೆಲೆ. ನೀವು ಕೂಡಾ ಇದಕ್ಕೆ ಹೊರತಲ್ಲ.

ಸಾರ್ವಜನಿಕ ವಿಷಯಗಳನ್ನು ಪ್ರತಿಕ್ರಿಯೆ

ಸಾರ್ವಜನಿಕ ವಿಷಯಗಳನ್ನು ಪ್ರತಿಕ್ರಿಯೆ

ಕೇವಲ ಪೂಜೆ-ಪುನಸ್ಕಾರ, ಮಡಿ-ಮೈಲಿಗೆ ಹೀಗೆ ನಿಮಗೆ ಸರಿಕಂಡ ಧಾರ್ಮಿಕ ವಿಚಾರಗಳಿಗಷ್ಟೇ ನಿಮ್ಮ ನಡೆ-ನುಡಿಯನ್ನು ಸೀಮಿತಗೊಳಿಸಿದ್ದರೆ ಯಾರೂ ನಿಮ್ಮ ಸುದ್ದಿಗೆ ಬರುತ್ತಿರಲಿಲ್ಲ. ಆದರೆ ನೀವು ದಲಿತೋದ್ಧಾರದಿಂದ ಹಿಡಿದು ರಾಮಜನ್ಮಭೂಮಿ ಚಳವಳಿಯ ವರೆಗೆ, ಕಾಂಗ್ರೆಸ್ ಬಿಜೆಪಿಯಿಂದ ಹಿಡಿದು ಕಮ್ಯುನಿಸ್ಟರ ವರೆಗೆ ಬಹುತೇಕ ಸಾರ್ವಜನಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇದ್ದೀರಿ.

ಹಿಂದೂಗಳೆನ್ನೆಲ್ಲಾ ಒಂದು ಮಾಡಲು ಹೊರಟಿದ್ದೀರಿ

ಹಿಂದೂಗಳೆನ್ನೆಲ್ಲಾ ಒಂದು ಮಾಡಲು ಹೊರಟಿದ್ದೀರಿ

ಇದರ ಜತೆ ಹಿಂದುಗಳೆಲ್ಲರನ್ನು ಒಂದು ಮಾಡಲು ಹೊರಟಿರುವ ವಿಶ್ವಹಿಂದೂ ಪರಿಷತ್ ನ ನಾಯಕರೂ ಕೂಡಾ ಆಗಿದ್ದೀರಿ. ಅಷ್ಟಮಠದ ಸ್ವಾಮಿಗಳು ಸರಿಯೋ? ತಪ್ಪೋ? ಅವರು ತಮ್ಮ ಮಠಗಳ ಎರಡೂ ಬಾಗಿಲುಗಳನ್ನು ಮುಚ್ಚಿ ಒಳಗೊಳಗೆ ತಮಗೆ ಸರಿಕಂಡದ್ದನ್ನು ಮಾಡುತ್ತಾ ಸುಖವಾಗಿ ಇದ್ದಾರೆ. ನೀವು ಹಾಗಲ್ಲ. ಈಗಾಗಲೇ ಮಠದ ಒಂದು ಬಾಗಿಲು ತೆರೆದು ಒಂದು ಕಾಲುಹೊರಗಿಟ್ಟಿದ್ದೀರಿ. ಅಂದರೆ ನೀವು ಅಸ್ಪರ್ಶ್ಯತೆಯ ನಿವಾರಣೆಗಾಗಿ ದಲಿತರ ಕೇರಿಗೆ ಹೋಗಿಬಂದಿದ್ದೀರಿ. ಇದಕ್ಕೆ ನಿಮ್ಮವರಿಂದಲೇ ವ್ಯಕ್ತವಾದ ವಿರೋಧವನ್ನು ದಿಟ್ಟತನದಿಂದ ಎದುರಿಸಿದ್ದೀರಿ.

