ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!

By:
Subscribe to Oneindia Kannada

ಬೆಂಗಳೂರು, ಸೆ. 27: ಕಾವೇರಿ ಕೊಳ್ಳದ ಕಬಿನಿ, ಕೃಷ್ಣರಾಜ ಸಾಗರ, ಹಾರಂಗಿ ಹಾಗೂ ಹೇಮಾವತಿ ಒಳಗೊಂಡಂತೆ ನಾಲ್ಕೂ ಜಲಾಶಯಗಳಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಸಂರಕ್ಷಿಸಿದರೆ ಮಾತ್ರ ಮೈಸೂರು, ಮಂಡ್ಯ ಸೇರಿದಂತೆ ಹುಣಸೂರಿನಿಂದ ಬೆಂಗಳೂರಿನವರೆಗೆ ಕುಡಿಯುವ ನೀರು ಪೂರೈಕೆಯನ್ನು ಸರಿದೂಗಿಸಲು ಸಾಧ್ಯ. ಇಲ್ಲವಾದಲ್ಲಿ ಈ ಭಾಗದ ಜನರು ಮುಂದಿನ 2017 ನೇ ಸಾಲಿನಲ್ಲಿ ಅತ್ಯಂತ ಕಠಿಣವಾದ ಬೇಸಿಗೆಯನ್ನು ಎದುರಿಸಬೇಕಾದೀತು ಎಂದು ಖಡಕ್ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿನ ನೀರಿನ ಮಟ್ಟ ಹಾಗೂ ನದಿ ಪಾತ್ರದ ಜನರ ದುಃಖ-ದುಮ್ಮಾನಗಳ ವಾಸ್ತವಾಂಶದ ಚಿತ್ರಣವನ್ನು ಅರಿಯಲು ಬೆಂಗಳೂರಿನ ಮಾಧ್ಯಮ ತಂಡ ನಡೆಸಿದ ಎರಡನೇ ದಿನದ ಅಧ್ಯಯನ ಪ್ರವಾಸದಲ್ಲಿ ಈ ಅಂಶವು ಬೆಳಕಿಗೆ ಬಂದಿದೆ. ಹೀಗಾಗಿ ಸುಪ್ರೀಂಕೋರ್ಟಿನಲ್ಲಿ ಜನವರಿ ತನಕ ನೀರು ಬಿಡದಂತೆ ಆದೇಶ ನೀಡುವಂತೆ ಕೋರುವ ಸಾಧ್ಯತೆಯಿದೆ.[ಹೇಮಾವತಿ ನದಿಯ ಯಗಚಿ ಜಲಾಶಯ ಸಂಪೂರ್ಣ ಖಾಲಿ]

ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಲ್ಲಿನ ಗರಿಷ್ಠ ನೀರು ಸಂಗ್ರಹಣಾ ಸಾಮಾಥ್ರ್ಯ 37.103 ಟಿ.ಎಂ.ಸಿ. ಇದಕ್ಕೆ ಪ್ರತಿಯಾಗಿ ಇಂದಿನ ನೀರಿನ ಸಂಗ್ರಹಣಾ ಮಟ್ಟ 4.372. ಟಿ.ಎಂ.ಸಿ ಹರಿ ನೀರಾವರಿ, ಏತ ನೀರಾವರಿ ಹಾಗೂ ಕುಡಿಯುವ ನೀರು ಬಳಕೆಗೆ ಉಪಯೋಗಿಸಲಾಗುತ್ತಿದ್ದ ಈ ನೀರನ್ನು ಇದೀಗ ಕೇವಲ ಕುಡಿಯುವ ನೀರು ಉದ್ದೇಶಕ್ಕೆ ಮಾತ್ರ ಬಳಸಲು ನಿರ್ಧರಿಸಲಾಗಿದೆ.[ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

