ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದ ತೀರ್ಮಾನ ಏನೇ ಇರ್ಲಿ, ಮೊದಲು ನೀರು ಬಿಡಿ : ಸುಪ್ರೀಂ ಆದೇಶ

By Prasad
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27 : ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಕರ್ನಾಟಕ ಬಿಡಬೇಕೆಂಬ ಆದೇಶವನ್ನು ಮಾರ್ಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ಹೂಡಿರುವ ಅರ್ಜಿಯ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಗಳವಾರ 2 ಗಂಟೆಗೆ ಆರಂಭವಾಗಿ 3 ಗಂಟೆಗೆ ಮುಕ್ತಾಯವಾಗಿದೆ.

ಸಮಸ್ಯೆ ಬಗೆಹರಿಸಿಕೊಳ್ಳಿ : ನೀರು ಬಿಡದಿರುವ ಕರ್ನಾಟಕದ ನಿರ್ಣಯವನ್ನು ಮಾನ್ಯ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಖಡಕ್ಕಾಗಿ ಹೇಳಿದೆ. ಇದಕ್ಕೆ ಪ್ರತಿಯಾಗಿ, ಕೇಂದ್ರ ಸರಕಾರ ಎರಡೂ ರಾಜ್ಯಗಳನ್ನು ಕೂಡಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬುಧವಾರ, ಗುರುವಾರ ಮತ್ತು ಶುಕ್ರವಾರ ಮೂರು ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದೂ ಕೋರ್ಟ್ ಆದೇಶಿಸಿದ್ದು, ನಂತರ ವಿಚಾರಣೆಯನ್ನು ಮತ್ತೆ ಆಲಿಸಲಿದೆ. ಕರ್ನಾಟಕ ಆದೇಶಕ್ಕೆ ಮಾನ್ಯತೆ ನೀಡಿ ನೀರು ಬಿಡುವುದಾ ಅಥವಾ ತನ್ನ ನಿರ್ಣಯಕ್ಕೆ ಅಂಟಿಕೊಳ್ಳುವುದಾ?

ನೀರು ಬಿಡಲು ಸಾಧ್ಯವೇ ಇಲ್ಲ : ಜಲಾಶಯಗಳಲ್ಲಿ ನೀರು ಇಲ್ಲದಿರುವುದರಿಂದ ನವೆಂಬರ್ ಕೊನೆಯವರೆಗೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕದ ವಕೀಲ ಫಾಲಿ ನಾರಿಮನ್ ಅವರು ವಾದ ಮಂಡಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನವೆಂಬರ್ ನಲ್ಲಾದರೂ ನೀರು ಹೇಗೆ ಬಿಡುತ್ತೀರಿ ಎಂಬ ಪ್ರಶ್ನೆಗೆ ನಾರಿಮನ್ ಅವರ ಉತ್ತರ "ದೈವೇಚ್ಛೆ ಮೈಲಾರ್ಡ್!"

ತಮಿಳುನಾಡು ವಾದ : ತಮಿಳುನಾಡಿಗೆ ಕಾವೇರಿ ನೀರು ಹರಿಸುವವರೆಗೆ ಕರ್ನಾಟಕದ ಅರ್ಜಿಯನ್ನು ಆಲಿಸಬಾರದು ಎಂದು ತಮಿಳುನಾಡು ಪರ ವಕೀಲರು ವಾದ ಮಂಡಿಸಿದರು. ಯಾವ ಕಾನೂನಿನಡಿ ನೀರು ಬಿಡಲಾಗುವುದಿಲ್ಲವೆಂದು ನಿರ್ಣಯ ತೆಗೆದುಕೊಂಡಿರಿ ಎಂದು ಸರ್ವೋಚ್ಚ ನ್ಯಾಯಾಲಯದ ಘನ ನ್ಯಾಯಮೂರ್ತಿಗಳು ಕೂಡ ಪ್ರಶ್ನಿಸಿದರು.. [ನಿರ್ವಹಣಾ ಮಂಡಳಿ ರಚನೆ, ಸುಪ್ರೀಂ ಪೀಠಗಳಲ್ಲೇ ದ್ವಂದ್ವ!]

