ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮೋದಿ ಮೋದಿ!

By Prasad
|
Google Oneindia Kannada News

ಬೆಂಗಳೂರು, ಮೇ 16 : ಇಡೀ ದೇಶ 'ಮೋದಿ ಮೋದಿ' ಎಂದು ಜಯಘೋಷ ಮಾಡುತ್ತ ಹುಚ್ಚೆದ್ದು ಕುಣಿಯುತ್ತಿದೆ. ಮೋದಿ ಎಂಬ ಸುನಾಮಿಗೆ ಕಾಂಗ್ರೆಸ್ ಮತ್ತು ಆಪ್ ಕೊಚ್ಚಿಹೋಗಿವೆ. ಇಂಥದೊಂದು ಅತ್ಯದ್ಭುತ ಜಯವನ್ನು ದೇಶದ ಜನತೆ ಇರಲಿ, ವಿರೋಧ ಪಕ್ಷಗಳಿರಲಿ, ಸಮೀಕ್ಷೆಗಳಿರಲಿ, ರಾಜಕೀಯ ಪಂಡಿತರಿರಲಿ, ಸ್ವತಃ ಭಾರತೀಯ ಜನತಾ ಪಕ್ಷವೇ ನಿರೀಕ್ಷಿಸಿರಲಿಲ್ಲ.

ಕೇಂದ್ರದಲ್ಲಿ ಸರಕಾರ ರಚಿಸಲು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದ ಬಿಜೆಪಿ ಏಕಾಂಗಿಯಾಗಿ ಬಹುಮತಕ್ಕೆ ಬೇಕಾಗಿದ್ದ 272 ಮ್ಯಾಜಿಕ್ ಸಂಖ್ಯೆಯನ್ನು ದಾಟಿದೆ. ಎನ್‌ಡಿಎ ಮಿತ್ರಪಕ್ಷಗಳು 335ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿವೆ. ಈಗ ಸರಕಾರ ರಚಿಸಲು ಎನ್‌ಡಿಎ ಅಂಗಪಕ್ಷಗಳ ಹೊರತಾಗಿ ಬೇರೆ ಯಾವ ಪಕ್ಷದ ಮೈತ್ರಿಯ ಅಗತ್ಯವೇ ಇಲ್ಲ.

ಇಂದಿರಾ ಗಾಂಧಿಯ ಹತ್ಯೆಯ ನಂತರ 1984ರಲ್ಲಿ ನಡೆದಿದ್ದ ಮಹಾಚುನಾವಣೆಯ ನಂತರ ಏಕೈಕ ಪಕ್ಷ ಬಹುಮತ ಗಳಿಸಿದ್ದು ಇದೇ ಮೊದಲು. ಐತಿಹಾಸಿಕ ಗೆಲುವಿನ ನಂತರ ಬರೋಡಾದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಭಾರತಕ್ಕೆ ಒಳ್ಳೆಯ ದಿನಗಳು ಕಾದಿವೆ ಎಂಬ ಸಂದೇಶವನ್ನು ದೇಶಕ್ಕೆ ನೀಡಿದ್ದಾರೆ. ನಮಗೆ ಸ್ಪಷ್ಟ ಬಹುಮತ ಬಂದಿದ್ದರೂ, ದೇಶವನ್ನು ನಡೆಸಲು ಎಲ್ಲರ ಸಹಕಾರವನ್ನು ಪಡೆಯುವುದು ನಮ್ಮ ಜವಾಬ್ದಾರಿ ಎಂದಿರುವ ಅವರು, ದೇಶ ಒಡೆಯುವ ಮೋದಿ ಅಂದವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಪ್ರತಿಯೊಬ್ಬ ಮತದಾರನೂ ನರೇಂದ್ರ ಮೋದಿಯೇ

