ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟ ಕಂದ ಚಾರ್ಲಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ

|
Google Oneindia Kannada News

ಬೆಡ್ಫಾಂಟ್(ಲಂಡನ್), ಜುಲೈ 29: ಹನ್ನೊಂದು ತಿಂಗಳ ಚಾರ್ಲಿ ಗಾರ್ಡ್ ಎಂಬ ಪುಟ್ಟ ಮಗು ಹುಟ್ಟುತ್ತಲೇ ಅತ್ಯಂತ ಅಪರೂಪದ ವಂಶವಾಹಿ ಸಮಸ್ಯೆಯೊಂದನ್ನು ಹೊತ್ತು ಬಂದವನು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಂದ ಹಿಡಿದು ವಿಶ್ವದ ಎಲ್ಲ ಪ್ರಭಾವಿ ವ್ಯಕ್ತಿಗಳೂ ಆತನತ್ತ ಅನುಕಂಪದ ನೋಟ ಬೀರಿದ್ದರಲ್ಲೂ ಅಚ್ಚರಿಯೇನಿಲ್ಲ. ಯಾಕಂದ್ರೆ ಅವನಿದ್ದ ಸ್ಥಿತಿಯೇ ಹಾಗಿತ್ತು.

ಕಳೆದ ಎಂಟು ತಿಂಗಳಿನಿಂದ ಕೃತಕ ಉಸಿರಾಟದ ಮೂಲಕವೇ ಬದುಕಿದ್ದ ಚಾರ್ಲಿ ಗಾರ್ಡ್ ಎಂಬ ಮುದ್ದಾದ ಮಗು ನಿನ್ನೆ(ಜುಲೈ 28) ತನ್ನ ತಂದೆ-ತಾಯಿ, ಬಂಧುಗಳನ್ನೆಲ್ಲ ಅಗಲಿ ದೂರದ ಲೋಕಕ್ಕೆ ತೆರಳಿದ್ದಾನೆ. ಏಳೆಂಟು ತಿಂಗಳ ಕಾನೂನು ಸಮರಕ್ಕೂ ಈ ಮೂಲಕ ತೆರೆಬಿದ್ದಿದೆ! 'ನಮ್ಮ ಸುಂದರ, ಪುಟ್ಟ ಕಂದ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ, ನಮಗೆ ನಿನ್ನ ಬಗ್ಗೆ ಹೆಮ್ಮೆ ಇದೆ ಚಾರ್ಲಿ...' ಎಂದು ಟ್ವೀಟ್ ಮಾಡುವ ಮೂಲಕ ಚಾರ್ಲಿ ಗಾರ್ಡ್ ತಾಯಿ ಕೊನ್ನಿ ಯೇಟ್ಸ್ ಮಗನ ಸಾವಿನ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದಾರೆ.

ಆದರೆ ಆ ಮಗುವನ್ನು ಕೃತಕ ಉಸಿರಾಟದಿಂದ ಬಿಡಿಸಿ, ಸಾಯುವಂತೆ ಮಾಡಿದ ಕಾನೂನಿನ ನಡೆಯನ್ನು ಇದೀಗ ಮಾನವ ಹಕ್ಕು ಹೋರಾಟಗಾರರು ಪ್ರಶ್ನಿಸುತ್ತಿದ್ದಾರೆ. ಈ ಪುಟ್ಟ ಮಗುವನ್ನು ಬದುಕಿಸಿಕೊಳ್ಳಬಹುದಿತ್ತು, ಕಾನೂನು ಅದಕ್ಕೆ ಮತ್ತಷ್ಟು ಸಮಯಾವಕಾಶ ನೀಡಬೇಕಿತ್ತು ಎಂಬ ದನಿ ಕೇಳಿಬರುತ್ತಿದೆ.

