ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷದ ಸಂಭ್ರಮದಲ್ಲಿ ಪುರ್ರನೇ ಬಂದ ಅನಿರೀಕ್ಷಿತ ಅತಿಥಿ!

By ಮಮತಾ ದೇವ
|
Google Oneindia Kannada News

ಮನೆಯಂಗಳದಲ್ಲಿ ಇಂದು ಎಂದಿನಂತೇ ಮುಂಜಾವಿನಲ್ಲಿ ಹಕ್ಕಿಗಳ ಚಿಲಿಪಿಲಿ. ಹೊಸ ವರ್ಷದ ಸಂಭ್ರಮದಲ್ಲಿ ನಾನೂ ಬೇಗನೇ ಎದ್ದಿದ್ದೆ. ಪತಿ ಮತ್ತು ಮಕ್ಕಳು ಹೊಸ ವರ್ಷದ ಸ್ಪೆಷಲ್ ಬ್ರೇಕ್ ಫಾಸ್ಟ್ ಮುಗಿಸಿ ಅವರವರ ಕೆಲಸದ ನಿಮಿತ್ತ ಹೊರಟರು.

ಮುಂಬಾಗಿಲು ತೆರೆದಿಟ್ಟು ಹೊಸ ಬೆಳಕನ್ನು ನೋಡುತ್ತಾ ಪೇಪರ್ ಕೈಗೆತ್ತಿಕೊಂಡಿದ್ದೆ. ಅಷ್ಟರಲ್ಲೇ ಪುರ್ರೆನ್ನುತ್ತಾ ಡ್ರಾಯಿಂಗ್ ರೂಂ ನೊಳಗೆ ನುಗ್ಗಿ ಬಂತು ಪುಟ್ಟ ಅನಿರೀಕ್ಷಿತ ಅತಿಥಿ! ಕೂಡಲೇ ಪೇಪರ್ ಕೈಜಾರಿತು. (ಗುಬ್ಬಚ್ಚಿ : ಬದುಕಿದೆಯಾ ಬಡಜೀವವೆ)

ಪಕ್ಕದಲ್ಲೇ ಇದ್ದ ಫೋನ್ ನಿಂದ ಒಂದೆರಡು ಫೋಟೋ ತೆಗೆದೆ. ಯಾಕೆಂದರೆ ಅತೀ ಸೂಕ್ಷ್ಮ ಸಂವೇದನೆಯ ಆ ಪುಟ್ಟ ಸನ್ ಬರ್ಡ್ ಎಂದೂ ನನ್ನ ಕ್ಯಾಮೆರಾಕ್ಕೆ ಸಿಕ್ಕದೇ ಇರುವಿಕೆ ಗೊತ್ತಾದ ಕೂಡಲೇ ಹಾರಿ ಬಿಡುತ್ತಿತ್ತು.

ಇಂದು ಕೇವಲ 4-5 ಅಡಿ ಅಂತರದಲ್ಲಿ ಒಳಗೆ ಹೋಗಿ ಬೇರೆ ಕ್ಯಾಮೆರಾ ತರಲೂ ಆಗದೇ ಅದರೊಡನೆ ಮಾತನಾಡತೊಡಗಿದೆ. ಚೆಂದದ, ನೀಳವಾದ, ಉದ್ದ ಕೊಕ್ಕಿರುವ ಹಕ್ಕಿ. ಹೊರಗೆ ಹೋಗೆಂದರೂ ಹೋಗಲಿಲ್ಲ.

An unexpected guest on new year day 'Sun Bird' 2016

ನನಗೆ ಎಲ್ಲಿ ಶೋಕೇಸಿನ ಗ್ಲಾಸ್ ಗೆ ಬಡಿದು ಸತ್ತರೆ ಎಂಬ ಭಯ. ಜೊತೆಯಲ್ಲಿ ಅದನ್ನು ಓಡಿಸಲೂ ಸ್ವಲ್ಪ ಹಿಂಜರಿಕೆ. ಒಂದು ಗಂಟೆಗೂ ಅಧಿಕ ಹೊತ್ತು ಮನೆಯೊಳಗೇ ಇತ್ತು. ಫ್ಯಾನಿನ ಮೇಲೆ, ವೆಂಟಿಲೇಟರ್ ಮೇಲೆ ಕುಳಿತು ಆಟವಾಡಿತು.

