ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಹಗೀರ್‍ದಾರ್ ಬಂಗಲೆ ಈಗ ವಸ್ತು ಸಂಗ್ರಹಾಲಯ!

By ಬಿ.ಎಂ.ಲವಕುಮಾರ್
|
Google Oneindia Kannada News

ಚಾಮರಾಜನಗರ, ಮೇ 16 : ಚಾಮರಾಜನಗರದ ಯಳಂದೂರಿನಲ್ಲಿರುವ ಜಹಗೀರ್‍ದಾರ್ ಬಂಗಲೆ ಶತಮಾನಗಳ ಇತಿಹಾಸವನ್ನು ಸಾರುತ್ತಾ ನಿಂತಿದೆ. ಮೈಸೂರು ಪ್ರಾಂತ್ಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ದಿವಾನ್ ಪೂರ್ಣಯ್ಯನವರ ಸ್ಮರಣಾರ್ಥ ನಿರ್ಮಾಣಗೊಂಡ ಈ ಬಂಗಲೆ, ಇಂದು ದಿವಾನ್ ಪೂರ್ಣಯ್ಯ ಸ್ಮಾರಕ ಜಿಲ್ಲಾ ವಸ್ತು ಸಂಗ್ರಹಾಲಯವಾಗಿದೆ.

ಈ ಬಂಗಲೆ ಪಟ್ಟಣದಲ್ಲಿರುವ ಬಂಗಲೆಗಳ ಪೈಕಿ ಅಪರೂಪದ ವಿನ್ಯಾಸದಿಂದ ನಿರ್ಮಾಣಗೊಂಡಿದ್ದು ಆಕರ್ಷಕವಾಗಿದೆ. ನಿರ್ಮಾಣಗೊಂಡ ಕೆಲವು ದಶಕಗಳ ಕಾಲ ವೈಭವ ಮೆರೆದಿದ್ದ ಬಂಗಲೆ ಬಳಿಕ ಕಳಾಹೀನವಾಗಿ, ಪಾಳು ಬಂಗಲೆಯಾಗಿ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿತ್ತು. ಬಂಗಲೆಯ ದುಸ್ಥಿತಿ ಕಂಡು ಜನರು ಮರುಗಿದ್ದರು. [ಚಾಮರಾಜನಗರ ಜಿಲ್ಲಾಡಳಿತ ಭವನದ ಕತೆ-ವ್ಯಥೆ]

jahagirdar bungalow

ಬಂಗಲೆ ದುಸ್ಥಿತಿಯನ್ನು ಕಂಡ ಚಾಮರಾಜನಗರ ಸಂಸದ ಕ್ಷೇತ್ರದ ಸಂಸದ ಆರ್.ಧ್ರುವನಾರಾಯಣ (ಕಾಂಗ್ರೆಸ್) ಬಂಗಲೆಯನ್ನು ಸ್ಮಾರಕವಾಗಿ ಉಳಿಸಿ ಪ್ರವಾಸಿಗರ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ರಾಜ್ಯ ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯ ಇಲಾಖೆಗಳ ನಿರ್ದೇಶಕರಾಗಿದ್ದ ಡಾ.ಆರ್.ಗೋಪಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದಲ್ಲದೆ, ದಿವಾನ್ ಪೂರ್ಣಯ್ಯರವರ ವಂಶಸ್ಥರ ಮನವೊಲಿಸುವಲ್ಲಿಯೂ ಯಶಸ್ವಿಯಾದರು.

ನಂತರ ಬಂಗಲೆಗೆ ಕಾಯಕಲ್ಪ ನೀಡುವ ಕಾರ್ಯವೂ ಆರಂಭವಾಯಿತು. ಕಟ್ಟಡದ ಪುನಶ್ಚೇತನಕ್ಕಾಗಿ ರಾಜ್ಯ ಪ್ರಾಚ್ಯ ವಸ್ತು ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯದ ಇಲಾಖಾವತಿಯಿಂದ 50 ಲಕ್ಷ ರೂ. ಹಣ ಬಿಡುಗಡೆಯಾಯಿತು. [ಚಾಮರಾಜನಗರದ ಕಾಡಂಚಿನಲ್ಲೊಂದು ರೊಟ್ಟಿ ಹಬ್ಬ!]