ವಿವೇಕಾನಂದರ ಚಿಂತನೆ ನಿಮಗೆ ಪ್ರೇರಣೆ ನೀಡಲಿ

ವಿವೇಕಾನಂದರ ಚಿಂತನೆ ನಿಮಗೆ ಪ್ರೇರಣೆ ನೀಡಲಿ

ಈಗ ನೀವು ಮಾಡಬೇಕಾಗಿರುವುದು ಮುಚ್ಚಿದ ಎರಡನೆ ಬಾಗಿಲನ್ನು ತೆರೆದು ಎರಡನೇ ಕಾಲನ್ನೂ ಕೂಡಾ ಹೊರಗಿಟ್ಟು ದಲಿತರನ್ನು ಮಠದೊಳಗೆ ಕರೆತಂದು ಜೊತೆಯಲ್ಲಿ ಕೂರಿಸಿಕೊಳ್ಳಬೇಕು ಎಂದಷ್ಟೇ ನನ್ನಂತಹವನ ಕಳಕಳಿಯ ಮನವಿ. ಇಂತಹ ಕೆಲಸಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆ ನಿಮಗೆ ಪ್ರೇರಣೆ ನೀಡಲಿ ಎಂದು ನಾನು ಆಶಿಸುತ್ತೇನೆ. ಇದನ್ನು ಮಾಡದೆ ಹೋದರೆ ಮಠದಲ್ಲಿ ಮುಚ್ಚಿರುವ ಅರ್ಧಬಾಗಿಲು ಮತ್ತು ಹೊರಗಿಟ್ಟ ನಿಮ್ಮ ಒಂದುಕಾಲು ನಿಮ್ಮ ಆತ್ಮವಂಚನೆಯ ನಡವಳಿಕೆಯ ಸಂಕೇತವಾಗಿ ಜಗತ್ತಿಗೆ ಕಾಣಿಸುತ್ತದೆ. ಈ ಕಾರಣಕ್ಕಾಗಿ ಮನವಿ. ಒತ್ತಡ,ಒತ್ತಾಯ ಎಲ್ಲವೂ. ಇದನ್ನು ತಪ್ಪಾಗಿ ಗ್ರಹಿಸಬೇಡಿ.

ಸಹಪಂಕ್ತಿ ಭೋಜನ

ಸಹಪಂಕ್ತಿ ಭೋಜನ

ಹೌದು ಸ್ವಾಮೀಜಿಗಳೇ,
ದೇವಸ್ಥಾನ ಸ್ಥಾಪನೆಯನ್ನು ಸಾಮಾಜಿಕ ಚಳುವಳಿಯ ಭಾಗವಾಗಿ ನಡೆಸಿ ಯಶಸ್ವಿಯಾದ ನಾರಾಯಣ ಗುರುಗಳ ಅನುಯಾಯಿ ನಾನು. ದಲಿತರು ಮತ್ತು ದಮನಿತರ ಬದುಕಿನ ಆದ್ಯತೆ ದೇವಸ್ಥಾನ ಪ್ರವೇಶ ಇಲ್ಲವೇ ಸಹಪಂಕ್ತಿಭೋಜನ ಖಂಡಿತ ಅಲ್ಲ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಹಾಡ್ ಕೆರೆ ನೀರನ್ನು ಮುಟ್ಟಿರುವುದು ಬಾಯಾರಿಕೆಯಿಂದಲ್ಲ, ಕಾಳಾರಾಮ್ ದೇವಸ್ಥಾನ ಪ್ರವೇಶಿಸಿದ್ದು ದೇವರ ಮೇಲಿನ ಭಕ್ತಿ ಯಿಂದಲ್ಲ. ಸಂಕೇತಗಳು ಪ್ರತಿಭಟನೆ-ಚಳವಳಿಗಳ ಭಾಗವಾಗಿರುತ್ತದೆ. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಹಿಂದೆ ಉಪ್ಪಿನ ಚಿಂತೆ ಮಾತ್ರ ಇರಲಿಲ್ಲವಲ್ಲಾ?

