ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳಿದಿರುವುದು 3 ವರ್ಷ, ಮುಂದಿರುವುದು 10 ಸವಾಲು

By ಭಾಸ್ಕರ್ ಭಟ್
|
Google Oneindia Kannada News

ಬೆಂಗಳೂರು, ಮೇ 14 : ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ರಾಜ್ಯದ ಜನರಿಗೆ ಹಲವು ಭಾಗ್ಯಗಳನ್ನು ನೀಡಿದ ಸಿದ್ದರಾಮಯ್ಯ ಅವರ ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿದೆ. 'ಮುಂದಿನ ಮೂರು ವರ್ಷ ನಾನೇ ಸಿಎಂ' ಎಂದು ಘೋಷಿಸಿರುವ ಸಿದ್ದರಾಮಯ್ಯ ಅವರ ಹಾದಿ ಸುಲಭವಾಗೇನು ಇಲ್ಲ, ಹಲವಾರು ಸವಾಲುಗಳು ಅವರ ಮುಂದಿದೆ.

ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಮೇ 16ರ ಶನಿವಾರ ದಾವಣಗೆರೆಯಲ್ಲಿ 'ಸರ್ವೋದಯ ಸಮಾವೇಶ' ಹಮ್ಮಿಕೊಂಡಿದೆ. ಸಮಾವೇಶ ಮುಗಿದ ಬಳಿಕ ಗ್ರಾಮ ಪಂಚಾಯಿತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ಎದುರಾಗಲಿದ್ದು, ಸರ್ಕಾರ ಅತ್ತ ಗಮನ ಹರಿಸಬೇಕಾಗಿದೆ. [ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು]

ಸಂಪುಟ ವಿಸ್ತರಣೆ, ಪುನಾರಚನೆ ಮಾಡುತ್ತೇನೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರು ಚುನಾವಣೆಗಳ ಬಳಿಕ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದೆ. ಸಚಿವರ ವಿರುದ್ಧ ಶಾಸಕರು ದೂರು ಹೇಳುತ್ತಿದ್ದು, ಇವುಗಳನ್ನು ಬಗೆಹರಿಸುವ ಜವಾಬ್ದಾರಿ ಸಿದ್ದರಾಮಯ್ಯ ಮೇಲಿದೆ. ಮುಂದಿನ ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಮುಂದಿರುವ ಸವಾಲುಗಳೇನು ನೋಡೋಣ ಬನ್ನಿ... [ಎರಡು ವರ್ಷದ ಆಡಳಿತ ತೃಪ್ತಿ ನೀಡಿದೆ : ಸಿದ್ದರಾಮಯ್ಯ]

ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸುವುದು

ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸುವುದು

ರಾಜ್ಯದಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ. ಮೇ 29 ಕ್ಕೆ ಮೊದಲ ಮತ್ತು ಜೂನ್ 2 ಕ್ಕೆ 2ನೇ ಹಂತದ ಚುನಾವಣೆ ನಡೆಯಲಿದೆ. ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಮಹತ್ವದ ಜವಾಬ್ದಾರಿ ಸರ್ಕಾರ ಮತ್ತು ಪಕ್ಷದ ಮೇಲಿದೆ. ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಸಂಚಾರ ನಡೆಸಿ ಚುನಾವಣಾ ಪ್ರಚಾರ ಕೈಗೊಳ್ಳಬೇಕಾಗಿದೆ.

ಬಿಬಿಎಂಪಿ : ವಿಭಜನೆ, ಚುನಾವಣೆ

ಬಿಬಿಎಂಪಿ : ವಿಭಜನೆ, ಚುನಾವಣೆ

ಮೂರು ತಿಂಗಳಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಕೆಲವು ದಿನಗಳ ಹಿಂದೆ ಸೂಚನೆ ನೀಡಿದೆ. ಆದ್ದರಿಂದ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಇತ್ತ ಪಾಲಿಕೆಯನ್ನು ಮೂರು ಭಾಗಗಳಾಗಿ ಮಾಡುವ ಸರ್ಕಾರದ ನಿರ್ಧಾರವನ್ನು ವಿಪಕ್ಷಗಳು ವಿರೋಧಿಸುತ್ತಿವೆ. ಈ ಕುರಿತ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡು ಪಾಲಿಕೆ ವಿಭಜಿಸುವ ಜವಾಬ್ದಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿದೆ.

