ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಅಧಿವೇಶನದಲ್ಲಿ ಮೊದಲ ದಿನ ಏನಾಯ್ತ?

|
Google Oneindia Kannada News

ಬೆಳಗಾವಿ, ಜೂ. 29 : ರೈತ ಆತ್ಮಹತ್ಯೆ ಬಗ್ಗೆ ವಿವರವಾದ ಚರ್ಚೆ, ಸಭಾತ್ಯಾಗ ಮಾಡಿದ ಎಂಇಎಸ್ ಶಾಸಕರು, ಪ್ರತಿಭಟನೆ ನಡೆಸುತ್ತಿದ್ದ ರೈತರ ಬಂಧನ, ಆತ್ಮಹತ್ಯೆಗೆ ಯತ್ನಿಸಿದ ರೈತ, ಪರಿಷತ್ ಕಲಾಪದಲ್ಲಿ ಸರ್ಕಾರದ ವಿರುದ್ಧ ಗುಡುಗಿದ ಈಶ್ವರಪ್ಪ... ಮುಂತಾದವು ಮೊದಲ ದಿನದ ಅಧಿವೇಶನದ ಮುಖ್ಯಾಂಶಗಳು.

ಸಮಯ 5.25 : ಮುಂಗಾರು ಅಧಿವೇಶನದ ಮೊದಲ ದಿನದ ವಿಧಾನಸಭೆ ಕಲಾಪವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಂಗಳವಾರಕ್ಕೆ ಮುಂದೂಡಿದರು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಕಲಾಪ ಆರಂಭವಾಗಲಿದೆ.

suvarna vidhana soudha

ಸಮಯ 5.22 : 'ರೈತರ ಮೇಲಿನ ಪ್ರಕರಣಗಳನ್ನು ಮುಂದುವರೆಸುವ ಉದ್ದೇಶ ನಮಗಿಲ್ಲ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಪ್ರಕರಣಗಳನ್ನು ವಾಪಸ್ ಪಡೆಯಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿಯೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

ಸಮಯ 4.45 : ಸಕ್ಕರೆ ಕಾರ್ಖಾನೆಗಳು 4,600 ಕೋಟಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು, ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಮಾತುಕತೆ ನಡೆಸಿ, ಮನವೊಲಿಸುವ ಕೆಲಸ ಮಾಡಿದರು. ಸಚಿವರ ಭರವಸೆಗೆ ತೃಪ್ತರಾಗದ ರೈತರು ರಸ್ತೆ ತಡೆದು ಪ್ರತಿಭಟನೆ ಮುಂದುವರೆಸಿದರು. ಈ ಸಂದರ್ಭದಲ್ಲಿ ಪೊಲೀಸರು ರೈತರನ್ನು ಬಂಧಿಸಿದರು.

protest

ಸಮಯ 4.30 : ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವಾಗ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ (ಕಾಂಗ್ರೆಸ್) ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು. 'ರಾಜ್ಯದಲ್ಲಿ ಕೃಷಿ ಸಾಲ ನೀತಿಯೇ ಇಲ್ಲ. ನಿಜವಾದ ರೈತರಿಗೆ ಸಾಲ ಸಿಗುತ್ತಿಲ್ಲ. ಆದ್ದರಿಂದ ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿಯಿಲ್ಲ'ಎಂದರು.

ಸಮಯ 4 ಗಂಟೆ : ಸುವರ್ಣವಿಧಾನಸೌಧಧದೊಳಗೆ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿದ್ದರೆ. ಹೊರಗೆ ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಅಸ್ವಸ್ಥಗೊಂಡಿರುವ ರೈತನನ್ನು ಆಸ್ಪತ್ರೆಗೆ ದಾಖಲಿ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಲದಿ ಗ್ರಾಮದ ಸಿದ್ದರಾಯ ಎಂಬ ರೈತ ಇಂದು ಮಧ್ಯಾಹ್ನ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಿದ್ದರಾಯನನ್ನು ಸ್ಥಳೀಯರು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸಮಯ 3 ಗಂಟೆ : ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಧರಿಸಿದ್ದ ಶರ್ಟ್ ನೋಡಿ ಬಿಜೆಪಿ ಸದಸ್ಯರು ಅವರನ್ನು ಛೇಡಿಸಿದ ಪ್ರಸಂಗ ವಿಧಾನಭೆಯಲ್ಲಿ ನಡೆಯಿತು. 'ಸದನ ಆರಂಭವಾಗುವ ಹೊತ್ತಿಗೆ ಗುಲಾಬಿ ಬಣ್ಣದ ಶರ್ಟ್ ತೊಟ್ಟ ಶಿವರಾಜ್ ತಂಗಡಗಿ ವಿಧಾನಸಭೆ ಪ್ರವೇಶಿಸಿದರು. ಇದನ್ನು ನೋಡಿದ ಬಿಜೆಪಿ ಶಾಸಕರಾದ ಗೋವಿಂದ ಕಾರಜೋಳ ಅವರು, 'ನೀವು ಅಂಗಿ ಬದಲಿಸಬೇಕು. ಈ ಬಣ್ಣದ ಅಂಗಿ ಹಾಕಬಾರದು' ಎಂದರು, ಇದಕ್ಕೆ ಉಮೇಶ್ ಕತ್ತಿ ಸಹ ದನಿಗೂಡಿಸಿದರು.