ಮತ್ತೆ ಹೊರಗೆ ಹೋಗಲು ತಿಳಿಯದೆಯೋ, ಹೆದರಿಕೆಯಾಗಿಯೋ ಏನೋ ಫ್ಯಾನಿನ ಲೆವೆಲ್ ನಲ್ಲೇ ಗಿರಕಿ ಹೊಡೆಯಲಾರಂಭಿಸಿತು. ನಾನು ಕಿಟಕಿಗಳನ್ನೆಲ್ಲಾ ತೆರೆದರೂ ಹೋಗಲಿಲ್ಲ. ಮತ್ತೆ ಮನೆಯೆಲ್ಲಾ ತನ್ನದೇ ಎಂಬಂತೆ ಅಲ್ಲಲ್ಲಿ ಕುಳಿತು, ಹಾರಿ ಆಡತೊಡಗಿತು.

ನಾನು ಒಂದು ಗಂಟೆ ಉಸಿರು ಬಿಗಿ ಹಿಡಿದು ಕುಳಿತೆ... ಅನಿರೀಕ್ಷಿತ ಹಕ್ಕಿಯ ಕಂಪೆನಿಯನ್ನು ಸ್ವಲ್ಪ ಎಂಜಾಯ್ ಮಾಡಿದೆ. ಅದರ ಜೊತೆಗಾರನೋ / ಜೊತೆಗಾತಿಯೋ ಹೊರಗೆ ಕೂಗುತ್ತಿತ್ತು.

ನಮ್ಮಯ ಹಕ್ಕಿ ಮತ್ತೆ ಶೋಕೇಸಿನ ಮೇಲೆ ಕುಳಿತಿತು. ಹಾರಿ ಮತ್ತೆ ಗಾಜಿಗೆ ಬಡಿದುಕೊಂಡಿತು ಅದನ್ನು ಓಡಿಸುವುದು ಹೇಗಪ್ಪಾ ಅಂತ ಹೆದರಿಕೆಯಾಯ್ತು.ಅದರ ಚೆಂದದ ಕೊಕ್ಕಿಗೆ ಎಲ್ಲಿ ನೋವಾದೀತೋ ಎಂಬ ಆತಂಕ ಬೇರೆ !

ನಾನು ದೂರದಿಂದ ಮಾತ್ರ ಇಷ್ಟಪಡುವ ಹಲವು ಪ್ರಾಣಿ - ಪಕ್ಷಿಗಳನ್ನು ಮುಟ್ಟಲೂ, ಹತ್ತಿರ ಹೋಗಲೂ ಫೋಬಿಯಾ ಬಿಡಬೇಕಲ್ಲ? ( ಎರಡು ವರ್ಷಗಳ ಹಿಂದೊಮ್ಮೆ ಕುಪ್ಪುಳು (ರತ್ನಪಕ್ಷಿ ) ಹಿಂಬಾಗಿಲಿನಿಂದ ಒಳಗೆ ಬಂದಿತ್ತು)

ಹೊರಗಿನ ಹಕ್ಕಿಯ ಕೂಗಿಗೆ ಸ್ಪಂದಿಸೋಣವೆನಿಸಿತು. ಆದರೆ ಒಳಗಿದ್ದ ಪುಟ್ಟ ಮಹಾರಾಯ/ಮಹಾರಾಯ್ತಿ ಹೋಗಲೊಲ್ಲೆ ಎಂದು ವೆಂಟಿಲೇಟರನ್ನೇರಿ ಕುಳಿತಿತ್ತು. ನಾನೊಬ್ಬಳೇ ಯಾರಲ್ಲಿ ಮಾತನಾಡುತ್ತಿದ್ದೇನೆ ಎಂದು ನೆರೆಮನೆಯ ಗೆಳತಿ ಹೊಸವರ್ಷದ ಶುಭಾಶಯ ಹೇಳಲು ಬಂದವರು ಕೇಳಿದರು.

