ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ: ದೇವೇಗೌಡ್ರ ಪ್ರಾಮಾಣಿಕ ಪ್ರಯತ್ನಕ್ಕೊಂದು ಲೈಕ್ ಕೊಡಿ

By ಬಾಲರಾಜ್ ತಂತ್ರಿ
|
Google Oneindia Kannada News

ಕಾವೇರಿ ಜಲವಿವಾದದ ಕಾವು ರಾಜ್ಯದ ಯಾವ ಮುಖ್ಯಮಂತ್ರಿಗಳನ್ನೂ ಬಿಟ್ಟಿಲ್ಲ. ಈಗ ದೂಷಿಸುವವರೆಲ್ಲರೂ ತಮ್ಮ ಅವಧಿಯಲ್ಲಿ ನೀರು ಬಿಟ್ಟು ಕೃತಾರ್ಥರಾಗಿದ್ದನ್ನು ಬಿಟ್ಟರೆ, ರಾಜ್ಯದ ಹಿತ ಕಾಯುವ ಕೆಲಸವನ್ನು ನಮ್ಮ ರಾಜಕಾರಣಿಗಳು ಮಾಡಿದ ಉದಾಹರಣೆಗಳು ವಿರಳ.

ಕಾವೇರಿ ನ್ಯಾಯಾಧಿಕರಣ ಮಂಡಳಿಯ ಆದೇಶ, ಸುಪ್ರೀಂಕೋರ್ಟ್ ತೀರ್ಪು, ನ್ಯಾಯಾಂಗ ನಿಂದನೆ ಹೀಗೆಲ್ಲಾ ಕಾರಣಗಳಿಂದ ತಮಿಳುನಾಡಿಗೆ ನೀರು ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲೂ ಹರಿಯುತ್ತಲೇ ಇತ್ತು/ಇದೆ. ಆದರೆ ಕೋರ್ಟ್ ಆದೇಶಕ್ಕೆ ವಿರುದ್ದವಾಗಿ ನಿಂತು ಉದಾಹರಣೆಯಾಗಿದ್ದು ಮಾತ್ರ ಸಾರೇಕೊಪ್ಪ ಬಂಗಾರಪ್ಪ. (ತ.ನಾಡಿಗೆ ನೀರು ಹರಿಸಲು ಹೇಳಿದ್ದು ನಾನೇ)

ಸದ್ಯ, 2016ನೇ ಸಾಲಿನ ಉಭಯ ರಾಜ್ಯಗಳ ನಡುವಣ ಕಾವೇರಿ ಜಲವಿವಾದದ 'ಗುಮ್ಮ' ಮತ್ತೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಆಡಳಿತ ಪಕ್ಷದವರನ್ನು ವಿರೋಧ ಪಕ್ಷದವರು ದೂರುವುದು, ನಿಮ್ಮ ಅವಧಿಯಲ್ಲಿ ನೀವು ಮಾಡಿದ್ದೇನು ಎಂದು ಆಡಳಿತ ಪಕ್ಷದವರ ದೋಷಾರೋಪಣೆಯ ನಡುವೆ ಕಾವೇರಿ ಸಾಂಗವಾಗಿ ತಮಿಳುನಾಡಿಗೆ ಹರಿಯುತ್ತಿದ್ದಾಳೆ.

ಕರ್ನಾಟಕದ ಜನತೆಯ, ರಾಜಕಾರಣಿಗಳ ಎದಿರು ಎರಡು ಸಾಧ್ಯತೆಗಳಿವೆ. ಒಂದು, ಭಾವನಾತ್ಮಕವಾಗಿ ಚಿಂತನೆ ನಡೆಸಿದರೆ, ಸುಪ್ರೀಂ ಕೋರ್ಟನ್ನೂ ಎದುರು ಹಾಕಿಕೊಂಡು ಆದದ್ದಾಗಲಿ ಎಂದು ಜೀವನ್ಮರಣದ ಹೋರಾಟಕ್ಕೆ ನಿಲ್ಲಬೇಕು.