ಸಮಯ 2.30 : ವಿಧಾನಪರಿಷತ್ ಕಲಾಪದಲ್ಲಿಯೂ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, 'ರಾಜ್ಯ ಸರ್ಕಾರವನ್ನು ಕುಡುಕರಿಗೆ ಹೋಲಿಸಿದ್ದು, ಕಾಂಗ್ರೆಸ್ ಸರ್ಕಾರ ಕುಡುಕ ಮತ್ತಿನಲ್ಲಿ ಹೆಂಡತಿಗೆ ರೇಷ್ಮೆ ಸೀರೆ ಕೊಡಿಸುತ್ತೇನೆ ಎಂದು ಹೇಳಿದಂತೆ ಕಾರ್ಯ ನಿರ್ವಹಿಸುತ್ತಿದೆ' ಎಂದು ಛೇಡಿಸಿದರು.

'ಮತ್ತಿನಲ್ಲಿ ರೇಷ್ಮೆ ಸೀರೆ ಕೊಡುವೆನೆಂದು ಹೇಳಿಕದ ಕುಡುಕ ಗಂಡ, ನಂತರ ಸೀರೆ ಕೇಳಿದ ಹೆಂಡತಿಗೆ ಹೊಡೆಯುತ್ತಿದ್ದ. ನಮ್ಮ ರಾಜ್ಯ ಸರ್ಕಾರವೂ ಹಾಗೆ. ಬಾಕಿ ಹಣ ಕೊಡುತ್ತೇವೆ ಎಂದು ಹೇಳಿ, ಈಗ ಅದನ್ನು ಕೇಳಿದರೆ ಅವರಿಗೆ ಹೊಡೆಯುವ ಕೆಲಸ ಮಾಡುತ್ತಿದೆ' ಎಂದು ದೂರಿದರು. [ಬೆಳೆಗಳಿಗೆ ಬೆಲೆ ನೀಡಿದ ಸರ್ಕಾರ, ರೈತರ ಸಾವಿಗೆ ಕಾರಣವೇನು?]

karnataka

ಸಮಯ 12.30 : ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ ನಡೆದ ರೈತರ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿರುವ ಪ್ರತಿಪಕ್ಷ ಬಿಜೆಪಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದೆ.

ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿಧಾನಸಭೆಯ ಕಲಾಪ ಆರಂಭವಾಯಿತು. ಮೊದಲು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ನಂತರ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರೈತ ಆತ್ಮಹತ್ಯೆ ಪ್ರಕರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು. [ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆ ಕಾವು]

assembly session

'ರಾಜ್ಯ ಸರ್ಕಾರದ ವೈಫಲ್ಯದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಾಕಿ ಹಣ ಪಾವತಿ ಮಾಡಲು ಸರ್ಕಾರ ವಿಫಲವಾಗಿದೆ. ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಸರ್ಕಾರಕ್ಕಿಲ್ಲ' ಎಂದು ಆರೋಪಿಸಿದರು. ['ಭಾಗ್ಯ' ಘೋಷಣೆ ಸಾಲದು, ಅನುಷ್ಠಾನಕ್ಕೆ ತನ್ನಿ: ಕಾಗೋಡು]

ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ : ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ರೈತರ ಹಿತ ಕಾಪಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ' ಎಂದು ಹೇಳಿದರು.

ಸಿದ್ದರಾಮಯ್ಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕರು, 'ನಿಮ್ಮ ಮಾತಿನಿಂದ ರೈತರ ಹೊಟ್ಟೆ ತುಂಬುವುದಿಲ್ಲ, ರೈತರಿಗೆ ಬಾಕಿ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಿ' ಎಂದು ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.

ಸದಸ್ಯರನ್ನು ಸಮಾಧಾನ ಪಡಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ನಿಯಮ 69ರ ಅಡಿ ವಿಸ್ತೃತವಾದ ಚರ್ಚೆ ನಡೆಸಲು ಅವಕಾಶ ಮಾಡಿಕೊಟ್ಟರು. ನಂತರ ಮಾತನಾಡಿದ ಜಗದೀಶ್ ಶೆಟ್ಟರ್, 'ಸರ್ಕಾರ ರೈತರಿಗೆ ಯಾವುದೇ ಭಾಗ್ಯ ಕೊಟ್ಟಿಲ್ಲ. ಮೊದಲು ಕಾರ್ಖಾನೆಗಳ ಬಾಕಿ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಲಿ' ಎಂದು ಹೇಳಿದರು.

English summary
12 days Karnataka Assembly monsoon session in Belagavi Suvarna vidhana soudha. Day one, Monday, June 29 highlights. What happened in the assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X