ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ವಿವಾದ : ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07 : ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಆದೇಶದ ಬಗ್ಗೆ ಚರ್ಚಿಸಲು ಮಂಗಳವಾರ ಸಂಜೆ ಸರ್ವಪಕ್ಷಗಳ ಸಭೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಎಂ.ವೀರಪ್ಪ ಮೊಯ್ಲಿ, ಕೇಂದ್ರ ಸಚಿವರಾದ ಅನಂತಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಮುಂತಾದವರು ಪಾಲ್ಗೊಂಡಿದ್ದರು.

ಸಭೆಯ ಬಳಿಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿದರು ಅದರ ವಿವರ ಇಲ್ಲಿದೆ....[ಸುಪ್ರೀಂ ಆದೇಶ ಪಾಲನೆ, ತಮಿಳುನಾಡಿಗೆ ಹರಿದ ಕಾವೇರಿ]

siddaramaiah

ಕಾವೇರಿ ನದಿಯಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡಬೇಕು ಎಂಬ ತಮಿಳುನಾಡು ಸರ್ಕಾರದ ಬೇಡಿಕೆಯ ಮೇರೆಗೆ ಸರ್ವೋಚ್ಛ ನ್ಯಾಯಾಲಯವು ದಿನಾಂಕ 05-09-2016 ರಂದು ಹತ್ತು ದಿನಗಳ ಕಾಲ 15,000 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು.[ಕನ್ನಡಿಗರಿಗೇ ಕಾವೇರಿ 'ನೀರು ಕುಡಿಸಿದ' ರಾಜಕಾರಣಿಗಳು]

ಮೂರು ತಾಸುಗಳಿಗೂ ಹೆಚ್ಚು ಸಮಯ ಜರುಗಿದ ಈ ಸಭೆಯಲ್ಲಿ ಸದ್ಯದ ಪರಿಸ್ಥಿತಿ ಮತ್ತು ಸರ್ಕಾರ ತೆಗೆದು ಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆದು, ಮುಂದಿನ ಕ್ರಮಗಳ ಸಾಧಕ ಬಾಧಕಗಳ ಸಮಾಲೋಚನೆ ನಡೆಸಿದ ನಂತರ ಸರ್ಕಾರವು ಒಂದು ನಿರ್ಧಾರಕ್ಕೆ ಬಂದಿದೆ‌.[ಕಾವೇರಿ ತೀರ್ಪು: ರಾಜ್ಯ ಸರ್ಕಾರ ರೈತರ ಕ್ಷಮೆ ಕೇಳಲಿ]

ನಮ್ಮ ರಾಜ್ಯದಲ್ಲಿಯೇ ರೈತರಿಗೆ ಮತ್ತು ಜನರಿಗೆ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ. ಈ ಸಮಸ್ಯೆಯ ತೀವ್ರತೆಯ ಅರಿವು ಸರ್ಕಾರಕ್ಕಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿಯೂ ಸಹ ನ್ಯಾಯಾಲಯದ ತೀರ್ಪು ನಮ್ಮ ರಾಜ್ಯದ ಹಿತಕ್ಕೆ ವಿರುದ್ಧವಾಗಿ ಬಂದಿರುವುದು ದುರದೃಷ್ಟಕರ. 2012ರಲ್ಲಿ ಬಿಜೆಪಿ ಸರ್ಕಾರ ಆಡಳಿತದ ಸಂದರ್ಭದಲ್ಲಿ ಇಂತಹುದೇ ಪರಿಸ್ಥಿತಿ ಇದ್ದಾಗ ನಮ್ಮ ಕಾನೂನು ತಜ್ಞರು 10, 000 ಕ್ಯೂಸೆಕ್ ನೀರನ್ನು 10 ದಿನಗಳ ಕಾಲ ಬಿಡುವುದಾಗಿ ಹೇಳಿದ್ದರು.[ಗಾಯದ ಮೇಲೆ ಬರೆ: ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ]

ಆಗ ಅದನ್ನು ನ್ಯಾಯಾಲಯವು ಪುರಸ್ಕರಿಸಿತ್ತು. ಪರಿಣಾಮವಾಗಿ ಆಗಿನ ಸರ್ಕಾರ ಆದೇಶವನ್ನು ಅನಿವಾರ್ಯವಾಗಿ ಪಾಲಿಸಿತ್ತು. ಇದೇ ಉದಾಹರಣೆಯನ್ನು ಈ ಸಲವೂ ಕಾನೂನು ತಜ್ಞರು ಪಾಲಿಸಬೇಕಾಗಿ ಬಂದ ಕಾರಣ ನಮ್ಮ ನ್ಯಾಯವಾದಿಗಳು ಈ ಸಲವೂ 10 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ತಿಳಿಸಿದ್ದರು. ಆದರೆ, ದುರದೃಷ್ಟವಶಾತ್ ನ್ಯಾಯಾಲಯವು ಇದನ್ನು ಒಪ್ಪದೇ ತಮಿಳುನಾಡಿನ 20,000 ಕ್ಯೂಸೆಕ್ ನೀರಿನ ಬೇಡಿಕೆಗೆ ಪ್ರತಿಯಾಗಿ 15,000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದೆ.