ಬೇಡಿಕೆಗಳ ಈಡೇರಿಕೆಗಾಗಿ ನೀವು ಕೈಜೋಡಿಸಬಹುದು

ಬೇಡಿಕೆಗಳ ಈಡೇರಿಕೆಗಾಗಿ ನೀವು ಕೈಜೋಡಿಸಬಹುದು

ದಲಿತ-ದಮನಿತರಿಗೆ ಗೌರವದ ಬದುಕಿನ ಜತೆಗೆ ಅಗತ್ಯವಾಗಿ ಬೇಕಾಗಿರುವುದು ಶಿಕ್ಷಣ, ಭೂಮಿ ಮತ್ತು ಅವಕಾಶ. ಇದನ್ನು ನೀವು ನೀಡಲಾರಿರಿ. ಆದರೆ ಈ ಬೇಡಿಕೆಗಳ ಈಡೇರಿಕೆಗಾಗಿ ನೀವು ಕೈಜೋಡಿಸಬಹುದು. ಇದರಿಂದ ಆ ಹೋರಾಟಕ್ಕೂ ಬಲಬರುತ್ತದೆ. ಇದು ಸಾಧ್ಯವಾಗಬೇಕಾದರೆ ದಲಿತ-ದಮನಿತರು ಮತ್ತು ನಿಮ್ಮ ನಡುವೆ ಇರುವ ಅಸ್ಪೃಶ್ಯತೆಯ ಗೋಡೆಯನ್ನು ಕೆಡವಿ ಅವರನ್ನುನಿಮ್ಮೊಳಗೆ ಬಿಟ್ಟುಕೊಡಬೇಕು. ಮನೆ-ಮನಸ್ಸುಗಳಿಂದ ಹೊರಗಿಟ್ಟು ನಾವೆಲ್ಲ ಒಂದು ಎಂದು ಹೇಳಿದರೆ ಹಿಪಾಕ್ರಸಿ ಆಗುತ್ತದೆ ಅಸ್ಪೃಶ್ಯತೆಯ ನಿವಾರಣೆಯ ನಿಮ್ಮ ಉದ್ದೇಶ ಪ್ರಾಮಾಣಿಕವೇ ಆಗಿದ್ದರೆ ನಿಮ್ಮ ನಡವಳಿಕೆ ಹಿಪಾಕ್ರಸಿ ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ.

ನಿಮ್ಮ ಕೇರಿಗೆ ಬಂದಾಗ ಮುಖ ತಿರುಗಿಸಿದಿರಿ

ನಿಮ್ಮ ಕೇರಿಗೆ ಬಂದಾಗ ಮುಖ ತಿರುಗಿಸಿದಿರಿ

ಅಂತಹದ್ದೊಂದು ಅವಕಾಶ ನಿಮ್ಮ ಮಠದ ಅಂಗಳಕ್ಕೆ ಬಂದಿತ್ತು. ಆದರೆ ನೀವು ಅದನ್ನು ಬಳಸಿಕೊಳ್ಳಲಿಲ್ಲ, 'ಉಡುಪಿ ಚಲೋ' ಕಾರ್ಯಕ್ರಮವನ್ನು ಬೆಂಬಲಿಸಿ ಒಂದು ಹೇಳಿಕೆ ನೀಡಿದ್ದರೆ ನೀವು ಎಲ್ಲರ ಕಣ್ಣಲ್ಲಿ ದೊಡ್ಡವರಾಗಿ ಬಿಡುತ್ತಿದ್ದೀರಿ. ದಲಿತರ ಕೇರಿಗೆ ನೀವು ಹೋದಿರಿ, ಅವರೇ ನಿಮ್ಮ ಕೇರಿಗೆ ಬಂದಾಗ ಮುಖ ತಿರುಗಿಸಿ ಕೂತುಬಿಟ್ಟಿರಿ.

ಚಲೋ ಉಡುಪಿಯಿಂದ ಉಡುಪಿ ಮಲಿನ

ಚಲೋ ಉಡುಪಿಯಿಂದ ಉಡುಪಿ ಮಲಿನ

ಇಷ್ಟುಮಾತ್ರವಲ್ಲ ಕಿಡಿಗೇಡಿತನದಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ 'ಚಲೋ ಉಡುಪಿಯಿಂದ ಉಡುಪಿ ಮಲಿನವಾಗುತ್ತಿದೆ. ಇದನ್ನು ಸ್ವಚ್ಚಗೊಳಿಸಲು ಸ್ವಚ್ಚ ಉಡುಪಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ' ಎಂಬ ಹೇಳಿಕೆಯನ್ನು ಕಾರ್ಯಕ್ರಮದ ಹಿಂದಿನ ದಿನ ನೀಡಿದ. ಸ್ವಾಮೀಜಿಗಳೇ, ಆ ಕ್ಷಣದಲ್ಲಿ ಅಂತಹ ಅವಮಾನಕಾರಿ ಹೇಳಿಕೆಯನ್ನು ನಾಲ್ಕು ಶಬ್ದಗಳಲ್ಲಿ ನೀವು ಖಂಡಿಸಿಬಿಟ್ಟಿದ್ದರೆ ನಿಮ್ಮ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗುತ್ತಿತ್ತು.