ಸಚಿವ ಸಂಪುಟ ವಿಸ್ತರಣೆ, ಪರಮೇಶ್ವರ್‌ಗೆ ಸ್ಥಾನ

ಸಚಿವ ಸಂಪುಟ ವಿಸ್ತರಣೆ, ಪರಮೇಶ್ವರ್‌ಗೆ ಸ್ಥಾನ

ಸಚಿವ ಸಂಪುಟ ವಿಸ್ತರಣೆಗೆ ಹಲವು ಗಡುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡುತ್ತಾ ಬಂದಿದ್ದಾರೆ. ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿರುವ ಹಿನ್ನಲೆಯನ್ನು ಸಂಪುಟ ವಿಸ್ತರಣೆ ಮಾಡಿ ಹೊಸಬರಿಗೆ ಅವಕಾಶ ನೀಡದಿದ್ದರೆ, ಶಾಸಕರು ಅಸಮಾಧಾನಗೊಳ್ಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಸ್ಥಾನ-ಮಾನ ನೀಡಬೇಕು ಎಂಬ ಬೇಡಿಕೆಯೂ ಇದ್ದು, ಅದನ್ನು ಪೂರ್ಣಗೊಳಿಸಬೇಕಾಗಿದೆ.

ಸಂಪುಟ ಪುನಾರಚನೆ ಮಾಡುವುದು

ಸಂಪುಟ ಪುನಾರಚನೆ ಮಾಡುವುದು

ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಸಂಪುಟದ ಸಚಿವರ ವಿರುದ್ಧವೇ ಶಾಸಕರು ದೂರು ಹೇಳುತ್ತಿದ್ದಾರೆ. ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಕೊಡಿ ಎಂಬ ಬೇಡಿಕೆ ಮುಂದಿಡುತ್ತಿದ್ದಾರೆ. ಆದ್ದರಿಂದ, ಸಂಪುಟ ಪುನಾರಚನೆ ಮಾಡಿ ಸಕ್ರಿಯವಾಗಿಲ್ಲದ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸವಾಲು ಸಿದ್ದರಾಮಯ್ಯ ಮುಂದಿದೆ.

ಸರ್ಕಾರ ಟೇಕಾಫ್‌ ಆಗಿಲ್ಲ ಎಂಬ ಆರೋಪ

ಸರ್ಕಾರ ಟೇಕಾಫ್‌ ಆಗಿಲ್ಲ ಎಂಬ ಆರೋಪ

ಸಿದ್ದರಾಮಯ್ಯ ಸರ್ಕಾರ ಟೇಕಾಫ್‌ ಆಗಿಲ್ಲ ಎಂಬುದು ಮೊದಲಿನಿಂದಲೂ ಕೇಳಿಬರುತ್ತಿರುವ ಆರೋಪ. ಸಚಿವರು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪ್ರತಿಪಕ್ಷಗಳು, ಮಾಧ್ಯಮಗಳು, ಜನರು ದೂರುತ್ತಿದ್ದಾರೆ. ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟು ಕೆಲಸ ಮಾಡಿಸಬೇಕಾದ ಸವಾಲು ಸಿಎಂ ಮುಂದಿದೆ. ತಮ್ಮ ಸಂಪುಟದ ಸಚಿವರಿಗೂ ಬಿಸಿಮುಟ್ಟಿಸಬೇಕಾಗಿದೆ.

ಸರ್ಕಾರ ಮತ್ತು ಪಕ್ಷದ ನಡುವೆ ಸಾಮರಸ್ಯ

ಸರ್ಕಾರ ಮತ್ತು ಪಕ್ಷದ ನಡುವೆ ಸಾಮರಸ್ಯ

ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಸಾಮರಸ್ಯ ಇಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ಸಚಿವರು ಪಕ್ಷದ ಕಚೇರಿಗೆ ಬರುವುದಿಲ್ಲ. ಜಿಲ್ಲೆಗೆ ಬಂದರೆ ಕಾರ್ಯಕರ್ತರ ಅಹಲವಾಲು ಕೇಳುವುದಿಲ್ಲ ಎಂಬುದು ಹಲವು ದಿನದಿಂದ ಕೇಳಿಬರುತ್ತಿರುವ ಆರೋಪ. ಆದ್ದರಿಂದ ಪಕ್ಷ ಮತ್ತು ಸರ್ಕಾರದ ನಡುವೆ ಸಾಮರಸ್ಯ ಮೂಡಿಸಿ ಕಾರ್ಯಕರ್ತರು ಅಸಮಾಧಾನಗೊಳ್ಳದಂತೆ ಮಾಡುವ ಸವಾಲು ಸಿದ್ದರಾಮಯ್ಯ ಮುಂದಿದೆ.