ಕಳೆದ ವರ್ಷ(2016)ದ ಆಗಸ್ಟ್ ನಲ್ಲಿ ಜನಿಸಿದ್ದ ಚಾರ್ಲಿಗೆ ಅಪರೂಪದ ಕಾಯಿಲೆ. ಮೈಟೋಕಾಂಡ್ರಿಯಲ್ ಡಿಎನ್ ಎ ಡಿಪ್ಲೇಶನ್ ಸಿಂಡ್ರೋಮ್ ಎಂಬ ಈ ಕಾಯಿಲೆಯ ಲಕ್ಷಣ ಎಂದರೆ ಮೆದುಳು ನಿಷ್ಕ್ರಿಯವಾಗುವುದು! ಮಗುವಿಗೆ ಉಸಿರಾಟದ ಸಮಸ್ಯೆಯಿದೆ ಎಂದು 2016ರ ನವೆಂಬರ್ ನಲ್ಲಿ ಲಂಡನ್ನಿನ ಗ್ರೇಟ್ ಆರ್ಮೆಡ್ ಸ್ಟ್ರೀಟ್ ಹಾಸ್ಫಿಟಲ್(ಗೋಶ್) ಆಸ್ಪತ್ರೆಗೆ ಕರೆತಂದ ತಂದೆ-ತಾಯಿಗೆ ದಿಗ್ಭ್ರಮೆಯಾಗಿದ್ದು ತಮ್ಮ ಮಗನಿಗೆ ಜಗತ್ತಿನಲ್ಲೇ ಅತ್ಯಂತ ಅಪರೂಪ ಅನ್ನಿಸುವಂಥ ಕಾಯಿಲೆಯಿದೆ ಎಂಬುದು ತಿಳಿದಾಗ.

ಕೃತಕ ಉಸಿರಾಟದಿಂದಷ್ಟೇ ಬದುಕು

ಇದರೊಟ್ಟಿಗೆ ಮಗುವನ್ನು ರಕ್ಷಿಸುವುದಕ್ಕೆ ಯಾವುದೇ ರೀತಿಯ ಚಿಕಿತ್ಸೆಯಿಲ್ಲ, ಅದು ಬದುಕಬೇಕೆಂದರೆ ಕೃತಕ ಉಸಿರಾಟದ ಮೂಲಕ ಮಾತ್ರ ಎಂಬ ವೈದ್ಯರ ಮಾತು ಸಿಡಿಲೆರಗುವಂತೆ ಮಾಡಿತ್ತು ಆ ತಂದೆ-ತಾಯಿಗೆ. ಆದರೂ ಯಾವುದೋ ಭರವಸೆ, ಮಗು ಬದುಕಿಯಾನು ಅಂತ! ಮಗುವಿಗೆ ನೀಡುವುದಕ್ಕೆ ಯಾವುದೇ ಚಿಕಿತ್ಸೆಯಿಲ್ಲ, ಆದರೆ ಮಗುವಿನ ಮೇಲೆ ನಾವು ಬೇರೆ ಬೇರೆ ಚಿಕಿತ್ಸೆಯ ಸಾಧ್ಯತೆಗಳನ್ನು ಪ್ರಯೋಗ ಮಾಡಬಹುದು ಎಂದಿತ್ತು ಗೋಶ್. ತಂದೆ-ತಾಯಿ ಅದಕ್ಕೂ ಒಪ್ಪಿದ್ದರು.

ಪ್ರಯೋಗದ ವಸ್ತುವಾಯ್ತು ಮಗು!

ಆದರೆ ಈ ಚಿಕಿತ್ಸೆಯ ಪ್ರಯೋಗ ಮಗುವಿನ ಮೆದುಳನ್ನು ಮತ್ತಷ್ಟು ನಿಷ್ಕ್ರಿಯಗೊಳಿಸುವುದಕ್ಕೆ ಆರಂಭಿಸಿದಾಗ ಹೆದರಿದ ವೈದ್ಯರು ಚಿಕಿತ್ಸೆಯನ್ನು ಅಲ್ಲಿಯೇ ಬಿಡುವುದಕ್ಕೆ ಸಿದ್ಧವಾದರು. ಆದರೆ ತಂದೆ-ತಾಯಿಗಳದ್ದು ಒಂದೇ ವರಾತ, ಚಿಕಿತ್ಸೆ ಮುಂದುವರಿಸಿ ಅಂತ! ಈ ಸಂಬಂಧ ತಂದೆ-ತಾಯಿ ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದಾಯ್ತು. ಆದರೆ ಗೋಶ್ ಮುಂದಿಟ್ಟ ವಿಚಾರಗಳನ್ನು ಮನವರಿಕೆಮಾಡಿಕೊಂಡ ನ್ಯಾಯಾಲಯ ಚಿಕಿತ್ಸೆ ಮುಂದುವರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿ, ಮಗುವಿಗೆ ನೀಡಿದ್ದ ಕೃತಕ ಉಸಿರಾಟದ ವ್ಯವಸ್ಥೆಯನ್ನು ತೆಗೆಯುವುದಕ್ಕೆ ಹೇಳಿತ್ತು.