ಮತ್ತೊಂದು, ಕಾನೂನಿನ ಚೌಕಟ್ಟಿನಲ್ಲಿ ಮಾಡಿಕೊಂಡಿರುವ ಒಪ್ಪಂದಗಳನ್ನು ಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಅಣತಿಯಂತೆ ನಡೆದುಕೊಂಡು, ನ್ಯಾಯಾಲಯದಲ್ಲಿ ಪ್ರಬಲ ಹೋರಾಟ ನಡೆಸಬೇಕು. ಇಲ್ಲಿ ಭಾವನಾತ್ಮಕವಾಗಿ ಚಿಂತನೆ ನಡೆಸಿದರೆ ನಮಗೆ ಸೋಲು ಕಟ್ಟಿಟ್ಟ ಬುತ್ತಿ.

ಇದನ್ನು ಮೊದಲು ಅರಿತುಕೊಂಡವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ. ಕಾವೇರಿ ನೀರು ಹಂಚಿಕೆ ಪ್ರಕರಣ ಕೋರ್ಟ್ ಮೆಟ್ಟಿಲೇರಿರುವುದರಿಂದ ಕರ್ನಾಟಕದ ಜನತೆಯ ಮಟ್ಟಿಗೆ ಕಾನೂನು ಹೋರಾಟ ನಡೆಸದೆ ಗತ್ಯಂತರವೇ ಇಲ್ಲ. ಇದನ್ನೇ ದೇವೇಗೌಡರು ಪ್ರತಿಪಾದಿಸುತ್ತಿರುವುದು. (ಗೌಡರಿಂದ ಅಣೆಕಟ್ಟುಗಳ ವೈಮಾನಿಕ ಸಮೀಕ್ಷೆ)

ಈ ಬಾರಿಯ ವಿವಾದದಲ್ಲಿ ಜೆಡಿಎಸ್ ವರಿಷ್ಠ, ದೇವೇಗೌಡರ ಮುತ್ಸದ್ದಿತನ ವ್ಯಾಪಕ ಪ್ರಶಂಸೆಗೊಳಗಾಗಿದೆ. ತಮ್ಮದೇ ಪಕ್ಷದವರು ಸಿದ್ದು ಸರಕಾರವನ್ನು ದೂಷಿಸುತ್ತಿದ್ದರೂ, ಗೌಡ್ರ ಇಡುತ್ತಿರುವ ಗಂಭೀರ ನಡೆ ರೈತರಿಗೆ ಎಲ್ಲೋ ಒಂದು ಕಡೆ ಆಶಾಭಾವನೆ ಮೂಡುವಂತೆ ಮಾಡಿದೆ.

ರಾಜ್ಯ ರಾಜಕೀಯ ಮತ್ತು ಕಾವೇರಿ ಜಲಾಯನ ಪ್ರದೇಶದಲ್ಲಿರುವ ಅಣೆಕಟ್ಟಿನ ಬಗ್ಗೆ ಅರಿದು ಕುಡಿದಿರುವ ಗೌಡ್ರು, ಅತ್ತ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳದೇ ತನ್ನದೆ ಶೈಲಿಯಲ್ಲಿ ಪರಿಸ್ಥಿತಿಯ ವಾಸ್ತವತೆಯನ್ನು ಅರಿಯುವ ಕೆಲಸವನ್ನು ಮಾಡುತ್ತಿದ್ದಾರೆ.

ಕಾವೇರಿ ವಿಚಾರದಲ್ಲಿ ಗೌಡ್ರ ಒಂದೊಂದು ಹೆಜ್ಜೆಯನ್ನು ಹತ್ತು ಸ್ಲೈಡಿನಲ್ಲಿ ವಿವರಿಸಲಾಗಿದೆ..

