ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈರಿ 2, ಕೇಸು 7; ಇದು ಬಿಜೆಪಿ-ಕಾಂಗ್ರೆಸ್ 'ಡೊನೇಷನ್ ಗೇಟ್' ಹೈಡ್ರಾಮಾ

ಬಿಜೆಪಿ ಕಾಂಗ್ರೆಸ್ ಕೆಸರೆರೆಚಾಟದಿಂದ ದಿನಕ್ಕೊಂದು ಕಂಪ್ಲೆಂಟ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದೆ. ಇಲ್ಲೀವರೆಗೆ ನಮ್ಮ ಗಮನಕ್ಕೆ ಬಂದಂತೆ 7 ಕೇಸುಗಳು ದಾಖಲಾಗಿವೆ. ಆ ಕೇಸುಗಳ ಸಂಪೂರ್ಣ ವಿವರಗಳು ಇಲ್ಲಿವೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 3: ಕರ್ನಾಟಕದಲ್ಲಿ ಈಗ ಕೇಳಿ ಬರುತ್ತಿರುವ ಒಂದೇ ಶಬ್ದ ಅದು 'ಡೈರಿ'.ಕಾಂಗ್ರೆಸ್ ಮತ್ತು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಿಬ್ಬರ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಡೈರಿ 'ಡೊನೇಷನ್ ಗೇಟ್' ಹಗರಣವಾಗಿ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹಾಗೂ ಸಿದ್ದರಾಮಯ್ಯ ಆಪ್ತ ಗೋವಿಂದರಾಜ್ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಡೈರಿ ವಿರುದ್ದ ಬಿಜೆಪಿಗರು ಹರಿಹಾಯುತ್ತಿದ್ದಾರೆ. ಇದೇ ವೇಳೆಗೆ ಬಿಜೆಪಿ ನಾಯಕ ಹಾಗೂ ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಡೈರಿ ಮೇಲೆ ಕಾಂಗ್ರೆಸ್ ಮುಗಿಬಿದ್ದಿದೆ. [ಡೊನೇಷನ್ ಗೇಟ್ : ಬಿಜೆಪಿ ಬಣ್ಣ ಬಯಲು ಮಾಡಿದ ಕಾಂಗ್ರೆಸ್]

ಇವರಿಬ್ಬರ ರಾಜಕೀಯ ಕೆಸರೆರೆಚಾಟದಿಂದ ದಿನಕ್ಕೊಂದು ಕಂಪ್ಲೆಂಟ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದೆ. ಇಲ್ಲೀವರೆಗೆ ನಮ್ಮ ಗಮನಕ್ಕೆ ಬಂದಂತೆ 7 ಕೇಸುಗಳು ದಾಖಲಾಗಿವೆ. ಆ ಕೇಸುಗಳ ಸಂಪೂರ್ಣ ವಿವರಗಳು ಇಲ್ಲಿವೆ. ['ಡೊನೇಶನ್ ಗೇಟ್' ಹಗರಣದ ಕೇಂದ್ರ ಬಿಂದು, ಯಾರು ಈ ಗೋವಿಂದರಾಜ್?]

ಯಡಿಯೂರಪ್ಪ ಮೇಲೆ ಗೋವಿಂದರಾಜ್ ಮಾನನಷ್ಟ ಮೊಕದ್ದಮೆ

ಯಡಿಯೂರಪ್ಪ ಮೇಲೆ ಗೋವಿಂದರಾಜ್ ಮಾನನಷ್ಟ ಮೊಕದ್ದಮೆ

ಕಾಂಗ್ರೆಸ್ ಹೈಕಮಾಂಡ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 1000 ಕೋಟಿ ರೂಪಾಯಿ ನೀಡಿದ್ದಾರೆಂದು ಡೈರಿಯಲ್ಲಿ ಉಲ್ಲೇಖಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಇದರ ವಿರುದ್ಧ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು ಫೆಬ್ರವರಿ 14ರಂದು ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ನೋಟಿಸ್ ಕೂಡಾ ಜಾರಿಯಾಗಿತ್ತು.