ಆದರೆ, ಈ ಸಂದರ್ಭದಲ್ಲಿ ದಿವಾನ್ ಪೂರ್ಣಯ್ಯರವರ 8ನೇ ತಲೆಮಾರಿನ ಮರಿಸೊಸೆ ಸುಕನ್ಯಾ ಪೂರ್ಣಯ್ಯ ಅವರು ಬಂಗಲೆಯನ್ನು ಜಿಲ್ಲಾ ವಸ್ತು ಸಂಗ್ರಹಾಲವಾಗಿ ರೂಪುಗೊಳಿಸಿ ಅದಕ್ಕೆ 'ದಿವಾನ್ ಪೂರ್ಣಯ್ಯ ಸ್ಮಾರಕ ಜಿಲ್ಲಾ ವಸ್ತು ಸಂಗ್ರಹಾಲಯ' ಎಂದು ಹೆಸರಿಟ್ಟು, ವಸ್ತು ಸಂಗ್ರಹಾಲಯದ ಹಿಂಭಾಗದಲ್ಲಿರುವ ತಮ್ಮ ಖಾಲಿ ನಿವೇಶನದಲ್ಲಿ ತಾವು ಉಳಿದುಕೊಳ್ಳಲು ಒಂದು ಮನೆ ನಿರ್ಮಿಸಿಕೊಡಬೇಕು ಎಂದು ಷರತ್ತು ವಿಧಿಸಿದರು.

ಷರತ್ತಿಗೆ ಒಪ್ಪಿಗೆ ನೀಡಿದ ಸರ್ಕಾರ ಜಹಗೀರ್‍ದಾರ್ ಬಂಗಲೆಗೆ ದಿವಾನ್ ಪೂರ್ಣಯ್ಯ ಸ್ಮಾರಕ ಜಿಲ್ಲಾ ವಸ್ತು ಸಂಗ್ರಹಾಲಯ ಎಂದು ಹೆಸರಿಡಲು 2011ರ ನವೆಂಬರ್ 20ರಂದು ಆದೇಶ ಹೊರಡಿಸಿತು.

23/11/2011 ರಿಂದ 22/11/2044ರವರೆಗೆ 33 ವರ್ಷಗಳ ಕಾಲ ಪ್ರತಿ ವರ್ಷ 1 ಸಾವಿರ ರೂ.ಗಳ ಬಾಡಿಗೆಯಂತೆ 33 ಸಾವಿರ ರೂ.ಗಳಿಗೆ ಭೋಗ್ಯಕ್ಕೆ ಪಡೆಯಲು ಜಂಟಿ ಒಪ್ಪಂದದ ಪತ್ರಕ್ಕೆ ಸಹಿ ಹಾಕಿತು. ಇದರಿಂದಾಗಿ ಶತಮಾನಗಳ ಇತಿಹಾಸ ಹೊಂದಿರುವ ಬಂಗಲೆ ಸ್ಮಾರಕವಾಗಿ ಉಳಿದು ಸಾರ್ವಜನಿಕ ಸೇವೆಗೆ ಲಭ್ಯವಾಗಲು ಸಾಧ್ಯವಾಯಿತು.

ಬಂಗಲೆ ಇತಿಹಾಸ : ದಿವಾನ್ ಪೂರ್ಣಯ್ಯನವರು ಒಬ್ಬ ಉತ್ತಮ ಆಡಳಿತಗಾರರಾಗಿದ್ದರು. ಇವರು ಹೈದರಾಲಿ, ಟಿಪ್ಪುಸುಲ್ತಾನ್ ಹಾಗೂ ಮೈಸೂರು ಅರಸರ ಕಾಲದಲ್ಲಿ ದಿವಾನರಾಗಿ ಸೇವೆ ಸಲ್ಲಿಸಿ ಮೈಸೂರು ಪ್ರಾಂತ್ಯದಲ್ಲಿ ಹೆಸರುವಾಸಿಯಾಗಿದ್ದರು.