ಕಾರ್ಯಕ್ರಮ ನಿಲ್ಲಿಸುವಂತೆ ತಿಳಿಸಿ

ಕಾರ್ಯಕ್ರಮ ನಿಲ್ಲಿಸುವಂತೆ ತಿಳಿಸಿ

ಆದರೆ ನೀವು ಆಗ ಮಾತ್ರವಲ್ಲ, ನಂತರವೂ ಖಂಡಿಸಲಿಲ್ಲ. ಬದಲಿಗೆ ಪರೋಕ್ಷವಾಗಿ ಬೆಂಬಲಿಸಿದಿರಿ. ಈ ನಿಮ್ಮ ನಡವಳಿಕೆ ಆ ಕಿಡಿಗೇಡಿತನದ ಹಿಂದೆ ನೀವು ಇದ್ದಿರೇನೋ ಎಂಬ ಅನುಮಾನ ಹುಟ್ಟಲು ಕಾರಣವಾಗಿದೆ. ಈಗಲೂ ಕಾಲ ಮಿಂಚಿಲ್ಲ. ನೀವು ದಲಿತ-ದಮನಿತರನ್ನು ಮಾತ್ರವಲ್ಲ, ಈ ವರ್ಗದ ಪ್ರತಿನಿಧಿಯಾಗಿರುವ ಕನಕದಾಸರನ್ನೂ ಅವಮಾನಿಸುವ ಕಾರ್ಯಕ್ರಮವನ್ನು ನಿಲ್ಲಿಸುವಂತೆ ತಿಳಿಸಿ. ನಿಮ್ಮಮಾತನ್ನು ಕೇಳುವುದಿಲ್ಲವೆಂದಾದರೆ ಅವರು ನಿಮ್ಮವರಾಗುವುದಿಲ್ಲ ಸ್ವಾಮಿಗಳೆ.

ಸಾಮೂಹಿಕ ನಾಯಕತ್ವ

ಸಾಮೂಹಿಕ ನಾಯಕತ್ವ

'ನಾನೇನೋ ಪ್ರಯತ್ನ ಮಾಡಬಹುದು, ದಲಿತ -ದಮನಿತರ ಸ್ವಾಭಿಮಾನ ಹೋರಾಟ ಸಮಿತಿ ತನ್ನ ಕಾರ್ಯಕ್ರಮವನ್ನು ಸ್ಥಗಿತಗೊಳಿಸುತ್ತೋ ?' ಎಂದು ನೀವುಕೇಳಬಹುದು. ಅದೂ ಕಷ್ಟ ಇದೆ. ಯಾಕೆಂದರೆ ಅದಕ್ಕೆ ಒಬ್ಬ ನಾಯಕನಿಲ್ಲ, ಅದು ಸಾಮೂಹಿಕ ನಾಯಕತ್ವದ ಮೂಲಕ ನಡೆಯುತ್ತಿದೆ. ಹೀಗಿದ್ದರೂ ಬಹಳ ಕಾಲದಿಂದ ನಾನು ಬಲ್ಲ ಯುವಕ-ಯುವತಿಯರೇ ಆ ಸಂಘಟನೆಯಲ್ಲಿರುವುದರಿಂದ ಅವರ ಮನವೊಲಿಸಬಹುದು ಎಂಬ ಭರವಸೆ ನನಗಿದೆ.