ನೀರು, ಏಕತೆಯ ವಿಚಾರದಲ್ಲಿ ಒಗ್ಗಟ್ಟಾಗಿರಿ

ನೀರು, ಏಕತೆಯ ವಿಚಾರದಲ್ಲಿ ಒಗ್ಗಟ್ಟಾಗಿರಿ

ರಾಜಕೀಯ ಮಾಡುವುದಕ್ಕೆ ಬೇಕಾದಷ್ಟು ವಿಚಾರಗಳು ಸಿಗುತ್ತವೆ, ಆದರೆ ನೀರು ಹಂಚಿಕೆ ಮತ್ತು ರಾಜ್ಯದ ಏಕತೆಯ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಯಾವುದೇ ವಿವಾದದ ಬಗ್ಗೆ ಸಂಪೂರ್ಣ ಅರಿವಿದ್ದರೆ ಮಾತ್ರ ಹೇಳಿಕೆ ನೀಡಬೇಕು ಎಂದು ಸ್ವಪಕ್ಷೀಯರಿಗೂ ಸೇರಿ ಗೌಡ್ರು ಎಲ್ಲರ ಕಿವಿಹಿಂಡಿದ್ದಾರೆ.

ತಮಿಳುನಾಡಿಗೆ ನೀರು ಬಿಡುವುದು ಸರಿಯಾದ ನಿರ್ಧಾರ

ತಮಿಳುನಾಡಿಗೆ ನೀರು ಬಿಡುವುದು ಸರಿಯಾದ ನಿರ್ಧಾರ

ಸರ್ವೋಚ್ಚ ನ್ಯಾಯಾಯಲದ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿಗೆ ನೀರು ಬಿಡುವ ನಿರ್ಧಾರಕ್ಕೆ ಬಂದಿರುವುದು ಸರಿಯಾದ ನಿರ್ಧಾರ. ಅವರಿಗೆ ಬೇರೆ ಆಯ್ಕೆ ಇರಲಿಲ್ಲಅವರಿಗೆ ನೀರು ಬಿಡಲು ಹೇಳಿದ್ದು ನಾನೇ ಎಂದು ಗೌಡ್ರು, ಸಿದ್ದು ಸರಕಾರವನ್ನು ಸಮರ್ಥಿಸಿಕೊಂಡಿದ್ದರು.

ಗಂಭೀರವಾಗಿ ಕೇಸನ್ನು ಮುನ್ನಡೆಸಿ

ಗಂಭೀರವಾಗಿ ಕೇಸನ್ನು ಮುನ್ನಡೆಸಿ

ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯ ಆರಂಭದಲ್ಲೇ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತೇವೆಂದು ರಾಜ್ಯದ ವಕೀಲರು ಅಫಿಡವಿಟ್ ಸಲ್ಲಿಸಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಗೌಡ್ರು, ಆಗಿದ್ದು ಆಗೋಯ್ತು, ಇನ್ನಾದರೂ ಗಂಭೀರವಾಗಿ ಕೇಸನ್ನು ಮುನ್ನಡೆಸಿ ಎಂದು ಸೂಚಿಸಿದ್ದಾರೆನ್ನುವುದು ಆಫ್ ದಿ ರೆಕಾರ್ಡ್ ವರದಿ.

