ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿ ಟಿಪ್ಪು ಬಗ್ಗೆ ವಾಕ್ಸಮರ : ಯಾರು, ಏನು ಹೇಳಿದರು?

|
Google Oneindia Kannada News

ಬೆಂಗಳೂರು, ನವೆಂಬರ್ 26 : ಕರ್ನಾಟಕ ಸರ್ಕಾರದ ವತಿಯಿಂದ ನವೆಂಬರ್ 10ರಂದು ಆಚರಿಸಿದ ಟಿಪ್ಪು ಜಯಂತಿ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ನಡೆಯಿತು. ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ನಡೆದ ಗಲಭೆಯ ಬಗ್ಗೆಯೂ ಚರ್ಚೆ ನಡೆಯಿತು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ನಿಯಮ 69ರ ಅಡಿ ನಡೆದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್‌ ಟಿಪ್ಪು ಜಯಂತಿ ವಿಷಯ ಪ್ರಸ್ತಾಪಿಸಿದರು. ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ವಾಕ್ಸಮರದಿಂದ ಸದನದಲ್ಲಿ ಗೊಂದಲ ಸೃಷ್ಟಿಯಾಗಿ ಸಭಾಧ್ಯಕ್ಷರ ಪೀಠದಲ್ಲಿದ್ದ ಎನ್‌.ಎಚ್‌.ಶಿವಶಂಕರ ರೆಡ್ಡಿ ಅವರು ಸದನವನ್ನು ಕೆಲಕಾಲ ಮುಂದೂಡಿದರು. [ಪಕ್ಕದ ತಮಿಳುನಾಡಿಗೂ ಹಬ್ಬಿದ ಟಿಪ್ಪು ಜಯಂತಿ 'ಜ್ವರ'!]

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ರಾಜ್ಯದಲ್ಲಿ 60 ವರ್ಷಗಳಲ್ಲಿ ಯಾವ ಕಾಂಗ್ರೆಸ್‌ ಸರ್ಕಾರವೂ ಟಿಪ್ಪು ಜಯಂತಿ ಆಚರಿಸಿಲ್ಲ. ಕೊಡಗಿನಲ್ಲಿ ಆತ 40 ಸಾವಿರಕ್ಕೂ ಅಧಿಕ ಹಿಂದೂಗಳನ್ನು ಮತಾಂತರಗೊಳಿಸಿದ್ದ. ಇಂತಹ ವಿವಾದಾತ್ಮಕ ವ್ಯಕ್ತಿಯ ಜಯಂತಿ ಹಮ್ಮಿಕೊಂಡಿದ್ದು ಏಕೆ?' ಎಂದು ಸರ್ಕಾರವನ್ನು ಪ್ರಶ್ನಿಸಿದರು. [ಮಡಿಕೇರಿ : ಟಿಪ್ಪು ಜಯಂತಿ ಗಲಭೆ, ಇಬ್ಬರ ಬಂಧನ]

'ಟಿಪ್ಪು ಸುಲ್ತಾನ್ ಹುಟ್ಟಿದ್ದು ನವೆಂಬರ್‌ 10ರಂದು ಅಲ್ಲ, ನವೆಂಬರ್‌ 20. ಆದರೂ ಉದ್ದೇಶಪೂರ್ವಕವಾಗಿ ದೀಪಾವಳಿ ಹೊತ್ತಿನಲ್ಲೇ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗಿದೆ. ಇದರಿಂದಾಗಿ ಮೂರು ಜನರ ಹತ್ಯೆ ನಡೆದಿದೆ' ಎಂದು ಶೆಟ್ಟರ್ ಆರೋಪಿಸಿದರು. ಚರ್ಚೆಯ ವಿವರಗಳು ಚಿತ್ರಗಳಲ್ಲಿ.......[ಟಿಪ್ಪು ಜಯಂತಿ ವಿವಾದದ ಒಳ-ಹೊರಗು, ನಿಮ್ಮ ಮುಂದೆ]