ಮೇಕೆದಾಟು, ಎತ್ತಿನಹೊಳೆ ಯೋಜನೆಗಳು

ಮೇಕೆದಾಟು, ಎತ್ತಿನಹೊಳೆ ಯೋಜನೆಗಳು

ಸರ್ಕಾರ ಕೈಗೆತ್ತಿಕೊಂಡಿರುವ ಮೇಕೆದಾಟು ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸವಾಲು ಸಿದ್ದರಾಮಯ್ಯ ಮುಂದಿದೆ. ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ಮಾಡುತ್ತಿದೆ. ಇತ್ತ ಎತ್ತಿನ ಹೊಳೆ ಯೋಜನೆ ಕರಾವಳಿ ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಬಗೆಹರಿಸಿಕೊಂಡು ಮುಂದೆ ಸಾಗಬೇಕಾದ ಸವಾಲಿದೆ.

ಕೈಗಾರಿಕೆ ಸ್ಥಾಪನೆಗೆ ಆದ್ಯತೆ

ಕೈಗಾರಿಕೆ ಸ್ಥಾಪನೆಗೆ ಆದ್ಯತೆ

ರಾಜ್ಯ ಸರ್ಕಾರದ ವಿಳಂಭ ಧೋರಣೆಯಿಂದಾಗಿ ಧಾರವಾಡದಲ್ಲಿ ಸ್ಥಾಪನೆಯಾಗಬೇಕಿದ್ದ ಹಿರೋ ಮೋಟೊ ಕಾರ್ಪ್ ಉತ್ಪಾದನಾ ಘಟಕ ಕರ್ನಾಟಕ ಕೈ ತಪ್ಪಿದೆ ಎಂಬ ಆರೋಪವಿದೆ. ಆದ್ದರಿಂದ ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಬೇಕಾದ ಸವಾಲು ಇದೆ. ನೆರೆಯ ರಾಜ್ಯ ಆಂಧ್ರಪ್ರದೇಶ ಕೈಗಾರಿಕೋದ್ಯಮಿಗಳನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಲೇ ಇದೆ.

ಸಂಪನ್ಮೂಲ ಕ್ರೋಢಿಕರಣ ಮಾಡುವುದು

ಸಂಪನ್ಮೂಲ ಕ್ರೋಢಿಕರಣ ಮಾಡುವುದು

ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಘೋಷಣೆ ಮಾಡಿದೆ, ಇವುಗಳನ್ನು ಮುಂದುವರೆಸಲು ಅನುದಾನಗಳ ಅಗತ್ಯವಿದೆ. ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದೆ ಎಂದು ಆರೋಪಿಸುವ ಸಿದ್ದರಾಮಯ್ಯ ಅವರು ಬೊಕ್ಕಸವನ್ನು ತುಂಬಿಸಲು ಗಮನಹರಿಸಬೇಕಾಗಿದೆ.

ಚುನಾವಣೆಗೆ ಸಿದ್ಧವಾಗುವುದು

ಚುನಾವಣೆಗೆ ಸಿದ್ಧವಾಗುವುದು

ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದೆ. ಇನ್ನೂ ಮೂರು ವರ್ಷಗಳು ಬಾಕಿ ಇದ್ದು ನಂತರ ಚುನಾವಣೆ ಎದುರಾಗಲಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ಆದ್ದರಿಂದ ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯ ಗಮನದಲ್ಲಿಟ್ಟುಕೊಳ್ಳಬೇಕು. ಅಲ್ಲದೇ ನೆರೆಯ ರಾಜ್ಯ ತಮಿಳುನಾಡಿನಲ್ಲಿ 2016ರಲ್ಲಿ ಚುನಾವಣೆ ಎದುರಾಗಲಿದೆ. ಅಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಪಕ್ಷ ಸಿದ್ದರಾಮಯ್ಯ ಅವರಿಗೆ ವಹಿಸುವ ಸಾಧ್ಯತೆ ಇದೆ.

English summary
Karnataka Congress Government led by Chief Minister Siddaramaiah completes 2 years in office on Wednesday, May 13, 2015. Here is a list of 10 challenges ahead of Siddaramaiah for remaining 3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X