ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಾಕ್ ಒಪ್ಪಿದ ಒಬಾಮಾರಿಂದ ಭಾರತದ ನಿರೀಕ್ಷೆಗಳೇನು?

By Kiran B Hegde
|
Google Oneindia Kannada News

ನವದೆಹಲಿ, ಜ. 20: ಭಾರತದಲ್ಲಿ ಪ್ರತಿವರ್ಷ ನಡೆಯುವ ಗಣರಾಜ್ಯೋತ್ಸವದಲ್ಲಿ ಯಾವುದೇ ಒಂದು ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ. ಆದರೆ, ಈ ವರ್ಷ ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾಗವಹಿಸುತ್ತಿರುವುದು ಅತಿ ಹೆಚ್ಚು ಪ್ರಚಾರ ಪಡೆದಿದೆ.

ನರೇಂದ್ರ ಮೋದಿ ಹಾಗೂ ಬರಾಕ್ ಒಬಾಮ ಇಬ್ಬರೂ ಈಗಾಗಲೇ ಮೂರು ಬಾರಿ ಭೇಟಿಯಾಗಿದ್ದಾರೆ. ಎರಡೂ ದೇಶಗಳು ಜಂಟಿಯಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿದ್ದಾರೆ. ಆದರೆ ಈ ಬಾರಿಯ ಭೇಟಿ ಇನ್ನಷ್ಟು ಪ್ರಾಮುಖ್ಯತೆ ಪಡೆದಿದೆ. [ಒಬಾಮಾ ಭೇಟಿ : ತಿಳಿಯಬೇಕಾದ 10 ಸಂಗತಿಗಳು]

ಕಳೆದ ವಾರ ವೈಬ್ರಂಟ್ ಗುಜರಾತ್‌ನಲ್ಲಿ ಭಾಗವಹಿಸಿದ್ದ ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ಮಾತನಾಡಿ "ಒಬಾಮ ಹಾಗೂ ಮೋದಿ ಚರ್ಚೆಯು ವಾತಾವರಣ ಬದಲಾವಣೆ, ರಕ್ಷಣೆ, ನಾಗರಿಕರ ಪರಮಾಣು ಸಹಕಾರ ಹಾಗೂ ಆರ್ಥಿಕ ಪಾಲುದಾರಿಕೆ ಮೇಲೆ ಮುಖ್ಯ ಪರಿಣಾಮ ಬೀರಬಲ್ಲದು" ಎಂದು ಹೇಳಿದ್ದರು.

ಈ ಎಲ್ಲ ಕಾರಣಗಳಿಂದ ಭಾರತಕ್ಕೆ ಬರಾಕ್ ಒಬಾಮ ನೀಡುತ್ತಿರುವ ಭೇಟಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. [ಒಬಾಮಾ ವಾಪಸ್ ಹೋದ ಮೇಲೆ ದಾಳಿ ನಡೆಸಬಹುದೇ?]

1) ರಕ್ಷಣೆ : ಭಾರತ ಹಾಗೂ ಅಮೆರಿಕ 10 ವರ್ಷಗಳ ಕಾಲಕ್ಕಾಗಿ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಹಾಗೂ ಡ್ರೋಣ್ ಮತ್ತು ಸಾರಿಗೆ ವಿಮಾನಗಳ ಭಾಗಗಳನ್ನು ಜಂಟಿಯಾಗಿ ತಯಾರಿಸುವ ಒಪ್ಪಂದ.

2) ಸ್ಮಾರ್ಟ್ ಸಿಟಿ : ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಅಜ್ಮೇರ್, ಅಲಹಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ಜಾರಿಗೊಳಿಸಲು ಅಮೆರಿಕ ಸಹಕಾರಕ್ಕಾಗಿ ಈಗಾಗಲೇ ಉಭಯ ದೇಶಗಳ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಂಚಾರ ನಿರ್ವಹಣೆ, ಘನತ್ಯಾಜ್ಯ ವಸ್ತು ನಿರ್ವಹಣೆ, ಕಸ ವಿಲೇವಾರಿ, ವ್ಯರ್ಥ ನೀರಿನ ಸಂಸ್ಕರಣ ಹಾಗೂ ನೀರು ಸಂಗ್ರಹಣೆಯಲ್ಲಿ ಅಮೆರಿಕ ಭಾರತಕ್ಕೆ ಸಹಕಾರ ನೀಡುವ ನಿರೀಕ್ಷೆಯಿದೆ. [ಒಬಾಮಾ ಭದ್ರತೆಗೆ 1 ಲಕ್ಷ ಪೊಲೀಸರು]

obama

3) ಆರ್ಥಿಕ ಸಂಬಂಧ : ಮೋದಿ ಅವರ ಉದ್ಯಮ ಒಲವಿನ ಮೇಲೆ ಅಮೆರಿಕಕ್ಕೆ ಎಂತಹ ವಿಶ್ವಾಸವಿದೆ ಎಂದರೆ ವೈಬ್ರಂಟ್ ಗುಜರಾತ್‌ ಕಾರ್ಯಕ್ರಮಕ್ಕೆ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಅವರು 80 ಸದಸ್ಯರ ತಂಡದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಈ ತಂಡದಲ್ಲಿ ವಿವಿಧ ಕಂಪನಿಗಳ 12 ಸಿಇಓ ಇದ್ದರು.