ವಿರೋಧ ಪಕ್ಷಗಳ ಒತ್ತಡಕ್ಕೆ ನಾನ್ ಸೆನ್ಸ್ ಅಂದ ಗೌಡ್ರು

ವಿರೋಧ ಪಕ್ಷಗಳ ಒತ್ತಡಕ್ಕೆ ನಾನ್ ಸೆನ್ಸ್ ಅಂದ ಗೌಡ್ರು

ರಾಜ್ಯದ ಪರ ವಕೀಲ ಫಾಲಿ ನಾರಿಮನ್ ಅವರನ್ನು ಬದಲಾಯಿಸಬೇಕು ಎನ್ನುವ ಸ್ವಪಕ್ಷೀಯರು ಸೇರಿ ವಿರೋಧ ಪಕ್ಷಗಳ ಒತ್ತಡಕ್ಕೆ ನಾನ್ ಸೆನ್ಸ್ ಅಂದಿರುವ ಗೌಡ್ರು, ನಾರಿಮನ್ ಅವರಿಗೆ ಜಲ ವಿವಾದದ ಸಂಪೂರ್ಣ ಅರಿವಿದೆ. ಹೊಸಬರನ್ನು ಈ ಸಂದರ್ಭದಲ್ಲಿ ನೇಮಿಸಿದರೆ ಮೊದಲಿನಿಂದ ವಿವರಿಸಿಕೊಂಡು ಬರಬೇಕಾಗುತ್ತದೆ ಎನ್ನುವ ಹೇಳಿಕೆಯನ್ನು ನೀಡಿದ್ದರು.

ಕಾವೇರಿ ನೀರಿನ ಬಗೆ ಸವಿಸ್ತಾರವಾಗಿ ವಿವರಣೆ

ಕಾವೇರಿ ನೀರಿನ ಬಗೆ ಸವಿಸ್ತಾರವಾಗಿ ವಿವರಣೆ

ತಾವೇ ಖುದ್ದಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕರೆಮಾಡಿ, ಪ್ರಧಾನಿ ಭೇಟಿಗೆ ಅವಕಾಶ ಪಡೆದುಕೊಂಡು ಮೋದಿಯವರನ್ನು ಭೇಟಿಯಾಗಿ ಕಾವೇರಿ ವಿಚಾರದಲ್ಲಿ ರಾಜ್ಯ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ವಸ್ತುಸ್ಥಿತಿಯನ್ನು ಗೌಡ್ರು ವಿವರಿಸಿದ್ದಾರೆ.

ನೀರಿನ ಸಂಗ್ರಹಣೆ ಬಗ್ಗೆ ಹೆಚ್ಚಿನ ಮಾಹಿತಿ

ನೀರಿನ ಸಂಗ್ರಹಣೆ ಬಗ್ಗೆ ಹೆಚ್ಚಿನ ಮಾಹಿತಿ

ಇದಾದ ನಂತರ ನಾರಿಮನ್ ಅವರನ್ನು ಭೇಟಿಯಾದ ಗೌಡ್ರು, ಎಲ್ಲಿ ನಮಗೆ ಕೇಸ್ ರಿವರ್ಸ್ ಹೊಡೆದಿದ್ದು ಎನ್ನುವ ಮಾಹಿತಿಯನ್ನು ಪಡೆದಿದ್ದಾರೆ. ನಿಮ್ಮ ಮುಂದಿನ ನಡೆಯೇನು ಎನ್ನುವುದರ ಬಗ್ಗೆ ಕೇಳಿದ್ದಾರೆ. ಕಾವೇರಿ ಭಾಗದ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹಣೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಗೌಡ್ರು, ನಾರಿಮನ್ ಅವರಿಗೆ ತಿಳಿಸಿ ಬಂದಿದ್ದಾರೆ.

ಗೌಡ್ರ ವೈಮಾನಿಕ ಸಮೀಕ್ಷೆ

ಗೌಡ್ರ ವೈಮಾನಿಕ ಸಮೀಕ್ಷೆ

ಇದಾದ ನಂತರ ಕಬಿನಿ, ಹೇಮಾವತಿ, ಹಾರಂಗಿ, ಕೃಷ್ಣರಾಜ ಸಾಗರ ಅಣೆಕಟ್ಟಿನ ಭಾಗದಲ್ಲಿ ಸರ್ಕಾರೇತರ ಖರ್ಚ್ಚಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೂ ಹೋಗಿ ಸಮೀಕ್ಷೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಅಣೆಕಟ್ಟಿನಲ್ಲಿ ನೀರು ಇಲ್ಲದಿದ್ದರೆ ಎಲ್ಲಿಂದ ನೀರು ಬಿಡುವುದು