ತಿರುಗೇಟು ಕೊಟ್ಟ ತನ್ವೀರ್ ಸೇಠ್

ತಿರುಗೇಟು ಕೊಟ್ಟ ತನ್ವೀರ್ ಸೇಠ್

ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಅವರು, 'ಟಿಪ್ಪು ಸೌಹಾರ್ದಕ್ಕೆ ಬೆಲೆ ಕೊಡುತ್ತಿದ್ದ ಎಂಬುದಕ್ಕೆ ಶ್ರೀರಂಗನಾಥ ದೇವಾಲಯವೇ ಸಾಕ್ಷಿ. ಅಂಕಣಕಾರರು ಆತನ ಬಗ್ಗೆ ಬೇಕಾದಂತೆ ಬರೆದಿರಬಹುದು. ಆದರೆ, ಸರ್ಕಾರಿ ಮಾಹಿತಿಗಳ ಪ್ರಕಾರ ಆತ ಮತಾಂತರ ನಡೆಸಿದ ಬಗ್ಗೆ ಹಾಗೂ ದೇವಸ್ಥಾನ ನಾಶ ಮಾಡಿದ ಬಗ್ಗೆ ಉಲ್ಲೇಖವಿಲ್ಲ' ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಕುಟುಂಬದ ವಿಚಾರ ಪ್ರಸ್ತಾಪಿಸಿದ ಅಪ್ಪಚ್ಚು ರಂಜನ್

ಕುಟುಂಬದ ವಿಚಾರ ಪ್ರಸ್ತಾಪಿಸಿದ ಅಪ್ಪಚ್ಚು ರಂಜನ್

ಇದಕ್ಕೆ ಉತ್ತರ ನೀಡಿದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌, 'ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಟಿ.ಪ್ರದೀಪ್‌ ಅವರ ಅರ್ಧ ಕುಟುಂಬ ಮುಸ್ಲಿಂ- ಅರ್ಧದಷ್ಟು ಕುಟುಂಬ ಹಿಂದೂ. ಟಿಪ್ಪು ಮತಾಂತರಕ್ಕೆ ಇದಕ್ಕಿಂತ ಉದಾಹರಣೆ ಬೇಕೆ?' ಎಂದು ಪ್ರಶ್ನಿಸಿದರು. ಇದರಿಂದ ಕೆರಳಿದ ಕಾಂಗ್ರೆಸ್ ಶಾಸಕರು, 'ಕುಟುಂಬದ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೆ ಅವಕಾಶ ನೀಡಬೇಡಿ' ಎಂದು ಒತ್ತಾಯಿಸಿದರು.

ಅಬ್ದುಲ್‌ ಕಲಾಂ ಜಯಂತಿ ಆಚರಣೆ ಮಾಡಿ

ಅಬ್ದುಲ್‌ ಕಲಾಂ ಜಯಂತಿ ಆಚರಣೆ ಮಾಡಿ

ಬಿಜೆಪಿ ಶಾಸಕ ಸಿ.ಟಿ.ರವಿ ಮಾತನಾಡಿ, 'ಅಬ್ದುಲ್‌ ಕಲಾಂ ಅಥವಾ ಶಿಶುನಾಳ ಜಯಂತಿ ಆಚರಿಸಿದರೆ ನಾವೂ ಸಂತೋಷ ಪಡುತ್ತಿದ್ದೆವು. ಅಫ್ಜಲ್‌ ಗುರು, ಟಿಪ್ಪುವಿನಂಥವರ ಜಯಂತಿ ಆಚರಿಸಲು ಮುಂದಾದರೆ ಸುಮ್ಮನಿರಲು ಸಾಧ್ಯವೇ?' ಎಂದು ಪ್ರಶ್ನಿಸಿದರು. 'ಟಿಪ್ಪುವಿನ ಇತಿಹಾಸದ ಬಗ್ಗೆ ಅಧ್ಯಯನ ನಡೆಸಲು ಸದನ ಸಮಿತಿ ರಚಿಸಿ' ಎಂದು ಒತ್ತಾಯಿಸಿದರು.