"ನಮ್ಮನ್ನು ಕ್ಷಮಿಸು"

ಮಗು ಎಂದಿಗೂ ಸರಿಹೋಗುವುದಿಲ್ಲ ಎಂದು ದೃಢವಾದ ಮೇಲೆ ತಾನು ಈ ತೀರ್ಪು ನೀಡಿದ್ದೇನೆ ಎಂದು ಕೋರ್ಟು ತನ್ನ ನಿರ್ಧಾರವನ್ನು ಸಮ್ಮತಿಸಿಕೊಂಡಿತ್ತು. ಒಂದರ್ಥದಲ್ಲಿ ಇದು ದಯಾಮರಣ. ಆದರೆ ತಂದೆ-ತಾಯಿಗಳಿಗೆ ಮಾತ್ರ ಈಗಲೂ ಮನಸ್ಸಿನಲ್ಲಿ ಕೊರಗು. ಅದಕ್ಕೆಂದೇ ತಾಯಿ ಟ್ವೀಟ್ ಮಾಡಿದ್ದಾರೆ, 'ನಾವು ನಿಮ್ಮನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಿತ್ತೇನೋ, ಆದರೆ ಇವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ, ನಮ್ಮನ್ನು ಕ್ಷಮಿಸು' ಎಂದು!

ಸ್ವರ್ಗದತ್ತ ಪಯಣ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಚಾರ್ಲಿಗೆ ನೆರವು ನೀಡುವುದಕ್ಕೆ ಸಿದ್ಧ ಎಂದು ಹೇಳಿದ್ದರು, ಹಾಗೆಯೇ ಪೋಪ್ ಫ್ರಾನ್ಸಿಸ್ ಸಹ ಮಗುವಿಗಾಗಿ ಪ್ರಾರ್ಥಿಸಿದ್ದರು. ಒಟ್ಟಿನಲ್ಲಿ ಹನ್ನೊಂದು ತಿಂಗಳ ಪುಟ್ಟ ಮಗು ಜಗತ್ತಿನಾದ್ಯಂತ ಜನರ ಅನುಕಂಪ, ಪ್ರೀತಿ, ಅಕ್ಕರೆ ಪಡೆದಿತ್ತು. ಆತನ ಚಿಕಿತ್ಸೆಗಾಗಿ ಆನ್ ಲೈನ್ ಅಭಿಯಾನ ಆರಂಭಿಸಿ ಹಣ ಸಂಪಾದಿಸಲಾಗಿತ್ತು. ಮಗುವಿನ ತಂದೆ-ತಾಯಿಯೊಂದಿಗೆ ಕಾನೂನು ಹೋರಾಟದಲ್ಲಿ ಇಡೀ ಜಗತ್ತೂ ಜೊತೆಯಾಗಿತ್ತು! ಆದರೆ ವಿಧಿ ಮಾತ್ರ ಮಗುವಿನ ಹಣೆಯ ಮೇಲೆ ಬರೆದಿದ್ದ ಆಯುಷ್ಯ ಹನ್ನೊಂದು ತಿಂಗಳು 24 ದಿನಗಳು! ತನ್ನ ಮೊದಲ ಹುಟ್ಟು ಹಬ್ಬ(ಆಗಸ್ಟ್ 4)ಕ್ಕೆ ಒಂದು ವಾರ ಬಾಕಿ ಇರುವಾಗಲೇ ಈ ಮಗು ಇಹಲೋಕ ತ್ಯಜಿಸಿ, ಸ್ವರ್ಗದತ್ತ ಪಯಣ ಬೆಳೆಸಿದೆ!

English summary
"Mummy and Daddy love you so much Charlie... we're so sorry we couldn't save you." this is the words of Connie Yates, a sad mother who lost her 11 months son, Charlie Gard in a legal battle in London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X