ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಎಂದರೆ 'ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್' : ಪ್ರಧಾನಿ ಮೋದಿ

ಜಿಎಸ್ ಟಿ ಎಂದರೆ, ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್ ಎಂದ ಪ್ರಧಾನಿ ನರೇಂದ್ರ ಮೋದಿ. ಜಿಎಸ್ ಟಿ ಉದ್ಘಾಟನಾ ಸಮಾರಂಭದಲ್ಲಿ ಹೇಳಿಕೆ.

|
Google Oneindia Kannada News

ನವದೆಹಲಿ, ಜುಲೈ 1: ''ಜಿಎಸ್ ಟಿ ಬಗ್ಗೆ ಅನೇಕ ಗೊಂದಲಗಳು, ಭೀತಿಗಳು ಜನರಲ್ಲಿ ಮನೆ ಮಾಡಿವೆ. ಆದರೆ, ನಿಜ ಹೇಳಬೇಕೆಂದರೆ ಇದು ಸರಳವಾದ ತೆರಿಗೆ ವ್ಯವಸ್ಥೆ. ಜಿಎಸ್ ಟಿ ಎಂದರೆ ಮತ್ತೊಂದು ಅರ್ಥದಲ್ಲಿ ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್'' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯುಗಾರಂಭ...ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯುಗಾರಂಭ...

ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಶುಕ್ರವಾರ ಮಧ್ಯರಾತ್ರಿ 11 ಗಂಟೆಗೆ ಆರಂಭಗೊಂಡ ಜಿಎಸ್ ಟಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಎಸ್ ಟಿ ಬಗ್ಗೆ ಇರುವ ಹಲವಾರು ಅನುಮಾನಗಳನ್ನು ಹೊಡೆದೋಡಿಸಲು ಯತ್ನಿಸಿದರು.

GST in other words Good and Simple tax: Prime Minister Narendra Modi

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಹೈಲೈಟ್ಸ್ ಇಲ್ಲಿವೆ:-

- ದೇಶದ ಬೆಳವಣಿಗೆಯಲ್ಲಿ ಆಗಾಗ ನಾವು ಉತ್ತಮ ದಾರಿಯತ್ತ ಸಾಗುವ ಕ್ಷಣಗಳು ಬರುತ್ತವೆ. ಈಗಲೂ ಅಂಥದ್ದೊಂದು ಮಹತ್ವದ ಕ್ಷಣ ಬಂದಿದ್ದು ಜಿಎಸ್ ಟಿ ಮೂಲಕ ಅಭಿವೃದ್ಧಿಯ ಪಥದಲ್ಲಿ ನಮ್ಮ ಗುರಿ ಮುಟ್ಟಲು ದಾಪುಗಾಲಿಟ್ಟು ಮುಂದೆ ಸಾಗಲು ಸಿದ್ಧರಾಗೋಣ.

- ಜಿಎಸ್ ಟಿ ಒಬ್ಬರ ಪರಿಶ್ರಮವಲ್ಲ. ಈ ಹಿಂದಿನ ಹಲವಾರು ಸರ್ಕಾರಗಳು, ನೇತಾರರು ಇದರ ಜಾರಿಗಾಗಿ ಪ್ರಯತ್ನಿಸಿದ್ದಾರೆ. ಹಾಗಾಗಿ, ಇದು ನಮ್ಮೆಲ್ಲರ ಪ್ರಯಾಸದ ಪರಿಣಾಮ.

ಜೋಕ್ಸ್, ಮೀಮ್ಸ್ ಗಳಲ್ಲಿ GST ಅಸಲಿ ಅರ್ಥ ಬಹಿರಂಗಜೋಕ್ಸ್, ಮೀಮ್ಸ್ ಗಳಲ್ಲಿ GST ಅಸಲಿ ಅರ್ಥ ಬಹಿರಂಗ

- ಈ ಸೆಂಟ್ರಲ್ ಹಾಲ್ ಅನೇಕ ಚಾರಿತ್ರಿಕ ಸಭೆಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರದ ಅನೇಕ ಮಹಾಪುರುಷರು ಇಲ್ಲಿ ಸಭೆ ಸೇರಿದ್ದಾರೆ.

- 1946ರ ಡಿ. 9ರಂದು ನಡೆದಿದ್ದ ಸಂವಿಧಾನ ರಚನಾ ಸಭೆಯ ಮೊದಲ ಸಭೆಗೆ ಈ ಸಭಾಗೃಹ ಸಾಕ್ಷಿಯಾಗಿತ್ತು. ಇಂಥ ಪವಿತ್ರ ಜಾಗದಲ್ಲಿ ಸಂವಿಧಾನ ಸಮಿತಿಯ ಮೊದಲ ಸಭೆಯಲ್ಲಿ ನೆಹರೂ, ಅಂಬೇಡ್ಕರ್, ವಲ್ಲಭಭಾಯಿ ಪಟೇಲ್, ಸರೋಜಿನಿ ನಾಯ್ಡು ಮುಂತಾದವರಿದ್ದರು.