ಸಂಘಟನೆಗಳ ಸಹಭಾಗಿತ್ವ

ಸಂಘಟನೆಗಳ ಸಹಭಾಗಿತ್ವ

ಅವರು ನನ್ನೊಬ್ಬನ ಮಾತನ್ನು ಖಂಡಿತ ಕೇಳಲಾರರು. ಆದರೆ ಅವರ ಕೋರಿಕೆಯಂತೆ ಕಾರ್ಯಕ್ರಮದ ಜತೆ ಗುರುತಿಸಿಕೊಂಡಿರುವ ನೂರಾರು ಹಿರಿಯರಿದ್ದಾರೆ, ಮಠ-ಮಂದಿರಗಳ ಸ್ವಾಮೀಜಿಗಳಿದ್ದಾರೆ, 165ಕ್ಕೂ ಹೆಚ್ಚು ಸಂಘಟನೆಗಳ ಸಹಭಾಗಿತ್ವ ಇದೆ. ಈ ಹಿರಿಯರ , ಸ್ವಾಮೀಜಿಗಳ ಮತ್ತು ಸಂಘಟನೆಗಳ ನಾಯಕರ ಮನವಿಗೆ ದಲಿತ-ದಮನಿತರ ಸ್ವಾಭಿಮಾನ ಹೋರಾಟ ಸಮಿತಿ ಸ್ಪಂದಿಸಬಹುದೇನೋ?

ನಿಮ್ಮ ಸಹಕಾರ ಅಗತ್ಯ

ನಿಮ್ಮ ಸಹಕಾರ ಅಗತ್ಯ

ಇದಕ್ಕಾಗಿ ಹಿರಿಯರಾದ ನಿಮ್ಮ ಸಹಕಾರ ಅಗತ್ಯ. ಮೊದಲು ಸ್ವಚ್ಛ ಉಡುಪಿ, ಕನಕ ನಡಿಗೆ ಹೀಗೆ ದಿನಕ್ಕೊಂದು ಹೆಸರು ಕೊಟ್ಟು ದಲಿತರನ್ನು ಲೇವಡಿಮಾಡುವ ಉದ್ದೇಶದಿಂದ ನಡೆಸಲಾಗುತ್ತಿರುವ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಅದರ ಸಂಘಟಕರಿಗೆ ಬುದ್ದಿ ಹೇಳಿ.. ಅದೇ ರೀತಿ ಸ್ವಾಭಿಮಾನ ನಡಿಗೆಯನ್ನೂ ನಿಲ್ಲಿಸುವಂತೆ ಸಮಿತಿಗೆ ಮತ್ತು ಅದರ ಜತೆ ಗುರುತಿಸಿಕೊಂಡಿರುವ ಹಿರಿಯರಿಗೆ, ಸ್ವಾಮೀಜಿಗಳಿಗೆ ಹಾಗೂ ಸಂಘಟನೆಗಳಿಗೆ ಮನವಿಮಾಡಿ. ಉಳಿದದ್ದನ್ನು ಪರಸ್ಪರ ಕೂತು ಚರ್ಚಿಸಬಹುದು.

ಉಡುಪಿ ನೆಮ್ಮದಿ ಕೆದಡಬಹುದು

ಉಡುಪಿ ನೆಮ್ಮದಿ ಕೆದಡಬಹುದು

ಈ ಎರಡೂ ಕಾರ್ಯಕ್ರಮಗಳು ನಡೆದುಹೋದರೆ ಉಡುಪಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರಿಗೂ ಕಷ್ಟವಾಗಬಹುದು. ಅಹಿತಕಾರಿ ಘಟನೆಗಳು ನಡೆದುಹೋದರೆ ಎರಡು ಸಂಘಟನೆಗಳು ಮಾತ್ರವಲ್ಲ ನಾವು-ನೀವು ಎಲ್ಲರೂ ಜವಾಬ್ದಾರರಾಗುತ್ತೇವೆ. ಪ್ರೀತಿಯಿಂದ, ದಿನೇಶ್ ಅಮಿನ್ ಮಟ್ಟು. (ಈ ಪತ್ರವನ್ನು ಸ್ವಾಮೀಜಿಗಳಿಗೆ ಕೊರಿಯರ್ ಮೂಲಕ ಕಳಿಸಿದ್ದೇನೆ)

English summary
Chief Minister Siddaramaiah's Media Secretary Dinesh Amin Mattu open letter to Udupi Pejawar Seer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X