ಪ್ರತಿಯೊಬ್ಬ ಮತದಾರನೂ ನರೇಂದ್ರ ಮೋದಿಯೇ

ಬಿಜೆಪಿಗೆ ಸಿಕ್ಕ ವಿಜಯವನ್ನು ದೇಶದ ವಿಜಯ ಎಂದು 63 ವರ್ಷದ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಮತ ಹಾಕಿದ ಮತಬಂಧುಗಳಿಗೆ ತಲೆಬಾಗಿ ನಮಿಸುತ್ತೇನೆ. ಪ್ರತಿಯೊಬ್ಬ ಮತದಾರನೂ ನರೇಂದ್ರ ಮೋದಿಯೇ. ಆತ ತನ್ನ ಜವಾಬ್ದಾರಿಯನ್ನು ಅತ್ಯಂತ ಜತನದಿಂದ ನಿಭಾಯಿಸಿದ್ದಾನೆ ಎಂದು ವಿಶೇಷವಾಗಿ ಬರೋಡಾದ ಜನತೆಯನ್ನು ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಟೀಕಾರರಿಗೆ ಮೋದಿ ಜಬರ್ದಸ್ತ್ ಉತ್ತರ

ಟೀಕಾರರಿಗೆ ಮೋದಿ ಜಬರ್ದಸ್ತ್ ಉತ್ತರ

ಮೋದಿ ಅಲೆಯೆಂಬುದು ಕೇವಲ ಕಾಲ್ಪನಿಕ ಅಂದವರಿಗೆ, ಅವರನ್ನು ಎಂಟು ತಿಂಗಳ ಹಿಂದೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದಾಗ ಅಪಸ್ವರ ಹೊರಡಿಸಿದವರಿಗೆ, ಮೋದಿ ಪ್ರಧಾನಿಯಾದರೆ ದೇಶ ಬಿಟ್ಟುಹೋಗುತ್ತೇನೆ, ಸನ್ಯಾಸ ಸ್ವೀಕರಿಸುತ್ತೇನೆ ಎಂದು ವ್ಯಂಗ್ಯವಾಡಿದವರಿಗೆ, ಮೋದಿ ಈ ಜನ್ಮದಲ್ಲಿ ಪ್ರಧಾನಿಯಾಗಲ್ಲ ಅಂದವರಿಗೆ ಈ ಜಯದ ಮುಖಾಂತರ ಮೋದಿ ಜಬರ್ದಸ್ತ್ ಉತ್ತರ ನೀಡಿದ್ದಾರೆ.

ಡೈನಾಮಿಕ್ ವ್ಯಕ್ತಿತ್ವದ ಪ್ರಧಾನಿ ಬೇಕಿತ್ತು

ಡೈನಾಮಿಕ್ ವ್ಯಕ್ತಿತ್ವದ ಪ್ರಧಾನಿ ಬೇಕಿತ್ತು

ಮೋದಿ ಅವರ ಜಯದ ಹಿಂದೆ ಪ್ರಬಲವಾದ ಸೋಷಿಯಲ್ ಮೀಡಿಯಾ, ಪ್ರತಿ ನಗರಗಳಲ್ಲಿ ತಲೆಯೆತ್ತಿದ್ದ ನಮೋ ಬ್ರಿಗೇಡ್ ಗಳು ನಿರಂತರವಾಗಿ ಕೆಲಸ ಮಾಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಯುಪಿಎ ಸರಕಾರದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರದಿಂದ, ಹಗರಣಗಳಿಂದ ಬೇಸತ್ತಿದ್ದ ದೇಶದ ಜನತೆಗೆ ಮೋದಿ ಅವರಂಥ ಅಭಿವೃದ್ಧಿಪರ, ಡೈನಾಮಿಕ್ ಆಗಿರುವಂಥ ವ್ಯಕ್ತಿತ್ವದ ಪ್ರಧಾನಿ ಬೇಕಿತ್ತು ಎನ್ನುವುದು ಕೂಡ ಸುಳ್ಳಲ್ಲ.