- ಅದಕ್ಕಿಂತಲೂ ಹಿಂದೆ, ಸ್ವತಂತ್ರವಾಗಿತ್ತೆಂದು ಘೋಷಿಸಿದ್ದು ಇಲ್ಲೇ. 1949ರ ನವೆಂಬರ್ 24ರಂದು ದೇಶವು ಸಂವಿಧಾನ ಸ್ವೀಕಾರ ಮಾಡಿದ್ದು ಇಲ್ಲೇ. ಅದಾಗಿ ಸಾಕಷ್ಟು ವರ್ಷಗಳ ನಂತರ, ಈಗ ಮತ್ತೊಂದು ಬಾರಿ ಇಲ್ಲಿ ಸಭೆಯಾಗುತ್ತಿದೆ. ಈಗ ನೀವೇ ಹೇಳಿ, ಜಿಎಸ್ ಟಿಯಂಥ ಸುವ್ಯವಸ್ಥಿತ ತೆರಿಗೆ ವ್ಯವಸ್ಥೆಯನ್ನು ಘೋಷಿಸಲು ಇದಕ್ಕಿಂತ ಉತ್ತಮ ಸ್ಥಳ ಮತ್ಯಾವುದಿದೆ?

- ಜಿಎಸ್ ಟಿ ಕೌನ್ಸಿಲ್ ಸಾಕಷ್ಟು ರೂಪುರೇಷೆಗಳನ್ನು ಮಾಡಿದ್ದು, ಇದಕ್ಕೆ ನೆರವಾದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಬಡವರ ಸೌಲಭ್ಯಗಳನ್ನು ಜಿಎಸ್ ಟಿಯಿಂದ ಹೊರಗಿಡಲಾಗಿದೆ.

- ಹೇಗೆ ರೈಲ್ವೆ ವ್ಯವಸ್ಥೆಯನ್ನು ಕೇಂದ್ರ, ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದಿಂದ ಮುನ್ನಡೆಸುತ್ತಿವೆಯೋ, ಹಾಗೆಯೇ ಜಿಎಸ್ ಟಿಯನ್ನೂ ಈ ಸರ್ಕಾರಗಳು ಹಾಗೇ ಮುನ್ನಡೆಸಿಕೊಂಡು ಹೋಗಲಿವೆ.

- ಇಂದು ಜಿಎಸ್ ಟಿ ಮಂಡಳಿಯ 18ನೇ ಸಭೆ ನಡೆಯಿತು. ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಜಿಎಸ್ ಟಿ ಕೌನ್ಸಿಲ್ ಕೂಡ 18 ಸಭೆಗಳನ್ನು ನಡೆಸಿದೆ. ಹೇಗೆ ಭಗವದ್ಗೀತೆಯು ಮನುಷ್ಯನನ್ನು ಉನ್ನತಿಯೆಡೆಗೆ ಕೊಂಡೊಯ್ಯುತ್ತದೆಯೋ, ಅದೇ ರೀತಿ ಜಿಎಸ್ ಟಿ ರಾಷ್ಟ್ರವನ್ನು ಹೊಸತೊಂದು ಉನ್ನತಿಗೆ ಕೊಂಡೊಯ್ಯುತ್ತದೆ.

- ನಮಗೆ ಬೇಕಾದ ವಸ್ತು ಅದೆಷ್ಟೇ ದೂರದಲ್ಲಿರಲಿ ಕಠಿಣ ಪರಿಶ್ರಮದಿಂದ ಪ್ರಯತ್ನಪಟ್ಟರೆ ನಾವದನ್ನು ಖಂಡಿತವಾಗಿಯೂ ಪಡೆದೇ ಪಡೆಯುತ್ತೇವೆ ಎಂದು ಚಾಣಕ್ಯ ಹೇಳಿದ್ದಾರೆ. ಅದೇ ರೀತಿಯಲ್ಲಿ ಸತತ ಪರಿಶ್ರಮದಿಂದ ನಾವು ಇಂದು ಜಿಎಸ್ ಟಿ ಜಾರಿಗೊಳಿಸುತ್ತಿದ್ದೇವೆ.

- ಈಗ ನೀವು ಕೇಳಬಹುದು, ಜಿಎಸ್ ಟಿಯ ಅವಶ್ಯಕತೆಯಿತ್ತೇ ಎಂದು. ಇದಕ್ಕೆ ನಾನು ಉದಾಹರಣೆಯೊಂದನ್ನು ನೀಡುತ್ತೇನೆ. 1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತಕ್ಕೆ ಸ್ವತಂತ್ರ್ಯ ಬಂತು. ಭಾರತಕ್ಕೆ ಸ್ವತಂತ್ರ್ಯ ಸಿಕ್ಕಿತ್ತಾದರೂ ದೇಶದ ನಾನಾ ಭಾಗಗಳು ವಿವಿಧ ರಾಜರ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿತ್ತು. ಆಗ, ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಮಾಡಿದರು. ಅವರು ಹಾಗೆ ಭಾರತವನ್ನು ಮತ್ತೆ ಒಗ್ಗೂಡಸದಿದ್ದರೆ ನಮ್ಮ ಸ್ವಾತಂತ್ರ್ಯಕ್ಕೆ ಅರ್ಥವೇ ಇರುತ್ತಿರಲಿಲ್ಲ. ಈಗ ಜಿಎಸ್ ಟಿ ಸಹ ರಾಷ್ಟ್ರದ ಏಕೀಕರಣವನ್ನು ಮಾಡುವತ್ತ ಮುನ್ನಡೆದಿದೆ.