ಸಂವಿಧಾನಬದ್ಧವಾಗಿ ರಚನೆಯಾಗಿರುವ ಒಂದು ಸರ್ಕಾರವಾಗಿ ನಮ್ಮ ರಾಜ್ಯ ಸರ್ಕಾರವು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವುದು ಕಷ್ಟಸಾಧ್ಯ. ಮೇಲಾಗಿ ಅಕ್ಟೋಬರ್ 18ನೇ ತಾರೀಖಿನಂದು ಕಾವೇರಿ ನೀರು ಹಂಚಿಕೆಯ ಸಂಬಂಧವಾಗಿ ಮುಖ್ಯದಾವೆಯ ವಿಚಾರಣೆ ನಡೆಯಲಿದೆ. ಈಗ ನ್ಯಾಯಾಲಯ ನೀಡಿರುವ ಆದೇಶದ ಪಾಲನೆ ಅಥವಾ ಉಲ್ಲಂಘನೆಯು ಮುಖ್ಯದಾವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕಾನೂನು ತಜ್ಞರು ಈಗ ನ್ಯಾಯಾಲಯದ ಆದೇಶವನ್ನು ಪಾಲಿಸುವ ಸೂಚನೆ ನೀಡಿರುತ್ತಾರೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ನಮ್ಮ ರಾಜ್ಯಕ್ಕೆ ಆಗುವ ಅನ್ಯಾಯದ ಅರಿವಿನೊಂದಿಗೇ ಸರ್ಕಾರ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ತಿಳಿಸಬಯಸುತ್ತೇನೆ. ಇದೇ ಸಂದರ್ಭದಲ್ಲಿ ಇಂದು ಸರ್ವಪಕ್ಷ ಸಭೆಯಲ್ಲಿ ಬಂದ ಸಲಹೆಗಳ ಮೇರೆಗೆ ಕೂಡಲೇ ಸರ್ಕಾರವು ಸುಪ್ರೀಂಕೋರ್ಟಿಗೆ ತನ್ನ ಆದೇಶವನ್ನು ಮಾರ್ಪಡಿಸಲು ಕೋರಿ ಅರ್ಜಿ ಸಲ್ಲಿಸಲಿದೆ.

cauvery dispute

ಈ ವಿಷಯದಲ್ಲಿ ಮೇಲ್ವಿಚಾರಣೆ ನಡೆಸಲು ರಚಿತವಾಗಿರುವ ಮೇಲ್ವಿಚಾರಣಾ ಸಮಿತಿಗೆ ನಮ್ಮ ಸರ್ಕಾರವು ಕೂಡಲೇ ಪತ್ರ ಬರೆದು ರಾಜ್ಯಕ್ಕೆ ಪರಿಣಿತರ ತಂಡವನ್ನು ಕಳುಹಿಸಿ ಇಲ್ಲಿನ ಕಷ್ಟಕರ ಪರಿಸ್ಥಿತಿಯನ್ನು ಪರಿಗಣಿಸಿ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ಒತ್ತಾಯವನ್ನೂ ಮಾಡಲಾಗುವುದು.

ನಮ್ಮ ಸರ್ಕಾರವು ರಾಜ್ಯದ ರೈತರ ಮತ್ತು ಜನರ ಹಿತಾಸಕ್ತಿಗೆ ಬದ್ಧವಾಗಿದೆಯಲ್ಲದೆ ನಮ್ಮ ಜನರಿಗೆ ಕುಡಿಯುವ ನೀರನ್ನು ಮತ್ತು ರೈತರ ಬೆಳೆಗಳಿಗೆ ನೀರನ್ನು ಒದಗಿಸುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತದೆ. ರಾಜ್ಯದ ಜನತೆ ಮತ್ತು ರೈತರು ಈ ಸಂದಿಗ್ಧ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸಂಯಮ ಕಳೆದುಕೊಳ್ಳದೇ ಶಾಂತಿ ಕಾಪಾಡುವ ಮೂಲಕ ಸರ್ಕಾರವು ಕಾವೇರಿ ನೀರಿನ ವಿಷಯದಲ್ಲಿ ರಾಜ್ಯದ ಜನರ ಪರವಾಗಿ ನಡೆಸುವ ಕಾನೂನು ಹೋರಾಟಕ್ಕೆ ಬೆಂಬಲ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

English summary
Karnataka will release Cauvery water to Tamil Nadu as per the Supreme Court order said, Chief Minister Siddaramaiah after an all-party meeting on September 6, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X