ಹೇಮಾವತಿ ನದಿ ಪಾತ್ರದಲ್ಲಿ ನೀರವ ಮೌನ

ಹೇಮಾವತಿ ನದಿ ಪಾತ್ರದಲ್ಲಿ ನೀರವ ಮೌನ: ಹೇಮಾವತಿ ಅಚ್ಚುಕಟ್ಟು ಪ್ರದೇಶದ ಸುಮಾರು 72,360 ಎಕರೆ ಪ್ರದೇಶದಲ್ಲಿ ಮಳೆಯಾಶ್ರಯದಲ್ಲಿ ಬೆಳೆ ಬೆಳೆಯಲು ಯತ್ನಿಸಿದ ರೈತರು ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಸುಮಾರು 7,258.74 ಎಕರೆ ಭತ್ತ, 1,999.82 ಎಕರೆ ತೆಂಗು, 2650.07 ಎಕರೆ ರಾಗಿ, 3,945.07 ಎಕರೆ ಜೋಳ ಹಾಗೂ 1,662 ಎಕರೆ ಶುಂಠಿ ಮತ್ತು ಕಬ್ಬು ಬೆಳೆಗಳು ನೀರಿಲ್ಲದೆಯೇ ಸೊರಗಿ ಹೋಗಿವೆ. ಈ ಪ್ರದೇಶದಲ್ಲಿನ ಭತ್ತ, ರಾಗಿ ಹಾಗೂ ಜೋಳದ ಬೆಳೆಗಳು ಒಣಗುತ್ತಿವೆ. [ಕಾವೇರಿ ವಿವಾದ : ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ]

ನೋವಿನ ಕೂಗು ನ್ಯಾಯಾಲಯಕ್ಕೆ ಮುಟ್ಟಬೇಕಿದೆ

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಪ್ರತಿಬಾರಿಯೂ ನ್ಯಾಯಾಲಯದ ತೀರ್ಪುಗಳಿಂದ ರಾಜ್ಯಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ ಭಾರತದ ಸುಪ್ರೀಂಕೋರ್ಟ್ ತನ್ನ ಆದೇಶಗಳನ್ನು ಹೊರಡಿಸುವ ಮುನ್ನ ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡವನ್ನು ಕಳುಹಿಸಿ ವಾಸ್ತವ ಚಿತ್ರಣವನ್ನು ಅರಿತು ತೀರ್ಪು ನೀಡಿದ್ದಲ್ಲಿ ಕರ್ನಾಟಕಕ್ಕೆ ನಿಶ್ಚಿತವಾಗಿಯೂ ನ್ಯಾಯ ದೊರೆಯುತ್ತಿತ್ತು ಎಂಬ ಒಕ್ಕೊರಲ ಅಭಿಪ್ರಾಯವನ್ನು ಮಾಧ್ಯಮ ತಂಡ ಸಂಗ್ರಹಿಸಿದೆ. ಈ ನೋವಿನ ಕೂಗು ನ್ಯಾಯಾಲಯಕ್ಕೆ ಮುಟ್ಟಬೇಕಿದೆ.

ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯಕ್ಕೆ ಸಾಕ್ಷಿ

ಕೃಷ್ಣರಾಜ ಸಾಗರ ಜಲಾಶಯವು ನೀರಿಲ್ಲದೇ ಬರಿದಾಗಿರುವ ದೃಶ್ಯವು ಈ ಜಲಾಶಯದ ಸುದೀರ್ಘ ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಪ್ರಸ್ತುತ ಜಲ ವರ್ಷದ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಕಬಿನಿ ಜಲಾಶಯದಲ್ಲಿ 36.910 ಟಿ.ಎಂ.ಸಿ ನೀರು ಒಳಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ ಕೇವಲ 8.029 ಟಿ.ಎಂ.ಸಿ. ನೀರು ಹರಿದು ಬಂದಿದೆ. ಮಳೆ ಕೊರತೆ, ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಹೊರ ಹರಿವು ಹೆಚ್ಚಳ ಇದಕ್ಕೆ ಕಾರಣ ಎನ್ನಬಹುದು.

ಎಲ್ಲಾ ಜಲಾಶಯದಲ್ಲಿ ಶೇಕಡಾ 80 ರಷ್ಟು ಕೊರತೆ

ಕೃಷ್ಣರಾಜ ಸಾಗರ ಜಲಾಶಯದಲ್ಲಿ 63.50 ಟಿ.ಎಂ.ಸಿ. ನೀರು ಒಳ ಹರಿವಿನ ಪ್ರಮಾಣಕ್ಕೆ  ಪ್ರತಿಯಾಗಿ 10.01 ಟಿ.ಎಂ.ಸಿ ನೀರು ತಲುಪಿದೆ.
* ಹಾರಂಗಿ ಜಲಾಶಯ: 27.88 ಟಿ.ಎಂ.ಸಿ ನೀರು ಒಳ ಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ 5.121 ಟಿ.ಎಂ.ಸಿ
* ಹೇಮಾವತಿ ಜಲಾಶಯ: 31.50 ಟಿ.ಎಂ.ಸಿ. ನೀರು ಒಳ ಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ 6.33 ಟಿ.ಎಂ.ಸಿ.
* ನಾಲ್ಕೂ ಜಲಾಶಯಗಳಲ್ಲಿ 159.99 ಟಿ.ಎಂ.ಸಿ ನೀರು ಒಳ ಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ 29.686 ಟಿ.ಎಂ.ಸಿ. ನೀರು ಬಂದಿದೆ