ದೇಶದೆಲ್ಲೆಡೆ ಕಾಂಗ್ರೆಸ್ ತಿರಸ್ಕೃತ

ದೇಶದೆಲ್ಲೆಡೆ ಕಾಂಗ್ರೆಸ್ ತಿರಸ್ಕೃತ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ದಿಗ್ವಿಜಯ ಗೈಯಲು ಹೊರಟಿದ್ದ ಯುಪಿಎಯನ್ನು ದೇಶದ ಜನತೆ ಸಾರಾಸಗಟಾಗಿ ತಿರಸ್ಕರಿಸಿ ಹಾಕಿದ್ದಾರೆ. ಹತ್ತು ವರ್ಷಗಳ ಕಾಲ ದೇಶದ ನೊಗ ಹಿಡಿದುಕೊಂಡಿದ್ದ ಸೋನಿಯಾ ಗಾಂಧಿ ದೇಶದ ಮತದಾರರಿಗೆ ತಲೆಬಾಗಿದ್ದಾರೆ. ಮೂರನೇ ಬಾರಿ ಸರಕಾರ ರಚಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್ಸಿಗೆ ನೂರು ಸೀಟುಗಳನ್ನು ಕೂಡ ಗೆಲ್ಲಲಾಗಿಲ್ಲ.

ಏಳು ರಾಜ್ಯಗಳಲ್ಲಿ ಕಾಂಗ್ರೆಸ್ ಸೊನ್ನೆ

ಏಳು ರಾಜ್ಯಗಳಲ್ಲಿ ಕಾಂಗ್ರೆಸ್ ಸೊನ್ನೆ

ಬಿಜೆಪಿಗೆ ಯಾವ ಪರಿ ಜಯ ಸಿಕ್ಕಿದೆಯೆಂದರೆ, ಕಾಂಗ್ರೆಸ್ಸಿಗೆ ಯಾವ ಪರಿ ಸೋಲಾಗಿದೆಯೆಂದರೆ, ದೆಹಲಿ ಸೇರಿದಂತೆ ಏಳು ರಾಜ್ಯಗಳಲ್ಲಿ ಒಂದೇ ಒಂದು ಸ್ಥಾನದಲ್ಲಿ ಗೆಲ್ಲಲು ವಿಫಲವಾಗಿದೆ. ಯಾವುದೇ ರಾಜ್ಯದಲ್ಲಿ ಹತ್ತಕ್ಕಿಂತ ಹೆಚ್ಚು ಸ್ಥಾನ ಲಭಿಸಿಲ್ಲ. ನರೇಂದ್ರ ಮೋದಿ ಅವರ ರಾಜ್ಯ ಗುಜರಾತ್ ನಲ್ಲಿ ಇಪ್ಪತ್ತಾರಕ್ಕೆ ಇಪ್ಪತ್ತಾರೂ ಸೀಟುಗಳನ್ನು ಬಿಜೆಪಿ ತನ್ನ ಮಡಿಲಲ್ಲಿ ಹಾಕಿಕೊಂಡಿರುವುದು ಕಾಂಗ್ರೆಸ್ಸಿನ ಹೀನಾಯ ಸ್ಥಿತಿಗೆ ಸಾಕ್ಷಿ.

ವಿದೇಶಿಯರಿಂದ ಮೋದಿ ಗುಣಗಾನ

ವಿದೇಶಿಯರಿಂದ ಮೋದಿ ಗುಣಗಾನ

ಯುಪಿಎ ಸರಕಾರವಿದ್ದಾಗ ಮೋದಿ ಅವರನ್ನು ನಿಷೇಧಿಸಿದ್ದ, ವೀಸಾ ಕೊಡಲು ನಿರಾಕರಿಸಿದ್ದ ವಿದೇಶದ ನಾಯಕರೆಲ್ಲ ಮೋದಿ ಗುಣಗಾನ ಮಾಡಲು ಆರಂಭಿಸಿದ್ದಾರೆ. ಬ್ರಿಟಿಷ್ ಪ್ರಧಾನಿ ಡೆವಿಡ್ ಕ್ಯಾಮರೂನ್ ಅವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಯುಕೆ-ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂದು ಆಶಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬಾಟ್ ಕೂಡ ಮೋದಿ ಜೊತೆ ವ್ಯವಹಾರ ಕುದುರಿಸಲು ಉತ್ಸುಕತೆ ತೋರಿದ್ದಾರೆ.

ಯುಕೆ ಪ್ರಧಾನಿಯಿಂದ ಮೋದಿಗೆ ಅಭಿನಂದನೆ

ವಿಜಯಶಾಲಿಯಾದ ನರೇಂದ್ರ ಮೋದಿಗೆ ಯುಕೆ ಪ್ರಧಾನಿ ಡೆವಿಡ್ ಕ್ಯಾಮರೋನ್ ಅವರಿಂದ ಅಭಿನಂದನೆ.