ಇವರಲ್ಲಿದ್ದ ಸಂಘಟನಾ ಹಾಗೂ ಆಡಳಿತ ಚತುರತೆಯನ್ನು ಮೆಚ್ಚಿದ ಅಂದಿನ ಮೈಸೂರು ಒಡೆಯರ್ ಆಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಫಲವತ್ತಾದ 33 ಕೆರೆಗಳುಳ್ಳ, 6 ಪ್ರಭೇದದ ಸಸ್ಯವರ್ಗವನ್ನು ಹೊಂದಿದ ಕವಿಗಳ ಬೀಡೆಂಬ ಖ್ಯಾತಿಪಡೆದಿದ್ದ ಹದಿನಾಡು ಪ್ರಾಂತ್ಯವಾದ ಯಳಂದೂರು ತಾಲೂಕನ್ನು ಬ್ರಿಟಿಷರ ಒಪ್ಪಿಗೆ ಮೇರೆಗೆ ಜಹಗೀರ್‍ದಾರರಾಗಿ ದಿವಾನ್ ಪೂರ್ಣಯ್ಯರವರಿಗೆ ನೀಡಿದ್ದರು.

ಆ ನಂತರದ ಕಾಲದಲ್ಲಿ ಈ ಭೂಮಿಯಲ್ಲಿ ದಿವಾನ್ ಪೂರ್ಣಯ್ಯನವರ ಸ್ಮರಣಾರ್ಥ ಬಂಗಲೆಯನ್ನು ನಿರ್ಮಿಸಿ ಇತಿಹಾಸದ ಪುಟಗಳಲ್ಲಿ ಅವರ ಹೆಸರನ್ನು ಚಿರಸ್ಥಾಯಿ ಮಾಡಬೇಕೆನ್ನುವ ಉದ್ದೇಶದಿಂದ ಅವರ ವಂಶಸ್ಥರಾದ ಪಿ.ಎನ್.ಕೃಷ್ಣಮೂರ್ತಿರವರು 1907ರಲ್ಲಿ ಯಳಂದೂರಿನಲ್ಲಿ ಭವ್ಯ ಕಟ್ಟಡ ನಿರ್ಮಿಸಿದರು. ಅದರಲ್ಲಿ ಜಹಗೀರ್‍ದಾರ್ ಬಂಗಲೆಯೂ ಒಂದಾಗಿದೆ.

1956ರಲ್ಲಿ ಮೈಸೂರು ರಾಜ್ಯ ಕರ್ನಾಟಕವಾಗಿ ಏಕೀಕರಣಗೊಂಡ ಬಳಿಕ ದಿವಾನ್ ಪೂರ್ಣಯ್ಯರವರ ವಂಶಸ್ಥರು ವಿವಿಧ ಉದ್ದೇಶಗಳಿಂದ ಬೆಂಗಳೂರಿಗೆ ಸ್ಥಳಾಂತರಗೊಂಡರು. ಹೀಗಾಗಿ ಜಹಗೀರ್‍ದಾರ್ ಬಂಗಲೆ ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿತ್ತು.

ಆದರೆ, ಸಕಾಲದಲ್ಲಿ ಸಂಸದ ಧ್ರುವನಾರಾಯಣ್‍ರವರು ತೆಗೆದುಕೊಂಡ ತೀರ್ಮಾನ ನೇಪಥ್ಯಕ್ಕೆ ಸರಿಯುತ್ತಿದ್ದ ಐತಿಹಾಸಿಕ ಬಂಗಲೆಯೊಂದು ಮುಂದಿನ ತಲೆಮಾರಿಗೂ ಉಳಿಯುವಂತಾಗಿದೆ.

English summary
More than a hundred year old Diwan Poornaiah's Bungalow in Yelandur town, Chamarajanagar district popularly known as Jahagirdar Bungalow, has now became a museum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X