ಬಿಜೆಪಿ ಕಪ್ಪದ ವಿರುದ್ಧ ಎಸಿಬಿಗೆ ದೂರು

ಬಿಜೆಪಿ ಕಪ್ಪದ ವಿರುದ್ಧ ಎಸಿಬಿಗೆ ದೂರು

ಹೈಕಮಾಂಡ್ ಗೆ ಕಪ್ಪ ವಿಷಯದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಸಂಭಾಷಣೆ ಸಿಡಿ ಕುರಿತಂತೆ ಬುಧವಾರ ಕೆಪಿಸಿಸಿ ಕಾನೂನು ಘಟಕ ಎಸಿಬಿಗೆ ಫೆ.15ರಂದು ದೂರು ನೀಡಿತ್ತು. 'ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ನಡುವೆ ನಡೆದ ಸಂಭಾಷಣೆಯ ಪ್ರಕಾರ ಲಂಚರೂಪದಲ್ಲಿ ಹೈಕಮಾಂಡಿಗೆ ಹಣ ನೀಡಿರುತ್ತಾರೆ' ಈ ಕುರಿತು ತನಿಖೆ ನಡೆಸುವಂತೆ ದೂರು ನೀಡಲಾಗಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ತಿಳಿಸಿದ್ದರು.

ಯಡಿಯೂರಪ್ಪ, ಅನಂತ್ ಮೇಲೆ ಐವನ್ ಡಿಸೋಜಾ ದೂರು

ಯಡಿಯೂರಪ್ಪ, ಅನಂತ್ ಮೇಲೆ ಐವನ್ ಡಿಸೋಜಾ ದೂರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ನಡುವಿನ ಸಂಭಾಷಣೆ ಸಿಡಿಗೆ ಸಂಬಂಧಿಸಿದಂತೆ ಬೆಂಗಳೂರಿನ ಮಲ್ಲೇಶ್ವರಂ ಠಾಣೆಗೆ ಕಾಂಗ್ರೆಸ್ ದೂರು ನೀಡಿತ್ತು. ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಐವನ್ ಡಿ ಸೋಜಾ ಮಲ್ಲೇಶ್ವರಂ ಠಾಣೆಗೆ ಫೆ. 17ರಂದು ದೂರು ನೀಡಿದ್ದರು. ಸಂಭಾಷಣೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಅಸ್ಥಿರಗೊಳಿಸುವ ಬಗ್ಗೆ ಮಾತನಾಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದರು.

ಲೋಕಾಯುಕ್ತಕ್ಕೆ ರಾಜೀವ್ ಚಂದ್ರಶೇಖರ್ ದೂರು

ಲೋಕಾಯುಕ್ತಕ್ಕೆ ರಾಜೀವ್ ಚಂದ್ರಶೇಖರ್ ದೂರು

ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಪಡೆದಿದ್ದಾರೆ ಎನ್ನಲಾದ ಕಮಿಷನ್ ಹಾಗೂ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ವಶಪಡಿಸಿಕೊಂಡ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಡೈರಿ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಫೆ. 17ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಅನ್ವಯ ತನಿಖೆ ನಡೆಸಬೇಕು. ಅಧಿಕಾರಿಗಳು, ಸಚಿವರು ಮತ್ತು ಇದರಲ್ಲಿ ತೊಡಗಿಸಿಕೊಂಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದರು.

ಕಾಂಗ್ರೆಸ್ ಬಣದ ಮೇಲೆ ಎಫ್ಐಆರ್

ಕಾಂಗ್ರೆಸ್ ಬಣದ ಮೇಲೆ ಎಫ್ಐಆರ್

ರಾಜ್ಯದಲ್ಲಿ ವಿವಾದದ ಅಲೆ ಎಬ್ಬಿಸಿದ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ನಡುವಿನ ಸಂಭಾಷಣೆಯ ಸಿಡಿ ನಕಲಿ ಅಂತ ಬಿಜೆಪಿ ಫೆಬ್ರವರಿ 19ರಂದು ದೂರು ನೀಡಿತ್ತು. ವೀಡಿಯೋವನ್ನು ತಿರುಚಲಾಗಿದೆ ಎಂದು ಹೇಳಿ ಬಿಜೆಪಿಯ ಅಶ್ವಥ್ಥ ನಾರಾಯಣ, ವಿ ಸೋಮಣ್ಣ, ಸುಬ್ಬಣ್ಣ ಸೇರಿಕೊಂಡು ಕಾಂಗ್ರೆಸ್ ಸಚಿವರಾದ ಬಸವರಾಜ ರಾಯರೆಡ್ಡಿ, ಎಂ. ಬಿ ಪಾಟೀಲ್, ಕೆ. ರಮೇಶ್ ಕುಮಾರ್ ಹಾಗೂ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ವಿರುದ್ಧ ದೂರು ನೀಡಿದ್ದರು.
ಫೆ. 13ರಂದು ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿದ್ದರು.

