ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು

ಶುಕ್ರವಾರದಿಂದ ನಗದು ಬದಲಾವಣೆ ಮಿತಿ 4,500 ರುಪಾಯಿಯಿಂದ 2,000ಕ್ಕೆ ಇಳಿಕೆಯಾಗಿದೆ. ರೈತರು ವಾರಕ್ಕೆ 25 ಸಾವಿರ ರುಪಾಯಿ ಡ್ರಾ ಮಾಡಬಹುದು.ಮದುವೆ ನಿಗದಿಯಾದವರಿಗೆ 2.5 ಲಕ್ಷ ರುಪಾಯಿ ವಿಥ್ ಡ್ರಾ ಮಾಡಲು ಅನುಮತಿ ಸಿಕ್ಕಿದೆ.

|
Google Oneindia Kannada News

ಬೆಂಗಳೂರು, ನವೆಂಬರ್ 18: ಕೇಂದ್ರ ಸರಕಾರ 500, 1000 ರುಪಾಯಿ ನೋಟು ರದ್ದು ಮಾತ್ರ ಘೋಷಿಸಿತು. ಆದರೆ ಅದಕ್ಕೆ ತಕ್ಕ ತಯಾರಿ ಮಾಡಿಕೊಂಡಿರಲಿಲ್ಲವಾ ಎಂಬ ಪ್ರಶ್ನೆ ಮತ್ತೆ ಕಾಡುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಗುರುವಾರ ಘೋಷಿಸಿರುವ ಹಲವು ಹೊಸ ಕ್ರಮಗಳು ಕಣ್ಣಿಗೆ ರಾಚುತ್ತಿವೆ.

ಶುಕ್ರವಾರದಿಂದ ನಗದು ಬದಲಾವಣೆ ಮಿತಿ 4,500 ರುಪಾಯಿಯಿಂದ 2,000ಕ್ಕೆ ಇಳಿಕೆಯಾಗಿದೆ. ರೈತರು ವಾರಕ್ಕೆ 25 ಸಾವಿರ ರುಪಾಯಿ ಡ್ರಾ ಮಾಡಬಹುದು. ಬೆಳೆ ವಿಮೆಯ ಕಂತು ಪಾವತಿಸಲು ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. ಜತೆಗೆ ಮದುವೆ ನಿಗದಿಯಾದವರಿಗೆ 2.5 ಲಕ್ಷ ರುಪಾಯಿ ವಿಥ್ ಡ್ರಾ ಮಾಡಲು ಅನುಮತಿ ಸಿಕ್ಕಿದೆ.[ಪೆಟ್ರೋಲ್ ಬಂಕ್ ನಲ್ಲೂ ಹಣ ವಿಥ್ ಡ್ರಾಗೆ ಅವಕಾಶ]

Narendra modi

ಆದರೆ, ಭಾರತದಲ್ಲಿ ಲಕ್ಷಾಂತರ ಮಂದಿ ರೈತರಿಗೆ ಬ್ಯಾಂಕ್ ಖಾತೆಯೇ ಇಲ್ಲ. ಬೆಳೆ ಬೆಳೆಯಲು ಅವರು ತಕ್ಷಣ ಹೋಗೋದು ಸ್ಥಳೀಯವಾಗಿ ಸಾಲ ನೀಡುವ ಲೇವಾದೇವಿದಾರರ ಹತ್ತಿರವೇ. ಅಂದರೆ ಈಗ ತೆಗೆದುಕೊಂಡಿರುವ ಕ್ರಮಗಳು ಕೆಲವರನ್ನು ನಿರಾಳ ಮಾಡಿದೆ, ಹೌದು. ಆದರೆ ಇಷ್ಟು ದಿನ ಅನುಭವಿಸಿದ ಕಷ್ಟದ ಬಗ್ಗೆ ಏನು ಹೇಳೋದು? ಸಿದ್ಧತೆ ಕೊರತೆ ಅಂತ ತಾನೆ?