4) ನಾಗರಿಕ ಪರಮಾಣು ಒಪ್ಪಂದ : ಭಾರತ ಹಾಗೂ ಅಮೆರಿಕ ನಡುವಣ ಇರುವ ನಾಗರಿಕ ಪರಮಾಣು ಒಪ್ಪಂದದಲ್ಲಿರುವ ಹಲವು ವಿವಾದಗಳು ಹಾಗೂ ಗೊಂದಲಗಳ ಕುರಿತು ಚರ್ಚೆ ನಡೆಸಿ ಬಗೆಹರಿಸಿಕೊಳ್ಳುವ ನಿರೀಕ್ಷೆಯಿದೆ.

5) ಬಂಡವಾಳ ಹೂಡಿಕೆ ಒಪ್ಪಂದ : ಅಮೆರಿಕವು 2010ರಿಂದಲೂ ದ್ವಿಪಕ್ಷೀಯ ಹೂಡಿಕೆ ಉತ್ತೇಜನ ಮತ್ತು ಸಂರಕ್ಷಣಾ ಒಪ್ಪಂದಕ್ಕಾಗಿ ಒತ್ತಾಯಿಸುತ್ತಿದೆ. ಇದರಲ್ಲಿರುವ ಪ್ರಮುಖ ಷರತ್ತೆಂದರೆ ಭಾರತದಲ್ಲಿನ ವ್ಯವಹಾರವನ್ನು ಅಮೆರಿಕವೇ ನಿರ್ವಹಿಸುವಂತಾಗಬೇಕು ಎಂಬುದು. [ಭಾರತಕ್ಕೆ ಬುದ್ಧಿ ಹೇಳಿ : ಪಾಕ್]

6) ಆರೋಗ್ಯ : ಆರೋಗ್ಯ ಕ್ಷೇತ್ರದಲ್ಲಿ ಅಮೆರಿಕದ ಸಹಕಾರವನ್ನು ಭಾರತ ನಿರೀಕ್ಷಿಸುತ್ತಿದೆ. ವಿಶೇಷವಾಗಿ ಡೆಂಗ್ಯೂ, ಮಲೇರಿಯಾ, ಕ್ಷಯ ರೋಗಗಳಿಗೆ ಲಸಿಕೆ ಹಾಗೂ ಕ್ಯಾನ್ಸರ್ ಸಂಬಂಧಿ ಸಂಶೋಧನೆಗೆ ಸಹಕಾರ.

7) ಇಂಧನ : ಇರಾನ್‍ ಜೊತೆ ವ್ಯವಹರಿಸುತ್ತಿರುವ ಕಂಪನಿಗಳ ಪಟ್ಟಿಯಿಂದ ಭಾರತೀಯ ಕಂಪನಿಗಳನ್ನು ತೆಗೆದುಹಾಕಬೇಕು ಹಾಗೂ ಅಮೆರಿಕದ ಎಲ್‌ಎನ್‌ಜಿ ರಫ್ತುಗಳಲ್ಲಿ ನೇರ ಪ್ರವೇಶಕ್ಕೆ ಆದ್ಯತೆ ನೀಡಬೇಕು.

ಅಮೆರಿಕದ 'ಸರ್ಕಾರಿ ಹೊಣೆಗಾರಿಕೆ ಕಚೇರಿ'ಯು ಈಚೆಗಷ್ಟೇ ಭಾರತದ ಮೂರು ಕಂಪನಿಗಳನ್ನು ಇರಾನ್ ಜೊತೆ ಇಂಧನ ವ್ಯವಹಾರ ನಡೆಸುತ್ತಿರುವ ಕಂಪನಿಗಳ ಪಟ್ಟಿಯಲ್ಲಿ ಸೇರಿಸಿದೆ. ಇದರಿಂದ ಇಂತಹ ಕಂಪನಿಗಳು ಅಮೆರಿಕದಂತಹ ದೇಶಗಳೊಂದಿಗೆ ವ್ಯವಹರಿಸಲು ತೊಂದರೆ ಎದುರಾಗುತ್ತಿದೆ.

ಇದರ ಜೊತೆಯಲ್ಲಿ ಅಮೆರಿಕದೊಂದಿಗೆ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್‌ಜಿ) ವ್ಯವಹಾರ ನಡೆಸುವ ಕುರಿತೂ ಭಾರತ ಆಸಕ್ತಿ ತೋರಿದೆ. ಆದರೆ, ಭಾರತ ಉಚಿತ ವ್ಯಾಪಾರ ಒಪ್ಪಂದ ಹೊಂದಿಲ್ಲದ ಕಾರಣ ಈ ಬೇಡಿಕೆ ಈಡೇರುವುದು ಕಷ್ಟಕರ.

English summary
India-America ties are set to move to a transformative level, with talks on a range of issues, including defense, energy, education and economic cooperation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X