ಅಣೆಕಟ್ಟಿನಲ್ಲಿ ನೀರು ಇಲ್ಲದಿದ್ದರೆ ಎಲ್ಲಿಂದ ನೀರು ಬಿಡುವುದು

ನಾನಿಲ್ಲಿ ರಾಜಕೀಯ ಮಾಡೋಕೆ ಬಂದಿಲ್ಲ. ವಾಸ್ತವತೆಯನ್ನು ಪ್ರಧಾನಿ, ನಾರಿಮನ್, ಸಿಎಂ ಮತ್ತು ಕಾವೇರಿ ನ್ಯಾಯಾಧಿಕರಣ ಮಂಡಳಿಗೆ ತಿಳಿಸುತ್ತೇನೆ. ಸುಪ್ರೀಂ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದೇಶ ಪಾಲಿಸಿ ನೀರು ಬಿಡಬೇಕು ಎಂದು ಹೇಳಿದ್ದು ನಿಜ. ಆದರೆ, ಅಣೆಕಟ್ಟಿನಲ್ಲಿ ನೀರು ಇಲ್ಲದಿದ್ದರೆ ಎಲ್ಲಿಂದ ನೀರು ಬಿಡುವುದು ಎನ್ನುವ ಮೂಲಕ ಗೌಡ್ರು, ವಾಸ್ತವ ಸ್ಥಿತಿಯನ್ನು ಅನಾವರಣ ಮಾಡಿದ್ದಾರೆ.

ತಮಿಳುನಾಡಿನಲ್ಲಿ 3ನೇ ಬೆಳೆಗೆ ನೀರು ಕೇಳುತ್ತಿದ್ದಾರೆ

ತಮಿಳುನಾಡಿನಲ್ಲಿ 3ನೇ ಬೆಳೆಗೆ ನೀರು ಕೇಳುತ್ತಿದ್ದಾರೆ

ತಮಿಳುನಾಡಿನಲ್ಲಿ 3ನೇ ಬೆಳೆಗೆ ನೀರು ಕೇಳುತ್ತಿದ್ದಾರೆ. ಇಲ್ಲಿ ಮೊದಲ ಬೆಳೆಗೆ ನೀರು ಇನ್ನೂ ಒದಗಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಬಗ್ಗೆ ಕಾನೂನು ತಜ್ಞರು, ಜಲ ಸಂಪನ್ಮೂಲ ತಜ್ಞರ ಜತೆ ಚರ್ಚಿಸಿ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.

ವಾಸ್ತವತೆಯನ್ನು ಅರಿತು ಗೌಡ್ರ ನಡೆಸುತ್ತಿರುವ ಹೋರಾಟ

ವಾಸ್ತವತೆಯನ್ನು ಅರಿತು ಗೌಡ್ರ ನಡೆಸುತ್ತಿರುವ ಹೋರಾಟ

ಇಳಿ ವಯಸ್ಸಿನಲ್ಲಿ ದೇವೇಗೌಡ್ರ ಈ ಎಲ್ಲಾ ಪ್ರಯತ್ನ ಫಲ ಕೊಡುತ್ತೋ, ಇಲ್ಲವೋ ಎನ್ನುವುದು ನಂತರದ ಪ್ರಶ್ನೆಯಾದರೂ, ಪರಿಸ್ಥಿತಿಯ ವಾಸ್ತವತೆಯನ್ನು ಅರಿತು ಗೌಡ್ರ ನಡೆಸುತ್ತಿರುವ ಈ ಹೋರಾಟಕ್ಕೆ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಎಲ್ಲರೂ ಭೇಷ್ ಅನ್ನಬೇಕಲ್ಲವೇ?

English summary
Cauvery water dispute: JDS supremo HD Deve Gowda in action. Deve Gowda met PM Modi, Karnataka Advocate Fali Nariman and done arial survey on Cuvery area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X