ನಾನು ಹಕ್ಕಿ ಗೆಳೆಯನನ್ನು ತೋರಿಸಿ ಹೊರಗೆ ಕಳಿಸಲು ಆಗುತ್ತಿಲ್ಲ..ನೀವು ಬನ್ನಿ ಎಂದೆ. ಅವರಿಗೂ ಖುಷಿಯಾಯ್ತು. ಎಷ್ಟು ಚೆಂದದ ಹಕ್ಕಿ ಎಂದರು. ಮತ್ತೆ ಇಬ್ಬರೂ ಸೇರಿ ಎರಡೂ ಬದಿಯಿಂದ ಬಲೆಯನ್ನು ಬೀಸಿದಾಗ ಕೆಳಗೆ ಬಂತು ಆದರೂ ಸತಾಯಿಸಿ ಮತ್ತೆ ಮನಸ್ಸಿಲ್ಲದ ಮನಸ್ಸಿನಿಂದ ಬಾಗಿಲಿನ ಮೂಲಕ ಹೇಗೋ ಹೊರಗೆ ಹಾರಿತು. (ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು)

ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ... ಅಂತೂ ಹೊಸ ವರ್ಷದ ದಿನ ಹೊಸ ಹಕ್ಕಿ ಕಂಡಾಗ ಮನ ಅರಳದೇ ಇದ್ದೀತೇ? ಅಂತೂ ಹಕ್ಕಿಯೊಡನೆ ಉತ್ತಮ ಕಾಲ ಕಳೆದ ಅನುಭವ ಹೊಸವರ್ಷದ ಮೊದಲ ದಿನ. ವರಕವಿ ಬೇಂದ್ರೆಯವರ ಹಕ್ಕಿಯ ಕವನವೊಂದು ನೆನಪಾಯ್ತು.

"ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ, ತಿಂಗಳೂರಿನ ನೀರನು ಹೀರಿ, ಆಡಲು ಹಾಡಲು ತಾ ಹಾರಾಡಲು..
ಮಂಗಳಲೋಕದ ಅಂಗಳಕೇರಿ ಹಕ್ಕಿ ಹಾರುತಿದೆ ನೋಡಿದಿರಾ"

ಹೌದು ! ಹಕ್ಕಿಗಳ ಹಾರಾಟ ಸಮಯದ ಗತಿ ಮತ್ತು ಆಯಾಮಕ್ಕೆ ಸಂಬಂಧವಿದೆ.. ಹಕ್ಕಿ ಹಾರುತ್ತದೆ... ಕಾಲ ಓಡುತ್ತದೆ. ಪ್ರಕೃತಿಯಿಂದ ಸ್ಪೂರ್ತಿ ಪಡೆದು ನಾನೂ ಮಾಡಬೇಕಾದ್ದು ಬಹಳಷ್ಟು ಇದೆ!

An unexpected guest on new year day 'Sun Bird' 2016

ಕ್ಷಣ ಕ್ಷಣವೂ ಅಮೂಲ್ಯವೆಂದು ಸಾರುವ ಹಕ್ಕಿಗಳ ಕೂಗು ಬದುಕಿನ ಸಂಕೇತವಂತೆ. ಹಕ್ಕಿಯೊಂದು ಸ್ವತಂತ್ರವಾಗಿ ಹಾರಾಡುವ ಬದಲು ಮನೆಯೊಳಗೆ ಬಂದು ಬಂಧಿಯಾಗಿದ್ದು ಅಚ್ಚರಿಯೆನಿಸಿ, ಹೊಸ ವರ್ಷದ ಹೊಸ ಬೆಳಕಲ್ಲಿ ಮನೆಯೊಳಗೆ ಆಗಮಿಸಿದ ಅತಿಥಿ ನನಗೆ ಸಮಯ ಉರುಳುತ್ತಿದೆ ಎಂದು ಎಚ್ಚರಿಸಿದಂತೆ ಭಾಸವಾಯ್ತು. ಪುನ: ಬೇಂದ್ರೆಯವರ ಕವನ ನೆನಪಾಗಿ -

"ನಿನ್ನ ಸೊಲ್ಲ ನಂಬಿ ಎದ್ದೆ, ಮೈಯೆಲ್ಲ ನಡುಕವಿದ್ದು, ನೀನೆ ಶುಭ ನುಡಿಯುವಾಗ
ಏನಿದ್ದೇನು ಎಲ್ಲಾ ಶುಭವೇ, ಶುಭ ನುಡಿಯೆ ಶಕುನದ ಹಕ್ಕಿ, ಶುಭ ನುಡಿಯೆ..."

ಎಂದು ಗುನುಗುತ್ತಾ ನನ್ನ ಕರ್ತವ್ಯಗಳಲ್ಲಿ ಮಗ್ನಳಾದೆ...

English summary
An unexpected guest 'Sun Bird' at my home on new year day, an article by our reader Mamatha Deva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X