ಕಾಲಹರಣ ಮಾಡಬೇಡಿ ಎಂದ ಎಚ್ಡಿಕೆ

ಕಾಲಹರಣ ಮಾಡಬೇಡಿ ಎಂದ ಎಚ್ಡಿಕೆ

ಸದನ ಉದ್ದೇಶಿಸಿ ಮಾತನಾಡಿದ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು 'ರಾಜ್ಯದಲ್ಲಿ ಇನ್ನೂ ಅನೇಕ ಜ್ವಲಂತ ಸಮಸ್ಯೆಗಳಿವೆ. ಅದನ್ನು ಬಿಟ್ಟು ವ್ಯರ್ಥ ಕಾಲಹರಣ ಮಾಡುವುದು ಬೇಡ, ಸದನದ ಕಾಲಹರಣ ಮಾಡಬೇಡಿ' ಎಂದು ಮನವಿ ಮಾಡಿದರು.

ಗದ್ದಲದಿಂದಾಗಿ ಸದನ ಮುಂದೂಡಲಾಯಿತು

ಗದ್ದಲದಿಂದಾಗಿ ಸದನ ಮುಂದೂಡಲಾಯಿತು

ಸದಸ್ಯರ ವಾಕ್ಸಮರದ ಕಾರಣದಿಂದಾಗಿ ಸದನವನ್ನು ಕೆಲಕಾಲ ಮುಂದೂಡಲಾಯಿತು. ಮತ್ತೆ ಸಭೆ ಸೇರಿದಾಗ ಟಿಪ್ಪು ಬಗ್ಗೆಯೇ ಚರ್ಚೆ ಆರಂಭವಾಯಿತು. ಬಿಜೆಪಿಯವರು ಟಿಪ್ಪು ಇತಿಹಾಸ ವಿವರಿಸಲು ಯತ್ನಿಸಿದಾಗ, ಸಚಿವರಾದ ದಿನೇಶ್‌ ಗುಂಡೂರಾವ್‌, ಡಿ.ಕೆ.ಶಿವಕುಮಾರ್‌ ಸದನಕ್ಕೆ ತಪ್ಪುಮಾಹಿತಿ ನೀಡಲು ಅವಕಾಶ ನೀಡಬಾರದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು.

ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿ

ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿ

ಚರ್ಚೆಯ ವೇಳೆ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, 'ಇತಿಹಾಸ ನಮಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಕೇವಲ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿ' ಎಂದರು.

ಹುತ್ತರಿ ದಿನವೇ ವಿಚಾರಣೆ ಬೇಕೆ?

ಹುತ್ತರಿ ದಿನವೇ ವಿಚಾರಣೆ ಬೇಕೆ?

ನಂತರ ಮಾತನಾಡಿದ ಶಾಸಕ ಕೆ.ಜೆ.ಬೋಪಯ್ಯ ಅವರು, 'ಮಡಿಕೇರಿ ಗಲಭೆಯ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಹುತ್ತರಿ ಹಬ್ಬದ ದಿನವೇ ವಿಚಾರಣೆ ಇಟ್ಟುಕೊಂಡಿದ್ದಾರೆ. ಅವರ ಬದಲು ನಿವೃತ್ತ ನ್ಯಾಯಾಧೀಶರಿಂದ ಪ್ರಕರಣದ ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದರು. ಮುಂದಿನ ವರ್ಷ ನಮ್ಮ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸಬೇಡಿ' ಎಂದು ಸರ್ಕಾರಕ್ಕೆ ಮನವಿ ಮಾಡಿದರು.

English summary
Legislative Assembly on Wednesday witnessed for heated arguments between the members of the BJP and the ruling Congress in the issue of Tipu Sultan Jayanthi and Madekeri clash on November 10, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X