ಇದು ಹೀಗೆ ಬಿಡಿಬಿಡಿಯಾಗಿ ಒಂದೊಂದೇ ನೆನಪಿಸುವ ಬದಲು ಸರಕಾರ ಘೋಷಿಸಿರುವ ಎಲ್ಲವನ್ನೂ ನಿಮ್ಮ ಗಮನಕ್ಕೆ ತರುತ್ತಿದ್ದೀವಿ. ಈ ಎಲ್ಲ ಕ್ರಮಗಳು ವಾರದ ನಂತರ ಏಕೆ ಹೊರಬಂದವು ಎಂಬುದೇ ತಯಾರಿಯ ಕೊರತೆ ಇತ್ತಾ ಎಂಬ ಅನುಮಾನಗಳನ್ನು ಮೂಡಿಸುತ್ತಿವೆ.[ನೋಟು ನಿಷೇಧ: ಕೇಂದ್ರಕ್ಕೆ ಪತ್ರ ಬರೆದ ಸಿದ್ದು]

ಬೆಳೆ ವಿಮೆ ಘೋಷಣೆ ತಡ

ಬೆಳೆ ವಿಮೆ ಘೋಷಣೆ ತಡ

ಬೆಳೆ ವಿಮೆ ಕಂತು ಪಾವತಿಸಲು ಹದಿನೈದು ದಿನಗಳ ಕಾಲಾವಕಾಶ ವಿಸ್ತರಿಸಲಾಗಿದೆ. ಈ ಬಗ್ಗೆ ಆರಂಭದಲ್ಲೇ ತಿಳಿಸಿದ್ದರೆ ಕೋಟ್ಯಂತರ ರೈತರು ನಿರಾಳವಾಗಿರಬಹುದಿತ್ತು. ಆದರೆ ನೋಟು ರದ್ದು ನಿರ್ಧಾರದ ವಾರದ ನಂತರ ಈ ಘೋಷಣೆ ಹೊರಬಂದಿದೆ.

ಅರ್ಥವಾಗೋದು ಹೇಗೆ?

ಅರ್ಥವಾಗೋದು ಹೇಗೆ?

ಆರ್ ಟಿಜಿಎಸ್ ಅಥವಾ ಚೆಕ್ ಮೂಲಕ ರೈತರು ಹಣ ಪಡೆದಿದ್ದರೆ ಅಂಥ ಹಣವನ್ನು ವಾರಕ್ಕೆ 25 ಸಾವಿರ ರುಪಾಯಿ ವಿಥ್ ಡ್ರಾ ಮಾಡಬಹುದು. ಅದರೆ ಈ ದೇಶದ ಎಷ್ಟು ಮಂದಿ ರೈತರಿಗೆ ಬ್ಯಾಂಕ್ ಖಾತೆ, ಚೆಕ್ ಬುಕ್, ಆರ್ ಟಿಜಿಎಸ್ ಅರ್ಥವಾಗುತ್ತದೆ?

ಮೊದಲೇ ಮದುವೆ ಸೀಸನ್

ಮೊದಲೇ ಮದುವೆ ಸೀಸನ್

ಇನ್ನು ಮದುವೆಗಾಗಿ 2.5 ಲಕ್ಷ ರುಪಾಯಿವರೆಗೆ ಬ್ಯಾಂಕ್ ನಿಂದ ಹಣ ಡ್ರಾ ಮಾಡಬಹುದು. ಆದರೆ ಕೆವೈಸಿಯಲ್ಲಿ ಗ್ರಾಹಕರ ಎಲ್ಲ ಮಾಹಿತಿ ಈಗಾಗಲೇ ಅಪ್ ಡೇಟ್ ಆಗಿರಬೇಕು. ವಾರಕ್ಕೋ ಮೂರು ದಿನಕ್ಕೋ ಮದುವೆ ಇರುವವರು ಏನು ಮಾಡಬೇಕು? ಈ ನಿರ್ಧಾರ ಘೊಷಿಸುವುದಕ್ಕೂ ಇಷ್ಟು ಸಮಯ ಬೇಕಾ? ಇದು ಮೊದಲೇ ಮದುವೆ ಸೀಸನ್. ಈ ಬಗ್ಗೆ ಮೊದಲೇ ಏಕೆ ಯೋಚಿಸಿರಲಿಲ್ಲ?