ಜಲಾಶಯ ನೀರು ಸಂಗ್ರಹಣೆ, ಶೇಕಡಾ 50 ರಷ್ಟು ಕೊರತೆ

* ಕಬಿನಿ ಜಲಾಶಯ: 11.879 ಟಿ.ಎಂ.ಸಿ ನೀರು ಸಂಗ್ರಹಣೆಗೆ ಪ್ರತಿಯಾಗಿ ಕೇವಲ 2.067 ಟಿ.ಎಂ.ಸಿ. ನೀರು ಬಳಕೆಗೆ ಯೋಗ್ಯ.
* ಕೃಷ್ಣರಾಜ ಸಾಗರ ಜಲಾಶಯ:14.602 ಟಿ.ಎಂ.ಸಿ. ನೀರು ಸಂಗ್ರಹಣೆಯಲ್ಲಿ 6.223 ಟಿ.ಎಂ.ಸಿ ನೀರು ಉಪಯುಕ್ತತೆಗೆ ಲಭ್ಯ.
* ಹಾರಂಗಿ ಜಲಾಶಯ:5.548 ಟಿ.ಎಂ.ಸಿ ನೀರು ಸಂಗ್ರಹಣೆ. 4.798 ಟಿ.ಎಂ.ಸಿ ನೀರು ಉಪಯೋಗಕ್ಕೆ ಅರ್ಹ.
* ಹೇಮಾವತಿ ಜಲಾಶಯ: 7.676 ಟಿ.ಎಂ.ಸಿ. ನೀರು ಸಂಗ್ರಹದಲ್ಲಿ 3.305 ಟಿ ಎಂ ಸಿ ಬಳಕೆಗೆ ಯೋಗ್ಯ.
* 4 ಜಲಾಶಯಗಳಲ್ಲಿ 32.029 ಟಿ.ಎಂ.ಸಿ ನೀರು ಸಂಗ್ರಹವಿದೆ. ಇದರಲ್ಲಿ 16.393 ಟಿ.ಎಂ.ಸಿ. ನೀರು ಮಾತ್ರ ಬಳಕೆಗೆ ಯೋಗ್ಯ.

ಜಲ ವರ್ಷವನ್ನು ಸಂಕಷ್ಟ ವರ್ಷ ಎಂದು ಘೋಷಿಸಿ

ಕೃಷ್ಣರಾಜ ಸಾಗರದ ಜಲಾಶಯದಲ್ಲಿನ ಇಂದಿನ ಒಳ ಹರಿವು 1,185 ಕ್ಯೂಸೆಕ್ಸ್ ಹಾಗೂ ಹೊರ ಹರಿವು 220 ಕ್ಯೂಸೆಕ್ಸ್. ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲಿನ ಒಟ್ಟಾರೆ ಒಳ ಹರಿವು 9,344 ಕ್ಯೂಸೆಕ್ಸ್ ಹಾಗೂ ಹೊರ ಹರಿವು 720 ಕ್ಯೂಸೆಕ್ಸ್. ಹೀಗಿರುವಾಗ, ತಮಿಳು ನಾಡಿಗೆ ನೀರು ಹರಿಸುವುದು ಸಾಧ್ಯವೇ ? ಈ ಜಲ ವರ್ಷವನ್ನು ಸಂಕಷ್ಟ ವರ್ಷ ಎಂದು ಪರಿಗಣಿಸಿ ನೀರು ಹಂಚಿಕೆಯ ಸೂತ್ರವನ್ನು ರೂಪಿಸುವಾಗ ಸಂಕಷ್ಟವನ್ನು ವರ್ಷಕ್ಕೆ ಬದಲು ಸಂಕಷ್ಟ ಮಾಸವನ್ನು ಆಧರಿಸಿ ಸಂಕಷ್ಟದ ಅವಧಿಯನ್ನು ಗಣನೆಗೆ ತೆಗೆದುಕೊಂಡರೆ ಮಾತ್ರ ಉಳಿಗಾಲ

English summary
Save Drinking water else face Drought Worst Summer : Goverment. Karnataka government moved the apex court in the morning for permission to postpone the implementation of the Supreme Court order to release Cauvery water to Tamil Nadu till January 2017.
Please Wait while comments are loading...