ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಅಧಿವೇಶನ : ಸೋಮವಾರದ ಕಲಾಪದ ಮುಖ್ಯಾಂಶ

|
Google Oneindia Kannada News

ಬೆಳಗಾವಿ, ಜುಲೈ 06 : ಲೋಕಾಯುಕ್ತರ ಪದಚ್ಯುತಿ ಬಗ್ಗೆ ಚರ್ಚೆ ನಡೆಸಲು ಅನುಮತಿ ನೀಡಬೇಕು ಎಂದು ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷಗಳು ಪಟ್ಟು ಹಿಡಿದವು. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಗೋ.ಮಧುಸೂದನ್ ವಿಷಯ ಪ್ರಸ್ತಾಪಿಸಿದರು, 'ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೇಶದ ತುಂಬಾ ಚರ್ಚೆಯಾಗುತ್ತಿದೆ. ಅವರನ್ನು ಪದಚ್ಯುತಿಗೊಳಿಸಲು ಶಾಸಕರ ಸಹಿಯಳ್ಳ ಪತ್ರವನ್ನು ನೀಡಿದ್ದೇವೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿ' ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಮನವಿ ಮಾಡಿದರು.[ಶುಕ್ರವಾರದ ಕಲಾಪದಲ್ಲಿ ಐಐಟಿ ಬಗ್ಗೆ ಚರ್ಚೆ]

ಕಾಂಗ್ರೆಸ್ ಸದಸ್ಯರಾದ ಆರ್.ವಿ.ವೆಂಕಟೇಶ್, ಮೋಟಮ್ಮ, ಐವಾನ್ ಡಿಸೋಜಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸದನದ ನಡಾವಳಿಯಂತೆ ಕಲಾಪ ನಡೆಯಲಿ ಮೊದಲು ಪ್ರಶ್ನೋತ್ತರ ಅವಧಿ ಪೂರ್ಣಗೊಳಿಸಿ ನಂತರ ಚರ್ಚೆ ಮಾಡೋಣ ಎಂದರು. ಇದರಿಂದ ಉಭಯ ಪಕ್ಷಗಳ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. [ಲೋಕಾಯುಕ್ತ ಪದಚ್ಯುತಿ : ವರದಿ ಕೇಳಿದ ರಾಜ್ಯಪಾಲ]

belagavi

7 ಸಾವಿರ ಶುದ್ಧ ನೀರಿನ ಘಟಕ ಸ್ಥಾಪನೆ : 2016ರ ಮಾರ್ಚ್ ಅಂತ್ಯದೊಳಗೆ 7 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸದಿದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ಹೇಳಿದರು. ಇಲಾಖಾ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಭಾಗದ 7 ಸಾವಿರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು, ಇದು ಸರ್ಕಾರದ ಬದ್ಧತೆಯಾಗಿದೆ ಎಂದರು.

ಜಾಗತಿಕ ಟೆಂಡರ್ ಕರೆಯಲಾಗಿದೆ : ಮೇಕೆದಾಟು ಕುಡಿಯುವ ನೀರು ಯೋಜನೆಯ ಯೋಜನಾ ವರದಿಯನ್ನು ಶೀಘ್ರವೇ ತಯಾರಿಸಿ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಗೆ ತಿಳಿಸಿದ್ದಾರೆ. ಜೆಡಿಎಸ್‌ನ ಶಾಸಕ ಎನ್.ಚೆಲುವರಾಯ ಸ್ವಾಮಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಯೋಜನೆ ಕುರಿತು ಸರ್ವೇ, ವಿನ್ಯಾಸ ಹಾಗೂ ಅಂದಾಜು ವೆಚ್ಚ ಸೇರಿದಂತೆ ಯೋಜನಾ ವರದಿ ತಯಾರಿಕೆಗೆ ಜಾಗತಿಕ ಮಟ್ಟದಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. 5 ಮಂದಿ ಆಸಕ್ತಿ ತೋರಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಲೋಕಾಯುಕ್ತ ಪದಚ್ಯುತಿ ಬಗ್ಗೆ ಚರ್ಚೆ : ಬೆಳಗಾವಿಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಆರನೇ ದಿನದ ಕಲಾಪ ಆರಂಭವಾಗಿದೆ. ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಲೋಕಾಯುಕ್ತರ ಪದಚ್ಯುತಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಒತ್ತಾಯಿಸಿವೆ.

ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದರು, ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು, ಜೆಡಿಎಸ್‌ನ ಕೆಲವು ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.

ಸದನವನ್ನು ಉದ್ದೇಶಿಸಿ ಮಾತನಾಡಿದ ವಿಶ್ವೇಶ್ವರ ಕಾಗೇರಿ ಅವರು, 'ಈಗಾಗಲೇ ಶಾಸಕರ ಸಹಿ ಇರುವ ಪದಚ್ಯುತಿ ನಿರ್ಣಯ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ವಿಳಂಬ ಮಾಡಿದಷ್ಟು ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ' ಎಂದು ಹೇಳಿದರು.

ಈ ಕುರಿತು ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, 'ಇದೇ ಮೊದಲ ಬಾರಿಗೆ ಈ ರೀತಿ ಪ್ರಕರಣ ಎದುರಾಗಿದೆ. ಸದನದ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದು ಎನ್ನುವ ಕಾರಣಕ್ಕೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಮಧ್ಯಾಹ್ನ ಕಲಾಪ ಸಮಿತಿ ಸಭೆ ಇದೆ. ಸಭೆಯಯಲ್ಲಿ ಈ ಕುರಿತು ಚರ್ಚೆ ಮಾಡೋಣ' ಎಂದು ತಿಳಿಸಿದರು.

English summary
12 days Karnataka Assembly monsoon session in Belagavi Suvarna vidhana soudha. Day 6, Monday, July 6 highlights. What happened in the assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X