ಕಲ್ಲು ಮುಚ್ಚಿದ ಹಾಗೆ

ಕಲ್ಲು ಮುಚ್ಚಿದ ಹಾಗೆ

ನವೆಂಬರ್ 18ರಿಂದ ಹಳೇ ನೋಟು ಬದಲಾವಣೆಯ ಮಿತಿಯನ್ನು 4,500ದಿಂದ 2,000ಕ್ಕೆ ಇಳಿಕೆಯಾಗಿದೆ. ಈ ಕ್ರಮವಂತೂ ಜನ ಸಾಮಾನ್ಯರಿಗೆ ಎಷ್ಟು ಸಿಟ್ಟು ತರಿಸಬಹುದು ಅಂದರೆ, ಮಾಡೋ ಕೆಲಸ ಬಿಟ್ಟು ಸರದಿಯಲ್ಲಿ ಹೋಗಿ ನಿಂತರೆ ಕೊಡ್ತಿದ್ದಿದ್ದು ನಾಲ್ಕೂವರೆ ಸಾವಿರ. ಒಂದು ಕುಟುಂಬಕ್ಕೆ ಈ ಹಣ ಎಷ್ಟು ಸಾಕಾಗುತ್ತದೆ ಅನ್ನೋದು ಎಂಥ ಸಾಮಾನ್ಯ ಬುದ್ಧಿವಂತಿಕೆ ಇರೋ ವ್ಯಕ್ತಿಗೂ ಗೊತ್ತಾಗುತ್ತೆ. ಈಗ ಮೊದಲೇ ಬಾವಿಯಲ್ಲಿ ಬಿದ್ದವರ ಮೇಲೆ ಕಲ್ಲು ಮುಚ್ಚಿದ ಹಾಗೆ ಆಗಿದೆ.

ಸ್ಪಷ್ಟ ಉತ್ತರ ಬೇಕಲ್ವಾ?

ಸ್ಪಷ್ಟ ಉತ್ತರ ಬೇಕಲ್ವಾ?

ಕುಟುಂಬದ ಸದಸ್ಯರ ಪೈಕಿ ಒಬ್ಬರು ಅಂದರೆ, ತಂದೆ ಅಥವಾ ತಾಯಿ 2.5 ಲಕ್ಷ ರುಪಾಯಿವರೆಗೆ ಮದುವೆಗಾಗಿ ಡ್ರಾ ಮಾಡಬಹುದು ಎಂಬ ನಿಯಮ ಬಂದಿದೆ. ಒಂದು ವೇಳೆ ಮದುವೆ ಸಂಬಂಧಿಕರ ಮಗಳದೋ ಮಗನದೋ ಅದರೆ ಏನು ಮಾಡಬೇಕು? ಹಣದ ವ್ಯವಸ್ಥೆ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದರೆ ಅಂಥ ವ್ಯಕ್ತಿ ಏನು ಮಾಡಬಹುದು ಎಂಬುದಕ್ಕೆ ಸ್ಪಷ್ಟ ಉತ್ತರ ಬೇಕಲ್ವಾ?

ಸಾಧಕ-ಬಾಧಕ ಚಿಂತನೆ ನಡೆಸಿರಲಿಲ್ಲವೆ?

ಸಾಧಕ-ಬಾಧಕ ಚಿಂತನೆ ನಡೆಸಿರಲಿಲ್ಲವೆ?

ಎಟಿಎಂಗಳನ್ನು ಮತ್ತೆ ಮಾಮೂಲಿನಂತೆ ಕೆಲಸ ಮಾಡುವಂತೆ ಮಾಡಲು ತಜ್ಞರ ತಂಡ ಸಭೆ ನಡೆಸಿದೆ. ಅದಕ್ಕಾಗಿ ಏನೆಲ್ಲ ಮಾಡಬೇಕು ಎಂಬ ನಕ್ಷೆ ಸಿದ್ಧವಾಗಿದೆ. ಸದ್ಯದಲ್ಲೇ ಎಲ್ಲ ಸರಿಹೋಗಬಹುದು ಅಂತಾರೆ. ಅಂದರೆ ಈ ಹಿಂದೆ ಯಾವುದೇ ತಜ್ಞರ ತಂಡ ರಚಿಸಿರಲಿಲ್ಲ ಅಂತಾಯಿತು. ಸಾಧಕ-ಬಾಧಕ, ಸವಾಲುಗಳ ಬಗ್ಗೆ ಮುಂಚಿತವಾಗಿ ಚಿಂತನೆ ನಡೆಸಿರಲಿಲ್ಲವೆ?

ಖಾಸಗಿ ವಲಯದ ನೌಕರರ ಸ್ಥಿತಿ ಏನು?

ಖಾಸಗಿ ವಲಯದ ನೌಕರರ ಸ್ಥಿತಿ ಏನು?

ಕೇಂದ್ರ ಸರಕಾರಿ ನೌಕರರು ಗ್ರೂಪ್ ಸಿ ಹಂತದವರೆಗೆ ವೇತನ ಮುಂಗಡವಾಗಿ 10 ಸಾವಿರ ರುಪಾಯಿ ಪಡೆಯಬಹುದು. ಇದನ್ನು ನವೆಂಬರ್ ವೇತನದಲ್ಲಿ ಹೊಂದಾಣಿಕೆ ಮಾಡ್ತಾರೆ. ಇದೇನೋ ಸರಿ, ಖಾಸಗಿ ವಲಯದ ನೌಕರರ ಸ್ಥಿತಿ ಏನು? ಸರಕಾರಿ ನೌಕರರು ಅದರಲ್ಲೂ ಕೇಂದ್ರ ಸರಕಾರಿ ನೌಕರರಿಗೆ ಮಾತ್ರ ಇದು ಅನ್ವಯಿಸುತ್ತದೆ.