ಸೋಲಿನ ಹೊಣೆ ಹೊತ್ತ ರಾಹುಲ್ ಗಾಂಧಿ

ಸೋಲಿನ ಹೊಣೆ ಹೊತ್ತ ರಾಹುಲ್ ಗಾಂಧಿ

ಹೀನಾಯ ಸೋಲಿನ ನಂತರ ಮುಗುಳ್ನಗುತ್ತಲೇ ಮಾಧ್ಯಮವನ್ನು ಎದುರಿಸಿದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿಕೆ ನೀಡಿದ್ದಾರೆ. ಹೊಸ ಸರಕಾರವನ್ನು ನಾನು ಅಭಿನಂದಿಸುತ್ತೇನೆ. ಅವರಿಗೆ ಜನತೆ ಸ್ಪಷ್ಟ ಬಹುಮತ ದೊರಕಿಸಿಕೊಟ್ಟಿದ್ದಾರೆ. ಹೊಸ ಸರಕಾರಕ್ಕೆ ಒಳ್ಳೆಯದಾಗಲಿ ಎಂದು ರಾಹುಲ್ ಹೇಳಿದ್ದಾರೆ.

ಕರ್ನಾಟಕದಲ್ಲಿ 17 ಕ್ಷೇತ್ರಗಳಲ್ಲಿ ಜಯಭೇರಿ

ಕರ್ನಾಟಕದಲ್ಲಿ 17 ಕ್ಷೇತ್ರಗಳಲ್ಲಿ ಜಯಭೇರಿ

ಕರ್ನಾಟಕದಲ್ಲಿ ಕೂಡ ಕೇವಲ 9 ಕ್ಷೇತ್ರಗಳಲ್ಲಿ ಜಯ ಸಾಧಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಬಿಜೆಪಿ 17 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಜೆಡಿಎಸ್ ಕೇವಲ 2 ಸ್ಥಾನ ಗೆದ್ದು ತೃಪ್ತಿಪಟ್ಟುಕೊಂಡಿದೆ. ಆಮ್ ಆದ್ಮಿ ಪಕ್ಷ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಹೇಳಹೆಸರಿಲ್ಲದಂತಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಹವಾ ಎಬ್ಬಿಸಿದ್ದ ಆಪ್ ದೆಹಲಿಯಲ್ಲಿ ಲೋಕಸಭೆಯಲ್ಲಿ ಒಂದು ಸ್ಥಾನ ಗೆದ್ದಿಲ್ಲ.

ಶನಿವಾರ ದೆಹಲಿಯಲ್ಲಿ ಬಿಜೆಪಿ ಸಂಸದೀಯ ಸಭೆ

ಶನಿವಾರ ದೆಹಲಿಯಲ್ಲಿ ಬಿಜೆಪಿ ಸಂಸದೀಯ ಸಭೆ

ಬಿಜೆಪಿ ಸಂಸದೀಯ ಮಂಡಳಿ ಸಭೆ ಶನಿವಾರ ಸಭೆ ಸೇರಲಿದ್ದು, ಸರಕಾರ ರಚಿಸುವ ಮುಂದಿನ ರೂಪುರೇಷೆಗಳ ಬಗ್ಗೆ ಚಿಂತನೆ ನಡೆಸಲಿವೆ. ಮೋದಿಯನ್ನು ತಣ್ಣಗೆ ವಿರೋಧಿಸುತ್ತಿದ್ದ ಸುಷ್ಮಾ ಸ್ವರಾಜ್ ಅವರು ಸರಕಾರ ಸೇರಿಕೊಳ್ಳುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳಿವೆ. ಸೋಮವಾರದ ಹೊತ್ತಿಗೆ ಸರಕಾರ ರಚಿಸುವ ಬಗ್ಗೆ, ಪ್ರಮಾಣ ಸ್ವೀಕರಿಸುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

English summary
From Kashmir to Kanyakumar everywhere Narendra Modi. Under the able leadership of Narendra Modi BJP has registered historic victory in 16th Lok Sabha Election 2014. Modi has described it as victory of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X