- ವಿಶ್ವ ವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೈನ್ ಅವರು ಈ ವಿಶ್ವದಲ್ಲಿ ಅರ್ಥವಾಗದ, ವಿಜ್ಞಾನಕ್ಕೂ ನಿಲುಕದ ವಿಚಾರವೇನಾದರೂ ಇದ್ದರೆ ಅದು ಆದಾಯ ತೆರಿಗೆ ಎಂದು ಲೇವಡಿ ಮಾಡಿದ್ದರು. ಪ್ರಾಯಶಃ ಭಾರತದಲ್ಲಿ ಈವರೆಗೆ ಇದ್ದ ಸಂಕೀರ್ಣವಾದ ತೆರಿಗೆ ವ್ಯವಸ್ಥೆಯನ್ನು ನೋಡಿದ್ದರೆ ಅವರು ಮತ್ತಷ್ಟು ಕಕ್ಕಾಬಿಕ್ಕಿಯಾಗುತ್ತಿದ್ದರೇನೋ ?! ಅಂಥ ತೆರಿಗೆ ವ್ಯವಸ್ಥೆಗೆ ಇಂದು ಇತಿಶ್ರೀ ಹಾಡಲಾಗುತ್ತಿದೆ.

- ಜಿಎಸ್ ಟಿಯ ಮತ್ತಿತರ ಲಾಭಗಳೆಂದರೆ, ಕಾಳಧನಕ್ಕೆ ಮುಕ್ತಿ, ತೆರಿಗೆ ಕಳ್ಳತನಕ್ಕೆ ಮುಕ್ತಿ. ಹೊಸ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಯೋಗ್ಯ ವಾತಾವರಣ.

- ತೆರಿಗೆ ವಿಚಾರದಲ್ಲಿ ಅಧಿಕಾರಿಗಳು ತೆರಿಗೆದಾರರ ಜೀವ ಹಿಂಡುವ ಬಗ್ಗೆ ಅನೇಕ ದೂರುಗಳನ್ನು ಕೇಳಿದ್ದೇವೆ. ಇದನ್ನು ತೆರಿಗೆ ಭಯೋತ್ಪಾದನೆ, ಇನ್ಸ್ ಪೆಕ್ಟರ್ ರಾಜ್ ಎಂಬಿತ್ಯಾದಿ ಅಡ್ಡ ಹೆಸರುಗಳಿಂದ ತೆರಿಗೆ ವ್ಯವಸ್ಥೆಯನ್ನು ಕರೆಯುವುದು ಇಂದು ಗುಟ್ಟಾಗೇನೂ ಉಳಿದಿಲ್ಲ. ಆದರೆ, ಇನ್ನು ಮುಂದೆ ಇಂಥ ಪರಿಸ್ಥಿತಿ ಇರದು.

- ಜಿಎಸ್ ಟಿಯಲ್ಲಿ ತೆರಿಗೆ ಯಾರೋ ಒಬ್ಬರ ಮೇಲೆ ಹೆಚ್ಚಾಗಿ ಹೇರಲಾಗಿಲ್ಲ. ಬದಲಿಗೆ, ಭಾರ ಎಲ್ಲರಿಗೂ ಸಮಾನವಾಗಿ ಹಂಚುವಂತೆ ಮಾಡಲಾಗಿದೆ.

- ಕೊನೆಯದಾಗಿ ಹೇಳಬೇಕೆಂದರೆ, ಜಿಎಸ್ ಟಿಯ ಬಗ್ಗೆ ಕೆಲವಾರು ಗೊಂದಲಗಳಿವೆ. ಇದು ಕ್ಲಿಷ್ಟಕರವಾಗಬಹುದು ಎಂದೂ ಹೇಳಲಾಗುತ್ತಿದೆ. ಆದರೆ, ಹೊಸ ನಂಬರಿನ ಕನ್ನಡಕ ಬಂದಾಗ ಅದಕ್ಕೆ ಹೊಂದಿಕೊಳ್ಳುವುದು ಒಂದೆರಡು ದಿನ ಹೇಗೆ ಕಷ್ಟವೋ ಹಾಗೆಯೇ ಈ ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳಲು ಒಂದೆರಡು ದಿನ ಜನರಿಗೆ ಕೊಂಚ ಕಷ್ಟವಾಗಬಹುದು. ಆದರೆ, ಮುಂದೆ ಎಲ್ಲವೂ ಸರಾಗವಾಗಿ ಸಾಗುತ್ತದೆ.

- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರೇಷ್ಠ ಭಾರತಕ್ಕಾಗಿ ಒಟ್ಟಾಗಿ ದುಡಿಯಲಿದ್ದಾರೆ. ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್ .

English summary
Prime minister Narendra Modi speaks about Goods and Services tax, on its inauguration event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X