ಐಟಿ ಅಧಿಕಾರಗಳ ಮೇಲೆ ಗೋವಿಂದರಾಜ್ ಕೇಸ್

ಐಟಿ ಅಧಿಕಾರಗಳ ಮೇಲೆ ಗೋವಿಂದರಾಜ್ ಕೇಸ್

ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಐಟಿ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ್ದಾರೆ. ಫೆಬ್ರವರಿ 28ರಂದು ದೂರು ದಾಖಲಿಸಿರುವ ಗೋವಿಂದರಾಜ್, ಆದಾಯ ಇಲಾಖೆ ಅಧಿಕಾರಿಗಳು ತನ್ನದಲ್ಲದ ಡೈರಿಯೊಂದನ್ನು ತನ್ನದು ಎಂಬಂತೆ ಬಿಂಬಿಸಿದ್ದಾರೆ. ಜತೆಗೆ ಆ ಡೈರಿಯಲ್ಲಿ ಮಾಹಿತಿಗಳು ವಂಚನೆಯಿಂದ ಕೂಡಿವೆ. ಮತ್ತು ಅದರ ರಹಸ್ಯ ಕಾಪಾಡುವ ಬದಲು ಮಾಹಿತಿ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಇಂದಿರಾನಗರ್ ಪೊಲೀಸ್ ಠಾಣೆಯಲ್ಲಿ 166(a), 193, 182, 341, 109, 406, 218, 409, 457, 120B, 34, 380, 472 ಮತ್ತು 471ರ ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.

ದಿನೇಶ್ ಗುಂಡೂರಾವ್ ಮೇಲೆ ಲೆಹರ್ ಸಿಂಗ್ ಎಫ್ಐಆರ್

ದಿನೇಶ್ ಗುಂಡೂರಾವ್ ಮೇಲೆ ಲೆಹರ್ ಸಿಂಗ್ ಎಫ್ಐಆರ್

ಡೈರಿಗೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ನನ್ನ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಲೆಹರ್ ಸಿಂಗ್ ಮಾರ್ಚ್ 1ರಂದು ದೂರು ನೀಡಿದ್ದರು. ಈ ಕುರಿತು ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಮನೆಯಲ್ಲಿ ಡೈರಿ ದೊರೆತಿದೆ ಎಂದು ಸಾರ್ವಜನಿಕವಾಗಿ ದಿನೇಶ್ ಗುಂಡೂರಾವ್ ಹೇಳಿದ್ದರು. ಲೆಹರ್ ಸಿಂಗ್ ದೂರು ಆಧರಿಸಿ ಐಪಿಸಿ ಸೆಕ್ಷನ್ 465-ಪೋರ್ಜರಿ ದಾಖಲೆ ಸೃಷ್ಟಿ, ಸೆಕ್ಷನ್ 469 - ಪೋರ್ಜರಿ ದಾಖಲೆ ಸೃಷ್ಟಿಸಿ ವ್ಯಕ್ತಿಯೊಬ್ಬರ ಗೌರವಕ್ಕೆ ಧಕ್ಕೆ ತರುವುದು ಹಾಗೂ ಸೆಕ್ಷನ್ 471-ದಾಖಲೆ ನಕಲಿ ಎಂದು ತಿಳಿದಿದ್ದರೂ ಅಸಲಿ ಎಂದು ತೋರಿಸುವುದರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

English summary
Total 7 complaint has been filed in the so called high command donation case, ‘Donation Gate’. BJP and Congress leaders filling series of complaint one against other. Here are the complete details of all the cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X