ಎಷ್ಟು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ

ಎಷ್ಟು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ

ಕಿಸಾನ್ ಕ್ರೆಡಿಟ್ ಕಾರ್ಡ್ ಗೂ ಹೊಸ ಮಿತಿಯೇ ಅನ್ವಯಿಸುತ್ತದೆ ಎಂದು ಘೋಷಿಸಲಾಗಿದೆ. ಭಾರತ ಹಳ್ಳಿಗಳ ದೇಶ. ಸಣ್ಣ ಹಿಡುವಳಿದಾರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೇಕಡಾವಾರು ಪ್ರಮಾಣದಲ್ಲೇ ನೋಡುವುದಾದರೆ ಎಷ್ಟು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ ದೊರೆಯಬಹುದು?

ನೋಟು ಮುದ್ರಣ ಹೀಗ್ಯಾಕಾಯಿತು?

ನೋಟು ಮುದ್ರಣ ಹೀಗ್ಯಾಕಾಯಿತು?

ನೋಟು ಮುದ್ರಣ ಘಟಕಗಳು ಅವುಗಳ ಸಾಮರ್ಥ್ಯ ಪೂರ್ಣವಾಗಿ ಬಳಸಿ ಎಷ್ಟು ಮುದ್ರಿಸಬಹುದೋ ಅಷ್ಟು ಪ್ರಮಾಣದಲ್ಲಿ ಕೆಲಸ ಮಾಡ್ತಿವೆ. ಈ ವಿಚಾರ ಮಾತ್ರ ವಿಚಿತ್ರ ಎನಿಸುವಂತಿದೆ. ಮೂರ್ನಾಲ್ಕು ದಿನದ ಹಿಂದೆಯೇ, ಅಗತ್ಯ ಪ್ರಮಾಣದ ನೋಟುಗಳು ಸಿದ್ಧವಾಗಿವೆ. ವಿತರಣೆಯಷ್ಟೇ ಬಾಕಿ ಎಂದು ಹೇಳಿದ್ದ ಸರಕಾರ, ಇಲ್ಲ, ಪ್ರಿಂಟ್ ಆಗ್ತಿದೆ ತಡ್ಕಳಿ ಅಂದರೆ ಹೇಗನಿಸಬಹುದು?

ದಿನದಿಂದ ದಿನಕ್ಕೆ ಗೊಂದಲ

ದಿನದಿಂದ ದಿನಕ್ಕೆ ಗೊಂದಲ

ಇನ್ನು ಮಂಡಿ ವರ್ತಕರು ವಾರಕ್ಕೆ 50 ಸಾವಿರ ರುಪಾಯಿ ವಿಥ್ ಡ್ರಾ ಮಾಡಬಹುದು ಎಂಬ ನಿಯಮದ ಬಗ್ಗೆ ವ್ಯಾಪಾರಿಗಳನ್ನೇ ಕೇಳಬೇಕು. ಐವತ್ತು ಸಾವಿರ ರುಪಾಯಿ ಯಾವ ಪ್ರಮಾಣದ ಮಂಡಿ ವರ್ತಕರಿಗೆ. ದಿನಕ್ಕೆ ಲಕ್ಷಾಂತರ ರುಪಾಯಿ ವ್ಯವಹಾರ ಮಾಡುವವರು ಏನು ಮಾಡಬೇಕು ಎಂಬುದನ್ನು ಯೋಚಿಸಬೇಕಿತ್ತಲ್ಲವೆ? ಒಟ್ಟಾರೆ ಪ್ರಶ್ನೆಗಳು ಸಾಕಷ್ಟಿವೆ. ಹೌದು, ಹೀಗಾಗಿತ್ತು ಎಂದು ದೇಶದ ಜನರಿಗೆ ಮಾಹಿತಿ ನೀಡಬೇಕಾದ ಸರಕಾರವೇ ದಿನದಿಂದ ದಿನಕ್ಕೆ ಗೊಂದಲ ಮೂಡಿಸುತ್ತಿದೆ.

English summary
Various new measures announcing by central government after note ban decision. It raises question: Is government prepared well for note ban? Here some of the questions which related to new measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X