ಸಂಸದರ ಉಪಸ್ಥಿತಿ : ನ್ಯಾಯಾಲಯದಲ್ಲಿ ಕಾಂಗ್ರೆಸ್ಸಿನ ಚಿತ್ರದುರ್ಗದ ಸಂಸದ ಬಿಎನ್ ಚಂದ್ರಪ್ಪ, ತುಮಕೂರು ಸಂಸದ ಮುದ್ದ ಹನುಮೇಗೌಡ, ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್, ಚಿಕ್ಕೋಡಿ ಶಾಸಕ ಪ್ರಕಾಶ್ ಹುಕ್ಕೇರಿ, ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಗೌಡ ಮುಂತಾದವರು ಕಂಡುಬಂದರು. [ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

Cauvery issue : Application for modification by Karnataka before Supreme Court

ತಮಿಳುನಾಡಿಗೆ 3000 ಕ್ಯೂಸೆಕ್ಸ್ ನೀರು ಬಿಡಬೇಕೆಂಬ ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿದ್ದ ಆದೇಶವನ್ನು ತಿರಸ್ಕರಿಸಿ, ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಯು. ಲಲಿತ್ ಅವರಿದ್ದ ವಿಭಾಗೀಯ ಪೀಠ ಸೆಪ್ಟೆಂಬರ್ 20ರಂದು ಆಜ್ಞೆ ನೀಡಿತ್ತು.

ಇದಕ್ಕೆ ಪ್ರತಿಯಾಗಿ, ಕರ್ನಾಟಕ ಒಂದು ದಿನದ ವಿಶೇಷ ಅಧಿವೇಶನ ನಡೆಸಿ, ಕೆಆರ್ ಎಸ್, ಹಾರಂಗಿ, ಹೇಮಾವತಿ ಮತ್ತು ಕಬಿನಿ ಜಯಾಶಯಗಳಲ್ಲಿ ನೀರಿಲ್ಲದಿದ್ದರಿಂದ, ಇರುವ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಲಾಗುವುದೆಂದು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿತ್ತು.

ಈ ನಿರ್ಣಯ ನ್ಯಾಯಾಂಗ ನಿರ್ಣಯವಾಗುವುದಾ ಅಥವಾ ಕರ್ನಾಟಕದ ಜಲಾಶಯಗಳಲ್ಲಿ ನೀರಿಲ್ಲದಿರುವುದನ್ನು ಪರಿಗಣಿಸಿ, ರಾಜ್ಯದ ರೈತರ ಹಿತಾಸಕ್ತಿಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿಯುವುದಾ ಎಂದು ಕಾದುನೋಡಬೇಕಿದೆ.

ಅರ್ಜಿಯಲ್ಲಿ, ಡಿಸೆಂಬರ್ ವರೆಗೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ತಮಿಳುನಾಡಿಗೆ 2.25 ಲಕ್ಷ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶ ನೀಡಲಾಗಿತ್ತು. ಇದಕ್ಕೆ ಮಾನ್ಯತೆ ನೀಡಿ ಈವರೆಗೆ 1.96 ಲಕ್ಷ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. 26 ಸಾವಿರ ಕ್ಯೂಸೆಕ್ಸ್ ನೀರು ಮಾತ್ರ ಬಿಡಬೇಕಾಗಿರುವುದು ಎಂದು ಕರ್ನಾಟಕ ತಿಳಿಸಿದೆ.

English summary
Cauvery issue LIVE : Application for modification by Karnataka before Supreme Court. Justice Deepak Mishra and Justice Uday Lalit to hear the application filed by Karnataka for modification of order passed on 20th September to release 6000 cusecs of water to Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X